ಅಫ್ಘಾನಿಸ್ತಾನ ತಾಲಿಬಾನ್ ವಶವಾಗಿದ್ದಕ್ಕೆ ಪಾಕಿಸ್ತಾನದಲ್ಲಿ ಜೈಕಾರ; ಮಹಿಳಾ ಮದರಸಾಗಳ ಮೇಲೆ ತಾಲಿಬಾನ್ ಬಾವುಟ!

| Updated By: Digi Tech Desk

Updated on: Aug 23, 2021 | 6:22 PM

Salam Taliban Video: ವೈರಲ್ ಆಗಿರುವ ವಿಡಿಯೋದಲ್ಲಿ ಬುರ್ಖಾ ತೊಟ್ಟ ಪಾಕಿಸ್ತಾನದ ವಿದ್ಯಾರ್ಥಿನಿಯರು ಸಲಾಂ ತಾಲಿಬಾನ್ ಎಂದು ಹಾಡುತ್ತಾ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ನಡೆಸಿದ ದಾಳಿಯನ್ನು ಸಂಭ್ರಮಿಸುತ್ತಿದ್ದಾರೆ.

ಅಫ್ಘಾನಿಸ್ತಾನ ತಾಲಿಬಾನ್ ವಶವಾಗಿದ್ದಕ್ಕೆ ಪಾಕಿಸ್ತಾನದಲ್ಲಿ ಜೈಕಾರ; ಮಹಿಳಾ ಮದರಸಾಗಳ ಮೇಲೆ ತಾಲಿಬಾನ್ ಬಾವುಟ!
ಪಾಕಿಸ್ತಾನದ ವಿದ್ಯಾರ್ಥಿನಿಯರಿಂದ ಸಲಾಂ ತಾಲಿಬಾನ್ ಹಾಡು
Follow us on

ಕಾಬೂಲ್: ಅಫ್ಘಾನಿಸ್ತಾನವನ್ನು ತಮ್ಮ ವಶಕ್ಕೆ ಪಡೆದಿರುವ ತಾಲಿಬಾನ್ ಉಗ್ರರು ಅಲ್ಲಿನ ಜನರನ್ನು ಪ್ರಾಣಭಯವನ್ನು ಬಿತ್ತಿದ್ದಾರೆ. ಅಫ್ಘಾನ್ನಲ್ಲಿ ಇನ್ನು ಬದುಕಲು ಸಾಧ್ಯವೇ ಇಲ್ಲ ಎಂದು ಸಾವಿರಾರು ಜನರು ಬೇರೆ ದೇಶಗಳ ವಿಮಾನಗಳನ್ನು ಹತ್ತಿ ದೇಶ ಬಿಟ್ಟು ಹೋಗುತ್ತಿದ್ದಾರೆ. ಅಫ್ಘಾನಿಸ್ತಾನದಲ್ಲಿನ್ನು ಶಾಂತಿ ನೆಲೆಸಲಿದೆ ಎಂಬ ಮಾತನ್ನಾಡಿದ್ದ ತಾಲಿಬಾನ್ ಉಗ್ರರು ಬಂದೂಕಿನಿಂದ ಸಾಲು ಸಾಲು ಹೆಣಗಳನ್ನು ಕೆಡವುತ್ತಿದ್ದಾರೆ. ಅಫ್ಘಾನಿಸ್ತಾನದಲ್ಲಿರುವ ಮಹಿಳೆಯರು, ಯುವತಿಯರನ್ನು ತಾಲಿಬಾನಿಗರು ಲೈಂಗಿಕ ದಾಸರನ್ನಾಗಿ ಮಾಡಿಕೊಂಡಿದ್ದಾರೆ. ಇದೆಲ್ಲದರ ನಡುವೆ ಪಾಕಿಸ್ತಾನದಲ್ಲಿ ಅಫ್ಘಾನಿಸ್ತಾನವನ್ನು ತಾಲಿಬಾನಿಗರು ವಶಕ್ಕೆ ಪಡೆದ ವಿಜಯವನ್ನು ಸಂಭ್ರಮಿಸಲಾಗುತ್ತಿದೆ.

ಪಾಕಿಸ್ತಾನದ ರಾಜಧಾನಿ ಇಸ್ಲಮಾಬಾದ್​ನಲ್ಲಿರುವ ಮಹಿಳಾ ಮದರಸಾಗಳ ಮೇಲೆ ತಾಲಿಬಾನ್ ಬಾವುಟಗಳನ್ನು ಹಾರಿಸಲಾಗುತ್ತಿದೆ. ಸಲಾಂ ತಾಲಿಬಾನ್ ಎಂದು ಬುರ್ಖಾ ತೊಟ್ಟ ವಿದ್ಯಾರ್ಥಿನಿಯರು ಹಾಡುತ್ತಿರುವ ವಿಡಿಯೋಗಳು ಭಾರೀ ಚರ್ಚೆಗೆ ಕಾರಣವಾಗಿವೆ. ವೈರಲ್ ಆಗಿರುವ ವಿಡಿಯೋದಲ್ಲಿ ಬುರ್ಖಾ ತೊಟ್ಟ ಪಾಕಿಸ್ತಾನದ ವಿದ್ಯಾರ್ಥಿನಿಯರು ಸಲಾಂ ತಾಲಿಬಾನ್ ಎಂದು ಹಾಡುತ್ತಾ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ನಡೆಸಿದ ದಾಳಿಯನ್ನು ಸಂಭ್ರಮಿಸುತ್ತಿದ್ದಾರೆ. ಅವರ ಹಿಂದೆ ತಾಲಿಬಾನ್ ಬಾವುಟ ಇರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.

ಈ ವಿಡಿಯೋವನ್ನು ಪಾಕಿಸ್ತಾನಿ ಪತ್ರಕರ್ತ ರೋಹನ್ ಅಹಮದ್ ಹಂಚಿಕೊಂಡಿದ್ದು, ಇಸ್ಲಮಾಬಾದ್​ನ ಲಾಲ್ ಮಸೀದಿಯ ಅಧೀನದಲ್ಲಿರುವ ಪ್ರೌಢಶಾಲೆಯಾದ ಜಾಮಿಯಾ ಹಾಫ್ಸಾದ ವಿದ್ಯಾರ್ಥಿನಿಯರು ಸಲಾಂ ತಾಲಿಬಾನ್ ಎಂದು ಹಾಡುತ್ತಿದ್ದಾರೆ. ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ವಶಕ್ಕೆ ಪಡೆದ ತಾಲಿಬಾನಿಗರ ವಿಜಯವನ್ನು ಹಾಡಿನ ಮೂಲಕ ಪಾಕಿಸ್ತಾನದ ಮದರಸಾ, ಶಾಲೆಗಳಲ್ಲಿ ಸಂಭ್ರಮಿಸಲಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

ಈ ಹಿಂದೆ ಅಫ್ಘಾನ್ ತಾಲಿಬಾನಿಗರ ವಶವಾಗುತ್ತಿದ್ದಂತೆ ಪಾಕಿಸ್ತಾನದ ಮದರಸಾಗಳ ಮೇಲೆ ತಾಲಿಬಾನ್ ಬಾವುಟವನ್ನು ಹಾರಿಸಲಾಗಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದರು. ಬಳಿಕ ಹಿರಿಯ ಅಧಿಕಾರಿಗಳು ಈ ಕುರಿತು ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದ್ದರು. ನಂತರ ಆ ಮದರಸಾಗಳ ಮೇಲಿನ ತಾಲಿಬಾನ್ ಬಾವುಟವನ್ನು ಅಧಿಕಾರಿಗಳೇ ಕೆಳಗಿಳಿಸಿದ್ದರು. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು. ಅದರ ಬೆನ್ನಲ್ಲೇ ಸಲಾಂ ತಾಲಿಬಾನ್ ಹಾಡಿನ ವಿಡಿಯೋ ಕೂಡ ವೈರಲ್ ಆಗಿ, ವಿವಾದಕ್ಕೆ ಕಾರಣವಾಗಿದೆ.

ಇದನ್ನೂ ಓದಿ: Afghanistan: ಅಫ್ಘಾನಿಸ್ತಾನದಲ್ಲಿ ಶೀಘ್ರವೇ ಹೊಸ ಸರ್ಕಾರ ರಚಿಸುವುದಾಗಿ ಘೋಷಿಸಿದ ತಾಲಿಬಾನ್

Viral Video: ಆಸ್ಪತ್ರೆಯಲ್ಲಿ ಡ್ಯಾನ್ಸ್ ಮಾಡಿದ​ ವಿಡಿಯೋದಿಂದ ಸಂಕಷ್ಟಕ್ಕೆ ಸಿಲುಕಿದ ನರ್ಸ್

(Pakistan Children Sing Salam Taliban to Celebrate Afghanistan Takeover Hoist Taliban Flag at Women’s Madrasa)

Published On - 3:08 pm, Mon, 23 August 21