ನಾರ್ವೆಯಲ್ಲಿ ಬಿಲ್ಲು-ಬಾಣದಿಂದ ದಾಳಿ ನಡೆಸಿ 5 ಮಂದಿಯನ್ನು ಕೊಂದ ವ್ಯಕ್ತಿ; ಇಬ್ಬರ ಸ್ಥಿತಿ ಗಂಭೀರ
ಘಟನೆಯ ಬಗ್ಗೆ ಕಾಂಗ್ಸ್ಬರ್ಗ್ ಪೊಲೀಸ್ ಅಧಿಕಾರಿ ಓವಿಂದ್ ಆಸ್ ಸಂಪೂರ್ಣ ವಿವರಣೆ ನೀಡಿದ್ದಾರೆ. ಕಾಂಗ್ಸ್ಬರ್ಗ್ನ ವಿವಿಧೆಡೆ ಈ ಬಿಲ್ಲು-ಬಾಣಗಳ ದಾಳಿಯಾಗಿದೆ. ಆದರೆ ಈ ಎಲ್ಲ ಕಡೆ ದಾಳಿ ಮಾಡಿದವನೂ ಒಬ್ಬನೇ ಎಂಬುದು ನಮ್ಮ ತನಿಖೆಯಿಂದ ಗೊತ್ತಾಯಿತು ಎಂದಿದ್ದಾರೆ.
ಬಿಲ್ಲು-ಬಾಣಗಳಿಂದ ದಾಳಿ ಮಾಡಿ 5 ಮಂದಿಯನ್ನು ಕೊಂದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ನಡೆದದ್ದು ನಾರ್ವೇಯ ರಾಜಧಾನಿ ಓಸ್ಲೋದಲ್ಲಿ. ಇಲ್ಲಿನ ಕಾಂಗ್ಸ್ಬರ್ಗ್ ಪಟ್ಟಣದ ಹಲವು ಭಾಗಗಳಲ್ಲಿ ಈ ವ್ಯಕ್ತಿ ಬಿಲ್ಲು-ಬಾಣ (Bow and Arrows) ಗಳಿಂದ ದಾಳಿ ನಡೆಸಿದ್ದಾನೆ. ಈತನ ದಾಳಿಯಿಂದ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗಳಲ್ಲಿ ಐಸಿಯು(ICU)ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡವರಲ್ಲಿ ಓರ್ವ ಪೊಲೀಸ್ ಅಧಿಕಾರಿಯೂ ಇದ್ದಾರೆ. ಇವರು ಕರ್ತವ್ಯಕ್ಕೆ ರಜೆ ಹಾಕಿ ಅಂಗಡಿಯೊಂದಕ್ಕೆ ಹೋಗಿದ್ದರು. ಅಲ್ಲಿ ಈ ವ್ಯಕ್ತಿ ನಡೆಸಿದ ದಾಳಿಯಲ್ಲಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ಘಟನೆಯ ಬಗ್ಗೆ ಕಾಂಗ್ಸ್ಬರ್ಗ್ ಪೊಲೀಸ್ ಅಧಿಕಾರಿ ಓವಿಂದ್ ಆಸ್ ಸಂಪೂರ್ಣ ವಿವರಣೆ ನೀಡಿದ್ದಾರೆ. ಕಾಂಗ್ಸ್ಬರ್ಗ್ನ ವಿವಿಧೆಡೆ ಈ ಬಿಲ್ಲು-ಬಾಣಗಳ ದಾಳಿಯಾಗಿದೆ. ಆದರೆ ಈ ಎಲ್ಲ ಕಡೆ ದಾಳಿ ಮಾಡಿದವನೂ ಒಬ್ಬನೇ ಎಂಬುದು ನಮ್ಮ ತನಿಖೆಯಿಂದ ಗೊತ್ತಾಯಿತು. ಆತನನ್ನು ಬಂಧಿಸಿದ್ದೇವೆ. ಇನ್ನು ಇದರ ಬಗ್ಗೆ ಇನ್ನಷ್ಟು ಆಳವಾದ ತನಿಖೆ ಅಗತ್ಯವಿದೆ. ಇದೊಂದು ಉಗ್ರದಾಳಿ ಎಂಬುದನ್ನೂ ಅಲ್ಲಗಳೆಯುವಂತಿಲ್ಲ. ನಮ್ಮ ಕಾರ್ಯಾಚರಣೆ ಮುಂದುವರಿಸಿದ್ದೇವೆ ಎಂದೂ ಹೇಳಿದ್ದಾರೆ. ನಿನ್ನೆ ಸಂಜೆ 6.30ರಹೊತ್ತಿಗೆ ದಾಳಿ ನಡೆದಿದ್ದು, ಅದಾದ 20 ನಿಮಿಷದಲ್ಲೇ ಆರೋಪಿಯ ಬಂಧನವೂ ಆಗಿದೆ. ಈತ ಸುಮ್ಮನೆ ಬಿಲ್ಲು-ಬಾಣ ಹಿಡಿದುಕೊಂಡು ಇಡೀ ನಗರದಲ್ಲಿ ಓಡಾಡಿದ್ದಾನೆ. ಮನಸಿಗೆ ಕಂಡಲ್ಲಿ ಬಾಣ ಬಿಟ್ಟಿದ್ದಾನೆ. ಘಟನೆಯ ಬಗ್ಗೆ ಮಾತನಾಡಿದ ನಾರ್ವೆ ಪ್ರಧಾನಿ ಎರ್ಲಾ ಸೋನ್ಬರ್ಗ್, ಇದೊಂದು ಭೀಕರ ದಾಳಿ. ನಿಜಕ್ಕೂ ಭಯಹುಟ್ಟಿಸಿದೆ ಎಂದು ಹೇಳಿದ್ದಾರೆ.
ಇನ್ನು ಕೆಲವು ಪ್ರತ್ಯಕ್ಷ ದರ್ಶಿಗಳು ಘಟನೆಯನ್ನು ವಿವರಿಸಿದ್ದಾರೆ. ವ್ಯಕ್ತಿ ಬಾಣದಿಂದ ದಾಳಿ ನಡೆಸಲು ಶುರು ಮಾಡಿದ ಬಳಿಕ ಕೆಲವರಂತೂ ತಮ್ಮ ಜೀವ ಉಳಿಸಿಕೊಳ್ಳಲು ಓಡಿ ಹೋಗಿದ್ದಾರೆ. ಮಹಿಳೆಯೊಬ್ಬರು ತಮ್ಮ ಮಗುವನ್ನು ಎತ್ತಿಕೊಂಡೇ ಎದ್ದು-ಬಿದ್ದು ಓಡಿದ್ದಾರೆ ಎಂದು ಘಟನೆಯನ್ನು ಹತ್ತಿರದಿಂದ ನೋಡಿದವರು ವಿವರಿಸಿದ್ದಾರೆ. ಸದ್ಯಕ್ಕಂತೂ ಕಾಂಗ್ಸ್ಬರ್ಗ್ನಲ್ಲಿ ಪೊಲೀಸ್ ಬಿಗಿ ಭದ್ರತೆಯಿದೆ. ಜನರು ಆದಷ್ಟು ಮನೆಯಲ್ಲೇ ಇರಿ ಎಂದು ಪೊಲೀಸರು ಹೇಳಿದ್ದಾರೆ. ಇನ್ನು ಘಟನೆ ನಡೆದ ಜಾಗದಲ್ಲಿ ಆ್ಯಂಬುಲೆನ್ಸ್, ಪೊಲೀಸ್ ವಾಹನಗಳು, ಹೆಲಿಕಾಪ್ಟರ್ ಮತ್ತು ಬಾಂಬ್ ನಿಷ್ಕ್ರಿಯ ದಳಗಳು ಇರುವ ದೃಶ್ಯಗಳನ್ನು ಅಲ್ಲಿನ ಟಿವಿ ಮಾಧ್ಯಮಗಳು ವರದಿ ಮಾಡಿವೆ.
ಇನ್ನು ನಾರ್ವೆಯಲ್ಲಿ ಪೊಲೀಸರು ಸಾಮಾನ್ಯವಾಗಿ ಗಸ್ತು ತಿರುಗುತ್ತಿದ್ದರೂ ಶಸ್ತ್ರಸಜ್ಜಿತರಾಗಿ ಇರುವುದಿಲ್ಲ. ಆದರೆ ಈ ಘಟನೆ ಬಳಿಕ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ. ರಾಷ್ಟ್ರವ್ಯಾಪಿ ಪೊಲೀಸರು ಶಸ್ತ್ರಸಜ್ಜಿತರಾಗಿರಬೇಕು ಎಂದು ನಾರ್ವೆ ರಾಷ್ಟ್ರೀಯ ಪೊಲೀಸ್ ನಿರ್ದೇಶನಾಲಯ ಆದೇಶ ನೀಡಿದೆ. ಸದ್ಯಕ್ಕಂತೂ ಇದು ಉಗ್ರದಾಳಿ ಎಂದೇ ಶಂಕಿಸಲಾಗಿದೆ.
ಇದನ್ನೂ ಓದಿ: Mysore Palace Ayudha Puja: ಮೈಸೂರಿನಲ್ಲಿ ಆಯುಧ ಪೂಜೆ ಸಂಭ್ರಮ, ರಾಜ ವಂಶಸ್ಥರಿಂದ ಪಟ್ಟದ ಕತ್ತಿ, ಪಲ್ಲಕ್ಕಿ ಪೂಜೆ
Viral News: ಬರೋಬ್ಬರಿ 60 ಕೆಜಿ ಚಿನ್ನದ ಆಭರಣ ತೊಟ್ಟು ಕಾರಿನಲ್ಲಿ ನಗುತ್ತಾ ಕುಳಿತ ವಧು!
Published On - 9:56 am, Thu, 14 October 21