ವಿಮಾನ ಗರಿಷ್ಟ ಎತ್ತರದಲ್ಲಿ ಹಾರುತ್ತಿದ್ದಾಗ ಕಾಕ್ಪಿಟ್ನಲ್ಲಿ ಹೊಡೆದಾಡಿದ ಇಬ್ಬರು ಪೈಲಟ್ ಗಳನ್ನು ಏರ್ ಫ್ರಾನ್ಸ್ ಸಸ್ಪೆಂಡ್ ಮಾಡಿದೆ
ಲಾ ಟ್ರಿಬ್ಯೂನ್ ದಿನಪತ್ರಿಕೆ ವರದಿಯ ಪ್ರಕಾರ ಜೂನ್ ನಲ್ಲಿ ನಡೆದ ಘಟನೆಯು, ವಿಮಾನವು ಟೇಕ್ ಆಫ್ ಆಗಿ ಎತ್ತರಕ್ಕೆ ಹಾರಿದ ನಂತರ ಪೈಲಟ್ ಮತ್ತು ಕೋ-ಪೈಲಟ್ ನಡುವೆ ಜಗಳ ಶುರುವಾಗಿ ಅವರಿಬ್ಬರು ಪರಸ್ಪರ ಕಾಲರ್ ಗಳನ್ನು ಹಿಡಿದು ಎಳೆದಾಡಿದರಲ್ಲದೆ ಅವರಲ್ಲಿ ಒಬ್ಬ ಮತ್ತೊಬ್ಬನ ಕೆನ್ನೆಗೆ ಹೊಡೆದಿದ್ದಾನೆ.
ಜಿನೀವಾದಿಂದ ಪ್ಯಾರಿಸ್ ವಿಮಾನ ಹಾರಿಸುತ್ತಿದ್ದ ಸಮಯದಲ್ಲಿ ಅದರ ಕಾಕ್ ಪಿಟ್ ನಲ್ಲಿ (cockpit) ಹೊಡೆದಾಡಿದ ಇಬ್ಬರು ಏರ್ ಫ್ರಾನ್ಸ್ ಸಂಸ್ಥೆಯ (Air France) ಪೈಲಟ್ ಗಳನ್ನು ಸಸ್ಪೆಂಡ್ ಮಾಡಲಾಗಿದೆ ವಿಮಾನ ಮತ್ತು ಪ್ರಯಾಣಿಕರ ಸುರಕ್ಷತೆ ಸಂಬಂಧಿಸಿದಂತೆ ಸದರಿ ಸಂಸ್ಥೆಯು ಈಗಾಗಲೇ ಸಾಕಷ್ಟು ಟೀಕೆಗೊಳನ್ನು ಎದುರಿಸುತ್ತಿದೆ. ಸಂಸ್ಥೆಯ ವಕ್ತಾರೆಯೊಬ್ಬರಿಂದ ಶನಿವಾರ ಲಭ್ಯವಾಗಿರುವ ಮಾಹಿತಿ ಪ್ರಕಾರ ಜೂನ್ ನಲ್ಲಿ ಪೈಲಟ್ ಗಳು ವಿಮಾನ ಎತ್ತರದಲ್ಲಿ ಹಾರುತ್ತಿದ್ದಾಗ ಬಡಿದಾಡಿದ್ದರು. ಲಾ ಟ್ರಿಬ್ಯೂನ್ ಪತ್ರಿಕೆಯು ಜೂನ್ ನಲ್ಲೇ ಘಟನೆ ಬಗ್ಗೆ ವರದಿಯನ್ನು ಪ್ರಕಟಿಸಿತ್ತು.
ಪೈಲಟ್ ಗಳ ನಡುವೆ ನಡೆದ ಜಗಳ ಕೊನೆಗೊಳ್ಳುವುದಕ್ಕೆ ಹೆಚ್ಚಿನ ಸಮಯವೇನೂ ಹಿಡಿದಿರದ ಕಾರಣ ವಿಮಾನದ ಪ್ರಯಾಣ ಮಂದುವರಿದು ಯಾವುದೇ ಅಡಚಣೆಯಿಲ್ಲದೆ ಕೊನೆಗೊಂಡಿದೆ ಎಂದು ಹೇಳಿರುವ ವಕ್ತಾರೆ, ತಮ್ಮ ಅನುಚಿತ ಮತ್ತು ಅಕ್ಷಮ್ಯ ವರ್ತನೆಗಾಗಿ ಏರ್ ಫ್ರಾನ್ಸ್ ತೆಗೆದುಕೊಳ್ಳುವ ನಿರ್ಧಾರಕ್ಕಾಗಿ ಪೈಲಟ್ ಗಳಿಬ್ಬರು ಕಾಯತ್ತಿದ್ದರು ಎಂದಿದ್ದಾರೆ.
ಕಳೆದ ಮಂಗಳವಾರ ಫ್ರಾನ್ಸ್ ನ ನಾಗರಿಕ ವಿಮಾನಯಾನ ಸುರಕ್ಷತೆ ತನಿಖಾ ಪ್ರಾಧಿಕಾರವು ಸಂಸ್ಥೆಯ ವಿಮಾನಗಳಲ್ಲಿ ಸಂಚರಿಸುವ ಪ್ರಯಾಣಿಕರ ಸುರಕ್ಷತೆ ಬಗ್ಗೆ ಆದ್ಯತೆ ಕಡಿಮೆಯಾಗುತ್ತಿದೆ ಎಂದು ವರದಿಯನ್ನು ನೀಡಿದ ಬಳಿಕ ಪೈಲಟ್ ಗಳ ಹೊಡೆದಾಟದ ಘಟನೆ ಬೆಳಕಿಗೆ ಬಂದಿದೆ. ಪ್ರಯಾಣಿಕರ ಸುರಕ್ಷತೆ ಸಲುವಾಗಿ ರೂಪಿಸಿರುವ ಮಾರ್ಗಸೂಚಿಗಳ ಉಲ್ಲಂಘನೆಯೂ ಅಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಈ ವರದಿಗೆ ಪ್ರತಿಕ್ರಿಯೆ ನೀಡಿದ ಏರ್ ಲೈನ್ಸ್ ಸಂಸ್ಥೆಯು ಸುರಕ್ಷತೆ ಆಡಿಟ್ ನಡೆಸುವುದಾಗಿ ಹೇಳಿತಲ್ಲದೆ ಈ ನಿಟ್ಟಿನಲ್ಲಿ ಹೆಚ್ಚು ಜಾಗರೂಕತೆವಹಿಸುವ ಆಶ್ವಾಸನೆ ನೀಡಿತು.
ಲಾ ಟ್ರಿಬ್ಯೂನ್ ದಿನಪತ್ರಿಕೆ ವರದಿಯ ಪ್ರಕಾರ ಜೂನ್ ನಲ್ಲಿ ನಡೆದ ಘಟನೆಯು, ವಿಮಾನವು ಟೇಕ್ ಆಫ್ ಆಗಿ ಎತ್ತರಕ್ಕೆ ಹಾರಿದ ನಂತರ ಪೈಲಟ್ ಮತ್ತು ಕೋ-ಪೈಲಟ್ ನಡುವೆ ಜಗಳ ಶುರುವಾಗಿ ಅವರಿಬ್ಬರು ಪರಸ್ಪರ ಕಾಲರ್ ಗಳನ್ನು ಹಿಡಿದು ಎಳೆದಾಡಿದರಲ್ಲದೆ ಅವರಲ್ಲಿ ಒಬ್ಬ ಮತ್ತೊಬ್ಬನ ಕೆನ್ನೆಗೆ ಹೊಡೆದಿದ್ದಾನೆ.
ಕ್ಯಾಬಿನಲ್ಲಿದ್ದ ಬೇರೆ ಸಿಬ್ಬಂದಿಗೆ ಪೈಲಟ್ ಗಳು ಜಗಳ ಮಾಡುತ್ತಿರುವ ಸದ್ದು ಕೇಳಿದೆ. ಅವರು ಕಾಕ್ ಪಿಟ್ ನೊಳಗೆ ಹೋಗಿ ಜಗಳ ಬಿಡಿಸಿದ್ದಾರೆ ಮತ್ತು ವಿಮಾನದ ಉಳಿದ ಪ್ರಯಾಣ ಕೊನೆಗೊಳ್ಳುವವರಗೆ ಒಬ್ಬ ಪೈಲಟ್ ನನ್ನು ವಿಮಾನದ ಡೆಕ್ ನಲ್ಲಿ ಕೂರಿಸಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.
ವಿಮಾನಕ್ಕೆ ಯಾವುದೇ ರೀತಿಯ ಅಡಚಣೆಯುಂಟಾಗದ ಕಾರಣ ಸದರಿ ವಿಷಯವನ್ನು ತನ್ನ ಗಮನಕ್ಕೆ ತರಲಾಗಿಲ್ಲ ಎಂದು ಬಿಇಎ ಹೇಳಿದೆ. ಮಂಗಳವಾರದ ಬಿಇಎ ವರದಿಯು ಮತ್ತೊಂದು ಏರ್ ಫ್ರಾನ್ಸ್ ವಿಮಾನ ಕುರಿತಂತೆ ಸಂಭವಿಸದ ಘಟನೆಯ ಬಗ್ಗೆಯೂ ಬೆಳಕು ಚೆಲ್ಲಿದೆ. 2020 ರ ಡಿಸೆಂಬರ್‌ನಲ್ಲಿ ಚಾಡ್‌ನ ಮೇಲೆ ಪ್ರಯಾಣಿಸುತ್ತಿದ್ದ ಏರ್‌ಬಸ್ ಎ330 ನ ಪೈಲಟ್‌ಗಳು ವಿಮಾನದ ಟ್ಯಾಂಕ್‌ಗಳಿಂದ 1.4 ಟನ್ ಇಂಧನ ಕಾಣೆಯಾಗಿದ್ದ ಅಂಶವನ್ನು ಸಾಮಾನ್ಯವಾಗಿ ವಿಮಾನ ಹಾರುವ ಎತ್ತರದಲ್ಲಿ ಮನಗಂಡರು. ಅಪಾಯ ಎದುರಾಗಬಬಹುದಾದ ಸಾಧ್ಯತೆಯನ್ನು ಯೋಚಿಸಿದ ವಿಮಾನದ ಸಿಬ್ಬಂದಿಯು ಸುರಕ್ಷತೆ ಕ್ರಮಗಳ ಬಗ್ಗೆ ಯೋಚಿಸಲಾರಂಭಿಸಿದ್ದರು. ಆದಾಗ್ಯೂ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿತ್ತು.
ಬಿಇಎ ಏಪ್ರಿಲ್ ನಲ್ಲಿ ಏರ್ ಫ್ರಾನ್ಸ್ ಸಂಸ್ಥೆಗೆ ಸೇರಿದ ವಿಮಾನದಲ್ಲಿ ನಡೆದ ಅಚಾತುರ್ಯದ ಬಗ್ಗೆಯೂ ತನಿಖೆ ಆರಂಭಿಸಿದ್ದು ಆ ಪ್ರಕರಣವನ್ನು ಗಂಭೀರವೆಂದು ಹೇಳಿದೆ.
ಆ ಪ್ರಕರಣದಲ್ಲಿ ಬೋಯಿಂಗ್ 777 ವಿಮಾನದ ಪೈಲಟ್ ಗಳು ಪ್ಯಾರಿಸ್ ನ ಚಾರ್ಲ್ಸ್ ಡಿ ಗಾಲ್ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಲ್ಯಾಂಡ್ ಮಾಡಿಸಲು ಸಾಧ್ಯವಾಗುತ್ತಿಲ್ಲ ಎಂದು ಏರ್ ಟ್ರಾಫಿಕ್ ಕಂಟ್ರೋಲರ್ ಗಳಿಗೆ ಹೇಳಿ ಅದನ್ನು ಇಳಿಸುವ ತಮ್ಮ ಪ್ರಯತ್ನಗಳಿಗೆ ವಿಮಾನ ಪ್ರತಿಕ್ರಿಯಿಸುತ್ತಿಲ್ಲ ಎಂದು ಹೇಳಿದ್ದರು. ‘ನನಗೆ ಹುಚ್ಚು ಹಿಡಿದಂತಾಗುತ್ತಿದೆ,’ ಎಂದು ಒಬ್ಬ ಪೈಲಟ್ ಅರಚಿದ್ದು ಕಂಟ್ರೋಲರ್ ಗಳಿಗೆ ಕೇಳಿಸಿತ್ತು. ನ್ಯೂ ಯಾರ್ಕ್ ನಿಂದ ಹೊರಟಿದ್ದ ಆ ವಿಮಾನವನ್ನು ಎರಡನೇ ಪ್ರಯತ್ನದಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲಾಗಿತ್ತು.