ಅಮೆರಿಕದ ಪ್ರತಿಷ್ಠಿತ ಗುಪ್ತಚರ ಸಂಸ್ಥೆ ಸಿಐಎ (Central Intelligence Agency – CIA) ನಿರ್ದೇಶಕ ವಿಲಿಯಮ್ ಜೆ.ಬರ್ನ್ಸ್ ಸೋಮವಾರ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿ ತಾಲಿಬಾನ್ ನಾಯಕ ಅಬ್ದುಲ್ ಘನಿ ಬಾರದಾರ್ನನ್ನು ಭೇಟಿಯಾಗಿದ್ದಾರೆ. ಕಾಬೂಲ್ ಗೆದ್ದ ನಂತರ ಜೋ ಬೈಡೆನ್ ಆಡಳಿತದ ಅತ್ಯುನ್ನತ ಹಂತದ ಅಧಿಕಾರಿಯೊಂದಿಗೆ ತಾಲಿಬಾನ್ ನಡೆಸಿದ ಮೊದಲ ಮಾತುಕತೆಯಿದು. ಈ ವೇಳೆ ಅತಿಸೂಕ್ಷ್ಮ ರಾಜತಾಂತ್ರಿಕ ವಿಷಯಗಳು ಚರ್ಚೆಯಾಗಿವೆ ಎಂದು ಹೆಸರು ಹೇಳಲು ಇಚ್ಛಿಸದ ಅಮೆರಿಕ ಸರ್ಕಾರದ ಉನ್ನತ ಅಧಿಕಾರಿಗಳನ್ನು ಉಲ್ಲೇಖಿಸಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಸಿಐಎ 11 ವರ್ಷಗಳ ಹಿಂದೆ ಇದೇ ಬಾರದಾರ್ನನ್ನು ಬಂಧಿಸಿ, ಸುಮಾರು 8 ವರ್ಷಗಳವರೆಗೆ ಜೈಲಿನಲ್ಲಿಟ್ಟಿತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಸಿಐಎ ಮುಖ್ಯಸ್ಥನೇ ಮಾತುಕತೆಗೆಂದು ಅಫ್ಘಾನಿಸ್ತಾನಕ್ಕೆ ಹೋಗಬೇಕಾಗಿದೆ. ತಾಲಿಬಾನಿಗಳ ವಲಯದಲ್ಲಿ ಈ ಬೆಳವಣಿಗೆಯನ್ನು ಮತ್ತೊಂದು ಆಯಾಮದಿಂದ ವಿಶ್ಲೇಷಿಸಲಾಗುತ್ತಿದೆ.
ಕಾಬೂಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಮೆರಿಕನ್ನರನ್ನು ಏರ್ಲಿಫ್ಟ್ ಮಾಡುವುದು ಇತಿಹಾಸ ಕಂಡ ಅತ್ಯಂತ ಕಷ್ಟದ ಕಾರ್ಯಾಚರಣೆ ಎಂದು ಜೋ ಬೈಡೆನ್ ಈ ಹಿಂದೆ ಹೇಳಿದ್ದರು. ಇದಕ್ಕಾಗಿಯೇ ತಮ್ಮ ಸಂಪುಟದಲ್ಲಿರುವ ಅತ್ಯಂತ ಪ್ರಭಾವಿ ಮತ್ತು ಅಮೆರಿಕ ವಿದೇಶಾಂಗ ಸೇವೆಯ ಹಿರಿಯ ರಾಜತಾಂತ್ರಿಕ ನಿಪುಣನನ್ನು ಈ ಕೆಲಸಕ್ಕೆ ನಿಯೋಜಿಸಿದ್ದಾರೆ.
ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಲು ಸಿಐಎ ನಿರಾಕರಿಸಿದೆ. ಆದರೆ ಆಗಸ್ಟ್ 31ರ ಒಳಗೆ ಅಮೆರಿಕ ಮತ್ತು ಮಿತ್ರಪಡೆಗಳ ನಾಗರಿಕರ ಸ್ಥಳಾಂತರ ಪೂರ್ಣಗೊಳಿಸಬೇಕಾಗಿರುವುದರಿಂದ ತಾಲಿಬಾನ್ ನಾಯಕತ್ವದೊಂದಿಗೆ ಬರ್ನ್ಸ್ ಇದೇ ವಿಚಾರ ಚರ್ಚಿಸಿರಬಹುದು ಎಂದು ಹೇಳಲಾಗಿದೆ.
ತಾಲಿಬಾನ್ ತೆಕ್ಕೆಗೆ ಕಾಬೂಲ್ ಸಿಕ್ಕ ನಂತರ ಸಾವಿರಾರು ಜನರು ದೇಶದಿಂದ ಹೊರಗೆ ಹೋಗಲು ಹಾತೊರೆಯುತ್ತಿದ್ದಾರೆ. ಆಗಸ್ಟ್ 31ರ ಒಳಗೆ ಅವರನ್ನು ಸ್ಥಳಾಂತರಿಸಲು ಸಾಧ್ಯವಿಲ್ಲ ಎಂದು ಅಮೆರಿಕಕ್ಕೆ ಈಗಾಗಲೇ ಹಲವು ಮಿತ್ರರಾಷ್ಟ್ರಗಳು ಸ್ಪಷ್ಟಪಡಿಸಿವೆ. ಆಗಸ್ಟ್ 31ರ ನಂತರವೂ ಅಮೆರಿಕ ಸೇನೆಯು ಅಫ್ಘಾನಿಸ್ತಾನದಲ್ಲಿ ಇರಬೇಕಾದ ಪರಿಸ್ಥಿತಿ ಬಂದಿದೆ. ಈ ವಿಚಾರವನ್ನು ತಾಲಿಬಾನ್ ಆಡಳಿತಕ್ಕೆ ಮನವರಿಕೆ ಮಾಡಿಕೊಡಲು ಬರ್ನ್ಸ್ ಯತ್ನಿಸಿದರು ಎನ್ನಲಾಗಿದೆ.
ತಮ್ಮ ನಾಗರಿಕರ ಸ್ಥಳಾಂತರಕ್ಕೆ ಮತ್ತಷ್ಟು ಸಮಯ ಬೇಕು ಎಂದು ಬ್ರಿಟನ್, ಫ್ರಾನ್ಸ್ ಮತ್ತು ಇತರ ಅಮೆರಿಕ ಮಿತ್ರರಾಷ್ಟ್ರಗಳು ಸ್ಪಷ್ಟಪಡಿಸಿವೆ. ತಾಲಿಬಾನ್ ವಕ್ತಾರನೊಬ್ಬ ಗಡುವು ಮೀರಿದರೆ ಪರಿಸ್ಥಿತಿ ಬದಲಾಗುತ್ತದೆ. ಆಗಸ್ಟ್ 31ರ ನಂತರವೂ ಇಲ್ಲಿ ವಿದೇಶಿ ಪಡೆಗಳು ಇರುವುದನ್ನು ಸಹಿಸಲು ಆಗುವುದಿಲ್ಲ ಎಂದು ಎಚ್ಚರಿಸಿದ್ದ. ಈ ಕಾರಣದಿಂದಲೇ ಈ ಭೇಟಿಗೆ ಮಹತ್ವ ಬಂದಿದೆ.
(Americas CIA Director William Burns secret meeting in Kabul with Taliban leader Abdul Ghani Baradar)
ಇದನ್ನೂ ಓದಿ: ಅಫ್ಘಾನಿಸ್ತಾನ ಬೆಳವಣಿಗೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಾತುಕತೆ
ಇದನ್ನೂ ಓದಿ: TV9 Kannada Exclusive: ಅಫ್ಘಾನಿಸ್ತಾನದಲ್ಲಿಯೂ ಕೊವಿಡ್ ಇದೆ, ನಿಮಗೆ ನೆನಪಿದೆಯೇ?