ಇಸ್ಲಾಮಾಬಾದ್: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ಅವರೊಂದಿಗೆ ಪಾಕ್ ಹಣಕಾಸು ಸಚಿವ ಶಾ ಮಹ್ಮೂದ್ ಖುರೇಷಿ ಗುರುವಾರ ಕಾಬೂಲ್ಗೆ ತೆರಳಿದ್ದು, ತಾಲಿಬಾನ್ ನೇತೃತ್ವದಲ್ಲಿ ಆಡಳಿತ ನಡೆಸುತ್ತಿರುವ ಅಲ್ಲಿನ ಹಂಗಾಮಿ ಸರ್ಕಾರದೊಂದಿಗೆ ಮಾತುಕತೆ ನಡೆಸುವ ಸಾಧ್ಯತೆಯಿದೆ. ಅಫ್ಘಾನಿಸ್ತಾನದ ವಿದೇಶಾಂಗ ವ್ಯವಹಾರ ಸಚಿವ ಅಮಿರ್ ಖಾನ್ ಮುತ್ತಾಖಿ ಅವರೊಂದಿಗೆ ಪಾಕಿಸ್ತಾನದ ನಿಯೋಗ ಮಾತುಕತೆ ನಡೆಸಲಿದೆ ಎಂದು ಪಾಕ್ ಸರ್ಕಾರದ ಪ್ರಕಟಣೆ ತಿಳಿಸಿದೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಪಾಕಿಸ್ತಾನದ ನಿಯೋಗವನ್ನು ಮುತ್ತಾಖಿ ಸ್ವಾಗತಿಸಿದರು.
ಎರಡೂ ದೇಶಗಳ ನಡುವಣ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಸುಭದ್ರಗೊಳಿಸಲು ಹಲವು ವಿಚಾರಗಳಲ್ಲಿ ಸಹಕಾರ ವೃದ್ಧಿಗೆ ಏನೆಲ್ಲಾ ಮಾಡಬೇಕು ಎಂಬ ಬಗ್ಗೆ ಎರಡೂ ದೇಶಗಳ ವಿದೇಶಾಂಗ ಸಚಿವರು ಚರ್ಚಿಸಲಿದ್ದಾರೆ. ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆ ವಿಚಾರದಲ್ಲಿ ಪಾಕಿಸ್ತಾನದ ದೃಷ್ಟಿಕೋನವನ್ನು ಈ ವೇಳೆ ಅಫ್ಘಾನಿಸ್ತಾನಕ್ಕೆ ಸ್ಪಷ್ಟಪಡಿಸಲಾಗುವುದು ಎಂದು ಪಾಕ್ ವಿದೇಶಾಂಗ ಇಲಾಖೆ ಹೇಳಿದೆ.
ಅಫ್ಘಾನಿಸ್ತಾನದ ನೆರೆಯಲ್ಲಿರುವ ಪಾಕಿಸ್ತಾನವು ಸದಾ ಅಲ್ಲಿನ ಜನರ ಪರವಾಗಿ ನಿಂತಿದೆ. ವ್ಯಾಪಾರ ಮತ್ತು ಪಾದಚಾರಿಗಳ ಸಂಚಾರಕ್ಕೆ ಗಡಿಗಳನ್ನು ಮುಕ್ತವಾಗಿ ಇರಿಸಲಾಗಿದೆ. ಅಫ್ಘಾನಿಸ್ತಾನಕ್ಕೆ ಅಗತ್ಯವಿರುವ ಮಾನವೀಯ ನೆರವು ಒದಗಿಸುವುದರೊಂದಿಗೆ ಆಹಾರ ಪದಾರ್ಥಗಳು, ಔಷಧಿ ಮತ್ತು ಇತರ ಸರಕುಗಳನ್ನು ಪಾಕಿಸ್ತಾನವು ಕಳಿಸಿಕೊಟ್ಟಿದೆ.
ಚೀನಾ, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ರಷ್ಯಾದ ಪ್ರತಿನಿಧಿಗಳು ಮಾಸ್ಕೋದಲ್ಲಿ ಮಾತುಕತೆ ನಡೆಸಿದ ನಂತರ ಪಾಕ್ ನಿಯೋಗವು ಅಫ್ಘಾನಿಸ್ತಾನಕ್ಕೆ ತೆರಳುತ್ತಿದೆ. ಮುಂದಿನ ವಾರದಲ್ಲಿ ಇರಾನ್ ರಾಜಧಾನಿ ತೆಹರಾನ್ನಲ್ಲಿ ನಡೆಯಲಿರುವ ಮಹತ್ವದ ಸಭೆಯಲ್ಲಿ ಅಫ್ಘಾನಿಸ್ತಾನದ ಸುತ್ತಮುತ್ತಲ ದೇಶಗಳ ವಿದೇಶಾಂಗ ವ್ಯವಹಾರಗಳ ಸಚಿವರೊಂದಿಗೆ ರಷ್ಯಾ ಸಹ ಪಾಲ್ಗೊಳ್ಳಲಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸಂಘಟನೆ ರಚಿಸುವ ಹಂಗಾಮಿ ಸರ್ಕಾರಕ್ಕೆ ಈವರೆಗೆ ಅಂತರರಾಷ್ಟ್ರೀಯ ಮಾನ್ಯತೆ ಸಿಕ್ಕಿಲ್ಲ.
ಸೆಪ್ಟೆಂಬರ್ 4ರಂದು ಲೆಫ್ಟಿನೆಂಟ್ ಜನರಲ್ ಹಮೀದ್ ಇದ್ದಕ್ಕಿದ್ದಂತೆ ಕಾಬೂಲ್ಗೆ ಭೇಟಿ ನೀಡಿದ್ದರು. ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸಲು ಹಲವು ತಡೆಗಳನ್ನು ಎದುರಿಸುತ್ತಿದ್ದ ತಾಲಿಬಾನ್ಗೆ ನೆರವಾಗಿದ್ದರು. ಇವರ ಮೂರು ದಿನಗಳ ಭೇಟಿಯ ಅವಧಿಯಲ್ಲಿ ತಾಲಿಬಾನ್ ಹಂಗಾಮಿ ಸರ್ಕಾರವನ್ನು ಘೋಷಿಸಿತ್ತು.
ತಾಲಿಬಾನ್ ಸಂಘಟನೆಯಲ್ಲಿ ಪಾಕಿಸ್ತಾನವು ಸಾಕಷ್ಟು ಪ್ರಭಾವ ಹೊಂದಿದ್ದು, ಅಮೆರಿಕದೊಂದಿಗಿನ ಮಾತುಕತೆಯಲ್ಲಿಯೂ ಮುಖ್ಯ ಪಾತ್ರ ನಿರ್ವಹಿಸಿತ್ತು. ತಾಲಿಬಾನ್ಗೆ ಪಾಕಿಸ್ತಾನದಿಂದ ಮಿಲಿಟರಿ ನೆರವು ಸಿಗುತ್ತಿದೆ ಎಂದು ಅಫ್ಘಾನಿಸ್ತಾನದ ಅಧ್ಯಕ್ಷರಾಗಿದ್ದ ಅಶ್ರಫ್ ಘನಿ ಈ ಹಿಂದೆ ಆರೋಪಿಸಿದ್ದರು. ಈ ಆರೋಪವನ್ನು ಪಾಕಿಸ್ತಾನ ನಿರಾಕರಿಸಿತ್ತು. ಕಳೆದ ಆಗಸ್ಟ್ 15ರಂದು ತಾಲಿಬಾನ್ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ವಶಪಡಿಸಿಕೊಂಡಿತ್ತು. ಆಗಸ್ಟ್ 31ರಂದು ಅಮೆರಿಕ ಸೇನೆ ಅಫ್ಘಾನಿಸ್ತಾನದಿಂದ ಕಾಲ್ತೆಗೆಯಿತು. 20 ವರ್ಷಗಳ ಯುದ್ಧದಲ್ಲಿ ಅಮೆರಿಕ ಸಾಧಿಸಿದ್ದೇನು ಎಂಬ ಪ್ರಶ್ನೆಯನ್ನು ವಿಶ್ವದ ಹಲವು ವಿಶ್ಲೇಷಕರು ಕೇಳಿದ್ದರು.
ಇದನ್ನೂ ಓದಿ: ಅಫ್ಘಾನಿಸ್ತಾನವು ತೀವ್ರವಾದಿಗಳು, ಭಯೋತ್ಪಾದಕರ ನೆಲೆವೀಡಾಗದಿರಲಿ: ಜಿ20 ಸಮಾವೇಶದಲ್ಲಿ ನರೇಂದ್ರ ಮೋದಿ
ಇದನ್ನೂ ಓದಿ: ಅಫ್ಘಾನಿಸ್ತಾನದ ಕುಂಡುಜ್ ಮಸೀದಿ ಸ್ಫೋಟ: ಕನಿಷ್ಠ 100 ಮಂದಿ ಸಾವು, ಹಲವರಿಗೆ ಗಾಯ