ತಾಲಿಬಾನ್​ ಪ್ರತಿನಿಧಿಯನ್ನು ಸಂದರ್ಶನ ಮಾಡಿ, ಭೇಷ್​ ಎನ್ನಿಸಿಕೊಂಡಿದ್ದ ಪತ್ರಕರ್ತೆ ಈಗ ದೇಶವನ್ನೇ ಬಿಟ್ಟು ಹೋದರು !

| Updated By: Lakshmi Hegde

Updated on: Aug 30, 2021 | 3:22 PM

ಬೆಹೆಷ್ಟಾ ಅರ್ಘಂಡ್​ ದೇಶವನ್ನು ಬಿಟ್ಟ ಬಗ್ಗೆ ಪ್ರತಿಕ್ರಿಯೆ ನೀಡಿದ ಟೋಲೋ ನ್ಯೂಸ್​ ಮಾಲೀಕ ಸಾದ್​, ತಾಲಿಬಾನ್​​ ಆಡಳಿತದಲ್ಲಿ ಅಫ್ಘಾನಿಸ್ತಾನದ ಪರಿಸ್ಥಿತಿ ಏನು ಎಂಬುದಕ್ಕೆ ಇದೊಂದು ಉದಾಹರಣೆ ಎಂದಿದ್ದಾರೆ.

ತಾಲಿಬಾನ್​ ಪ್ರತಿನಿಧಿಯನ್ನು ಸಂದರ್ಶನ ಮಾಡಿ, ಭೇಷ್​ ಎನ್ನಿಸಿಕೊಂಡಿದ್ದ ಪತ್ರಕರ್ತೆ ಈಗ ದೇಶವನ್ನೇ ಬಿಟ್ಟು ಹೋದರು !
ತಾಲಿಬಾನ್​ ವಕ್ತಾರನನ್ನು ಸಂದರ್ಶನ ಮಾಡಿದ್ದ, ನಿರೂಪಕಿ
Follow us on

ಕೆಲವು ದಿನಗಳ ಹಿಂದೆ ತಾಲಿಬಾನ್ (Taliban)​ ಪ್ರತಿನಿಧಿಯೊಬ್ಬನನ್ನು ಸಂದರ್ಶನ ಮಾಡಿ, ಪ್ರಶಂಸೆಗೆ ಪಾತ್ರರಾಗಿದ್ದ ಅಫ್ಘಾನಿಸ್ತಾನ ಟೋಲೋ ನ್ಯೂಸ್ (TOLO news) ಸುದ್ದಿ ಮಾಧ್ಯಮದ ನಿರೂಪಕಿ ಬೆಹೆಷ್ಟಾ ಅರ್ಘಂಡ್ (Beheshta Arghand) ಇದೀಗ ದೇಶವನ್ನೇ ತೊರೆದು ಹೋಗಿದ್ದಾರೆ. ಆ ತಾಲಿಬಾನಿಯನ್ನು ಟಿವಿ ಸ್ಟುಡಿಯೋಕ್ಕೇ ಕರೆಸಿ ಸಂದರ್ಶನ ಮಾಡಲಾಗಿತ್ತು. ಹಾಗೇ, ತಾಲಿಬಾನಿಯೊಬ್ಬನನ್ನು ಎದುರಿಗೆ ಕೂರಿಸಿಕೊಂಡು, ಸಂದರ್ಶನ ಮಾಡಿದ ಮೊದಲ ಜರ್ನಲಿಸ್ಟ್​ ಎಂಬ ಹೆಗ್ಗಳಿಕೆಗೂ ಬೆಹೆಸ್ಟಾ ಪಾತ್ರರಾಗಿದ್ದರು.

ಬೆಹೆಷ್ಟಾ ಅವರು 9ನೇ ತರಗತಿಯಲ್ಲಿ ಇದ್ದಾಗಿನಿಂದಲೂ ತಾನು ಪತ್ರಕರ್ತೆಯಾಗಬೇಕು ಎಂದು ಕನಸು ಕಂಡವರು. ಅದರಂತೆ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದರು. ಅವರಿಗಿನ್ನೂ 24ವರ್ಷ. ಆಗಸ್ಟ್​ 15ರಂದು ತಾಲಿಬಾನ್​ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದ ಬಳಿಕ, ಆಗಸ್ಟ್​ 17ರಂದು ತಾಲಿಬಾನ್‌ನ ಪ್ರತಿನಿಧಿ, ಮೌಲವಿ ಅಬ್ದುಲ್‌ಹಕ್ ಹೇಮದ್ ಎಂಬಾತನನ್ನು ಸಂದರ್ಶನ ಮಾಡಿದ್ದರು. ಕಾಬೂಲ್​ನಲ್ಲಿರುವ ಪರಿಸ್ಥಿತಿ, ತಾಲಿಬಾನ್​ ಉಗ್ರರು ನಗರದ ಮನೆಮನೆಗೂ ಹೋಗಿ ದಾಳಿ ಮಾಡುತ್ತಿರುವ ಬಗ್ಗೆಯೂ ಪ್ರಶ್ನಿಸಿದ್ದರು. ಅವರ ಸಂದರ್ಶನದ ಫೋಟೋ, ತುಣುಕನ್ನು ಟೋಲೋ ನ್ಯೂಸ್​ ಶೇರ್​ ಮಾಡಿಕೊಂಡಿತ್ತು. ಹಾಗೇ ಸಿಕ್ಕಾಪಟೆ ವೈರಲ್​ ಆಗಿತ್ತು. ಪತ್ರಕರ್ತೆಯ ಧೈರ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ಲಾಘನೆಗೆ ಪಾತ್ರವಾಗಿತ್ತು.

ಆದರೆ ಇದೀಗ ಬೆಹೆಷ್ಟಾ ದೇಶವನ್ನು ಬಿಟ್ಟು ಹೋಗಿದ್ದಾರೆ. ಈ ಬಗ್ಗೆ ಸಿಎನ್​ಎನ್​ ಜತೆ ಮಾತನಾಡಿ, ಲಕ್ಷಾಂತರ ಜನರಂತೆ ನನಗೂ ತಾಲಿಬಾನಿಗಳೆಂದರೆ ಭಯ. ಹಾಗಾಗಿಯೇ ದೇಶವನ್ನು ಬಿಟ್ಟಿದ್ದೇನೆ ಎಂದು ತಿಳಿಸಿದ್ದಾರೆ. ನಾನು ಟೋಲೋ ನ್ಯೂಸ್​ ಸೇರಿ ಕೇವಲ 1 ತಿಂಗಳ 20 ದಿನವಾಗಿತ್ತು. ಅಷ್ಟರಲ್ಲೇ ತಾಲಿಬಾನ್ ಆಡಳಿತ ಶುರುವಾಯಿತು. ನನಗೂ ಭಯವಾಗಿ ಅಲ್ಲಿಂದ ಬಂದಿದ್ದೇನೆ. ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಸರಿಯಾದರೆ, ಮಹಿಳೆಯರ ಹಕ್ಕನ್ನು ಗೌರವಿಸುತ್ತೇವೆ ಎಂದು ತಾಲಿಬಾನಿಗಳು ಕೊಟ್ಟ ಭರವಸೆಯನ್ನು ಅವರು ಉಳಿಸಿಕೊಂಡರೆ ನಾನು ವಾಪಸ್​ ನನ್ನ ದೇಶಕ್ಕೆ ಹೋಗುತ್ತೇನೆ. ಅಲ್ಲಿಯೇ ಕೆಲಸ ಮಾಡುತ್ತೇನೆ ಎಂದು ಬೆಹೆಷ್ಟಾ ಹೇಳಿಕೊಂಡಿದ್ದಾರೆ.

ಬೆಹೆಷ್ಟಾ ಅರ್ಘಂಡ್​ ದೇಶವನ್ನು ಬಿಟ್ಟ ಬಗ್ಗೆ ಪ್ರತಿಕ್ರಿಯೆ ನೀಡಿದ ಟೋಲೋ ನ್ಯೂಸ್​ ಮಾಲೀಕ ಸಾದ್​, ತಾಲಿಬಾನ್​​ ಆಡಳಿತದಲ್ಲಿ ಅಫ್ಘಾನಿಸ್ತಾನದ ಪರಿಸ್ಥಿತಿ ಏನು ಎಂಬುದಕ್ಕೆ ಇದೊಂದು ಉದಾಹರಣೆ ಎಂದಿದ್ದಾರೆ. ಅಷ್ಟೇ ಅಲ್ಲ, ನಮ್ಮಲ್ಲಿ ಕೆಲಸ ಮಾಡುತ್ತಿದ್ದ ತುಂಬ ಒಳ್ಳೊಳ್ಳೆ ಪತ್ರಕರ್ತರು ತಾಲಿಬಾನಿಗಳಿಗೆ ಹೆದರಿ ಉದ್ಯೋಗ ಬಿಟ್ಟಿದ್ದಾರೆ. ಅವರ ಬದಲಿಗೆ ಹೊಸ ಉದ್ಯೋಗಿಗಳನ್ನು ಹುಡುಕಿ ಕೆಲಸ ಮಾಡುವುದು ಒಂದು ಸವಾಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Videocon Industries: ವಿಡಿಯೋಕಾನ್ ಇಂಡಸ್ಟ್ರೀಸ್ ಆಸ್ತಿ ವಶಕ್ಕೆ ಎನ್​ಸಿಎಲ್​ಟಿಗೆ ಅರ್ಜಿ; ಏನಿದು ಪ್ರಕರಣ? ಇಲ್ಲಿದೆ ಮಾಹಿತಿ

ಎಸ್​ಸಿ ಎಸ್​ಟಿ ಎಂದು ಸುಳ್ಳು ದಾಖಲೆ ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮ: ಸಿಎಂ ಬೊಮ್ಮಾಯಿ ಎಚ್ಚರಿಕೆ

Published On - 3:22 pm, Mon, 30 August 21