ಲೆಬನಾನ್: ತನ್ನದೇ ಖಾತೆಯಿಂದ ಹಣ ತೆಗೆಯಲು ವ್ಯಕ್ತಿಯೊಬ್ಬ ಬ್ಯಾಂಕ್ ಸಿಬ್ಬಂದಿಯನ್ನು 7-ಗಂಟೆ ಕಾಲ ಒತ್ತೆಯಾಳುಗಳನ್ನಾಗಿರಿಸಿಕೊಂಡಿದ್ದ!
ಹುಸ್ಸೇನ್ ಒಂದು ಶಾಟ್ ಗನ್ ಮತ್ತು ಪೆಟ್ರೋಲ್ ತುಂಬಿದ್ದ ಒಂದು ಕ್ಯಾನ್ ನೊಂದಿಗೆ ಬ್ಯಾಂಕ್ ಪ್ರವೇಶಿಸಿ ತನಗೆ ಹಣ ವಿತ್ ಡ್ರಾ ಮಾಡಲು ಅವಕಾಶ ನೀಡದಿದ್ದರೆ ಪೆಟ್ರೋಲ್ ಮೈಮೇಲೆ ಸುರಿದುಕೊಂಡು ಅತ್ಮಾಹುತಿ ಮಾಡಿಕೊಳ್ಳುವುದಾಗಿ ಹೇಳಿದನೆಂದು ಪೊಲೀಸ್ ನೀಡಿರುವ ಮಾಹಿತಿಯನ್ನು ಆಧರಿಸಿ ಪತ್ರಿಕೆ ವರದಿ ಮಾಡಿದೆ.
ಬೇರೆ ಕೆಲ ದೇಶಗಳ ಹಾಗೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಲೆಬನಾನಿನ ರಾಜಧಾನಿ ಬೈರೂತ್ ನಗರದಲ್ಲಿ ಬ್ಯಾಂಕೊಂದಕ್ಕೆ ನುಗ್ಗಿದ ವ್ಯಕ್ತಿಯೊಬ್ಬ ತನ್ನದೇ ಖಾತೆಯಲ್ಲಿದ್ದ ಹಣವನ್ನು ತೆಗೆದುಕೊಳ್ಳಲು ಅಲ್ಲಿದ್ದ ಕನಿಷ್ಟ 10 ಜನರನ್ನು ಸುಮಾರು 7 ಗಂಟೆಗಳ ಕಾಲ ಒತ್ತೆಯಾಳುಗಳನ್ನಾಗಿಟ್ಟುಕೊಂಡ ಘಟನೆ ನಡೆದಿದೆ ಎಂದು ದಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಗುರುವಾರದಂದು ಸದರಿ ಘಟನೆ ನಡೆದಿದ್ದು ಪೊಲೀಸರು ಅವನ ಮನವೊಲಿಸಲು ಪ್ರಯತ್ನಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಮಾರಾಯ್ರೇ. ಅವರ ಪ್ರಯತ್ನಗಳು ಫಲ ನೀಡಿದ್ದು ಬರೋಬ್ಬರಿ 7 ತಾಸುಗಳ ಬಳಿಕ. ಬ್ಯಾಂಕಿನಲ್ಲಿದ್ದ ಅವನ ಸುಮಾರು ₹35,000 (ಸುಮಾರು 28 ಲಕ್ಷ ರೂ.) ವಿತ್ ಡ್ರಾ ಮಾಡಿಕೊಳ್ಳಲು ಅವಕಾಶ ನೀಡುವ ಭರವಸೆಯನ್ನು ಬ್ಯಾಂಕ್ ಸಿಬ್ಬಂದಿ ಮತ್ತು ಪೊಲೀಸರು ನೀಡಿದ ನಂತರವೇ ಅವನು ಪಟ್ಟು ಸಡಲಿಸಿದ್ದು ಎಂದು ಪತ್ರಿಕೆ ವರದಿ ಮಾಡಿದೆ.
#Lebanon: A man takes his bank employees hostage so he can recover his own money pic.twitter.com/uXWlZBMLCK
— Freedom Truth Honor ?? (@FreedomHonor666) August 12, 2022
ವಾಷಿಂಗ್ಟನ್ ಪೋಸ್ಟ್ ವರದಿಯ ಪ್ರಕಾರ ವ್ಯಕ್ತಿಯನ್ನು ಬಾಸ್ಸಮ್ ಅಲ್-ಶೇಖ್ ಹುಸ್ಸೇನ್ ಎಂದು ಗುರುತಿಸಲಾಗಿದ್ದು 42-ವರ್ಷ-ವಯಸ್ಸಿನ ಅವನು ಫುಡ್-ಡೆಲಿವರಿ ಡ್ರೈವರ್ ನಾಗಿ ಕೆಲಸ ಮಾಡುತ್ತಾನೆ. ಸದರಿ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಮತ್ತು ಹುಸ್ಸೇನ್ ನನ್ನು ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ.
ಬ್ಯಾಂಕಿನಲ್ಲಿ ಇದೆಲ್ಲ ನಡೆಯುತ್ತಿದ್ದಾಗ ಅವನ ಹೆಂಡತಿ ಮರಿಯಮ್ ಚೆಹಾದಿ ಹೊರಗಡೆ ನಿಂತು ಅವನಿಗಾಗಿ ಕಾಯುತ್ತಿದ್ದಳಂತೆ. ಅಲ್ ಜಜೀರಾ ಟಿವಿ ವರದಿಗಾರನ ಅವಳನ್ನು ಮಾತಾಡಿಸಿದಾಗ, ‘ನನ್ನ ಗಂಡ ಏನು ಮಾಡಬೇಕಿತ್ತೋ ಅದನ್ನು ಮಾಡಿದ್ದಾನೆ,’ ಎಂದು ಹೇಳಿದ್ದಾಳೆ. ಹುಸ್ಸೇನ್ ಗೆ ತಂದೆಯ ಶಸ್ತ್ರಚಿಕಿತ್ಸೆಗಾಗಿ ತುರ್ತಾಗಿ ಹಣ ಬೇಕಾಗಿತ್ತಂತೆ.
ಹುಸ್ಸೇನ್ ಒಂದು ಶಾಟ್ ಗನ್ ಮತ್ತು ಪೆಟ್ರೋಲ್ ತುಂಬಿದ್ದ ಒಂದು ಕ್ಯಾನ್ ನೊಂದಿಗೆ ಬ್ಯಾಂಕ್ ಪ್ರವೇಶಿಸಿ ತನಗೆ ಹಣ ವಿತ್ ಡ್ರಾ ಮಾಡಲು ಅವಕಾಶ ನೀಡದಿದ್ದರೆ ಪೆಟ್ರೋಲ್ ಮೈಮೇಲೆ ಸುರಿದುಕೊಂಡು ಅತ್ಮಾಹುತಿ ಮಾಡಿಕೊಳ್ಳುವುದಾಗಿ ಹೇಳಿದನೆಂದು ಪೊಲೀಸ್ ನೀಡಿರುವ ಮಾಹಿತಿಯನ್ನು ಆಧರಿಸಿ ಪತ್ರಿಕೆ ವರದಿ ಮಾಡಿದೆ. ಎಚ್ಚರಿಕೆ ನೀಡುವ ಹಾಗೆ ಅವನು ಮೂರು ಬಾರಿ ಗೋಡೆಗೆ ಗುಂಡು ಹಾರಿಸಿದ್ದಾನೆ.
ಹುಸ್ಸೇನ್ ವಕೀಲರ ಜೊತೆ ನಂತರ ಮಾತಾಡಿದ ಅಲ್ ಜಜೀರಾ ವರದಿಗಾರನ ಪ್ರಕಾರ ಅವನಿಗೆ ಬ್ಯಾಂಕ್ ನಿಂದ ಕಿಂಚಿತ್ತೂ ಹಣ ಸಿಕ್ಕಿಲ್ಲ. ಸ್ಥಳೀಯ ಪತ್ರಿಕೆಯೊಂದು ಹುಸ್ಸೇನ್ನ ಸುಮಾರು ₹200,000 (ಸುಮಾರು 1.60 ಕೋಟಿ ರೂ.) ಬ್ಯಾಂಕ್ ನಲ್ಲಿ ಜಮಾ ಇದೆಯಂತೆ.
2019 ರಿಂದ ಲೆಬನಾನ್ ತೀವ್ರ ಸ್ವರೂಪದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದರಿಂದ ಬ್ಯಾಂಕ್ ಮತ್ತು ಉಳಿತಾಯ ಖಾತೆ ಠೇವಣಿದಾರರ ನಡುವೆ ಇಂಥ ವ್ಯಾಗ್ದುದ್ದಗಳು ಸಾಮಾನ್ಯವಾಗಿದ್ದು ಗುರುವಾರದ ಘಟನೆ ಅಪರೂಪದ್ದೇನೂ ಅಲ್ಲ. ತಮ್ಮ ಗ್ರಾಹಕರಿಗೆ ಬ್ಯಾಂಕ್ಗಳು ಹಣ ವಿತ್ ಡ್ರಾ ಮಾಡಿಕೊಳ್ಳುವ ಅವಕಾಶ ನೀಡದೆ ವಾಪಸ್ಸು ಕಳಿಸುತ್ತಿವೆ.
ದಿವಾಳಿಯೆದ್ದಂತಾಗಿರುವ ಲೆಬನಾನ್ ಸರ್ಕಾರ ತನ್ನ ವಿದ್ಯುಚ್ಛಕ್ತಿ ಸ್ಥಾವರಗಳಿಗೆ ಅನಿಲ ಒದಗಿಸಲು ವಿಫಲವಾಗುತ್ತಿರುವುದರಿಂದ ದೇಶದ ಬಹುತೇಕ ಭಾಗಗಲ್ಲಿ ಪ್ರತಿದಿನ 22 ಗಂಟೆಗಳ ಕಾಲ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ.
19 ನೇ ಶತಮಾನ ಮಧ್ಯಭಾಗದಿಂದ ತೀವ್ರ ಸ್ವರೂಪದ ಆರ್ಥಿಕ ಸಂಕಷ್ಟಕ್ಕೀಡಾಗಿರುವ ದೇಶಗಳ ಪಟ್ಟಿ ಮಾಡಿದರೆ ಅದರಲ್ಲಿ ಲೆಬನಾನ್ ಸ್ಥಾನ ಸಿಗುತ್ತದೆ ಎಂದು ವಿಶ್ವಬ್ಯಾಂಕ್ ತನ್ನ ವರದಿಯಲ್ಲಿ ಹೇಳಿದೆ.