Kabul Blast: ಕಾಬೂಲ್ ವಿಮಾನ ನಿಲ್ದಾಣದಲ್ಲಿ 3ನೇ ಬಾಂಬ್ ಸ್ಫೋಟ, ಅಮೆರಿಕ ಯೋಧರ ಸಾವಿನ ಶಂಕೆ
ಅಫ್ಘಾನಿಸ್ತಾನದ ಕಾಬೂಲ್ನಲ್ಲಿ ಸರಣಿ ಸ್ಫೋಟ ಪ್ರಕರಣದಲ್ಲಿ ಸುಮಾರು 120 ಜನರು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.
ಕಾಬೂಲ್: ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ನಲ್ಲಿ ಎರಡು ಆತ್ಮಾಹುತಿ ಬಾಂಬ್ಗಳು ಸ್ಫೋಟಿಸಿದ ನಂತರ ಫ್ರಾನ್ಸ್ ಪ್ರಜೆಯೊಬ್ಬರು ವಿಮಾನ ನಿಲ್ದಾಣದಿಂದ ದೂರ ಸರಿಯುವಂತೆ ಜನರನ್ನು ಎಚ್ಚರಿಸುತ್ತಿದ್ದರು. ಈ ವೇಳೆಯೇ ಅಲ್ಲಿ ಮತ್ತೊಂದು ಬಾಂಬ್ ಸ್ಫೋಟಿಸಿದ್ದು, ಜನರು ಭಯಭೀತರಾದರು. ವಿಮಾನ ನಿಲ್ದಾಣದಲ್ಲಿ ಮತ್ತೊಂದು ಬಾಂಬ್ ಸ್ಫೋಟಿಸುವ ಸಾಧ್ಯತೆಯಿದೆ. ಎಲ್ಲರೂ ವಿಮಾನ ನಿಲ್ದಾಣದ ಗೇಟ್ಗಳಿಂದ ದೂರ ಸರಿಯಿರಿ ಎಂದು ಫ್ರಾನ್ಸ್ ಪ್ರಜೆ ಜನರಿಗೆ ಎಚ್ಚರಿಕೆ ನೀಡುತ್ತಿದ್ದ. ಈ ಎಚ್ಚರಿಕೆಯ ನಡುವೆಯೇ ಮತ್ತೊಂದು ಬಾಂಬ್ ಸ್ಫೋಟಿಸಿತು.
ಕಾಬೂಲ್ನಲ್ಲಿ ಸಂಭವಿಸಿದ ಸರಣಿ ಸ್ಫೋಟದಲ್ಲಿ ಅಮೆರಿಕದ ನಾಲ್ವರು ಯೋಧರು ಮೃತಪಟ್ಟಿರುವ ಬಗ್ಗೆ ಅಮೆರಿಕದ ರಕ್ಷಣಾ ಕಾರ್ಯಾಲಯ ಪೆಂಟಗನ್ ಮಾಹಿತಿ ನೀಡಿದೆ ಎಂದು ಕೆಲ ಮಾಧ್ಯಮಗಳು ಹೇಳಿಕೊಂಡಿವೆ. ಅಫ್ಘಾನಿಸ್ತಾನದ ಕಾಬೂಲ್ನಲ್ಲಿ ಸರಣಿ ಸ್ಫೋಟ ಪ್ರಕರಣದಲ್ಲಿ ಸುಮಾರು 120 ಜನರು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಸರಣಿ ಸ್ಫೋಟದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣವನ್ನು ಅಮೆರಿಕ ಸೇನೆ ತನ್ನ ವಶಕ್ಕೆ ಪಡೆದುಕೊಂಡಿದೆ. ರಾಜಧಾನಿ ಕಾಬೂಲ್ನಲ್ಲಿ ತಾಲಿಬಾನ್ ಆಡಳಿತ ಕರ್ಫ್ಯೂ ಹೇರಿದೆ.
ಸರಣಿ ಸ್ಫೋಟದ ಹಿನ್ನೆಲೆಯಲ್ಲಿ ಪ್ರಮುಖ ನ್ಯಾಟೊ ದೇಶಗಳು ಉನ್ನತ ಮಟ್ಟದ ಸಭೆಗಳನ್ನು ನಡೆಸಿ ಅಫ್ಘಾನಿಸ್ತಾನದ ಭದ್ರತಾ ಸ್ಥಿತಿಗತಿ ಪರಿಶೀಲಿಸಿದರು. ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್, ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮಕ್ರಾನ್, ತುರ್ತು ಸಭೆ ಕರೆದ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ತಮ್ಮ ಇತರ ಕಾರ್ಯಕ್ರಮಗಳನ್ನು ರದ್ದುಪಡಿಸಿ ಉನ್ನತ ಮಟ್ಟದ ಸಭೆಗಳನ್ನು ನಡೆಸಿದರು.
ಕಾಬೂಲ್ ವಿಮಾನ ನಿಲ್ದಾಣದಲ್ಲಿ ಗುರುವಾರ ಸಂಜೆ ಎರಡು ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, 13 ಜನರು ಸಾವನ್ನಪ್ಪಿ, 15 ಜನರು ಗಾಯಗೊಂಡಿದ್ದಾರೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಅಮೆರಿಕದ ನಾಗರಿಕರು ಮತ್ತು ಭದ್ರತಾ ಸಿಬ್ಬಂದಿ ಸಹ ಗಾಯಗೊಂಡಿದ್ದಾರೆ.
(American Soldiers Suspected Death in Kabul Airport Blast)
ಇದನ್ನೂ ಓದಿ: Wall Street: ಕಾಬೂಲ್ ಸ್ಫೋಟಕ್ಕೆ ಕಂಪಿಸಿದ ಅಮೆರಿಕ ಷೇರುಪೇಟೆ; ಡೊ ಜೋನ್ಸ್ ಕುಸಿತ
ಇದನ್ನೂ ಓದಿ: Kabul Blast: 2 ಆತ್ಮಾಹುತಿ ದಾಳಿಯಲ್ಲಿ 13 ಸಾವು, 15 ಮಂದಿ ಗಾಯಗೊಂಡಿದ್ದಾರೆ ಎಂದ ರಷ್ಯಾ