ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನ ಉತ್ತರಕ್ಕಿರುವ ಪಂಜ್ಶಿರ್ ಕಣಿವೆ ಇನ್ನೂ ತಾಲಿಬಾನ್ ಉಗ್ರರ ತೆಕ್ಕೆಗೆ ಸಿಕ್ಕಿಲ್ಲ. ಸರ್ಕಾರಿ ಪಡೆಗಳು ಇತರ ಬುಡಕಟ್ಟುಗಳ ಹೋರಾಟಗಾರರು ಈ ಪ್ರದೇಶದಲ್ಲಿ ತಾಲಿಬಾನ್ಗೆ ಪ್ರಬಲ ಪ್ರತಿರೋಧ ಒಡ್ಡಿದ್ದಾರೆ. ಕಾಬೂಲ್ ಗೆದ್ದು ಬೀಗುತ್ತಿರುವ ತಾಲಿಬಾನ್ ಉಗ್ರರು ಇದೀಗ ಪಂಜ್ಶಿರ್ ಕಣಿವೆಯನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದು, ಭಾನುವಾರ ರಾತ್ರಿ ದೊಡ್ಡ ಸಂಖ್ಯೆಯಲ್ಲಿ ಹೋರಾಟಗಾರರನ್ನು ಅತ್ತ ಕಳಿಸಿದೆ.
‘ಇಸ್ಲಾಮಿಕ್ ಎಮಿರೇಟ್ನ ನೂರಾರು ಮುಜಾಹಿದ್ದೀನ್ಗಳು ಪಂಜ್ಶಿರ್ ಪ್ರಾಂತ್ಯವನ್ನು ನಿಯಂತ್ರಿಸುವ ಉದ್ದೇಶದಿಂದ ಅತ್ತ ಧಾವಿಸುತ್ತಿದ್ದಾರೆ. ಸ್ಥಳೀಯ ಸರ್ಕಾರಿ ಅಧಿಕಾರಿಗಳು ಶಾಂತಿಯುತವಾಗಿ ಪ್ರಾಂತ್ಯವನ್ನು ನಮಗೆ ಬಿಟ್ಟುಕೊಡಲು ನಿರಾಕರಿಸಿದ್ದರಿಂದ ಮಿಲಿಟರಿ ಕಾರ್ಯಾಚರಣೆಗೆ ಮುಂದಾಗಬೇಕಾಯಿತು’ ಎಂದು ಉಗ್ರರ ಟ್ವಿಟರ್ ಅಕೌಂಟ್ನಲ್ಲಿ ಅರೇಬಿಕ್ ಭಾಷೆಯಲ್ಲಿ ಟ್ವೀಟ್ ಮಾಡಲಾಗಿದೆ.
ತಾಲಿಬಾನಿಗಳು ಮಿಂಚಿನ ವೇಗದಲ್ಲಿ ಕಾಬೂಲ್ ವಶಪಡಿಸಿಕೊಂಡ ನಂತರ ಸಾವಿರಾರು ಜನರು ಪಂಜ್ಶಿರ್ ಕಣಿಗೆ ಧಾವಿಸಿ ಆಶ್ರಯ ಪಡೆದುಕೊಂಡಿದ್ದರು. ಅಫ್ಘಾನಿಸ್ತಾನದ ಇತಿಹಾಸದಲ್ಲಿ ದಂತಕತೆ ಎನಿಸಿರುವ ಮುಜಾಹಿದ್ದೀನ್ ಕಮಾಂಡರ್ ಅಹ್ಮದ್ ಶಾ ಮಸೂದ್ರ ಅಹ್ಮದ್ 9000 ಸಾವಿರ ಹೋರಾಟಗಾರರನ್ನು ಸಂಘಟಿಸಿದ್ದು, ತಾಲಿಬಾನ್ ವಿರುದ್ಧ ಹೋರಾಟಕ್ಕೆ ಸಜ್ಜಾಗಿದ್ದಾರೆ. ಸೆಪ್ಟೆಂಬರ್ 11, 2001ರ ದಾಳಿಗೆ ಮೊದಲು ಅಲ್ಖೈದಾ ಉಗ್ರರು ಅಹ್ಮದ್ ಶಾ ಮಸೂದ್ರನ್ನು ಕೊಂದುಹಾಕಿದ್ದರು.
ಎಎಫ್ಪಿ ವರದಿಗಾರರು ಸ್ಥಳಕ್ಕೆ ಭೇಟಿ ನೀಡಿದ್ದ ವೇಳೆಯಲ್ಲಿ ಹತ್ತಾರು ಮಂದಿ ಸೇನಾ ಕವಾಯತು ಮಾಡುತ್ತಿದ್ದುದು ಹಾಗೂ ಮಿಲಿಟರಿ ಸಶಸ್ತ್ರ ವಾಹನಗಳು ಸಂಚರಿಸುತ್ತಿದ್ದುದು ಕಂಡು ಬಂತು. ತಾಲಿಬಾನ್ ಪ್ರಣೀತ ಆಡಳಿತ ವ್ಯವಸ್ಥೆಯನ್ನು ಇವರು ಪ್ರಬಲವಾಗಿ ವಿರೋಧಿಸುತ್ತಿದ್ದಾರೆ. ಅಗತ್ಯ ಬಿದ್ದರೆ ಸಶಸ್ತ್ರ ಸಂಘರ್ಷಕ್ಕೂ ಸಜ್ಜಾಗಿದ್ದಾರೆ.
ಅಫ್ಘಾನಿಸ್ತಾನದ ವಿವಿಧ ಪ್ರಾಂತ್ಯಗಳಿಂದ ಹಿಮ್ಮೆಟ್ಟಿದ ಅಮೆರಿಕದಿಂದ ತರಬೇತಿ ಪಡೆದ ಸರ್ಕಾರಿ ಪಡೆಗಳೂ ಪಂಜ್ಶೀರ್ ಪ್ರಾಂತ್ಯದಲ್ಲಿ ಒಗ್ಗೂಡಿವೆ. ಈ ಪ್ರಾಂತ್ಯದಲ್ಲಿ ತಾಲಿಬಾನ್ಗೆ ಜಯ ಸುಲಭದ ತುತ್ತಲ್ಲ. ನಮ್ಮ ದೇಶವನ್ನು ರಕ್ಷಿಸಿಕೊಳ್ಳಲು ನಾವು ಸಜ್ಜಾಗಿದ್ದೇವೆ ಎಂದು ಪಂಜ್ಶಿರ್ನ ಸೇನಾ ಕಮಾಂಡರ್ ಒಬ್ಬರ ಹೇಳಿಕೆಯನ್ನು ಅಲ್ ಅರೇಬಿಯಾ ವರದಿ ಮಾಡಿದೆ.
#BREAKING Taliban says ‘hundreds of fighters’ heading for holdout Panjshir Valley pic.twitter.com/KSXsL4XXud
— AFP News Agency (@AFP) August 22, 2021
ಪಂಜ್ಶಿರ್ ಕಣಿವೆ ಬಿಟ್ಟುಕೊಡಲ್ಲ: ಅಹ್ಮದ್ ಮಸೂದ್
ಅಫ್ಘಾನಿಸ್ತಾನದ ಪಂಜ್ಶಿರ್ ಕಣಿವೆಯಲ್ಲಿ ಹಿಡಿತ ಸಾಧಿಸಿರುವ ವಿರೋಧಿ ಬಣದ ಕಮಾಂಡರ್ ಅಹ್ಮದ್ ಮಸೂದ್, ಕಣಿವೆಯನ್ನು ತಾಲಿಬಾನಿಗಳಿಗೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಕಣಿವೆ ವಶಕ್ಕೆ ಯತ್ನಿಸಿದ್ರೆ ಪ್ರತಿರೋಧ ಎದುರಿಸಬೇಕಾಗುತ್ತದೆ. ಹಿಂದೆ ನಾವು ಸೋವಿಯತ್ ಒಕ್ಕೂಟವನ್ನು ಎದುರಿಸಿದ್ದೆವು. ಈಗ ತಾಲಿಬಾನಿಗಳನ್ನೂ ಎದುರಿಸುತ್ತೇವೆ. ನಮ್ಮ ನಿಯಂತ್ರಣದಲ್ಲಿನ ಪ್ರದೇಶ ಬಿಟ್ಟು ಕೊಡುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
(Afghanistan Taliban Militants move towards holdout Panjshir Valley)
ಇದನ್ನೂ ಓದಿ: Afghanistan: ಅಫ್ಘಾನಿಸ್ತಾನದಲ್ಲಿ ಶೀಘ್ರವೇ ಹೊಸ ಸರ್ಕಾರ ರಚಿಸುವುದಾಗಿ ಘೋಷಿಸಿದ ತಾಲಿಬಾನ್
ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಬಂದೀಖಾನೆಯ ಬಾಗಿಲು ತೆಗೆಯುತ್ತಿರುವ ತಾಲಿಬಾನಿಗಳು; ಮರಣ ದಂಡನೆ ಶಿಕ್ಷೆ ಅನುಭವಿಸುತ್ತಿದ್ದವರೂ ರಿಲೀಸ್
Published On - 11:42 pm, Sun, 22 August 21