ಡ್ರೋನ್​ ಅಟ್ಯಾಕ್​ ಮೂಲಕ ಇಬ್ಬರು ಐಸಿಸ್​​ ಉಗ್ರರು ಹತ, ಇನ್ನೊಬ್ಬನಿಗೆ ತೀವ್ರ ಗಾಯ: ಅಮೆರಿಕಾ ಮಾಹಿತಿ

| Updated By: Skanda

Updated on: Aug 29, 2021 | 8:48 AM

ಅಮೆರಿಕದ ಡ್ರೋನ್ ಅಟ್ಯಾಕ್‌ನಲ್ಲಿ ನಾಗರಿಕರಿಗೆ ಹಾನಿಯಾಗಿಲ್ಲ. ದಾಳಿಯಲ್ಲಿ ಐಸಿಸ್‌ ಉಗ್ರ ಸಂಘಟನೆಯ ಇಬ್ಬರು ನಾಯಕರ ಹತ್ಯೆಯಾಗಿದೆ. ನಾವು ನಮ್ಮನ್ನು ರಕ್ಷಿಸಿಕೊಳ್ಳುವ ಕೆಲಸ ಮುಂದುವರಿಸುತ್ತೇವೆ ಎಂದು ಅಮೆರಿಕದ ಮೇಜರ್ ಜನರಲ್‌ ಹ್ಯಾಂಕ್ ಟೇಲರ್ ಹೇಳಿದ್ದಾರೆ.

ಡ್ರೋನ್​ ಅಟ್ಯಾಕ್​ ಮೂಲಕ ಇಬ್ಬರು ಐಸಿಸ್​​ ಉಗ್ರರು ಹತ, ಇನ್ನೊಬ್ಬನಿಗೆ ತೀವ್ರ ಗಾಯ: ಅಮೆರಿಕಾ ಮಾಹಿತಿ
ಪ್ರಾತಿನಿಧಿಕ ಚಿತ್ರ
Follow us on

ಅಫ್ಘಾನಿಸ್ತಾನದ ಕಾಬೂಲ್​ ಬಳಿ ಬಾಂಬ್​ ಸ್ಫೋಟಿಸಿ ಯೋಧರ ಸಾವಿಗೆ ಕಾರಣವಾದ ಉಗ್ರರನ್ನು ಸುಮ್ಮನೇ ಬಿಡುವುದಿಲ್ಲ ಎಂದು ಶಪಥ ಮಾಡಿರುವ ಅಮೆರಿಕಾ ಇದೀಗ ಇಬ್ಬರು ಐಸಿಸ್​​ ನಾಯಕರನ್ನು ಹತ್ಯೆ ಮಾಡಿ, ಒಬ್ಬನನ್ನು ಗಾಯಗೊಳಿಸಿರುವುದಾಗಿ ಹೇಳಿಕೆ ನೀಡಿದೆ. ಅಮೆರಿಕದ ಡ್ರೋನ್ ಅಟ್ಯಾಕ್‌ನಲ್ಲಿ ನಾಗರಿಕರಿಗೆ ಹಾನಿಯಾಗಿಲ್ಲ. ದಾಳಿಯಲ್ಲಿ ಐಸಿಸ್‌ ಉಗ್ರ ಸಂಘಟನೆಯ ಇಬ್ಬರು ನಾಯಕರ ಹತ್ಯೆಯಾಗಿದೆ. ನಾವು ನಮ್ಮನ್ನು ರಕ್ಷಿಸಿಕೊಳ್ಳುವ ಕೆಲಸ ಮುಂದುವರಿಸುತ್ತೇವೆ ಎಂದು ಅಮೆರಿಕದ ಮೇಜರ್ ಜನರಲ್‌ ಹ್ಯಾಂಕ್ ಟೇಲರ್ ಹೇಳಿದ್ದಾರೆ.

ಅಮೆರಿಕಾದ ತಂಟೆಗೆ ಬಂದವರನ್ನು ಸುಮ್ಮನೇ ಬಿಡುವುದಿಲ್ಲ. ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದೇವೆ. ಆ ಕೆಲಸವನ್ನು ಮುಂದುವರೆಸುತ್ತೇವೆ. ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆ ಮುಂದುವರೆಯಲಿದೆ. ಮುಂದೆಯೂ ಭಯೋತ್ಪಾದನೆ ವಿರುದ್ಧ ಹೋರಾಡುತ್ತೇವೆ ಎಂದು ಅಮೆರಿಕದ ಮೇಜರ್ ಜನರಲ್‌ ಹ್ಯಾಂಕ್ ಟೇಲರ್ ತಿಳಿಸಿದ್ದಾರೆ. ಆ ಮೂಲಕ ಉಗ್ರರಿಗೆ ಖಡಕ್​ ಎಚ್ಚರಿಕೆಯನ್ನೂ ರವಾನಿಸಿದ್ದಾರೆ.

ಈಗಾಗಲೇ ಕಾಬೂಲ್​ ವಿಮಾನ ನಿಲ್ದಾಣದಲ್ಲಿ ಬಾಂಬ್​ ಸ್ಫೋಟಿಸಿ ಹಲವರ ಸಾವಿಗೆ ಕಾರಣವಾಗಿರುವ ಉಗ್ರರು ಮುಂದಿನ 24 ರಿಂದ 36 ಗಂಟೆಯೊಳಗೆ ಮತ್ತೊಮ್ಮೆ ದಾಳಿ ನಡೆಸುವ ಸಾಧ್ಯತೆ ದಟ್ಟವಾಗಿದೆ. ಈ ಸೂಚನೆಯ ಬೆನ್ನಲ್ಲೇ ಅಮೆರಿಕ ರಾಯಭಾರ ಕಚೇರಿ ಬಳಿ ಯಾವ ಕಾರಣಕ್ಕೂ ತೆರಳಬೇಡಿ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಎಚ್ಚರಿಕೆ ನೀಡಿದ್ದಾರೆ. ಜತೆಗೆ, ಐಸಿಸ್ ಉಗ್ರರ ವಿರುದ್ಧ ಪ್ರತೀಕಾರ ಮುಂದುವರೆಸುವ ಸೂಚನೆ ನೀಡಿದ ಜೋ ಬೈಡನ್, ಘೋರ ದಾಳಿಯಲ್ಲಿ ಭಾಗಿಯಾಗಿರುವ ಯಾರನ್ನೂ ಬಿಡುವುದಿಲ್ಲ. ಉಗ್ರರ ಮೇಲಿನ ಡ್ರೋನ್​ ಅಟ್ಯಾಕ್ ಇದೇ ಕೊನೆಯಲ್ಲ. ಇನ್ನೂ ಶಿಕ್ಷೆ ಎದುರಿಸುವುದು ಬಾಕಿ ಇದೆ. ಅಮೇರಿಕಾ‌ ಸೇನೆಯನ್ನು ಟಾರ್ಗೆಟ್ ಮಾಡಿದವರು ತಕ್ಕ ಬೆಲೆ ತೆರಲೇಬೇಕು. ನಾವು ಉಗ್ರರ ಬೇಟೆಯಾಡುವುದನ್ನು ಮುಂದುವರಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.

ಇತ್ತ, ತಾಲಿಬಾನಿಗಳು ಅಮೆರಿಕಾ ಸೇನೆಗೆ ನೀಡಿರುವ ಗಡುವು ಮುಗಿಯುತ್ತಾ ಬಂದಿದ್ದು, ಆಗಸ್ಟ್ 31ರಂದು ಅಮೆರಿಕಾ ಅಫ್ಘಾನಿಸ್ತಾನ ತೊರೆಯಬೇಕಿದೆ. ಈ ವಿಚಾರದಲ್ಲಿ ಅತ್ಯಂಟ ಕಟು ಮಾತುಗಳನ್ನು ಹೇಳಿರುವ ತಾಲಿಬಾನ್​, ನಿಗದಿತ ಅವಧಿಯಲ್ಲಿ ದೇಶ ಬಿಟ್ಟು ಹೊರಡದಿದ್ದರೆ ಪರಿಣಾಮ ಸರಿಯಿರುವುದಿಲ್ಲ ಎಂದು ಬೆದರಿಕೆ ಒಡ್ಡಿದೆ. ಮೇಲಾಗಿ, ಹಂತ ಹಂತವಾಗಿ ಕಾಬೂಲ್ ವಿಮಾನ ನಿಲ್ದಾಣವನ್ನು ನಿಯಂತ್ರಣಕ್ಕೆ ಪಡೆಯುತ್ತಿರುವ ತಾಲಿಬಾನ್, ಈಗಾಗಲೇ ಮೂರು ಗೇಟ್​ಗಳನ್ನು ತನ್ನ ವಶಕ್ಕೆ ಪಡೆದಿದೆ. ಈ ಬೆಳವಣಿಗೆಗೆ ಅಮೆರಿಕಾ ಹೇಗೆ ಪ್ರತಿಕ್ರಿಯೆ ನೀಡಲಿದೆ ಎನ್ನುವುದು ಕೂಡಾ ಸದ್ಯಕ್ಕೆ ಕುತೂಹಲ ಮೂಡಿಸಿದೆ.

ತಾಲಿಬಾನಿಗಳು ನೀಡಿದ ಗಡುವು ಹತ್ತಿರಾಗುತ್ತಿರುವ ಕಾರಣ ಬೇರೆ ಬೇರೆ ದೇಶಗಳಿಂದ ತಮ್ಮ ಜನರ ಏರ್ ಲಿಫ್ಟ್ ಕಾರ್ಯಾಚರಣೆ ಚುರುಕಾಗಿ ಸಾಗಿದೆ. ಆಗಸ್ಟ್ 31 ಕ್ಕೆ ಅಫ್ಘಾನಿಸ್ತಾನದಿಂದ ವಿದೇಶಿ ಜನರ ತೆರವು ಅಂತ್ಯವಾಗಲಿದ್ದು, ಈಗಾಗಲೇ ಲಕ್ಷಾಂತರ ಜನರನ್ನು ಸ್ಥಳಾಂತರಿಸಲಾಗಿದೆ. ಆ ಅಂಕಿ-ಅಂಶ ಹೀಗಿದೆ:

ಆಮೆರಿಕಾದಿಂದ 1.11 ಲಕ್ಷ ಜನರ ಏರ್ ಲಿಫ್ಟ್
ಇಂಗ್ಲೆಂಡ್ ನಿಂದ 14,500 ಜನರ ಏರ್ ಲಿಫ್ಟ್
ಕೆನಡಾದಿಂದ 3,700 ಜನರ ಏರ್ ಲಿಫ್ಟ್
ಜರ್ಮನ್​​ನಿಂದ 5347 ಜನರ ಏರ್ ಲಿಫ್ಟ್
ಪ್ರಾನ್ಸ್​ನಿಂದ 2,600 ಜನರ ಏರ್ ಲಿಫ್ಟ್
ಇಟಲಿಯಿಂದ 4832 ಜನರ ಏರ್ ಲಿಫ್ಟ್
ಕತಾರ್​ನಿಂದ 40 ಸಾವಿರ ಜನರ ಏರ್ ಲಿಫ್ಟ್
ಯುಎಇ ಯಿಂದ 36,500 ಜನರ ಏರ್ ಲಿಫ್ಟ್
ಭಾರತದಿಂದ 565 ಜನರ ಏರ್ ಲಿಫ್ಟ್

ಇದನ್ನೂ ಓದಿ:
ಕಾಬೂಲ್​ನಲ್ಲಿ ಮತ್ತೊಂದು ಭೀಕರ ದಾಳಿಗೆ ಸಜ್ಜಾದ ಉಗ್ರರು; ಡ್ರೋನ್​ ದಾಳಿ ಮುಗಿದಿಲ್ಲ, ಯಾರನ್ನೂ ಬಿಡುವುದಿಲ್ಲ ಎಂದ ಅಮೆರಿಕಾ 

ಅಫ್ಘಾನಿಸ್ತಾನದಿಂದ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವುದೇ ಮೊದಲ ಆದ್ಯತೆ: ವಿದೇಶಾಂಗ ಸಚಿವಾಲಯದ ವಕ್ತಾರ

(Two ISIS K terrorists killed one injured in US Drone attack says America)