Afghanistan: ಭದ್ರತಾ ಸಮಸ್ಯೆ ಬಗೆಹರಿದಿರುವುದರಿಂದ ಹಿಂದೂ, ಸಿಖ್ಖರು ಅಫ್ಘಾನಿಸ್ತಾನಕ್ಕೆ ಮರಳಬೇಕು; ತಾಲಿಬಾನ್ ಒತ್ತಾಯ

| Updated By: ಸುಷ್ಮಾ ಚಕ್ರೆ

Updated on: Jul 26, 2022 | 8:14 AM

ಭದ್ರತಾ ಸಮಸ್ಯೆಗಳಿಂದಾಗಿ ದೇಶವನ್ನು ತೊರೆದ ಎಲ್ಲಾ ಭಾರತೀಯರು ಮತ್ತು ಸಿಖ್ ದೇಶಬಾಂಧವರು ಈಗ ಅಫ್ಘಾನಿಸ್ತಾನಕ್ಕೆ ಮರಳಬಹುದು ಎಂದು ತಾಲಿಬಾನ್​ ಸರ್ಕಾರ ಹೇಳಿದೆ.

Afghanistan: ಭದ್ರತಾ ಸಮಸ್ಯೆ ಬಗೆಹರಿದಿರುವುದರಿಂದ ಹಿಂದೂ, ಸಿಖ್ಖರು ಅಫ್ಘಾನಿಸ್ತಾನಕ್ಕೆ ಮರಳಬೇಕು; ತಾಲಿಬಾನ್ ಒತ್ತಾಯ
ಸಾಂದರ್ಭಿಕ ಚಿತ್ರ
Image Credit source: NDTV
Follow us on

ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ (Taliban Government) ರಚನೆಯಾದಾಗಿನಿಂದ ಅಲ್ಲಿನ ಅನೇಕ ಜನರು ದೇಶ ಬಿಟ್ಟು ಬೇರೆಡೆ ವಲಸೆ ಹೋಗಿದ್ದಾರೆ. ಅಲ್ಪ ಸಂಖ್ಯಾತ ಸಮುದಾಯಗಳಂತೂ ಜೀವ ಕೈಯಲ್ಲಿ ಹಿಡಿದು ಬದುಕುತ್ತಿವೆ. ಆದರೆ, ಇದೀಗ ಅಫ್ಘಾನ್​​ನಲ್ಲಿ (Afghanistan) ಭದ್ರತಾ ಪರಿಸ್ಥಿತಿಯನ್ನು ಪರಿಹರಿಸಲಾಗಿದೆ ಎಂದು ತಾಲಿಬಾನ್ ಹೇಳಿಕೊಂಡಿದೆ. ಅಫ್ಘಾನಿಸ್ತಾನದ ಅಲ್ಪಸಂಖ್ಯಾತರಾದ ಹಿಂದೂಗಳು ಮತ್ತು ಸಿಖ್ಖರು ದೇಶಕ್ಕೆ ಮರಳಬೇಕೆಂದು ತಾಲಿಬಾನ್ ಸರ್ಕಾರ ಒತ್ತಾಯಿಸಿದೆ.

ತಾಲಿಬಾನ್ ರಾಜ್ಯ ಸಚಿವರ ಕಚೇರಿಯ ಮಹಾನಿರ್ದೇಶಕ ಡಾ. ಮುಲ್ಲಾ ಅಬ್ದುಲ್ ವಾಸಿ ಜುಲೈ 24ರಂದು ಅಫ್ಘಾನಿಸ್ತಾನದ ಹಿಂದೂ ಮತ್ತು ಸಿಖ್ ಕೌನ್ಸಿಲ್‌ನ ಹಲವಾರು ಸದಸ್ಯರನ್ನು ಭೇಟಿಯಾಗಿದ್ದರು. ಅದಾದ ನಂತರ ಈ ಸಮರ್ಥನೆ ಮಾಡಲಾಗಿದೆ. ಮುಲ್ಲಾ ಅಬ್ದುಲ್ ವಾಸಿ ಅವರು ಕಾಬೂಲ್‌ನಲ್ಲಿ ಹಿಂದೂ ಮತ್ತು ಸಿಖ್ ನಾಯಕರ ನಿಯೋಗವನ್ನು ಭೇಟಿ ಮಾಡಿದ್ದಾರೆ. ಭದ್ರತಾ ಸಮಸ್ಯೆಗಳಿಂದಾಗಿ ದೇಶವನ್ನು ತೊರೆದ ಎಲ್ಲಾ ಭಾರತೀಯ ಮತ್ತು ಸಿಖ್ ದೇಶಬಾಂಧವರು ಈಗ ಅಫ್ಘಾನಿಸ್ತಾನಕ್ಕೆ ಮರಳಬಹುದು ಎಂದು ಅವರು ಹೇಳಿದ್ದಾರೆ.

ತಾಲಿಬಾನ್ ನೀಡಿರುವ ಮಾಹಿತಿ ಪ್ರಕಾರ, ಕಾಬೂಲ್‌ನ ಗುರುದ್ವಾರದ ಮೇಲೆ ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯದ (ಐಎಸ್‌ಕೆಪಿ) ದಾಳಿಯನ್ನು ತಡೆಗಟ್ಟಿದ್ದಕ್ಕಾಗಿ ಸಿಖ್ ನಾಯಕರು ತಾಲಿಬಾನ್‌ಗೆ ಧನ್ಯವಾದ ಅರ್ಪಿಸಿದ್ದಾರೆ. ಜೂನ್ 18ರಂದು ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯ (ISKP) ಕಾಬೂಲ್‌ನ ಕಾರ್ಟೆ ಪರ್ವಾನ್ ಗುರುದ್ವಾರದ ಮೇಲೆ ದಾಳಿ ಮಾಡಿತ್ತು. ಆ ಮಾರಣಾಂತಿಕ ದಾಳಿಯ ಸಮಯದಲ್ಲಿ ಓರ್ವ ಸಿಖ್ ವ್ಯಕ್ತಿ ಸೇರಿದಂತೆ ಇಬ್ಬರು ಪ್ರಾಣ ಕಳೆದುಕೊಂಡಿದ್ದರು.

ಇದನ್ನೂ ಓದಿ: ಕಾಬೂಲ್ ಗುರುದ್ವಾರ ದಾಳಿಯ ಹೊಣೆ ಹೊತ್ತ ಐಸಿಸ್ ಉಗ್ರರು: ಮೃತರ ಸಂಖ್ಯೆಯನ್ನು ಮನಸೋಯಿಚ್ಛೆ ಹೆಚ್ಚಿಸಿ ಹೇಳಿದ ಭಯೋತ್ಪಾದಕರು

ಮೂಲಗಳ ಪ್ರಕಾರ, ದಾಳಿಕೋರರು ಗುರುದ್ವಾರದ ಆವರಣವನ್ನು ಪ್ರವೇಶಿಸಿದಾಗ ಸುಮಾರು 25ರಿಂದ 30 ಜನರು ತಮ್ಮ ಬೆಳಗಿನ ಪ್ರಾರ್ಥನೆಗಾಗಿ ಗುರುದ್ವಾರದ ಆವರಣದೊಳಗೆ ಹಾಜರಿದ್ದರು. ಸುಮಾರು 10ರಿಂದ 15 ಜನರು ಅಲ್ಲಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಆದರೆ, ಗುರುದ್ವಾರದ ಸಿಬ್ಬಂದಿ ಅಹ್ಮದ್ ಎಂಬುವವರನ್ನು ದಾಳಿಕೋರರು ಕೊಂದಿದ್ದರು.

ಅಫ್ಘಾನಿಸ್ತಾನದಲ್ಲಿ ಸಿಖ್ ಸಮುದಾಯ ಸೇರಿದಂತೆ ಧಾರ್ಮಿಕ ಅಲ್ಪಸಂಖ್ಯಾತರು ಅಫ್ಘಾನಿಸ್ತಾನದಲ್ಲಿ ಹಿಂಸಾಚಾರಕ್ಕೆ ಗುರಿಯಾಗಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ 15ರಿಂದ 20 ಭಯೋತ್ಪಾದಕರು ಕಾಬೂಲ್‌ನ ಕಾರ್ಟ್-ಎ-ಪರ್ವಾನ್ ಜಿಲ್ಲೆಯ ಗುರುದ್ವಾರಕ್ಕೆ ನುಗ್ಗಿ ಕಾವಲುಗಾರರನ್ನು ಕಟ್ಟಿಹಾಕಿದ್ದರು.

ಇದನ್ನೂ ಓದಿ: Afghanistan Blast: ಅಫ್ಘಾನಿಸ್ತಾನದ ಮಸೀದಿಗಳಲ್ಲಿ ಭಾರೀ ಸ್ಫೋಟ; 22 ಜನ ಸಾವು, ಹಲವರಿಗೆ ಗಾಯ

2020ರ ಮಾರ್ಚ್ ತಿಂಗಳಲ್ಲಿ ಕಾಬೂಲ್‌ನ ಶಾರ್ಟ್ ಬಜಾರ್ ಪ್ರದೇಶದ ಗುರು ಹರ್ ರಾಯ್ ಸಾಹಿಬ್ ಗುರುದ್ವಾರದಲ್ಲಿ ಮಾರಣಾಂತಿಕ ದಾಳಿ ನಡೆದಿತ್ತು. ಇದರಲ್ಲಿ 27 ಸಿಖ್ಖರು ಕೊಲ್ಲಲ್ಪಟ್ಟರು ಮತ್ತು ಹಲವರು ಗಾಯಗೊಂಡಿದ್ದರು. ಇಸ್ಲಾಮಿಕ್ ಸ್ಟೇಟ್ ಉಗ್ರರು ದಾಳಿಯ ಹೊಣೆ ಹೊತ್ತುಕೊಂಡಿದ್ದರು. ಇದರ ಮಧ್ಯೆ, ಭಯೋತ್ಪಾದಕ ದಾಳಿಯಲ್ಲಿ ಹಾನಿಗೊಳಗಾದ ಕಾಬೂಲ್‌ನ ಗುರುದ್ವಾರ ಕಾರ್ಟೆ ಪರ್ವಾನ್ ಅನ್ನು ನವೀಕರಿಸಲು ತಾಲಿಬಾನ್ ನೇತೃತ್ವದ ಅಫ್ಘಾನಿಸ್ತಾನ ಸರ್ಕಾರ ನಿರ್ಧರಿಸಿದೆ.

ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನ ಹೇಳಲು ಆಂತರಿಕ ಸಚಿವಾಲಯದ (MoI) ಉನ್ನತ ಮಟ್ಟದ ನಿಯೋಗವು ಗುರುದ್ವಾರಕ್ಕೆ ಹಲವಾರು ಬಾರಿ ಭೇಟಿ ನೀಡಿದೆ ಎಂದು ಮೂಲಗಳು ಬಹಿರಂಗಪಡಿಸಿವೆ.