
ಬೆಂಗಳೂರು, ಜೂನ್ 20: ಸುಮಾರು ಹತ್ತು ವರ್ಷಗಳ ಹಿಂದೆ ಶಾಂತಿಗಾಗಿ ಮಾನವೀಯ ಕರೆ ನೀಡಿದ್ದ ಕೊಲಂಬಿಯಾದ ಬೊಗೋಟಾ ನಗರದಲ್ಲೇ ಈ ಬಾರಿ ಗುರುದೇವ ಶ್ರೀ ಶ್ರೀ ರವಿಶಂಕರ್ (Gurudev Sri Sri Ravi Shankar) ಕೊಲಂಬಿಯಾ ಸಂಸತ್ತಿನಲ್ಲಿ ಮಾತನಾಡಿದರು. ಅವರ ಶ್ರಮದ ಫಲವಾಗಿ, ಫಾರ್ಕ್ ಗುಂಪು ಮತ್ತು ಆ ಕಾಲದ ಕೊಲಂಬಿಯಾ ಸರ್ಕಾರದ ನಡುವೆ ಐವತ್ತು ವರ್ಷಗಳ ಗಲಭೆ ಕೊನೆಗೊಂಡು, ಐತಿಹಾಸಿಕ ಶಾಂತಿ ಒಪ್ಪಂದವಾಗಿ ರೂಪುಗೊಂಡಿತು.
ಈ ವರ್ಷ ಅವರು ಮತ್ತೆ ಕೊಲಂಬಿಯಾಗೆ ತೆರಳಿ, ಆತ್ಮಪರಿಶೀಲನೆ, ಆಧ್ಯಾತ್ಮದ ಮೂಲಕ ಧೈರ್ಯವನ್ನು ಬೆಳೆಸುವುದು ಹಾಗೂ ಸಮಾಜದ ವಿಭಜನೆಗಳನ್ನು ಮೀರಿ ವಿಸ್ತೃತ ದೃಷ್ಟಿಕೋನ ಹೊಂದಿರುವ ಅಭಿವೃದ್ಧಿಯ ಅವಶ್ಯಕತೆಯ ಕುರಿತು ತಮ್ಮ ಸಂದೇಶವನ್ನು ಪುನರುಚ್ಚರಿಸಿದರು.
ಪ್ರತಿಷ್ಠಿತ ‘ವಿಶ್ವ ಪರಿವರ್ತನೆಗಾಗಿ ನಾಯಕತ್ವ’ ಸಮ್ಮೇಳನದಲ್ಲಿ ಮಾಡಿದ ಭಾಷಣ ಮಾಡಿದ ಗುರುದೇವ ಶ್ರೀ ಶ್ರೀ ರವಿಶಂಕರ್, “ದುಃಖ ಮತ್ತು ಹಿಂಸೆಯಿಲ್ಲದ, ಹೆಚ್ಚು ಪ್ರೀತಿ, ಸಂತೋಷ ಹಾಗೂ ಶಾಂತಿಯುತ ಜಗತ್ತಿನ ಕನಸು ನಾವು ಕಾಣಬೇಕು. ಅದು ಅಸಾಧ್ಯವೆನಿಸಬಹುದು, ಆದರೆ ಪ್ರತಿಯೊಂದು ಯಶಸ್ಸು ಕನಸಿನಿಂದಲೇ ಆರಂಭವಾಗುತ್ತದೆ. ನಾವು ಈ ನಂಬಿಕೆಯೊಂದಿಗೆ ಕನಸು ಕಾಣಲು ಆರಂಭಿಸಿದರೆ, ಅದನ್ನು ನಾವು ನನಸಾಗಿಸಲು ಸಾಧ್ಯ” ಎಂದು ಹೇಳಿದರು.
ಇದನ್ನೂ ಓದಿ: ನಮ್ಮ ಪರಿಸರದ ಬಗ್ಗೆ ಕಾಳಜಿ ವಹಿಸಲು ಅಡ್ಡಿಯಾಗುತ್ತಿರುವುದು ಏನು? ಗುರುದೇವ ರವಿಶಂಕರ್ ಬರಹ
“ವರ್ಷದಲ್ಲಿ ಕೇವಲ ಒಂದು ವಾರ ನಾವು ರಾಜಕೀಯ ಲೆಕ್ಕಾಚಾರ, ವೈಯಕ್ತಿಕ ಅಥವಾ ವೃತ್ತಿಪರ ಸ್ವಾರ್ಥಗಳನ್ನು ಬದಿಗೊತ್ತಿ, ದೇಶದ ದೀರ್ಘಕಾಲೀನ ಹಿತದ ಬಗ್ಗೆ ಯೋಚನೆ ಮಾಡಿದರೆ, ನಮ್ಮ ಭಿನ್ನತೆಯಲ್ಲಿನ ಶಕ್ತಿ ಮತ್ತು ನಿಜವಾದ ಪ್ರಗತಿಯ ಹಾದಿಯನ್ನು ನಾವು ಕಂಡುಕೊಳ್ಳಬಲ್ಲೆವು” ಎಂದಿದ್ದಾರೆ.
“ಇಂದಿನ ಕಾಲದಲ್ಲಿ ಜನರು ಇತಿಹಾಸದಲ್ಲಿಯೇ ಯಾವತ್ತೂ ಇರದಷ್ಟು ಒಂಟಿತನವನ್ನು ಅನುಭವಿಸುತ್ತಿದ್ದಾರೆ. ನಿಜಕ್ಕೂ ಏನೋ ಗಂಭೀರವಾದ ಸಮಸ್ಯೆಯಿದೆ ಎಂಬುದನ್ನು ಇದು ಸೂಚಿಸುತ್ತದೆ. ನಾವು ಆತ್ಮೀಯತೆಯ ಭಾವನೆಯನ್ನು ಸೃಷ್ಟಿಸಬೇಕಾಗಿದೆ. ಮತ್ತು ಆರ್ಟ್ ಆಫ್ ಲಿವಿಂಗ್ ಅದನ್ನೇ ಮಾಡುತ್ತಿದೆ” ಎಂದು ತಿಳಿಸಿದರು.
ಗುರುದೇವರ “ಕೊಲಂಬಿಯಾ ಉಸಿರಾಡುತ್ತಿದೆ” (“Colombia Breathes”) ಎಂಬ ಮೂರು ನಗರಗಳ ಪ್ರವಾಸ ಜೂನ್ 18ರಿಂದ 23ರವರೆಗೆ ನಡೆಯಲಿದೆ. ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಬೊಗೋಟಾದ ಪ್ರಸಿದ್ಧ ಪ್ಲಾಸಾ ಕಲ್ಚರಲ್ ಲಾ ಸಂತಮಾರಿಯಾ ವೇದಿಕೆಯಲ್ಲಿ, ಬೊಗೋಟಾದ ಮೇಯರ್ ಕಾರ್ಲೋಸ್ ಫೆರ್ನಾಂಡೋ ಗಲಾನ್ ಅವರೊಂದಿಗೆ ಲಕ್ಷಾಂತರ ಯೋಗ ಅಭ್ಯಾಸಿಗಳನ್ನು ಉದ್ದೇಶಿಸಿ ಅವರು ಭಾಷಣ ಮಾಡಲಿದ್ದಾರೆ.
ಇದನ್ನೂ ಓದಿ: International Yoga Day: ಯೋಗ ಅಂದ್ರೆ ಆಸನಗಳಲ್ಲ ಬದಲಿಗೆ ಕಲ್ಪನೆ, ನಿದ್ದೆ ಮತ್ತು ಸ್ಮೃತಿ: ಹೇಗಂತೀರಾ? ಇಲ್ಲಿದೆ ನೋಡಿ
ಭಾರತದಲ್ಲಿ ಹಾಗೂ 180 ದೇಶಗಳಲ್ಲಿ, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಆಯುಷ್ ಸಚಿವಾಲಯದ ಸಹಯೋಗದಿಂದ ಕಾರಾಗೃಹಗಳಿಂದ ಹಿಡಿದು ಪಾರಂಪರಿಕ ತಾಣಗಳು, ಪವಿತ್ರ ಮಂದಿರಗಳವರೆಗೆ, ಸರ್ಕಾರದ ಕಚೇರಿಗಳಿಂದ ಹಿಡಿದು ಮಾಲ್‌ಗಳು, ಶಾಲೆಗಳು, ಸಂಸ್ಥೆಗಳವರೆಗೆ ಮತ್ತು ರೈಲ್ವೆ ನಿಲ್ದಾಣಗಳಿಂದ ಪರ್ವತಗಳವರೆಗೆ ನೂರಾರು ಸ್ಥಳಗಳಲ್ಲಿ ಭವ್ಯವಾದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರದರ್ಶನಗಳನ್ನು ಆಯೋಜಿಸಲು ಸಜ್ಜಾಗಿದೆ.
1. ಪುಣೆಯಲ್ಲಿ ಗಿನ್ನೆಸ್ ದಾಖಲೆ ಪ್ರಯತ್ನ: ಸಾವಿರಾರು ಮಂದಿ ಒಂದು ನಿಮಿಷ ಕಾಲ ‘ಭುಜಂಗಾಸನ’ದಲ್ಲಿ ಇರಲಿದ್ದಾರೆ. ಇದು ಈ ರೀತಿಯ ಅತಿದೊಡ್ಡ ಏಕಸಮಯದ ಭಾಗವಹಿಸುವಿಕೆಯನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ.
2. ಉದಯಪುರದ ಕೇಂದ್ರ ಕಾರಾಗೃಹದಲ್ಲಿ ಯೋಗ: ಅಲ್ಲಿನ ಕೈದಿಗಳು ಆಸನ, ಪ್ರಾಣಾಯಾಮ ಮತ್ತು ಧ್ಯಾನದ ಮೂಲಕ ನವಚೈತನ್ಯ ನೀಡುವ ಶಾಂತತೆ ಮತ್ತು ಸ್ಪಷ್ಟತೆಯನ್ನು ಅನುಭವಿಸಲಿದ್ದಾರೆ.
3. ದಕ್ಷಿಣೇಶ್ವರ ದೇವಸ್ಥಾನ, ಭಾರತೀಯ ಸಂಗ್ರಹಾಲಯ (ಕೊಲ್ಕತ್ತಾ), ಹಾಗೂ ಟಿಪ್ಪುವಿನ ಅರಮನೆ (ಬೆಂಗಳೂರು): ಈ ಐತಿಹಾಸಿಕ ಸ್ಥಳಗಳಲ್ಲಿ ವಿಶೇಷ ಯೋಗ ಕಾರ್ಯಕ್ರಮ.
4. ಜೋಧಪುರ ರೈಲು ವಿಭಾಗದ ನಿಲ್ದಾಣಗಳು ಹಾಗೂ ತಿರುವನಂತಪುರದ ಲುಲು ಮಾಲ್: ಯೋಗ ಉತ್ಸಾಹಿ ಜನರ ಅಭ್ಯಾಸದೊಂದಿಗೆ ಜೀವಕಳೆ ತುಂಬಲಿವೆ.
5. ಹಿಮಾಚಲ ಪ್ರದೇಶದ ಲಾಹೌಲ್-ಸ್ಪಿಟಿಯ ಎತ್ತರದ ಪರ್ವತ ಪ್ರದೇಶದಲ್ಲಿ ವಿಶಿಷ್ಟ ಯೋಗ ಸತ್ರ.
6. ಒಡಿಶಾದ ಸಂಭಲಪುರ: ಕೇಂದ್ರ ಶಿಕ್ಷಣ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಭಾಗವಹಿಸಲಿರುವ ಮೂಲಕ, ಶಿಕ್ಷಣ ಕ್ಷೇತ್ರದಲ್ಲಿ ಯೋಗದ ಏಕೀಕರಣವನ್ನು ಗುರುತಿಸುತ್ತದೆ.
ಮತ್ತಷ್ಟು ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:32 am, Fri, 20 June 25