Taliban: ಮದುವೆಯಾಗಿ ವಧುವನ್ನು ಮಿಲಿಟರಿ ಹೆಲಿಕಾಪ್ಟರ್ನಲ್ಲೇ ಕರೆದುಕೊಂಡು ಹೋದ ತಾಲಿಬಾನ್ ಕಮಾಂಡರ್
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಸೇನಾ ಹೆಲಿಕಾಪ್ಟರ್ನಲ್ಲಿ ಕಮಾಂಡರ್ ವಧುವಿನ ಮನೆಯ ಬಳಿ ಇಳಿಯುತ್ತಿರುವುದನ್ನು ನೋಡಬಹುದು.
ಕಾಬೂಲ್: ತಾಲಿಬಾನ್ ಕಮಾಂಡರ್ (Taliban Commander) ಹೊಸದಾಗಿ ಮದುವೆಯಾಗಿದ್ದು, ನವವಿವಾಹಿತ ವಧುವನ್ನು ಮನೆಗೆ ಕರೆದೊಯ್ಯಲು ಮಿಲಿಟರಿ ಹೆಲಿಕಾಪ್ಟರ್ ಬಳಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಅವರು ತಮ್ಮ ಹೆಂಡತಿಯನ್ನು ಲೋಗರ್‌ನಿಂದ ಪೂರ್ವ ಅಫ್ಘಾನಿಸ್ತಾನದ ಖೋಸ್ಟ್ ಪ್ರಾಂತ್ಯಕ್ಕೆ ಮಿಲಿಟರಿ ಹೆಲಿಕಾಪ್ಟರ್ನಲ್ಲಿ ಕರೆದೊಯ್ದಿದ್ದಾರೆ. ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
ತಾಲಿಬಾನ್‌ನ ಹಖಾನಿ ಶಾಖೆಯ ಕಮಾಂಡರ್ ಈ ರೀತಿ ಮಿಲಿಟರಿ ಚಾಪರ್ನಲ್ಲಿ ವಧುವನ್ನು ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಸೇನಾ ಹೆಲಿಕಾಪ್ಟರ್ನಲ್ಲಿ ಕಮಾಂಡರ್ ವಧುವಿನ ಮನೆಯ ಬಳಿ ಇಳಿಯುತ್ತಿರುವುದನ್ನು ನೋಡಬಹುದು. ಮಾಧ್ಯಮ ಪೋರ್ಟಲ್ ಪ್ರಕಾರ, ಕಮಾಂಡರ್ ತನ್ನ ಹೆಂಡತಿಯ ತಂದೆಗೆ ಈ ಮದುವೆ ಮಾಡಿಕೊಟ್ಟಿದ್ದಕ್ಕೆ 12,00,000 ಅಫ್ಘಾನಿಗಳನ್ನು ನೀಡಿದ್ದಾನೆ ಎಂದು ಹೇಳಲಾಗಿದೆ.
ಸೇನಾ ಕಮಾಂಡರ್ ಖೋಸ್ಟ್‌ನಲ್ಲಿ ನೆಲೆಸಿದ್ದಾರೆ. ಅವರ ಪತ್ನಿಯ ಮನೆ ಲೋಗರ್‌ನ ಬಾರ್ಕಿ ಬರಾಕ್ ಜಿಲ್ಲೆಯಲ್ಲಿದೆ ಎಂದು ANI ವರದಿ ಮಾಡಿದೆ. ಲೋಗರ್ ಪ್ರಾಂತ್ಯದ ಬಾರ್ಕಿ ಬರಾಕ್ ಜಿಲ್ಲೆಯ ಶಾ ಮಜಾರ್ ಪ್ರದೇಶದಲ್ಲಿ ಶನಿವಾರ ಈ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ತೀವ್ರ ಭೂಕಂಪದ ನಂತರ ಕಾಬೂಲ್ಗೆ ಮಾನವೀಯ ನೆರವು ಕಳುಹಿಸಿದ ಭಾರತ
ಆದರೆ, ಕಮಾಂಡರ್ನ ಈ ವರ್ತನೆಯನ್ನು ಸಮರ್ಥಿಸಿಕೊಂಡಿರುವ ತಾಲಿಬಾನ್‌ನ ಉಪ ವಕ್ತಾರ ಕ್ವಾರಿ ಯೂಸುಫ್ ಅಹ್ಮದಿ, ಈ ಆರೋಪಗಳು ಸುಳ್ಳು ಎಂದು ವಾದಿಸಿದ್ದಾರೆ. ಶತ್ರುಗಳು ಬೇಕೆಂದೇ ಈ ರೀತಿ ಪ್ರಚಾರ ಮಾಡುತ್ತಿದ್ದಾರೆ. ಇದರಲ್ಲಿ ಯಾವುದೇ ಸತ್ಯವಿಲ್ಲ ಎಂದಿರುವ ಅವರು ತಾಲಿಬಾನಿ ಕಮಾಂಡರ್‌ನಿಂದ ಮಿಲಿಟರಿ ಹೆಲಿಕಾಪ್ಟರ್ ಬಳಸಲಾಗುತ್ತಿದೆ ಎಂಬ ಆರೋಪವನ್ನು ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್ ತಳ್ಳಿಹಾಕುತ್ತದೆ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೋಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕ್ರಮವನ್ನು ಖಂಡಿಸಿದ ಜನರು ಸಾರ್ವಜನಿಕ ಆಸ್ತಿಯ ದುರ್ಬಳಕೆ ಮಾಡಿಕೊಂಡು ತಮ್ಮ ಮದುವೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಟೀಕಿಸಿದ್ದಾರೆ.