ಅಮೆರಿಕಾದ ಮಿನ್ನಿಸೋಟ (Minnesota) ಐರನ್ ರೇಂಜ್ ನಲ್ಲ್ಲಿ ಸುಮಾರು 36 ವರ್ಷಗಳ ಹಿಂದೆ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ನಡೆಸಿ ಹತ್ಯೆಗೈದ ವ್ಕಕ್ತಿಗೆ ನ್ಯಾಯಾಲಯವೊಂದು ಜೀವಾವಧಿ ಸೆರೆವಾಸದ ಶಿಕ್ಷೆ ವಿಧಿಸಿದೆ. ಸದರಿ ಪ್ರಕರಣಣನ್ನು ಕೌಟುಂಬಿಕ ಡಾಟಾಬೇಸ್ (database) ಪರಿಣಿತರು ಉಜ್ಜೀವಗೊಳಿಸಿದ್ದರೆಂಬ ಮಾಹಿತಿ ಲಭ್ಯವಾಗಿದೆ. 54-ವರ್ಷ-ವಯಸ್ಸಿನ ಚಿಶ್ಲೋಮ್ ನಿವಾಸಿ ಮೈಖೆಲ್ ಆಲನ್ ಕಾರ್ಬೋ ಜ್ಯೂನಿಯರ್ (Michael Allan Carbo Junior) ಹೆಸರಿನ ಅಪರಾಧಿಯನ್ನು 1986ರಲ್ಲಿ ಚಿಶ್ಲೋಮ್ ನಿವಾಸಿಯೇ ಆಗಿದ್ದ 38-ವರ್ಷ ವಯಸ್ಸಿನ ನ್ಯಾನ್ಸಿ ಡೌಹಾರ್ಟಿಯನ್ನು (Nancy Dougherty ) ರೇಪ್ ಮಾಡಿ ಕೊಲೆಗೈದ ಅಪರಾಧದಲ್ಲಿ ಜೀವಾವಧಿ ಸೆರೆವಾಸದ ಶಿಕ್ಷೆ ವಿಧಿಸಲಾಗಿದೆ. ಡೌಹಾರ್ಟಿಯ ಸಾವಿನ ತನಿಖೆಯನ್ನು ಸೆಂಟ್ ಲೂಯಿಸ್ ಕೌಂಟಿಯ ಅತ್ಯಂತ ಸಮಗ್ರ ಮತ್ತು ವಿಸ್ತೃತ ತನಿಖೆಯೆಂದು ಸರ್ಕಾರೀ ವಕೀಲ ಕಿಂಬರ್ಲೀ ಮಾಕಿ ಹೇಳಿದ್ದಾರೆ.
ಜುಲೈ 16,1986 ರಂದು ಪೊಲೀಸರು ಜನರ ವೆಲ್ಫೇರ್ ಚೆಕ್ ನಡೆಸುತ್ತಿದ್ದಾಗ ಡೌಹಾರ್ಟಿಯ ಮನೆಯಲ್ಲಿ ಅವಳ ಶವ ಪತ್ತೆಯಾಗಿತ್ತು.
ಡೌಹಾರ್ಟಿಯ ಮೇಲೆ ಹಲ್ಲೆ ಮತ್ತು ಲೈಂಗಿಕ ದೌರ್ಜನ್ಯ ನಡೆಸಿದ ಬಳಿಕ ಉಸಿರುಗಟ್ಟಿಸಿ ಸಾಯಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ಹೇಳಿರುವರೆಂದು ಮಿನ್ನಿಸೋಟದ ಸಿಬಿಎಸ್ ವರದಿ ಮಾಡಿದೆ. ಹತ್ಯೆ ನಡೆದ ದಿನ ಅವಳ ಮನೆಯಿಂದ ಚೀರಾಟದ ಶಬ್ದ ಕೇಳಿಸಿಕೊಂಡಿದ್ದನ್ನು ನೆರೆಹೊರೆಯವರು ಮರುದಿನ ಪೊಲೀಸರಿಗೆ ತಿಳಿಸಿದ್ದರು.
ಘೋರ ಪ್ರಕರಣ ನಡೆದ ಬಳಿಕ ಅನೇಕ ವರ್ಷಗಳವರೆಗೆ ಪೊಲೀಸರು 100 ಕ್ಕೂ ಹೆಚ್ಚು ಜನರ ಡಿಎನ್ ಎ ಸಂಗ್ರಹಿಸಿ ವಿಚಾರಣೆ ನಡೆಸಿದರೂ ಯಾವುದೇ ಮಹತ್ತರ ಸುಳಿವು ಸಿಕ್ಕಿರಲಿಲ್ಲ.
ತಮ್ಮ ತನಿಖೆ ರಾಡಾರ್ ನಲ್ಲಿ ಕಾರ್ಬೋ ಇರಲೇ ಇಲ್ಲ ಎಂದು ಪೊಲೀಸರು ತಿಳಿಸಿರುವುದನ್ನು ಸಿಬಿಎಸ್ ವರದಿ ಮಾಡಿದೆ. ಸದರಿ ಪ್ರಕರಣಕ್ಕೆ ಮೊದಲು ಅವನಿಂದ ಯಾವುದೇ ಗುರುತರವಾದ ಅಪರಾಧ ನಡೆದಿರಲಿಲ್ಲವಾದ್ದರಿದ ಮಿನ್ನಿಸೋಟ ರಾಜ್ಯದ ಡಾಟಾಬೇಸ್ ನಲ್ಲಿ ಅವನ ಹೆಸರು ದಾಖಲಾಗಿರಲಿಲ್ಲ.
ಪ್ರಕರಣವನ್ನು ಬೇಧಿಸಲು ಒಂದು ಮಹತ್ತರವಾದ ಸುಳಿವು ಸಿಕ್ಕಿದ್ದು 2020ರಲ್ಲಿ. ಆ ವರ್ಷ ಚಿಶ್ಲೋಮ್ ಪೊಲೀಸರು ಡಿಎನ್ ಎ ಗಳ ವಿಶ್ಲೇಷಣೆ ಮಾಡುವ ಸಂಸ್ಥೆಯೊಂದಕ್ಕೆ ಡಿಎನ್ಎ ಸಾಕ್ಷ್ಯದ ನಮೂನೆ ಒದಗಿಸುವಂತೆ ಮಿನ್ನಿಸೋಟ ಬ್ಯೂರೊ ಕ್ರಿಮಿನಲ್ ಅಪ್ರಿಹೆನ್ಶನ್ ಸಂಸ್ಥೆಯನ್ನು ಸಂಪರ್ಕಿಸಿತ್ತು. ಆ ಸಂಸ್ಥೆ ನೀಡಿದ ಸಾಕ್ಷ್ಯಗಳ ಆಧಾರದ ಮೇಲೆ ಕಾರ್ಬೋ ಮೇಲೆ ಪೊಲೀಸರಿಗೆ ಅನುಮಾನ ಹುಟ್ಟಲು ಕಾರಣವಾಯಿತು.
ಪೊಲೀಸ್ ಅಧಿಕಾರಿಗಳು ಕಾರ್ಬೋನ ಡಿಎನ್ ಎ ಸಂಗ್ರಹಿಸಿ ಡಾಟಾಬೇಸ್ ನಿಂದ ಸ್ಯಾಂಪಲ್ ನೊಂದಿಗೆ ತಾಳೆಹಾಕಿ ನೋಡಿದಾಗ ಅದು ಮ್ಯಾಚ್ ಆಯಿತು. ಅಪರಾಧ ನಡೆಸಿದಾಗ ಕಾರ್ಬೋನ ವಯಸ್ಸು ಕೇವಲ 18 ಆಗಿತ್ತು. ಅವನ ಮನೆ ಡೌಹಾರ್ಟಿಯ ಮನೆಯಿಂದ ಒಂದು ಮೈಲಿಗಿಂತ ಕಡಿಮೆ ಅಂತರದಲ್ಲಿತ್ತು ಮತ್ತು ಡೌಹಾರ್ಟಿಯ ಮಕ್ಕಳು ಓದುತ್ತಿದ್ದ ಶಾಲೆಯಲ್ಲೇ ಒಬ್ಬ ವಿದ್ಯಾರ್ಥಿಯಾಗಿದ್ದ.
ಕಾರ್ಬೋ ಬಂಧನವಾದ ನಂತರ ಆಕಯ ಮಗಳು ಜೀನಾ ಒಂದು ಹೇಳಿಕೆಯನ್ನು ನೀಡಿ ಅದರಲ್ಲಿ ಹೀಗೆ ಹೇಳಿದ್ದಳು: ‘ನನ್ನ ವೈಯಕ್ತಿಕ ಬದುಕು ಸೇರಿದಂತೆ ಹಲವಾರು ಜನರ ಬಾಳಿನಲ್ಲಿ ಈ ಘಟನೆ ಬೀರಿದ ಪ್ರಭಾವ ಸಾಮಾನ್ಯವಾದುದಲ್ಲ. ನಮ್ಮ ಕಣ್ಣುಗಳಿಂದ ಹರಿದ ನೀರಿಗೆ ಮತ್ತು ನಾವು ಪಟ್ಟ ಕಷ್ಟ-ಯಾತನೆಗಳಿಗೆ ಲೆಕ್ಕವೇ ಇಲ್ಲ. ನಾವೆಲ್ಲ ಮಮ್ಮಿಯನ್ನು ಈಗಲೂ ಮಿಸ್ ಮಾಡಿಕೊಳ್ಳುತ್ತಿದ್ದೇವೆ, ಮತ್ತು ನಾನು ಆಕೆಯ ಪ್ರೀತಿ ಮತ್ತು ಮಾರ್ಗದರ್ಶನವನ್ನು ಪ್ರತಿದಿನ ಮಿಸ್ ಮಾಡಿಕೊಳ್ಳುತ್ತೇನೆ.’
Published On - 7:45 am, Tue, 4 October 22