ಅಮೆರಿಕದಲ್ಲಿ ಅಧ್ಯಕ್ಷ ಬೈಡನ್-ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ನಡುವೆ ಭಿನ್ನಾಭಿಪ್ರಾಯ !; ವೈಯಕ್ತಿಕ ಸ್ಪರ್ಧೆಗೆ ಬಿದ್ದರಾ ನಾಯಕರು?
ಆಗಸ್ಟ್ನಲ್ಲಿ ಅಫ್ಘಾನಿಸ್ತಾನದಿಂದ ಯುಎಸ್ ತನ್ನ ಸೇನೆಯನ್ನು ಸಂಪೂರ್ಣವಾಗಿ ವಾಪಸ್ ಪಡೆಯಿತು. ಆದರೆ ಈ ವಿಚಾರದ ಬಗ್ಗೆ ನನ್ನೊಂದಿಗೆ ಸರಿಯಾಗಿ ಸಮಾಲೋಚನೆ ನಡೆಸಲಿಲ್ಲ ಎಂದು ಕಮಲಾ ಹ್ಯಾರಿಸ್ ಹೇಳಿದ್ದಾಗಿ ತಿಳಿದುಬಂದಿದೆ.
ಯುಎಸ್ನ ಉಪಾಧ್ಯಕ್ಷ ಸ್ಥಾನಕ್ಕೆ ಏರುವ ಮೂಲಕ ಇತಿಹಾಸ ಸೃಷ್ಟಿಸಿದ್ದ ಕಮಲಾ ಹ್ಯಾರಿಸ್ ಮತ್ತು ಅಧ್ಯಕ್ಷ ಜೋ ಬೈಡನ್ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದಿದೆಯಾ ಎಂಬುದೊಂದು ಅನುಮಾನ ಹುಟ್ಟುಹಾಕುವಂತ ವರದಿಯನ್ನು ಸಿಎನ್ಎನ್ ಅಂತಾರಾಷ್ಟ್ರೀಯ ಮಾಧ್ಯಮ ಪ್ರಕಟ ಮಾಡಿದೆ. ಹ್ಯಾರಿಸ್ ಸಾರ್ವಜನಿಕರೊಂದಿಗೆ ಸಂಪರ್ಕ ಬೆಳೆಸಿಕೊಂಡಿದ್ದಾರೆ. ಈ ಮೂಲಕ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತ ಹ್ಯಾರಿಸ್ ತಮ್ಮ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇದರಿಂದ ಅಧ್ಯಕ್ಷ ಜೋ ಬೈಡನ್ ತಂಡ ಹತಾಶೆಗೆ ಒಳಗಾಗಿದ್ದು, ಬೇಕಂತಲೇ ಆಡಳಿತ ವಿಷಯದಲ್ಲಿ ಕಮಲಾ ಹ್ಯಾರಿಸ್ ಮತ್ತು ಅವರ ತಂಡದ ಸಿಬ್ಬಂದಿಯನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಉಪಾಧ್ಯಕ್ಷೆ ಹ್ಯಾರಿಸ್ ಬೆಂಬಲಿಗರು, ಅವರ ಆಪ್ತರು ಆರೋಪ ಮಾಡುತ್ತಿದ್ದಾರೆ ಎಂದು ಸಿಎನ್ಎನ್ ವರದಿಯಲ್ಲಿ ಉಲ್ಲೇಖಿಸಿದೆ.
ಬೈಡನ್ ಮತ್ತು ಹ್ಯಾರಿಸ್ ತಂಡದ ನಡುವೆ ಅಂತರ ಶುರುವಾಗಿದೆ ಎಂಬ ಬಗ್ಗೆ ಅಮೆರಿಕ ಶ್ವೇತಭವನದ ಸಿಬ್ಬಂದಿಯೇ ಮಾಹಿತಿ ಬಹಿರಂಗಪಡಿಸಿದ್ದಾಗಿ ಸಿಎನ್ಎನ್ ತನ್ನ ಸುದೀರ್ಘ ಲೇಖನದಲ್ಲಿ ಹೇಳಿದೆ. ಸಣ್ಣಪುಟ್ಟ ಕಿರಿಕಿರಿಗಳು ಹೆಚ್ಚುತ್ತಿವೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದೂ ವೈಟ್ಹೌಸ್ ಸಿಬ್ಬಂದಿ ಹೇಳಿಕೊಂಡಿದ್ದಾರೆ. ಈ ಮಧ್ಯೆ ಶ್ವೇತ ಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ ಟ್ವೀಟ್ ವೈರಲ್ ಆಗುತ್ತಿದೆ. ಅದರಲ್ಲಿ ಅವರು, ಉಪಾಧ್ಯಕ್ಷರು ಕೇವಲ ಆಡಳಿತದ ವಿಚಾರದಲ್ಲಿ ಪ್ರಮುಖ ಪಾಲುದಾರರಷ್ಟೇ ಅಲ್ಲ. ದೇಶದಲ್ಲಿರುವ ಮತದಾನದ ಹಕ್ಕು, ವಲಸೆ ಸಮಸ್ಯೆಗಳಂಥ ಸವಾಲುಗಳನ್ನು ಎದುರಿಸಲು ಸಿದ್ಧರಾಗಿರುವ ದಿಟ್ಟ ನಾಯಕರೂ ಹೌದು ಎಂದು ಹೇಳಿಕೊಂಡಿದ್ದಾರೆ. ಹೀಗೆ ಉಪಾಧ್ಯಕ್ಷರನ್ನು ಸಮರ್ಥನೆ ಮಾಡಿಕೊಳ್ಳುವ ಈ ಟ್ವೀಟ್, ಬೈಡನ್ ಮತ್ತು ಹ್ಯಾರಿಸ್ ನಡುವಿನ ಆಂತರಿಕ ಸ್ಪರ್ಧೆಗೆ ಪುಷ್ಟಿ ನೀಡುವಂತಿದೆ.
ಅಫ್ಘಾನ್ ವಿಚಾರದಲ್ಲಿ ನಿರ್ಲಕ್ಷ್ಯ ಆಗಸ್ಟ್ನಲ್ಲಿ ಅಫ್ಘಾನಿಸ್ತಾನದಿಂದ ಯುಎಸ್ ತನ್ನ ಸೇನೆಯನ್ನು ಸಂಪೂರ್ಣವಾಗಿ ವಾಪಸ್ ಪಡೆಯಿತು. ಆದರೆ ಈ ವಿಚಾರದ ಬಗ್ಗೆ ನನ್ನೊಂದಿಗೆ ಸರಿಯಾಗಿ ಸಮಾಲೋಚನೆ ನಡೆಸಲಿಲ್ಲ ಎಂದು ಕಮಲಾ ಹ್ಯಾರಿಸ್ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ. ಮುಂದಿನ ಅವಧಿಗೆ ಅಧ್ಯಕ್ಷೆಯಾಗಲು ಕಮಲಾ ಹ್ಯಾರಿಸ್ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಅಧ್ಯಕ್ಷ ಜೋ ಬೈಡನ್ ಮತ್ತು ತಂಡಕ್ಕೆ ಇದು ಸಹ್ಯವಾಗುತ್ತಿಲ್ಲ ಎಂಬ ಮಾತುಗಳು ಶ್ವೇತಭವನದಿಂದ ಕೇಳಿಬರುತ್ತಿದೆ.
ಇದನ್ನೂ ಓದಿ: ‘ನನ್ನ ತಮ್ಮನಿಗೆ ನನ್ನದೇ ದೃಷ್ಟಿ ಬಿತ್ತೇನೋ ಅನಿಸುತ್ತಿದೆ’; ‘ಪುನೀತ ನಮನ’ದಲ್ಲಿ ಅಳುತ್ತಲೇ ಮಾತನಾಡಿದ ಶಿವಣ್ಣ