Tv9 Kannada Digital Exclusive: ತಾಲಿಬಾನ್, ಭಯೋತ್ಪಾದನೆ, ಬುರ್ಖಾ, ಗಡ್ಡಧಾರಿ ಮುಲ್ಲಾಗಳ ಹೊರತಾಗಿಯೂ ನೀವರಿಯದ 30 ಆಫ್ಘನ್ ಸಂಗತಿಗಳು

Afghanistan Crisis: ಅಫ್ಘಾನಿಸ್ತಾನದ ಬಗ್ಗೆ ಹೆಚ್ಚು ಪ್ರಚಾರಕ್ಕೆ ಬರದ ಕುತೂಹಲಕಾರಿ ಅಂಶಗಳನ್ನು ಟಿವಿ9 ಕನ್ನಡ ಡಿಜಿಟಲ್ ನಿಮ್ಮೆದುರು ತೆರೆದಿಡುತ್ತಿದೆ.

Tv9 Kannada Digital Exclusive: ತಾಲಿಬಾನ್, ಭಯೋತ್ಪಾದನೆ, ಬುರ್ಖಾ, ಗಡ್ಡಧಾರಿ ಮುಲ್ಲಾಗಳ ಹೊರತಾಗಿಯೂ ನೀವರಿಯದ 30 ಆಫ್ಘನ್ ಸಂಗತಿಗಳು
ಅಫ್ಘಾನಿಸ್ತಾನದ ಮಹಿಳೆಯರ ಸಂಸ್ಕೃತಿ (ಚಿತ್ರಕೃಪೆ: ವಿಕಿಮೀಡಿಯಾ ಫೌಂಡೇಶನ್)
Follow us
S Chandramohan
| Updated By: guruganesh bhat

Updated on:Aug 21, 2021 | 8:43 PM

ಅಫ್ಘಾನಿಸ್ತಾನ ದೇಶ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನರ ಗಮನ ಸೆಳೆದಿದೆ. ಅಫ್ಘಾನಿಸ್ತಾನದಲ್ಲಿ ಈಗ ಮಾನವೀಯತೆಯ ಬಿಕ್ಕಟ್ಟು (Afghanistan Crisis) ಎದುರಾಗಿದೆ. ಆಫ್ಘನ್ ಜನರೇ ತಮ್ಮ ತಾಯ್ನಾಡು ಬಿಟ್ಟು ವಿದೇಶಗಳಿಗೆ ಓಡಿ ಹೋಗುತ್ತಿದ್ದಾರೆ. ಆದರೆ, ಅಫ್ಘಾನಿಸ್ತಾನದ ಬಗ್ಗೆ ಹೊರಜಗತ್ತಿನ ಜನರಿಗೆ ಗೊತ್ತಿಲ್ಲದ ಅನೇಕ ಕುತೂಹಲಕಾರಿ ಅಂಶಗಳಿವೆ. ವಿಶ್ವದಲ್ಲಿ ಜನರಿಗೆ ಅಫ್ಘಾನಿಸ್ತಾನದ ಅಂದಾಕ್ಷಣ, ತಾಲಿಬಾನ್, ಭಯೋತ್ಪಾದನೆ, ಬುರ್ಖಾ, ಗಡ್ಡಧಾರಿ ಮುಲ್ಲಾಗಳ ಆಳ್ವಿಕೆಯೇ ನೆನಪಾಗುತ್ತದೆ. ಆದರೆ, ಅಫ್ಘಾನಿಸ್ತಾನ ಅಂದ್ರೆ ಇಷ್ಟೇ ಅಲ್ಲ. ಇದರಾಚೆಗೂ ಹಲವು ಸಂಗತಿಗಳಿಗೆ ಅಫ್ಘಾನಿಸ್ತಾನ ವಿಸ್ತರಿಸಿದೆ. ಸಾವಿರಾರು ವರ್ಷಗಳ ಇತಿಹಾಸ, ಸಂಪ್ರದಾಯ, ಸಂಸ್ಕೃತಿ, ಆಳ್ವಿಕೆ ಅಲ್ಲಿದೆ. ಅಫ್ಘಾನಿಸ್ತಾನದ ಬಗ್ಗೆ ನೀವಿನ್ನೂ ಅರಿಯದ ಕೌತುಕದ ಸಂಗತಿಗಳು ಇಲ್ಲಿವೆ. ಅಂಥ ಪ್ರಮುಖ 30 ಅಂಶಗಳನ್ನು ನಾವು ನಿಮಗೆ ತಿಳಿಸುತ್ತೇವೆ. ಅಫ್ಘಾನಿಸ್ತಾನದ ಬಗ್ಗೆ ಹೆಚ್ಚು ಪ್ರಚಾರಕ್ಕೆ ಬರದ ಕುತೂಹಲಕಾರಿ ಅಂಶಗಳನ್ನು ಟಿವಿ9 ಕನ್ನಡ ಡಿಜಿಟಲ್ ನಿಮ್ಮೆದುರು ತೆರೆದಿಡುತ್ತಿದೆ.

1-ಅಫ್ಘಾನಿಸ್ತಾನದ ಜನರು ಮಾರ್ಚ್ 21ರಂದು ನವರೋಜ್ ಆಚರಣೆ ಮಾಡ್ತಾರೆ. ಇದು ಅಫ್ಘಾನಿಸ್ತಾನದ ಹೊಸ ವರ್ಷಾಚರಣೆ. ಮಾರ್ಚ್ 21ರಂದು ಜನರು ದೇಶದ ಉತ್ತರ ಭಾಗದಲ್ಲಿರುವ ಮಜರ್ ಇ ಶರೀಫ್ ನಗರಕ್ಕೆ ಹೋಗಿ ಹೊಸ ವರ್ಷ ಸ್ವಾಗತಿಸುತ್ತಾರೆ. ಸ್ಥಳೀಯ ಪ್ರಭಾವಿ ವ್ಯಕ್ತಿ ಬಾವುಟ ಹಾರಿಸುವ ಮೂಲಕ ಹೊಸ ವರ್ಷಾಚರಣೆಗೆ ಸ್ವಾಗತ ಕೋರುತ್ತಾರೆ. ಒಂದು ವೇಳೆ ಬಾವುಟವನ್ನು ಸುಲಲಿತವಾಗಿ ಹಾರಿಸಿದರೇ, ಆ ವರ್ಷ ಒಳ್ಳೆಯದಾಗುತ್ತೆ ಎಂಬ ನಂಬಿಕೆ ಇದೆ. ನಮ್ಮ ಉತ್ತರ ಕರ್ನಾಟಕ ಭಾಗದಲ್ಲಿ ಕಾರ್ಣಿಕ ನುಡಿಯುವವರು ಹೀಗೆ ಭವಿಷ್ಯ ಹೇಳುತ್ತಾರೆ. ಕಾರ್ಣಿಕ ನುಡಿದಿದ್ದು ನಿಜವಾಗುತ್ತೆ ಎಂಬ ನಂಬಿಕೆ ನಮ್ಮ ರಾಜ್ಯದಲ್ಲೂ ಇದೆ.

2-ಅಫ್ಘಾನಿಸ್ತಾನದ ರಾಷ್ಟ್ರೀಯ ಕ್ರೀಡೆ ಬುಜಕ್ಷಿ. ಅಂದರೆ, ಕುದುರೆ ಮೇಲೆ ಕುಳಿತು ಟಗರನ್ನು ಹಿಡಿದುಕೊಂಡು ಹೋಗಿ ಅದನ್ನು ನಿರ್ದಿಷ್ಟ ವೃತ್ತಕ್ಕೆ ಹಾಕಬೇಕು. ಕುದುರೆ ಮೇಲೆ ಕುಳಿತವರೇ ಈ ಟಗರನ್ನು ಒಬ್ಬರಿಂದ ಇನ್ನೊಬ್ಬರು ಕಿತ್ತುಕೊಳ್ಳಲು ಫೈಟ್ ನಡೆಸುತ್ತಾರೆ. ಈ ಆಟದಲ್ಲಿ ಎರಡು ತಂಡಗಳಿರುತ್ತವೆ. ಈ ಎರಡೂ ತಂಡಗಳು ಟಗರನ್ನು ಕಿತ್ತುಕೊಳ್ಳಲು ಫೈಟ್ ನಡೆಸುತ್ತವೆ. ಅಂತಿಮವಾಗಿ ಯಾರೂ ಟಗರನ್ನು ಕುದುರೆ ಮೇಲೆ ಕುಳಿತುಕೊಂಡು ತೆಗೆದುಕೊಂಡು ಹೋಗಿ ನಿರ್ದಿಷ್ಟ ವೃತ್ತಕ್ಕೆ ಹಾಕುತ್ತಾರೋ ಅವರೇ ಗೆದ್ದಂತೆ. ಈ ಆಟವನ್ನು ಶತಮಾನಗಳಿಂದ ಅಫ್ಘಾನಿಸ್ತಾನದಲ್ಲಿ ಆಡಲಾಗುತ್ತಿದೆ. ಈ ಆಟವನ್ನು ಅಫ್ಗಾನಿಸ್ತಾನದ ಶ್ರೀಮಂತ ವಾರ್ ಲಾರ್ಡ್ಗಳು ಆಡುತ್ತಾರೆ. ಅಫ್ಘಾನಿಸ್ತಾನದ ಮೊಬೈಲ್ ಕಂಪನಿಗಳು, ಖಾಸಗಿ ಏರ್ ಲೈನ್ಸ್ ಗಳು ಈ ಆಟಕ್ಕೆ ಹಣಕಾಸು ಹೂಡಿಕೆ ಮಾಡುತ್ತವೆ. ಆದರೆ ಮಹಿಳೆಯರಿಗೆ ಆ ಆಟ ಆಡಲು ಅವಕಾಶವಿಲ್ಲ.

3-ಅಫ್ಘಾನಿಸ್ತಾನದಲ್ಲಿ ಶೇಕಡಾ 90 ರಷ್ಟು ಮಂದಿಯ ಬಳಿ ಮೊಬೈಲ್ ಪೋನ್ ಇದೆ. ಆದರೆ, ವಿದ್ಯುತ್ ಸಂಪರ್ಕವನ್ನು ಎಲ್ಲ ಮನೆಗಳಿಗೂ ನೀಡಲು ಸಾಧ್ಯವಾಗಿಲ್ಲ. ವಿದ್ಯುತ್ ಸಂಪರ್ಕ ನೀಡಿಕೆಯಲ್ಲಿ ಅಫ್ಘಾನಿಸ್ತಾನ ವಿಶ್ವದಲ್ಲಿ ತೀರಾ ಕಳಪೆ ಸಾಧನೆ ಮಾಡಿದೆ. ತಾಲಿಬಾನಿ ಉಗ್ರರ ಬಳಿ ಫ್ಯಾನ್ಸಿ ಸ್ಮಾರ್ಟ್ ಮೊಬೈಲ್ ಪೋನ್ ಗಳಿವೆ. ತಾಲಿಬಾನಿ ಉಗ್ರರು ಇ ಮೇಲ್ ಮತ್ತು ಸ್ಕೈಪ್ ಬಳಕೆ ಮಾಡ್ತಾರೆ.

4-ಕವಿತೆಗಳು ಅಫ್ಘಾನಿಸ್ತಾನದ ಶ್ರೀಮಂತ ಸಂಸ್ಕೃತಿಯ ಭಾಗ. ಕವಿತೆಗಳ ಮೂಲಕವೇ ಅಫ್ಘಾನಿಸ್ತಾನದ ಜನರು ಒಂದು ಸಾವಿರ ವರ್ಷದಿಂದ ತಮ್ಮ ಕಥೆಗಳನ್ನು ಹೇಳುತ್ತಾರೆ. ಗುರುವಾರದ ರಾತ್ರಿಯನ್ನು ಕವಿತೆಯ ರಾತ್ರಿ ಎಂದು ಹೆರಾತ್ ನಗರದಲ್ಲಿ ಆಚರಿಸಲಾಗುತ್ತದೆ. ಪುರುಷ, ಮಹಿಳೆಯರು, ಮಕ್ಕಳು ಎಲ್ಲರೂ ಸೇರಿ ಪುರಾತನ ಹಾಗೂ ಆಧುನಿಕ ಕವಿತೆಗಳನ್ನು ಕೇಳುತ್ತಾರೆ. ಹೆರಾತ್‌ನ ಸಂಪ್ರದಾಯಿಕ ಸಂಗೀತ, ಸ್ವೀಟ್ ಟೀ, ಪೆಸ್ಟ್ರಿಯನ್ನು ರಾತ್ರಿ ಇಡೀ ತಿಂದು ಖುಷಿಪಡುತ್ತಾರೆ.

5-ಹೆರಾತ್ ನಗರವನ್ನು ಗ್ರೇಟ್ ಅಲೆಕ್ಸಾಂಡರ್ ತನ್ನ ವಶಕ್ಕೆ ತೆಗೆದುಕೊಂಡಿದ್ದ. ಆಗಲೇ ಅಲೆಕ್ಸಾಂಡರ್ನ ಹೃದಯ ಕದ್ದ ಉತ್ತರ ಪ್ರಾಂತ್ಯ ಬಲ್ಕಾದ ಸುಂದರಿ ರೋಕ್ಸಾನಿ ಅಲೆಕ್ಸಾಂಡರ್ನನ್ನು ಮದುವೆಯಾಗಿದ್ದಳು. ಅಲೆಕ್ಸಾಂಡರ್-ರೋಕ್ಸಾನಿ ದಾಂಪತ್ಯಕ್ಕೆ ಓರ್ವ ಮಗ ಹುಟ್ಟಿದ್ದ. ಆದರೆ, ಅಲೆಕ್ಸಾಂಡರ್ ತನ್ನ 33 ನೇ ವರ್ಷಕ್ಕೆ ಸಾವನ್ನಪ್ಪಿದ್ದ.

6-ಬಾಡಿ ಬಿಲ್ಡರ್ ಅರ್ನಾಲ್ಡ್ ಸ್ಕೂವಾರಜೆನೆಜರ್, ಅಫ್ಘಾನಿಸ್ತಾನದ ಯುವಕರ ಪಾಲಿಗೆ ಪೋಸ್ಟರ್ ಬಾಯ್. ದೇಹದಾರ್ಢ್ಯ ಪಟು ಅರ್ನಾಲ್ಡ್ ರೀತಿ ತಾವು ಬಾಡಿಬಿಲ್ಡರ್ ಆಗಬೇಕೆಂದು ಯುವಕರು ಕನಸು ಕಾಣುತ್ತಾರೆ. ಅದಕ್ಕೆ ಕಸರತ್ತು ಮಾಡುತ್ತಾರೆ. ಅಫ್ಘನಿಸ್ತಾನದ ಬಾಡಿ ಬಿಲ್ಡಿಂಗ್ ಸೆಂಟರ್ ಗಳಲ್ಲಿ ಅರ್ನಾಲ್ಡ್ ಪೋಟೋ ಇದೆ. ಆಸ್ಟ್ರೀಯದಲ್ಲಿ ಹುಟ್ಟಿ ಆಮೆರಿಕಾದ ಕ್ಯಾಲಿಪೋರ್ನಿಯಾದ ಗರ್ವನರ್ ಆಗಿದ್ದ ಅರ್ನಾಲ್ಡ್ ಗೂ ಅಫ್ಘಾನಿಸ್ತಾನಕ್ಕೂ ಸಂಬಂಧವಿಲ್ಲ. ಆದರೆ, ಅಫ್ಘಾನಿಸ್ತಾನದ ಜನರು ಅರ್ನಾಲ್ಡ್ ನೋಡಲು ಆಫ್ಘನ್ ಜನರ ರೀತಿ ಕಾಣುತ್ತಾರೆ ಎಂದು ಹೇಳುತ್ತಾರೆ.

7-ಅಫ್ಘಾನಿಸ್ತಾನದ ಜನರ ಆಹಾರ ಪದ್ದತಿಯು ಬಹಳ ಚೆನ್ನಾಗಿದೆ. ಆಫ್ಘನ್ ಜನರು ಮಾಂಸಾಹಾರ ಪ್ರಿಯರು. ಕಬಾಬ್, ರೈಸ್ ಇಷ್ಟಪಡುತ್ತಾರೆ. ಈ ನೆಲ ಶತಮಾನಗಳಿಂದ ಪ್ರಮುಖ ನಾಗರಿಕತೆಯ ಕೇಂದ್ರವಾಗಿದೆ. ನಾಗರಿಕತೆ, ಸಂಸ್ಕೃತಿಯ ಆಹಾರ ಪದ್ದತಿಯಲ್ಲಿ ಬಿಂಬಿತವಾಗುತ್ತಿದೆ. ಬಾಸುಮತಿ ಅಕ್ಕಿಯು ಮೂಲ ಭಾರತವಲ್ಲ. ಬಾಸುಮತಿ ಅಫ್ಘಾನಿಸ್ತಾನದ ಅಕ್ಕಿ. ಇದನ್ನು ಶತಮಾನಗಳ ಹಿಂದೆ ಬ್ರಿಟಿಷರಿಂದ ಸೋತ ಆಫ್ಘನ್ ರಾಜಮನೆತನ ಭಾರತಕ್ಕೆ ಬಂದು, ಉತ್ತರಾಖಂಡದಲ್ಲಿ ಬೆಳೆಯಲು ಶುರು ಮಾಡುತ್ತೆ. ಬಳಿಕ ಇಡೀ ಉತ್ತರ ಭಾರತಕ್ಕೆ ಬಾಸುಮತಿ ಭತ್ತದ ಬೆಳೆ ಹರಡಿದೆ. ಈಗ ಉತ್ತರ ಭಾರತದಲ್ಲಿ ಹೆಚ್ಚಾಗಿ ಬಾಸುಮತಿ ಭತ್ತ ಬೆಳೆಯುತ್ತಾರೆ.

8-ಕಂದಹಾರ್‌ ವಿಮಾನ ನಿಲ್ದಾಣವು ಅಫ್ಘಾನಿಸ್ತಾನದ ದಕ್ಷಿಣ ಭಾಗದಲ್ಲಿದ್ದು, ಅತಿ ಹೆಚ್ಚು ಪ್ರಯಾಣಿಕರ ದಟ್ಟಣೆಯನ್ನು ಹೊಂದಿರುವ ವಿಮಾನ ನಿಲ್ದಾಣ. ಒಂದು ವಾರಕ್ಕೆ 1,750ರಿಂದ 5 ಸಾವಿರ ವಿಮಾನಗಳ ಕಂದಹಾರ್ ವಿಮಾನ ನಿಲ್ದಾಣದ ಮೂಲಕ ಹಾರಾಟ ನಡೆಸುತ್ತಿದ್ದವು. ನ್ಯಾಟೋ ಪಡೆಯು ಕಂದಹಾರ್‌ನಲ್ಲೇ ಏರ್ ಫೀಲ್ಡ್ ಅನ್ನು ಹೊಂದಿದೆ. ನ್ಯಾಟೋಯೇತರ ರಾಷ್ಟ್ರಗಳಲ್ಲಿರುವ ಏರ್ ಫೀಲ್ಡ್ ಅಂದರೇ ಕಂದಹಾರ್ ಏರ್ ಪೀಲ್ಡ್. ಕಂದಹಾರ್ ವಾಯುನೆಲೆಯ ಮೂಲಕವೇ ಆಮೆರಿಕಾ, ನ್ಯಾಟೋ ಪಡೆಗಳು ಅಫ್ಘಾನಿಸ್ತಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದವು. ಕಂದಹಾರ್‌ ಪ್ರದೇಶವನ್ನು ತಮ್ಮ ಅಧೀನದಲ್ಲಿ ಇಟ್ಟುಕೊಂಡವರು ಇಡೀ ಅಫ್ಘಾನಿಸ್ತಾನವನ್ನು ನಿಯಂತ್ರಿಸುತ್ತಾರೆ ಎಂದು ಸ್ಥಳೀಯ ಜನರು ಹೇಳುತ್ತಾರೆ. ತಾಲಿಬಾನ್ ಸಂಘಟನೆಯು ಹುಟ್ಟಿದ್ದು ಕೂಡ ಇದೇ ಕಂದಹಾರ್‌ ನಗರದಲ್ಲೇ ಅನ್ನೋದು ವಿಶೇಷ. ತಾಲಿಬಾನ್ ಸಂಘಟನೆಯ ಡೆಪ್ಯುಟಿ ಲೀಡರ್ ಮುಲ್ಲಾ ಅಬ್ದುಲ್ ಘನಿ ಬಾರದರ್ ದೋಹಾದಿಂದ ನೇರವಾಗಿ ಕಂದಹಾರ್ಗೆ ಬಂದಿಳಿದ. ಬಳಿಕ ಈಗ ಕಾಬೂಲ್‌ಗೆ ಬಂದಿದ್ದಾನೆ. ಮುಲ್ಲಾ ಅಬ್ದುಲ್ ಘನಿ ಬಾರದರ್ ಮುಂದಿನ ಅಫ್ಘಾನಿಸ್ತಾನದ ರಾಷ್ಟ್ರಾಧ್ಯಕ್ಷನಾಗುವ ಸಾಧ್ಯತೆಯೂ ಇದೆ.

9-ವಿಶ್ವದ ಮೊದಲ ಆಯಿಲ್ ಪೇಂಟಿಂಗ್ ಬರೆದಿದ್ದು ಯೂರೋಪ್‌ನಲ್ಲಿ ಅಲ್ಲ. ಬದಲಿಗೆ ಅಫ್ಘಾನಿಸ್ತಾನದ ಬಮಿಯಾನ್ ನಲ್ಲಿ. ಬಮಿಯಾನ್‌ನ ಗುಹೆಗಳಲ್ಲಿ ಆಯೀಲ್ ಪೇಟಿಂಗ್ ಬರೆಯಲಾಗಿತ್ತು. ಕ್ರಿಸ್ತಪೂರ್ವ 660ರಲ್ಲಿ ಬಮಿಯಾನ್ ಬೌದ್ದ ನಾಗರಿಕತೆಯ ಕೇಂದ್ರವಾಗಿತ್ತು. 9ನೇ ಶತಮಾನದಲ್ಲಿ ಅಫ್ಘಾನಿಸ್ತಾನಕ್ಕೆ ಇಸ್ಲಾಂ ಧರ್ಮದ ಎಂಟ್ರಿಯಾಯಿತು. ವಿಶ್ವದ ಅತಿ ಎತ್ತರದ ಬುದ್ದ ಪ್ರತಿಮೆಯು ಬಮಿಯಾನದಲ್ಲಿ ನಿರ್ಮಾಣವಾಗಿತ್ತು. ಆದರೆ, 2001 ರಲ್ಲಿ ತಾಲಿಬಾನಿ ಉಗ್ರರು ಬಮಿಯಾನ ಬುದ್ಧ ಪ್ರತಿಮೆಯನ್ನು ನಾಶಪಡಿಸಿದ್ದರು.

10-ಅಫ್ಘನೀಸ್ ಎನ್ನುವುದು ಅಫ್ಘಾನಿಸ್ತಾನದ ಕರೆನ್ಸಿ.

11-ಅಫ್ಘಾನಿಸ್ತಾನದಲ್ಲಿ ಲಿಥಿಯಂ ನಿಕ್ಷೇಪ ಬಾರಿ ಪ್ರಮಾಣದಲ್ಲಿದೆ. ಲಿಥಿಯಂ ಅನ್ನು ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಯಲ್ಲಿ ಬಳಸುತ್ತಾರೆ. ಲಿಥಿಯಂ ನಿಕ್ಷೇಪದ ಕೊರತೆಯಿಂದಾಗಿ ವಿಶ್ವದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಲೆ ದುಬಾರಿಯಾಗಿದೆ. ಒಂದು ವೇಳೆ ಏನಾದರೂ, ಲಿಥಿಯಂ ನಿಕ್ಷೇಪ ಭಾರತಕ್ಕೆ ಸಿಕ್ಕರೇ, ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಲೆ ಕಡಿಮೆಯಾಗಬಹುದು. ಲಿಥಿಯಂ ನಿಕ್ಷೇಪದ ಮೌಲ್ಯವೇ ಒಂದು ಟ್ರಿಲಿಯನ್ ಡಾಲರ್. ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೇ, 74 ಲಕ್ಷ ಕೋಟಿ ರೂಪಾಯಿ. ಭಾರತ ಸರ್ಕಾರದ ಎರಡು ವರ್ಷದ ಬಜೆಟ್ ಗಿಂತ ಹೆಚ್ಚಿನ ಮೌಲ್ಯದ ಲಿಥಿಯಂ ನಿಕ್ಷೇಪ ಅಫ್ಘಾನಿಸ್ತಾನದ ಬಳಿ ಇದೆ. 12-ವಿಶ್ವದಲ್ಲಿ ಅಪೀಮು, ಹೆರೋಯಿನ್ ಉತ್ಪಾದನೆಯಾಗುವುದರಲ್ಲಿ ಶೇ.85 ರಷ್ಟು ಅಫ್ಘಾನಿಸ್ತಾನ ದೇಶವೊಂದರಲ್ಲೇ ಉತ್ಪಾದನೆಯಾಗುತ್ತೆ. ಅಪೀಮು, ಹೆರೋಯಿನ್ ಅನ್ನು ತಾಲಿಬಾನ್ ಉಗ್ರರು ಕಳ್ಳಸಾಗಣೆಯ ಮೂಲಕ ಇಂಟರ್ ನ್ಯಾಷನಲ್ ಮಾರ್ಕೆಟ್ಗೆ ಸಾಗಿಸಿ ಹಣ ಗಳಿಸುತ್ತಿದ್ದರು. ಈಗ ಅಫ್ಘಾನಿಸ್ತಾನವನ್ನು ವಿಶ್ವದಲ್ಲಿ ಡ್ರಗ್ಸ್ ರಾಷ್ಟ್ರ ಮಾಡಲ್ಲ ಎಂದಿದ್ದಾರೆ. ಆದರೆ, ಹಣವಿಲ್ಲದಿದ್ದರೇ ಅಫ್ಘಾನಿಸ್ತಾನದಲ್ಲಿ ಅಪೀಮು, ಹೆರೋಯೀನ್ ಬೆಳೆಯುವುದು ಮುಂದುವರಿಯಬಹುದು.

13-ಅಫ್ಘಾನಿಸ್ತಾನದ ಮಹಿಳೆಯರಿಗೆ 1920ರಲ್ಲಿ ಮತದಾನದ ಹಕ್ಕು ನೀಡಲಾಗಿತ್ತು. ಆಫ್ಘನ್ ಸಂವಿಧಾನದಲ್ಲೇ 1960ರಲ್ಲಿ ಸಮಾನತೆಯ ಹಕ್ಕು ನೀಡಲಾಗಿತ್ತು. 1990ರ ಹೊತ್ತಿಗೆ ಶಾಲೆಗಳಲ್ಲಿ ಶೇ.70 ರಷ್ಟು ಮಹಿಳಾ ಶಿಕ್ಷಕಿಯರಿದ್ದರು. ಸರ್ಕಾರಿ ಉದ್ಯೋಗದಲ್ಲಿ ಶೇ.50 ರಷ್ಟು ಮಹಿಳೆಯರಿದ್ದರು. ಕಾಬೂಲ್ ನಲ್ಲಿ ಶೇ.40 ರಷ್ಟು ಮಹಿಳಾ ವೈದ್ಯೆಯರಿದ್ದರು. ಇದನ್ನು ಈಗ ಹೇಳಿದ್ರೆ, ಯಾರಿಗೂ ನಂಬಿಕೆ ಬರಲ್ಲ. 14-ಅಫ್ಘಾನಿಸ್ತಾನವು ಚೀನಾ, ಇರಾನ್, ಪಾಕಿಸ್ತಾನ, ಟರ್ಕಿ, ಉಜಬೇಕಿಸ್ತಾನ, ತಜಕಿಸ್ತಾನ ದೇಶಗಳಿಂದ ಸುತ್ತುವರಿದಿದೆ. ಅಫ್ಘಾನಿಸ್ತಾನದ ಸ್ವಲ್ಪ ಭಾಗವು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಹೊಂದಿಕೊಂಡಂತೆ ಇದೆ. ಹೀಗಾಗಿ ಭಾರತಕ್ಕೂ ಅಫ್ಘಾನಿಸ್ತಾನ ನೆರೆಹೊರೆಯ ದೇಶ. ಹೀಗಾಗಿ 7 ದೇಶಗಳೊಂದಿಗೆ ಗಡಿ ಹಂಚಿಕೊಂಡಿರುವ ದೇಶ ಅಫ್ಘಾನಿಸ್ತಾನ. ಒಟ್ಟಾರೆ 5,987 ಕಿಲೋಮೀಟರ್ ಗಡಿಯನ್ನು 7 ದೇಶಗಳೊಂದಿಗೆ ಹಂಚಿಕೊಂಡಿದೆ. ಭಾರತದ ಪಾಕ್ ಆಕ್ರಮಿತ ಕಾಶ್ಮೀರದೊಂದಿಗೆ 106 ಕಿಲೋಮೀಟರ್ ಗಡಿಯನ್ನು ಹಂಚಿಕೊಂಡಿದೆ.

15-ಅಫ್ಘಾನಿಸ್ತಾನವನ್ನು ಬ್ರಿಟಿಷರು ಆಕ್ರಮಿಸಿಕೊಂಡಿದ್ದರು. ಬ್ರಿಟಿಷರ ವಿರುದ್ಧ ಅಫ್ಘನ್ ಜನರು 3 ಯುದ್ದ ನಡೆಸಿದ್ದಾರೆ. ಕೊನೆಗೆ 1919ರಲ್ಲಿ ಆಗಸ್ಟ್ 19ರಂದು ಸ್ವಾತಂತ್ರ್ಯ ಪಡೆದರು.

16- ಅಫ್ಘಾನಿಸ್ತಾನದ ಮೇಲೆ ಬೇರೆ ಬೇರೆ ರಾಜರು, ದೇಶಗಳು ದಾಳಿ ಮಾಡುತ್ತಲೇ ಇವೆ. ಬ್ರಿಟಿಷರು, ಸೋವಿಯತ್ ರಷ್ಯಾ, ಮಂಗೋಲಿಯನ್ನರು, ಅರಬ್ ಮುಸ್ಲಿಂ, ಭಾರತದ ಮೌರ್ಯರು, ಅಲೆಕ್ಸಾಂಡರ್, ಇತ್ತೀಚಿನ ವರ್ಷಗಳಲ್ಲಿ ರಷ್ಯಾ, ಆಮೆರಿಕಾ ಅಫ್ಘನಿಸ್ತಾನದ ಮೇಲೆ ದಾಳಿ ಮಾಡಿವೆ. ಚೆಂಗೀಸ್ ಖಾನ್ ಮತ್ತು ಮಂಗೋಲ್ ಸೇನೆಯು ಅಫ್ಘನ್ ಮೇಲೆ 1219ರಲ್ಲಿ ದಾಳಿ ಮಾಡಿತ್ತು.

17-ಇಸ್ಲಾಂ ಧರ್ಮ ಅಫ್ಘಾನಿಸ್ತಾನಕ್ಕೆ ಎಂಟ್ರಿ ಕೊಡುವ ಮುನ್ನ ಬೌದ್ದ ಮತ್ತು ಜೋರಾಷ್ಟ್ರಿಯನ್ ಧರ್ಮಗಳೇ ಅಫ್ಘಾನಿಸ್ತಾನದ ಪ್ರಮುಖ ಧರ್ಮಗಳು.

18-ಅಹಮದ್ ಷಾ ದುರಾನಿ, ಅಫ್ಘಾನಿಸ್ತಾನದ ಕೊನೆಯ ಮಹಾರಾಜ. 1747ರಲ್ಲಿ ಈತನ ಪಟ್ಟಾಭಿಷೇಕ ಆಗಿತ್ತು. ಎಲ್ಲ ಪ್ರಾಂತ್ಯ, ಚಿಕ್ಕ ಪುಟ್ಟ ಸಾಮ್ರಾಜ್ಯಗಳನ್ನು ಒಗ್ಗೂಡಿಸಿ ಅಫ್ಘಾನಿಸ್ತಾನದ ಸಾಮ್ರಾಜ್ಯ ಕಟ್ಟಿದ್ದ. 1772 ರಲ್ಲಿ ಅಹಮದ್ ಷಾ ದುರಾನಿ ಸಾವನ್ನಪ್ಪಿದ್ದ. ಬಳಿಕ ಪುತ್ರ ತೈಮೂರ್ ಷಾ ಉತ್ತರಾಧಿಕಾರಿಯಾದ. 1776ರಲ್ಲಿ ರಾಜಧಾನಿಯನ್ನು ಕಂದಹಾರ್ನಿಂದ ಕಾಬೂಲ್​ಗೆ ವರ್ಗಾಯಿಸಿದ.

19-ತಾಲಿಬಾನ್ ಸಂಘಟನೆಯು ಸುನ್ನಿ ಇಸ್ಲಾಮಿಕ್ ಮೂಲಭೂತವಾದಿಗಳ ರಾಜಕೀಯ ಸಂಘಟನೆ, ಭಯೋತ್ಪಾದನಾ ಸಂಘಟನೆ. 1996ರಿಂದ 2001ರವರೆಗೆ ತಾಲಿಬಾನ್ ಸಂಘಟನೆಯೇ ದೇಶವನ್ನಾಳಿದರು.

20-ಅಫ್ಘಾನಿಸ್ತಾನದಲ್ಲಿ 2004ರಲ್ಲಿ ಪ್ರಜಾಪ್ರಭುತ್ವದ ಮೂಲಕ ಚುನಾವಣೆ ನಡೆದು ಹಮೀದ್ ಕರ್ಜೈ ದೇಶದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

21-ಅಫ್ಘಾನಿಸ್ತಾನದಲ್ಲಿ ಎರಡು ಪ್ರಮುಖ ಭಾಷೆಗಳಿವೆ. ಶೇ.35 ರಷ್ಟು ಜನರು ಪಶ್ತೋ ಭಾಷೆಯನ್ನು ಮಾತನಾಡುತ್ತಾರೆ. ಶೇ.50 ರಷ್ಟು ಜನರು ದರಿ ಭಾಷೆ ಮಾತನಾಡುತ್ತಾರೆ. ಪಶ್ತೋ ಮತ್ತು ದರಿ ಭಾಷೆಗಳು ಸರ್ಕಾರದ ಅಧಿಕೃತ ಭಾಷೆಗಳು.

22-ಅಫ್ಘಾನಿಸ್ತಾನವು ಬಹುಸಂಸ್ಕೃತಿಯ, ಬಹುಜನಾಂಗದ ದೇಶ. ಬುಡಕಟ್ಟು, ಗುಡ್ಡಗಾಡು ಜನಾಂಗಗಳೂ ಇವೆ.

23-ಅಫ್ಘಾನಿಸ್ತಾನ ದೇಶವು 6,52,230 ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿದೆ.

24-ಅಫ್ಘಾನಿಸ್ತಾನದಲ್ಲಿ ಶೇ.80 ಸುನ್ನಿ ಮುಸ್ಲಿಂರಿದ್ದರೇ, ಶೇ.19 ರಷ್ಟು ಷಿಯಾ ಮುಸ್ಲಿಂರಿದ್ದಾರೆ.

25-2021ರ ಮಾಹಿತಿ ಪ್ರಕಾರ, ಅಫ್ಘಾನಿಸ್ತಾನದ ಜನರ ಸರಾಸರಿ ಆಯುಷ್ಯ 53 ವರ್ಷ. ಅಫ್ಘಾನಿಸ್ತಾನದಲ್ಲಿ 3 ಕೋಟಿ 74 ಲಕ್ಷ ಜನಸಂಖ್ಯೆ ಇದೆ. ನಮ್ಮ ಕರ್ನಾಟಕ ರಾಜ್ಯದ ಅರ್ಧದಷ್ಟು ಜನಸಂಖ್ಯೆಯನ್ನು ಅಫ್ಘಾನಿಸ್ತಾನ ದೇಶ ಹೊಂದಿದೆ. ಇದರಲ್ಲಿ ಈಗ 1.6 ಕೋಟಿ ಜನರು ಹಸಿವಿನಿಂದ ಬಳಲುತ್ತಿದ್ದಾರೆ ಎಂದು ವಿಶ್ವಸಂಸ್ಥೆ ವರದಿ ನೀಡಿದೆ.

26- ಅಫ್ಘಾನಿಸ್ತಾನದ ಜನರ ಪ್ರಮುಖ ಆದಾಯ ಮೂಲ ಕೃಷಿಯೇ ಆಗಿದೆ. ನದಿಗಳು ಅಫ್ಘನ್ ನಾಡಿನಲ್ಲಿ ಹರಿಯುತ್ತಾವೆ. ಬಾಸುಮತಿ ಭತ್ತ, ಡ್ರೈ ಪ್ರೂಟ್ಸ್, ತರಕಾರಿ, ಹಣ್ಣುಗಳನ್ನು ಹೆಚ್ಚಾಗಿ ಅಫ್ಘಾನಿಸ್ತಾನದಲ್ಲಿ ರೈತರು ಬೆಳೆಯುತ್ತಾರೆ. ಭಾರತಕ್ಕೆ ಡ್ರೈ ಪ್ರೂಟ್ಸ್ ಅನ್ನು ಅಫ್ಘನ್ ರಫ್ತು ಮಾಡುತ್ತಿತ್ತು.

27-ಬಾಲ್ಕ್ ಪ್ರಾಂತ್ಯದಲ್ಲಿ ತೈಲ ನಿಕ್ಷೇಪ ಕೂಡ ಪತ್ತೆಯಾಗಿದೆ. 180 ಕೋಟಿ ಬ್ಯಾರೆಲ್ ಕಚ್ಚಾತೈಲ ಇದೆ ಎಂದು ಆಮೆರಿಕಾ ಅಂದಾಜು ಮಾಡಿದೆ. ಈಗ ಇದೆಲ್ಲಾ ತಾಲಿಬಾನಿಗಳ ವಶವಾಗಿದೆ.

28-ಅಫ್ಘಾನಿಸ್ತಾನದ ಜಿಡಿಪಿ 1.40 ಲಕ್ಷ ಕೋಟಿ ರೂಪಾಯಿ. ಭಾರತದ ಜಿಡಿಪಿ 220 ಲಕ್ಷ ಕೋಟಿ ರೂಪಾಯಿ. ಹೀಗಾಗಿ ಅಫ್ಘಾನಿಸ್ತಾನದಲ್ಲಿ ಭಾರತಕ್ಕಿಂತ ಹೆಚ್ಚಿನ ಬಡತನ, ಹಸಿವು ಸಮಸ್ಯೆ ಇದೆ.

29-ಅಫ್ಘಾನಿಸ್ತಾನದಲ್ಲಿ ಶೇ.54 ರಷ್ಟು ಜನರು ಬಡತನಕ್ಕಿಂತ ಕೆಳಗೆ ಇದ್ದಾರೆ. ಇದು ದೇಶದ ಬಡತನದ ತೀವ್ರತೆ ಎಷ್ಟಿದೆ ಎಂಬುದನ್ನು ಬಿಂಬಿಸುತ್ತೆ.

30-ಅಫ್ಘನ್ ಸೇನೆಯಲ್ಲಿ 3 ಲಕ್ಷ ಸೈನಿಕರಿದ್ದರು. ತಾಲಿಬಾನ್ ಉಗ್ರಗಾಮಿ ಸಂಘಟನೆಯಲ್ಲಿ 85 ಸಾವಿರದಷ್ಟು ಜಿಹಾದಿಗಳಿದ್ದರು. ಆದರೆ, 85 ಸಾವಿರ ಜಿಹಾದಿಗಳನ್ನು ಸೋಲಿಸಲು 3 ಲಕ್ಷ ಸೈನಿಕರಿಗೆ ಸಾಧ್ಯವಾಗಿಲ್ಲ ಎನ್ನುವುದೇ ವಿಶ್ವವನ್ನು ಕಾಡುತ್ತಿರುವ ಅಚ್ಚರಿ.

ವಿಶೇಷ ವರದಿ: ಎಸ್ ಚಂದ್ರಮೋಹನ್ ನ್ಯಾಷನಲ್ ಬ್ಯೂರೋ, ಟಿವಿ 9

ಇದನ್ನೂ ಓದಿ: 

Sharia Law: ಅಫ್ಘಾನಿಸ್ತಾನದಲ್ಲಿ ಷರಿಯಾ ಆಡಳಿತ ಜಾರಿಗೆ ಸಿದ್ಧತೆ; ಷರಿಯಾ ಕಾನೂನು ಎಂದರೇನು?

ದಿಕ್ಕುತಪ್ಪಿರುವ ಅಫ್ಘಾನಿಸ್ತಾನದ ಆಡಳಿತಕ್ಕೆ ತಾಲಿಬಾನಿಯ ಈ ಏಳು ಮಂದಿಯೇ ಸೂತ್ರಧಾರಿಗಳು!

(Afghanistan Crisis 30 Afghan Facts That Never Been Despite the Taliban Terrorism Burqa and Bearded Mullah)

Published On - 8:40 pm, Sat, 21 August 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್