ಪುಟಾಣಿ ಮಕ್ಕಳ ಮುಂದೆಯೇ ಗರ್ಭಿಣಿ ಮಹಿಳೆಗೆ ಗುಂಡಿಕ್ಕಿದ ತಾಲಿಬಾನಿಗಳು; ಮುಖವನ್ನು ವಿರೂಪಗೊಳಿಸಿ ಮತ್ತಷ್ಟು ಅಟ್ಟಹಾಸ

TV9 Digital Desk

| Edited By: Skanda

Updated on: Sep 06, 2021 | 2:42 PM

ಗರ್ಭವತಿಯಾಗಿದ್ದ ಆಫ್ಘಾನ್​ನ ಮಹಿಳಾ ಪೊಲೀಸ್​ ಅಧಿಕಾರಿಯನ್ನು ಆಕೆಯ ಮಕ್ಕಳ ಮುಂದೆಯೇ ಗುಂಡಿಟ್ಟು ಕೊಂದು ಹಾಕಿದ್ದಾರೆ. ಗುಂಡಿಟ್ಟ ಬಳಿಕ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಆಕೆಯ ಮುಖವನ್ನು ವಿರೂಪಗೊಳಿಸಿ ವಿಕೃತಿ ಮೆರೆದು ತಮ್ಮ ನಿಜ ಸ್ವರೂಪವನ್ನು ತೋರಿಸಿದ್ದಾರೆ.

ಪುಟಾಣಿ ಮಕ್ಕಳ ಮುಂದೆಯೇ ಗರ್ಭಿಣಿ ಮಹಿಳೆಗೆ ಗುಂಡಿಕ್ಕಿದ ತಾಲಿಬಾನಿಗಳು; ಮುಖವನ್ನು ವಿರೂಪಗೊಳಿಸಿ ಮತ್ತಷ್ಟು ಅಟ್ಟಹಾಸ
ತಾಲಿಬಾನ್​ ಗುಂಡಿಗೆ ಬಲಿಯಾದ ಮಹಿಳಾ ಪೊಲೀಸ್ ಅಧಿಕಾರಿ

ಪ್ರಸ್ತುತ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡು ಅಧಿಕಾರ ಸ್ಥಾಪನೆಗೆ ಮುಂದಾಗಿರುವ ತಾಲಿಬಾನ್​ ಉಗ್ರರ ಕ್ರೌರ್ಯ ಈ ಹಿಂದೆಯೇ ಅನೇಕ ಬಾರಿ ಸಾಬೀತಾಗಿರುವುದರಿಂದ ಜನ ಸಾಮಾನ್ಯರು ಅವರ ನೆರಳನ್ನು ಕಂಡರೂ ಹೆದರುವ ಸ್ಥಿತಿಯಲ್ಲಿದ್ದಾರೆ. ಅದರಲ್ಲೂ ಮಹಿಳೆಯರ ವಿಚಾರದಲ್ಲಿ ಕಟ್ಟುನಿಟ್ಟಾದ ನಿಯಮಗಳನ್ನು ಹೇರುವ ತಾಲಿಬಾನಿಗಳು ಮಹಿಳಾ ಸ್ವಾತಂತ್ರ್ಯಕ್ಕೆ ದೊಡ್ಡ ಕಂಟಕವಾಗಿದ್ದಾರೆ. ಅಫ್ಘಾನಿಸ್ತಾನವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ಕೆಲ ದಿನಗಳ ಬಳಿಕ ಮಹಿಳೆಯರಿಗೆ ನಾವು ತೊಂದರೆ ಕೊಡುವುದಿಲ್ಲ ಎಂದು ತಾಲಿಬಾನಿಗಳು ಬಾಯಿ ಮಾತಿಗೆ ಹೇಳಿದ್ದರಾದರೂ ಅದನ್ನು ಉಳಿಸಿಕೊಳ್ಳದ ಕಾರಣ ಅವರ ಮೇಲಿನ ಭಯ ಕಡಿಮೆಯಾಗುವುದು ಸಾಧ್ಯವಾಗಿಲ್ಲ. ತಾಲಿಬಾನ್ ಉಗ್ರರು ಎಷ್ಟೇ ಬದಲಾವಣೆಯ ಮಾತು ಆಡಿದರೂ ತಮ್ಮ ಕಟು ವಿಚಾರಗಳಲ್ಲಿ ಅವರು ಬದಲಾಗುವಂತೆ ಕಾಣುತ್ತಿಲ್ಲ. ಇದೀಗ ತಾಲಿಬಾನಿಗಳು ಆಫ್ಘಾನ್​ನ ಮಹಿಳಾ ಪೊಲೀಸ್​ ಅಧಿಕಾರಿಯೊಬ್ಬರನ್ನು ಆಕೆಯ ಮಕ್ಕಳ ಮುಂದೆಯೇ ಗುಂಡಿಟ್ಟು ಕೊಂದಿದ್ದಾರೆ ಹಾಗೂ ಮುಖವನ್ನು ವಿರೂಪಗೊಳಿಸಿ ವಿಕೃತಿ ಮೆರೆದಿದ್ದಾರೆ ಎಂದು ವರದಿಯಾಗಿರುವುದು ಅವರ ಕ್ರೌರ್ಯ ಕಡಿಮೆಯಾಗಿಲ್ಲ ಎಂಬುದಕ್ಕೆ ಪುಷ್ಠಿ ನೀಡಿದೆ.

ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿರುವ ತಾಲಿಬಾನಿಗಳು ಪ್ರತಿನಿತ್ಯ ತಮ್ಮ ಅಟ್ಟಹಾಸವನ್ನು ಮೆರೆಯುತ್ತಿದ್ದಾರೆ. ಗರ್ಭವತಿಯಾಗಿದ್ದ ಆಫ್ಘಾನ್​ನ ಮಹಿಳಾ ಪೊಲೀಸ್​ ಅಧಿಕಾರಿಯನ್ನು ಆಕೆಯ ಮಕ್ಕಳ ಮುಂದೆಯೇ ಗುಂಡಿಟ್ಟು ಕೊಂದು ಹಾಕಿದ್ದಾರೆ. ಗುಂಡಿಟ್ಟ ಬಳಿಕ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಆಕೆಯ ಮುಖವನ್ನು ವಿರೂಪಗೊಳಿಸಿ ವಿಕೃತಿ ಮೆರೆದು ತಮ್ಮ ನಿಜ ಸ್ವರೂಪವನ್ನು ತೋರಿಸಿದ್ದಾರೆ.

ಫಿರೋಜ್ಕೋಹ್​ನಲ್ಲಿ ಈ ಹೀನ ಕೃತ್ಯ ನಡೆದಿದೆ. ಸ್ಥಳೀಯ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಅಧಿಕಾರಿ​ 8 ತಿಂಗಳ ಗರ್ಭಿಣಿಯಾಗಿದ್ದರು ಎಂದು ತಿಳಿದುಬಂದಿದೆ. ನತದೃಷ್ಟ ಮಹಿಳಾ ಅಧಿಕಾರಿಯನ್ನು ಬಾನು ನೆಗರ್​ ಎಂದು ಗುರುತಿಸಲಾಗಿದ್ದು, ತಾಲಿಬಾನಿಗಳ ಹಲ್ಲೆಯಿಂದ ಆಕೆಯ ಮುಖ ಸಂಪೂರ್ಣ ವಿರೂಪಗೊಂಡಿದೆ.

ತಮ್ಮ ವಿರುದ್ಧ ಅಮೆರಿಕ ಸೇನೆಗೆ ಸಹಾಯ ಮಾಡಿದವರ ಮೇಲೆ ಸೇಡು ತೀರಿಸಿಕೊಳ್ಳುತ್ತಿರುವ ತಾಲಿಬಾನಿಗಳು ಅವರ ಮನೆ ಬಾಗಿಲಿಗೆ ಹೋಗಿ ಹುಡುಕಿ ಹುಡುಕಿ ಮರಣದಂಡನೆ ನೀಡುತ್ತಿದ್ದಾರೆ ಎಂದು ವರದಿಯಾಗಿದೆ. ಮಹಿಳಾ ಪೊಲೀಸ್​ ಅಧಿಕಾರಿ ನೆಗರ್​ನ ಮೇಲೆ ಕಣ್ಣಿಟ್ಟಿದ್ದ ತಾಲಿಬಾನ್ ಉಗ್ರರು ಆಕೆಯ ಗಂಡ ಮತ್ತು ಮಕ್ಕಳ ಮುಂದೆಯೇ ಕೊಲೆ ಮಾಡಿದ್ದಾರೆ. ವಿಪರ್ಯಾಸವೆಂದರೆ, ಇಷ್ಟೆಲ್ಲಾ ಆದ ಬಳಿಕ ಅಲ್ಲಿನ ಸ್ಥಳೀಯ ತಾಲಿಬಾನ್  ಘಟನೆಯನ್ನು ತನಿಖೆಗೆ ಒಳಪಡಿಸುವ ಭರವಸೆ ನೀಡಿದೆಯಂತೆ.

ಅಫ್ಘಾನಿಸ್ತಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಬಳಿಕ ಸಹಜವಾಗಿಯೇ ಜನರಿಗೆ ತಾಲಿಬಾನ್‌ಗಳ ಕುರಿತು ಭಯ ಹೆಚ್ಚಾಗಿದೆ. ಅದಕ್ಕಾಗಿಯೇ ಸಾಕಷ್ಟು ಮಂದಿ ಪಲಾಯನ ಮಾಡಿದ್ದಾರೆ. ಆದರೆ, ಇದಕ್ಕೆ ಪ್ರತ್ಯುತ್ತರವಾಗಿ ತಾಲಿಬಾನಿಗಳು ತಮ್ಮನ್ನು ತಾವು ಉತ್ತಮರು ಹಾಗೂ ಸಹಿಷ್ಣುಗಳೆಂದು ಬಿಂಬಿಸಲು ಪ್ರಯತ್ನಿಸಿದ್ದಾರೆ. ಅದರ ನಡುವೆಯೂ, ಉಗ್ರರ ಗುಂಪು ತಮ್ಮ ವಿರೋಧಿಗಳನ್ನು ಕೊಲ್ಲುವ ಮೂಲಕ ತಮ್ಮ ಅಸಲಿಯತ್ತನ್ನು ಪ್ರದರ್ಶಿಸಿದ್ದಾರೆ.

ಇದನ್ನೂ ಓದಿ: ಅಫ್ಘಾನ್​​ನಲ್ಲಿ ಸರ್ಕಾರ ರಚನೆ ಪ್ರಕ್ರಿಯೆಯ ಅಂತಿಮ ಹಂತ; ಪಾಕಿಸ್ತಾನ, ಚೀನಾ, ರಷ್ಯಾಕ್ಕೆ ತಾಲಿಬಾನಿಗಳಿಂದ ಆಹ್ವಾನ

ಪಂಜ್​ಶೀರ್​ ವಶಪಡಿಸಿಕೊಂಡಿದ್ದಾಗಿ ತಾಲಿಬಾನ್ ಘೋಷಣೆ; ರಸ್ತೆ ಮಾತ್ರ ನಿಮ್ಮ ವಶದಲ್ಲಿದೆ ಎಂದು ತಿರುಗೇಟು ಕೊಟ್ಟ ರೆಸಿಸ್ಟೆನ್ಸ್ ಫ್ರಂಟ್‌

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada