ಅಫ್ಘಾನ್ನಲ್ಲಿ ಮತ್ತೆ ಸ್ಫೋಟ; ಮಿನಿ ಬಸ್ನಲ್ಲಿ ನಡೆದ ಅವಘಡದಲ್ಲಿ ಒಬ್ಬ ಬಲಿ, ಐವರಿಗೆ ಗಾಯ
ಅಫ್ಘಾನಿಸ್ತಾನದಲ್ಲಿ ಹಜಾರಾಗಳು ಶಿಯಾ ಮುಸ್ಲಿಮರಾಗಿದ್ದಾರೆ. ಇವರು ಅನೇಕ ವರ್ಷಗಳಿಂದಲೂ ಹಿಂಸಾಚಾರಕ್ಕೆ ಗುರಿಯಾಗಿದ್ದು, ಅವರನ್ನು ಟಾರ್ಗೆಟ್ ಮಾಡುತ್ತಿರುವುದು ಕ್ರೂರ ಐಸಿಸ್ ಸಂಘಟನೆ.
ಅಫ್ಘಾನಿಸ್ತಾನ(Afghanistan)ದಲ್ಲಿ ಪದೇಪದೆ ಬಾಂಬ್ ಸ್ಫೋಟದಂಥ ದುರ್ಘಟನೆ ನಡೆಯುತ್ತಲೇ ಇದೆ. ಮೊನ್ನೆಯಷ್ಟೇ ನಂಗರ್ಹಾರ್ ಪ್ರಾಂತ್ಯದ ಮಸೀದಿಯೊಂದರಲ್ಲಿ ಭಾರಿ ಪ್ರಮಾಣದ ಸ್ಫೋಟವುಂಟಾಗಿ, ಮೂವರು ಮೃತಪಟ್ಟಿದ್ದರು. ಇಂದು ಮತ್ತೆ ಬಾಂಬ್ ಸ್ಫೋಟ ಉಂಟಾಗಿದೆ. ಈ ಬಾರಿ ಮಿನಿ ಬಸ್ನಲ್ಲಿ ಬಾಂಬ್ ಸ್ಫೋಟಿಸಿದೆ. ಈ ಸ್ಫೋಟದಲ್ಲಿ ಒಬ್ಬರು ಸಾವನ್ನಪ್ಪಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಾಬೂಲ್ ಸಮೀಪದ ಕಮರ್ಷಿಯಲ್ ಸ್ಟ್ರೀಟ್ ಬಳಿ ದುರ್ಘಟನೆ ನಡೆದಿದೆ. ಇದು ಅಫ್ಘಾನ್ನ ಅಲ್ಪಸಂಖ್ಯಾತರಾದ ಹಜಾರಾ ಸಮುದಾಯದ ಜನರು ಹೆಚ್ಚಾಗಿ ವಾಸಿಸುವ ಪ್ರದೇಶ. ಅದರಲ್ಲೂ ಈ ಸ್ಥಳದಲ್ಲಿ ತುರ್ತು ಪರಿಸ್ಥಿತಿ ನಿಭಾಯಿಸುವ ಕಾರ್ಯಕರ್ತರು, ಬಸ್ ಚಾಲಕರು ಹೆಚ್ಚಾಗಿ ವಾಸಿಸುತ್ತಾರೆ. ಸ್ಫೋಟಗೊಂಡ ಬಸ್ನ ಚಾಲಕ ಆಸ್ಪತ್ರೆಯಲ್ಲಿದ್ದು, ಮಾಧ್ಯಮವೊಂದು ಅವರನ್ನು ಸಂಪರ್ಕಿಸಿದಾಗ ಮಾತನಾಡಿ, ನಾವು ಸ್ವಲ್ಪ ದೂರ ಹೋದಾಗ ಅನುಮಾನಾಸ್ಪದ ವ್ಯಕ್ತಿಯೊಬ್ಬ ಬಸ್ ಹತ್ತಿದ. ಅದಾದ ಕೆಲವೇ ಹೊತ್ತಲ್ಲಿ ಸ್ಫೋಟವುಂಟಾಯಿತು ಎಂದು ಹೇಳಿದ್ದಾರೆ. ಸ್ಫೋಟವಾಗುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿತು. ಆಗ ಹಿಂದೆ ಇದ್ದ ಇಬ್ಬರು ಪ್ರಯಾಣಿಕರ ಬಟ್ಟೆಗೆ ಆ ಬೆಂಕಿ ತಗುಲಿ ಅವರು ಹಿಂದಿನ ಬಾಗಿಲಿನಿಂದ ಕೆಳಗೆ ಬಿದ್ದರು. ಅದನ್ನು ನೋಡಿ ಉಳಿದ ಪ್ರಯಾಣಿಕರು ಮುಂದಿನ ಬಾಗಿಲಿನಿಂದ ಪಾರಾದರು ಎಂದೂ ಬಸ್ ಚಾಲಕ ಹೇಳಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಹಜಾರಾಗಳು ಶಿಯಾ ಮುಸ್ಲಿಮರಾಗಿದ್ದಾರೆ. ಇವರು ಅನೇಕ ವರ್ಷಗಳಿಂದಲೂ ಹಿಂಸಾಚಾರಕ್ಕೆ ಗುರಿಯಾಗಿದ್ದು, ಅವರನ್ನು ಟಾರ್ಗೆಟ್ ಮಾಡುತ್ತಿರುವುದು ಕ್ರೂರ ಐಸಿಸ್ ಸಂಘಟನೆ. ಈಗಾಗಲೇ ಹಲವು ಮಾರಣಾಂತಿಕ ದಾಳಿಗಳನ್ನು ಶಿಯಾ ಮುಸ್ಲಿಮರ ಮೇಲೆ ನಡೆಸಿದ್ದಾರೆ. ಮಿನಿ ಬಸ್ ಮೇಲಿನ ದಾಳಿಯೂ ಅವರೇ ನಡೆಸಿದ್ದಾರೆಂಬ ಅನುಮಾನ ವ್ಯಕ್ತವಾಗಿದ್ದು, ಇನ್ನೂ ಅವರು ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಅಂದಹಾಗೆ ಘಟನೆ ಬಗ್ಗೆ ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಕೂಡ ಪ್ರತಿಕ್ರಿಯೆ ನೀಡಿದ್ದು, ಇದರಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದನ್ನು ದೃಢಪಡಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಬೇಕಾಬಿಟ್ಟಿ ಕೆಲಸ ಮಾಡಿ ರಸ್ತೆಗುಂಡಿ ಮುಚ್ಚಿದ ಬಿಬಿಎಂಪಿ; ನಗರದ ಬಹುತೇಕ ವಾರ್ಡ್ಗಳಲ್ಲಿ ಕಳಪೆ ಕಾಮಗಾರಿ