ಅಫ್ಘಾನಿಸ್ತಾನದ ಕಾಬೂಲ್ನ ಏರ್ಪೋರ್ಟ್ (Kabul Airport) ಮೇಲೆ ಆಗಸ್ಟ್ 29ರಂದು ತಾವು ನಡೆಸಿದ ಡ್ರೋನ್ ದಾಳಿ ತಪ್ಪು ಎಂದು ಯುಎಸ್ ಮಿಲಿಟರಿ ಉನ್ನತ ಕಮಾಂಡರ್ ಒಬ್ಬರು ಒಪ್ಪಿಕೊಂಡಿದ್ದಾರೆ. ಆಗಸ್ಟ್ 15ರಂದು ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಆಗಸ್ಟ್ 30ರೊಳಗೆ ಅಲ್ಲಿರುವ ಅಮೆರಿಕನ್ನರನ್ನು ಸ್ಥಳಾಂತರ ಮಾಡುವ ಪ್ರಕ್ರಿಯೆ ಮುಗಿಸಬೇಕು ಎಂದು ಯುಎಸ್ಗೆ ಎಚ್ಚರಿಕೆಯನ್ನು ನೀಡಿದ್ದರು. ಆದರೆ ಅಮೆರಿಕ ಕೊನೇ ಹಂತದ ಸ್ಥಳಾಂತರ ಪ್ರಕ್ರಿಯೆ ನಡೆಸುವಾಗ ಐಸಿಸ್-ಕೆ (ISIS-K) ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದರು. ಈ ದಾಳಿಗೆ ಪ್ರತಿದಾಳಿಯಾಗಿ ಅಮೆರಿಕ ಆಗಸ್ಟ್ 29ರಂದು ಡ್ರೋನ್ ಸ್ಟ್ರೈಕ್ ನಡೆಸಿತ್ತು. ಇದರಲ್ಲಿ ಮಕ್ಕಳೂ ಸೇರಿ 10 ನಾಗರಿಕರು ಸಾವನ್ನಪ್ಪಿದ್ದರು.
ಆಗಸ್ಟ್ 29ರ ಡ್ರೋನ್ ದಾಳಿಯ ವರದಿ ನೀಡಿದ ಅಮೆರಿಕ ಉನ್ನತ ಕಮಾಂಡರ್ ಜನರಲ್ ಫ್ರಾಂಕ್ ಮೆಕೆಂಜಿ, ನಾವು ಅಂದು ನಡೆಸಿದ ದಾಳಿ ಒಂದು ದುರಂತ. ನಮ್ಮಿಂದಾದ ತಪ್ಪು ಅದು ಎಂದು ಹೇಳಿದ್ದಾರೆ. ಹಾಗೇ, ಈ ಬಗ್ಗೆ ಯುಎಸ್ ಭದ್ರತಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಕೂಡ ಕ್ಷಮೆ ಕೇಳಿದ್ದಾರೆ. ಅಂದಿನ ದಾಳಿಯಲ್ಲಿ 10 ನಾಗರಿಕರು ಮೃತಪಟ್ಟಿದ್ದಾರೆ. ಈ ಸಾವಿನ ಬಗ್ಗೆ ತೀವ್ರ ಸಂತಾಪವಿದೆ. ಅವರ ಕುಟುಂಬಗಳಿಗೆ ನಮ್ಮ ಸಾಂತ್ವನಗಳು. ಹಾಗೇ ಘಟನೆಯಲ್ಲಿ ಮೃತರ ಕುಟುಂಬಗಳಿಗೆ ಪರಿಹಾರ ನೀಡುವ ಬಗ್ಗೆಯೂ ನಾವು ಪರಿಶೀಲನೆ ಮಾಡುತ್ತಿದ್ದೇವೆ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಆಗಸ್ಟ್ ಕೊನೇ ವಾರದಲ್ಲಿ ಅಮೆರಿಕದ ಯೋಧರು ತಮ್ಮ ದೇಶದ ನಾಗರಿಕರನ್ನು ಸ್ಥಳಾಂತರ ಮಾಡುವ ಕೆಲಸದಲ್ಲಿ ತೊಡಗಿದ್ದರೆ, ಐಸಿಸ್-ಕೆ ಉಗ್ರರು ಆ ಸೈನಿಕರನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದರು. ಇದರಲ್ಲಿ ಯುಎಸ್ನ ಸುಮಾರು 10 ಯೋಧರು ಮೃತಪಟ್ಟಿದ್ದರು. ಅದಕ್ಕೆ ಪ್ರತಿಯಾಗಿ ಅಮೆರಿಕ ಸೇನೆ ಆಗಸ್ಟ್ 29ರಂದು ಡ್ರೋನ್ ದಾಳಿ ನಡೆಸಿತ್ತು. ವಿಮಾನ ನಿಲ್ದಾಣದ ಬಳಿಯಿರುವ ಒಂದು ಬಿಳಿಬಣ್ಣದ ಟೊಯೊಟಾ ವಾಹನ ಗುರಿಯಾಗಿಸಿ ಮಾಡಿದ್ದ ದಾಳಿಯಲ್ಲಿ ಮಕ್ಕಳೂ ಸೇರಿ 10 ಮಂದಿ ಮೃತಪಟ್ಟಿದ್ದರು. ಆದರೆ ಇವರು ಮುಗ್ಧ ನಾಗರಿಕರಾಗಿದ್ದಾರೆ. ಅದನ್ನೀಗ ಅಮೆರಿಕವೇ ಒಪ್ಪಿಕೊಂಡು ಕ್ಷಮೆ ಕೇಳಿದೆ.
ಇದನ್ನೂ ಓದಿ: Health Tips: ಅರಿಶಿಣ ಹಾಲು ಸೇವಿಸಿದರೆ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ತಿಳಿದಿದೆಯೇ?
TDS: ಬ್ಯಾಂಕ್ ಠೇವಣಿ ಮೇಲೆ ಬರುವ ಬಡ್ಡಿಗೆ ಪರಿಶಿಷ್ಟ ಪಂಗಡವರಿಗೆ ಟಿಡಿಎಸ್ ಕಡಿತವಿಲ್ಲ; ಕೇಂದ್ರದ ಅಧಿಸೂಚನೆ
Published On - 8:35 am, Sat, 18 September 21