ಬಾಂಗ್ಲಾದೇಶದಲ್ಲಿ ಮತ್ತೊಮ್ಮೆ ಪುಂಡರ ದಾಂಧಲೆ, ಕಾಳಿ ದೇವತೆಯ ವಿಗ್ರಹ ಛಿದ್ರಗೊಳಿಸಿರುವ ದುಷ್ಕರ್ಮಿಗಳು
ಬಾಂಗ್ಲಾದೇಶದಲ್ಲಿ ಇತ್ತೀಚಿಗೆ ಹಿಂದೂಗಳ ಮೇಲೆ ಹೆಚ್ಚುತ್ತಲೇ ಇವೆ. ದುರ್ಗಾ ಪೂಜೆಗೆ ಮೊದಲು ಸೆಪ್ಟೆಂಬರ್ ತಿಂಗಳಲ್ಲಿ ಬರಿಸಾಲ್ ನ ಮೆಹಂದಿಗಂಜ್ ನಲ್ಲಿರುವ ಕಾಶಿಪುರ ಸರ್ಬಾಜಾನಿನ್ ದುರ್ಗಾ ದೇವಸ್ಥಾನದಲ್ಲಿ ಕೆಲವು ಅಪರಚಿತ ದಾಂಧಲೆಕೋರರು ವಿಗ್ರಹಗಳನ್ನು ವಿರೂಪಗೊಳಿಸಿದ್ದರು.
ನೆರೆರಾಷ್ಟ್ರ ಬಾಂಗ್ಲಾದೇಶದಲ್ಲಿ (Bangladesh) ಹಿಂದೂ ದೇವಸ್ಥಾನಗಳ ಮೇಲೆ, ದೇವ-ದೇವತೆಯರ ಮೇಲೆ ಆಕ್ರಮಣ ನಡೆಸುವುದು, ದೇವರ ವಿಗ್ರಹಗಳನ್ನ ವಿರೂಪಗೊಳಿಸುವ ದುಷ್ಕೃತ್ಯಗಳು ಮುಂದುವರಿದಿವೆ. ಅಲ್ಲಿನ ಜೆನೈದಾ ಜಿಲ್ಲೆಯಲ್ಲಿರುವ ದೌತಿಯ (Dautiya) ಹೆಸರಿನ ಗ್ರಾಮವೊಂದರಲ್ಲಿರುವ ಕಾಳಿ ದೇವಸ್ಥಾನದ (Kali Temple) ಮೇಲೆ ಅಕ್ಟೋಬರ್ 7 ರಂದು ಆಕ್ರಮಣ ನಡೆಸಿರುದ ದುಷ್ಕರ್ಮಿಗಳು ಕಾಳಿ ದೇವತೆ ವಿಗ್ರಹ ತುಂಡು ತುಂಡು ಮಾಡಿದ್ದು ರುಂಡದ ಭಾಗ ಗುಡಿ ಆವರಣದಿಂದ ಸುಮಾರು ಅರ್ಧ ಕಿಮೀ ದೂರದಲ್ಲಿ ಪತ್ತೆಯಾಗಿದೆ. ಬಂಗಾಳದ ಹಿಂದೂಗಳಿಗೆ ಅತಿದೊಡ್ಡ ಸಂಭ್ರಮ ಮತ್ತು ಹತ್ತು ದಿನಗಳ ಕಾಲ ನಡೆಯುವ ದುರ್ಗಾ ಪೂಜಾ ಉತ್ಸವ ಮುಗಿದ ಒಂದು ದಿನದ ನಂತರ ಈ ಪ್ರಕರಣ ನಡೆದಿದೆ.
ಮೂಲಗಳ ಪ್ರಕಾರ ದೇವಸ್ಥಾನದ ಮೇಲೆ ಆಕ್ರಮಣ ನಡೆಸಿದ ದುಷ್ಕರ್ಮಿಗಳು ಯಾರು ಅನ್ನೋದು ಇನ್ನೂ ಗೊತ್ತಾಗಿಲ್ಲ. ಶಂಕಿತರ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ಬ್ರಿಟಿಷರ ಕಾಲದಿಂದ ಹಿಂದೂಗಳು ತೆರಳಿ ಪೂಜೆ ಸಲ್ಲಿಸುತ್ತಿದ್ದ ಕಾಳಿ ದೇವಸ್ಥಾನವು ಬಾಂಗ್ಲಾದೇಶದ ಪಶ್ಚಿಮ ಭಾಗಕ್ಕಿದೆ. ಬಾಂಗ್ಲಾದೇಶ ಪೂಜೆ ಆಚರಣೆ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿರುವ ಚಂದ್ರನಾಥ ಪೊದ್ದಾರ್ ದೇವಸ್ಥಾನದ ಮೇಲೆ ಗುರುವಾರ ರಾತ್ರಿ ನಡೆದಿದೆ ಮತ್ತು ಛಿದ್ರಗೊಂಡಿರುವ ವಿಗ್ರಹದ ತುಂಡುಗಳು ಶುಕ್ರವಾರ ಬೆಳಗ್ಗೆ ಪತ್ತೆಯಾಗಿವೆ ಎಂದು ಹೇಳಿದ್ದಾರೆ.
‘ಪ್ರಕರಣನ್ನು ದಾಖಲಿಸಿಕೊಳ್ಳಲಾಗಿದೆ ಮತ್ತು ದುಷ್ಕರ್ಮಿಗಳ ಪತ್ತೆಗೆ ಜಾಲ ಬೀಸಲಾಗಿದೆ, ಈ ಘಟನೆಯೊಂದನ್ನು ಬಿಟ್ಟರೆ ಈ ವರ್ಷದ ದುರ್ಗಾ ಪೂಜಾ ಹಬ್ಬದ ಆಚರಣೆ ಶಾಂತಿಯುತವಾಗಿ ನಡೆದಿದೆ,’ ಎಂದು ಜೆನೈದಾ ಜಿಲ್ಲೆಯ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಬರ್ಮನ್ ಹೇಳಿದ್ದಾರೆ.
2021 ರ ದುರ್ಗಾ ಪೂಜಾ ಸಂಭ್ರಮಾಚರಣೆಯ ಸಂದರ್ಭದಲ್ಲಿ ಇಸ್ಲಾಂ ಮೂಲಭೂತವಾದಿಗಳು ದೇಶದ ಹಲವಾರು ಭಾಗಗಳಲ್ಲಿ ದಾಂಧಲೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಚಾಂದಪುರ್ನ ಹಾಜಿಗಂಜ್, ಚತ್ತೋಗ್ರಾಮಿನ ನ ಬಂಶ್ಕಾಲಿ, ಚಾಪೈನವಾಬಗಂಜ್ ನ ಶಿವಗಂಜ್ ಮತ್ತು ಕಾಕ್ಸ್ ಬಜಾರಿನ ಪೆಕುಲಾ-ಮೊದಲಾದ ಸ್ಥಳಗಳಲ್ಲಿರುವ ದೇವಸ್ಥಾನಗಳ ಮೇಲೆ ಮತಾಂಧರು ಆಕ್ರಮಣ ನಡೆಸಿ ಅಲ್ಲಿದ್ದ ಹಿಂದೂ ಭಕ್ತರನ್ನು ಥಳಿಸಿದ್ದರು.
ದೇಶದಲ್ಲಿನ ಹಿಂದೂಗಳ ಮೇಲೆ ಮತಾಂಧರು ಮುಕ್ತವಾಗಿ ನಡೆಸಿದ ಅಂದಿನ ಹಲ್ಲೆಗಳಲ್ಲಿ ಕನಿಷ್ಟ 6 ಜನ ಸತ್ತಿದ್ದರು ಮತ್ತು ನೂರಾರು ಜನ ಗಾಯಗೊಂಡಿದ್ದರು.
ಬಾಂಗ್ಲಾದೇಶದಲ್ಲಿ ಇತ್ತೀಚಿಗೆ ಹಿಂದೂಗಳ ಮೇಲೆ ಹೆಚ್ಚುತ್ತಲೇ ಇವೆ. ದುರ್ಗಾ ಪೂಜೆಗೆ ಮೊದಲು ಸೆಪ್ಟೆಂಬರ್ ತಿಂಗಳಲ್ಲಿ ಬರಿಸಾಲ್ ನ ಮೆಹಂದಿಗಂಜ್ ನಲ್ಲಿರುವ ಕಾಶಿಪುರ ಸರ್ಬಾಜಾನಿನ್ ದುರ್ಗಾ ದೇವಸ್ಥಾನದಲ್ಲಿ ಕೆಲವು ಅಪರಚಿತ ದಾಂಧಲೆಕೋರರು ವಿಗ್ರಹಗಳನ್ನು ವಿರೂಪಗೊಳಿಸಿದ್ದರು.
ಬಾಂಗ್ಲಾದೇಶದ ಮೊಂಗ್ಲಾ ಉಪಜಿಲಾದಲ್ಲಿರುವ ಕೈನ್ಮರಿ ದೇವಸ್ಥಾನದಲ್ಲಿ ಹಿಂದೂ ದೇವರುಗಳ ವಿಗ್ರಹಗಳನ್ನು ವಿರೋಪಗೊಳಿಸಿದ ಆರೋಪದಲ್ಲಿ ಮದರಸಾವೊಂದರ ಮೂವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದರು. ದೇವಸ್ಥಾನದ ಪಕ್ಕದಲ್ಲಿರುವ ಮೈದಾನದಲ್ಲಿ ಪುಟ್ಬಾಲ್ ಆಡಬೇಡಿ ಎಂದು ದೇವಸ್ಥಾನ ಆಡಳಿತ ಮಂಡಳಿ ಮುಸ್ಲಿಂ ಯುವಕರಿಗೆ ಮನವಿ ಮಾಡಿಕೊಂಡ ಬಳಿಕ ಈ ಘಟನೆ ಸಂಭವಿಸಿತ್ತು.
ಹಾಗೆಯೇ, ಜುಲೈ 16 ರಂದು ಯಕಶ್ಚಿತ್ ಫೇಸ್ ಬುಕ್ ಫೋಸ್ಟೊಂದರ ಹಿನ್ನೆಲೆಯಲ್ಲಿ ನರೈಲ್ ನಲ್ಲಿರುವ ಲೋಹಾಗಾರದ ಸಹಾಪರಾ ಪ್ರಾಂತ್ಯದಲ್ಲಿ ಉದ್ರಿಕ್ತ ಮುಸ್ಲಿಂ ಗುಂಪೊಂದು ದೇವಸ್ಥಾನ, ದಿನಸಿ ಅಂಗಡಿ, ಮತ್ತು ಹಲವಾರು ಹಿಂದೂಗಳ ಮನೆಗಳ ಮೇಲೆ ದಾಂಧಲೆ ನಡೆಸಿದ್ದ ಬಗ್ಗೆ ವರದಿಯಾಗಿತ್ತು.