ಯೂರೋ ವೀಕ್ಲಿ ನ್ಯೂಸ್ ವರದಿಯೊಂದರ ಪ್ರಕಾರ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಬುಧವಾರದಂದು ತಮ್ಮ ಮೇಲೆ ನಡೆದ ಹತ್ಯೆ ಪ್ರಯತ್ನದಿಂದ ಪಾರಾಗಿದ್ದಾರೆ. ಸದರಿ ಸುದ್ದಿಯನ್ನು ಜನರಲ್ ಜಿವಿಆರ್ ಟೆಲಿಗ್ರಾಮ್ ಚ್ಯಾನೆಲ್ ಬುಧವಾರ ಬಿತ್ತರಿಸಿದೆ. ಹತ್ಯೆ ಪ್ರಯತ್ನ ಯಾವಾಗ ನಡೆಯಿತು ಎನ್ನುವ ಬಗ್ಗೆ ಪತ್ರಿಕೆ ಯಾವುದೇ ಮಾಹಿತಿ ನೀಡಿಲ್ಲ. ಫೆಬ್ರುವರಿಯಲ್ಲಿ ಉಕ್ರೇನ್ (Ukraine) ಮೇಲೆ ರಷ್ಯಾ ಸೇನಾ ಕಾರ್ಯಾಚರಣೆ ಅರಂಭಿಸಿದ ನಂತರ ಪುಟಿನ್ ಅನಾರೋಗ್ಯ ಮತ್ತು ಅವರ ಜೀವಕ್ಕೆ ಅಪಾಯವಿರುವ ಕುರಿತು ಸುದ್ದಿಗಳು (rumors) ಹಬ್ಬುತ್ತಲೇ ಇವೆ. 2017ರಲ್ಲಿ ಖುದ್ದು ಪುಟಿನ್ ಅವರೇ ಸಾರ್ವಜನಿಕವಾಗಿ ತಮ್ಮ ಮೇಲೆ ಕನಿಷ್ಟ 5 ಕೊಲೆ ಪ್ರಯತ್ನಗಳು ನಡೆದಿವೆ ಅಂತ ಹೇಳಿದ್ದರು.
ಟೆಲಿಗ್ರಾಮ್ ವರದಿಯ ಪ್ರಕಾರ ಪುಟಿನ್ ಅವರ ಕಾರಿನ ಮುಂದಿನ ಚಕ್ರ ದೊಡ್ಡ ಸದ್ದಿನೊಂದಿಗೆ ಸ್ಪೋಟಗೊಂಡಿತು ಮತ್ತು ಚಕ್ರದೊಳಗಿಂದ ಹೊಗೆ ಬರುತ್ತಿದ್ದರೂ ಕಾರನ್ನು ಕೂಡಲೆ ಸುರಕ್ಷಿತ ಪ್ರದೇಶಕ್ಕೆ ಡ್ರೈವ್ ಮಾಡಲಾಯಿತು.
ಘಟನೆಯಲ್ಲಿ ಪುಟಿನ್ ಅವರಿಗೆ ಗಾಯವಾಗಿಲ್ಲ ಅಂತ ವರದಿ ಹೇಳಿದೆ ಮತ್ತು ಘಟನೆಗೆ ಸಂಬಂಧಿಸಿದದಂತೆ ಹಲವಾರು ಜನರನ್ನು ಬಂಧಿಸಲಾಗಿದೆ.
ಬೇರೆ ಪತ್ರಿಕೆಗಳು ಸಹ ಹತ್ಯಾ ಪ್ರಯತ್ನದ ಬಗ್ಗೆ ವರದಿ ಮಾಡಿವೆ. ಒಂದು ಪತ್ರಿಕೆಯ ವರದಿ ಪ್ರಕಾರ ಪುಟಿನ್ ಅವರು ಭದ್ರತೆಗೆ ಸಂಬಂಧಿಸಿದ ಕಳವಳದೊಂದಿಗೆ ತಮ್ಮ ಕಾನ್ವಾಯ್ ಜೊತೆ ಆಧಿಕೃತ ನಿವಾಸಕ್ಕೆ ತೆರಳುತ್ತಿದ್ದಾಗ ಹತ್ಯೆ ಯತ್ನ ನಡೆದಿದೆ.
ನಿವಾಸದಿಂದ ಇನ್ನೂ ಕೆಲ ಕಿಲೋಮೀಟರ್ ಗಳಷ್ಟು ದೂರವಿರುವಾಗ ಪುಟಿನ್ ಅವರ ಮೊದಲ ಎಸ್ಕಾರ್ಟ್ ಕಾರೊಂದನ್ನು ಅಂಬ್ಯುಲೆನ್ಸ್ ತಡೆಗಟ್ಟಿತು. ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಅಡಚಣೆ ಎದುರಾಗಿದ್ದರಿಂದ ಅದನ್ನು ತಪ್ಪಿಸಲು ಎರಡನೇ ಎಸ್ಕಾರ್ಟ್ ಕಾರು ನಿಲುಗಡೆಗೆ ಬಾರದೆ ಸುತ್ತಲಾರಂಭಿಸಿತ್ತು, ಅಂತ ಚ್ಯಾನೆಲ್ ಹೇಳಿದ್ದನ್ನು ಪತ್ರಿಕೆ ವರದಿ ಮಾಡಿದೆ.
ಸೇಂಟ್ ಪೀಟರ್ಸ್‌ಬರ್ಗ್‌ನ ರಾಜಕಾರಣಿಗಳ ಗುಂಪೊಂದು ಪುಟಿನ್ ವಿರುದ್ಧ ರಾಜ್ಯ ದ್ರೋಹದ ಆರೋಪ ಹೇರಲು ಮತ್ತು ಉಕ್ರೇನ್‌ನಲ್ಲಿ ರಷ್ಯಾದ ಮಿಲಿಟರಿಗೆ ಆಗಿರುವ ಅಪಾರ ಹಾನಿ, ಆರ್ಥಿಕತೆಗೆ ಎದುರಾಗಿರುವ ಸಂಕಷ್ಟ ಮತ್ತು ಪಾಶ್ಚಾತ್ಯ ರಾಷ್ಟ್ರಗಳ ನಿರ್ಬಂಧ ಸೇರಿದಂತೆ ಹಲವಾರು ಕಾರಣಗಳನ್ನು ಉಲ್ಲೇಖಿಸಿ ಅವರನ್ನು ಅಧಿಕಾರದಿಂದ ತೆಗೆದುಹಾಕುವಂತೆ ಡುಮಾಗೆ ಮನವಿ ಮಾಡಿದ ಒಂದು ವಾರದ ನಂತರ ಈ ಘಟನೆ ಸಂಭವಿಸಿದೆ.
ಮತ್ತೊಬ್ಬ ಸ್ಥಳೀಯ ಡೆಪ್ಯೂಟಿಯೊಬ್ಬರು ಸೋಮವಾರದಂದು ತಾವು ಪುಟಿನ್ ರಾಜೀನಾಮೆ ಆಗ್ರಹಿಸಿ ಬಿಡುಗಡೆ ಮಾಡಿದ ಪ್ರಕಟಣೆಯೊಂದಕ್ಕೆ ಸೆಂಟ್ ಪೀಟರ್ಸ್ ಬರ್ಗ್, ಮಾಸ್ಕೋ ಮತ್ತು ಇತರ ಪ್ರಾಂತ್ಯಗಳ 65 ಮುನಿಸಿಪಲ್ ಪ್ರತಿನಿಧಿಗಳು ಸಹಿ ಹಾಕಿದ್ದಾರೆ ಅಂತ ಹೇಳಿದ್ದಾರೆ.