ನೀವು ಎಲ್ಲೇ ಅವಿತಿದ್ದರೂ ಹೆಕ್ಕಿ ಹೆಕ್ಕಿ ಕೊಲ್ಲುತ್ತೇವೆ; ಅಮೆರಿಕ ಯೋಧರನ್ನು ಕೊಂದ ಉಗ್ರರಿಗೆ ಎಚ್ಚರಿಕೆ ನೀಡಿದ ಜೋ ಬೈಡನ್​

| Updated By: Skanda

Updated on: Aug 27, 2021 | 8:03 AM

ನೀವು ನಮ್ಮ ತಂಟೆಗೆ ಬಂದು ತಪ್ಪು ಮಾಡಿದ್ದೀರಿ. ಇದಕ್ಕೆ ತಕ್ಕ ಪಾಠವನ್ನು ಕಲಿಯುತ್ತೀರಿ. ಎಲ್ಲೇ ಹೋಗಿ ಅವಿತರೂ ನಿಮ್ಮನ್ನು ಹುಡುಕಿ ಕೊಲ್ಲುವುದು ನಮಗೆ ಗೊತ್ತಿದೆ: ಉಗ್ರರಿಗೆ ಖಡಕ್​ ಸಂದೇಶ ನೀಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್​

ನೀವು ಎಲ್ಲೇ ಅವಿತಿದ್ದರೂ ಹೆಕ್ಕಿ ಹೆಕ್ಕಿ ಕೊಲ್ಲುತ್ತೇವೆ; ಅಮೆರಿಕ ಯೋಧರನ್ನು ಕೊಂದ ಉಗ್ರರಿಗೆ ಎಚ್ಚರಿಕೆ ನೀಡಿದ ಜೋ ಬೈಡನ್​
ಅಮೆರಿಕ ಅಧ್ಯಕ್ಷ ಜೊ ಬೈಡೆನ್
Follow us on

ಅಫ್ಘಾನಿಸ್ತಾನದ ಕಾಬೂಲ್​​ನಲ್ಲಿ ಸರಣಿ ಸ್ಫೋಟದಲ್ಲಿ ಅಮೆರಿಕ ಯೋಧರೂ ದುರ್ಮರಣಕ್ಕೀಡಾಗಿದ್ದು, ಉಗ್ರರ ಈ ದುಷ್ಕೃತ್ಯದ ವಿರುದ್ಧ ಅಮೆರಿಕ ಕೆಂಡಾಮಂಡಲವಾಗಿದೆ. ಸ್ಫೊಟ ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರ ಸಂಘಟನೆಗೆ ಖಡಕ್​ ಎಚ್ಚರಿಕೆ ನೀಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಅಮೆರಿಕ ವಿರುದ್ಧ ದಾಳಿ ಮಾಡಿದವರು ಎಚ್ಚರಿಕೆಯಿಂದ ಇರಿ. ನಮ್ಮ ವಿರುದ್ಧ ದಾಳಿ ಮಾಡಿದವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ನಿಮ್ಮನ್ನು ನಾವು ಎಂದಿಗೂ ಮರೆಯುವುದಿಲ್ಲ. ನೀವು ಎಲ್ಲೇ ಅವಿತಿದ್ದರೂ ಹೆಕ್ಕಿ ಹೆಕ್ಕಿ ಕೊಲ್ಲುತ್ತೇವೆ ಎಂದು ಎಚ್ಚರಿಸಿದ್ದಾರೆ.

ಉಗ್ರರ ಇಂತಹ ದಾಳಿಗಳಿಂದ ಅಮೆರಿಕ ಕಂಗೆಡುವುದಿಲ್ಲ. ಜನರನ್ನು ಸ್ಥಳಾಂತರ ಮಾಡುವುದನ್ನೂ ನಿಲ್ಲಿಸುವುದಿಲ್ಲ. ನೀವು ಏನೇ ಮಾಡಿದರೂ ನಾವು ಜನರನ್ನು ಸ್ಥಳಾಂತರ ಮಾಡಿಯೇ ತೀರುತ್ತೇವೆ. ಈಗಾಗಲೇ ಐಸಿಸ್-ಕೆ ವಿರುದ್ಧ ಕಾರ್ಯಾಚರಣೆಗೆ ಯೋಜನೆ ರೂಪಿಸಲು ಸೂಚಿಸಲಾಗಿದೆ. ನಾವು ಎಲ್ಲಿ ಹೊಡೆಯಬೇಕು, ಹೇಗೆ ಹೊಡೆಯಬೇಕು, ಎಷ್ಟೊತ್ತಿಗೆ ಹೊಡೆಯಬೇಕೋ ಅಷ್ಟೊತ್ತಿಗೆ ಹೊಡೆಯುತ್ತೇವೆ. ನಮ್ಮ ವಿರುದ್ಧ ಐಸಿಸ್​ ಉಗ್ರರು ಗೆಲುವು ಸಾಧಿಸುವುದಕ್ಕೆ ಸಾಧ್ಯವೇ ಇಲ್ಲ ಎಂದು ಕಿಡಿಕಾರಿದ್ದಾರೆ.

ನಮ್ಮ ವಿರುದ್ಧ ದಾಳಿ ಮಾಡಿದವರನ್ನು ಮರೆಯುವುದಿಲ್ಲ. ಉಗ್ರರನ್ನು ಕೊಲ್ಲುವ ಮೂಲಕ ತಕ್ತ ಶಾಸ್ತಿ ಮಾಡುತ್ತೇವೆ. ಪ್ರತಿದಿನ ನಾನು ನಮ್ಮ ಕಮಾಂಡರ್​ಗಳ ಜೊತೆ ಮಾತನಾಡುವಾಗ, ನಮ್ಮ ಕಾರ್ಯ ಸಾಧಿಸಲು ನಿಮಗೆ ಇನ್ನೇನು ನೆರವು ಬೇಕು ಎಂದು ಕೇಳುತ್ತೇನೆ. ಅವರ ಎಲ್ಲ ಬೇಡಿಕೆಗಳನ್ನ ನಾನು ಈಡೇರಿಸಿದ್ದೇನೆ. ಮೂರು ಪ್ರತ್ಯೇಕ ಬಾರಿ ಮಾತುಕತೆ ನಡೆಸಿದ್ದು, ಅವರಿಗೆ ಬೇಕಾದ ಎಲ್ಲವನ್ನೂ ಪೂರೈಸಲಾಗಿದೆ. ಇದಕ್ಕಾಗಿ ನಾನು ಅಮೆರಿಕದ ರಕ್ಷಣಾ ಇಲಾಖೆ ಮತ್ತು ಪೆಂಟಗನ್ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.

ನಮ್ಮ ರಕ್ಷಣೆಗೆ ಯಾರನ್ನ ಕಳುಹಿಸಬೇಕು? ನಮಗಾಗಿ ಯಾರು ಹೋಗ್ತೀರಿ? ಎಂಬ ದೇವರ ಪ್ರಶ್ನೆಗೆ ಅಮೆರಿಕ ಸೇನೆ ಹಲವಾರು ವರ್ಷಗಳಿಂದ ಉತ್ತರ ನೀಡುತ್ತಿದೆ. ದೇವರೇ ನನ್ನನ್ನು ಕಳುಹಿಸಿ ಎಂದು ಉತ್ತರಿಸಿದೆ. ನಿನಗಾಗಿ ನಾನಿದ್ದೇನೆ ನನ್ನನ್ನೇ ಕಳುಹಿಸು ಎಂದು ಹೇಳುತ್ತಿದೆ. ಹೀಗಾಗಿ ಅಮೆರಿಕ ಎಂದೂ ಹಿಂದಡಿ ಇಡುವುದಿಲ್ಲ. ನಮ್ಮ ವಿರುದ್ಧ ದಾಳಿ ಮಾಡಿದವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಅಫ್ಘಾನಿಸ್ತಾನದ ಕಾಬೂಲ್​​ನಲ್ಲಿ ನಡೆದ ಸರಣಿ ಸ್ಫೋಟದ ಹೊಣೆಯನ್ನು ಐಸಿಸ್​-ಕೆ ಸಂಘಟನೆ ಹೊತ್ತುಕೊಂಡಿದ್ದು, ಈ ಸರಣಿ ಬಾಂಬ್ ಸ್ಫೋಟದಲ್ಲಿ ಸುಮಾರು 60 ಜನ ಬಲಿಯಾಗಿದ್ದಾರೆ. 140ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಅಮೆರಿಕ ಸೇನೆಯ 12 ಜನ ಬಲಿಯಾಗಿ, 15 ಜನರಿಗೆ ಗಾಯಗಳಾಗಿವೆ. ಈಗಾಗಲೇ ಆಫ್ಘನ್‌ನಿಂದ 1 ಲಕ್ಷ ಜನರನ್ನು ಸ್ಥಳಾಂತರ ಮಾಡಲಾಗಿದೆ. ಆಗಸ್ಟ್ 14 ರಿಂದ ಈವರೆಗೆ ಒಂದು ಲಕ್ಷ ಜನರ ಸ್ಥಳಾಂತರ ಮಾಡಿದ್ದೇವೆ ಎಂದು ಅಮೆರಿಕದ ಶ್ವೇತಭವನದಿಂದ ಮಾಹಿತಿ ಲಭ್ಯವಾಗಿದೆ.

ಅಂತೆಯೇ, ಹುತಾತ್ಮರಾದ ಅಮೆರಿಕಾ ಯೋಧರ ಬಗ್ಗೆ ಮಾತನಾಡಿದ ಅಮೆರಿಕ ವಿದೇಶಾಂಗ ಸಚಿವ ಆ್ಯಂಟೋನಿ ಬ್ಲಿಂಕೆನ್, 2001ರಿಂದ ಈವರೆಗೆ ಆಫ್ಘನ್‌ನಲ್ಲಿ 2,300 ಯೋಧರು ಹುತಾತ್ಮರಾಗಿದ್ದಾರೆ. 20 ಸಾವಿರಕ್ಕೂ ಹೆಚ್ಚು ಅಮೆರಿಕ ಯೋಧರಿಗೆ ಗಾಯಗಳಾಗಿವೆ. ಸುದೀರ್ಘ ಯುದ್ಧದಲ್ಲಿ ಸೇವೆ ಸಲ್ಲಿಸಿದ ಯೋಧರನ್ನ ಗೌರವಿಸುತ್ತೇವೆ. ಅವರ ಸೇವೆಯನ್ನು ಸದಾ ಸ್ಮರಿಸುತ್ತೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:
Kabul Airport Blast: ಅಫ್ಘಾನಿಸ್ತಾನದಲ್ಲಿ ಸರಣಿ ಸ್ಫೋಟ: ದುಷ್ಕೃತ್ಯದ ಹೊಣೆ ಹೊತ್ತ ಐಸಿಸ್​-ಕೆ ಸಂಘಟನೆ 

ಐಸಿಸ್​ ಉಗ್ರರ ದಾಳಿ ಬೆದರಿಕೆ ಇರುವುದನ್ನು ಸ್ಪಷ್ಟಪಡಿಸಿದ ಜೋ ಬೈಡನ್​; ಸಾವು-ನೋವಿಲ್ಲದೆ ಸ್ಥಳಾಂತರ ಸಾಧ್ಯವಿಲ್ಲ ಎಂದರೇನು ಅರ್ಥ?

(US President Joe Biden warns ISIS and other terror groups and says America will kill terrorists soon)