ಉಕ್ರೇನಿನ ಪ್ರತ್ಯೇಕವಾದಿ ಸಂಘರ್ಷವನ್ನು ಕೊನೆಗಾಣಿಸಲು ಯಾವುದೇ ಶಾಂತಿ-ಸಂಧಾನ ಯಶಕಾಣದು: ವ್ಲಾದಿಮಿರ್ ಪುಟಿನ್

ಉಕ್ರೇನ್‌ನ ಗಡಿಗೆ ಒಂದು ದೊಡ್ಡ ಪಡೆಯನ್ನು ಕ್ರೆಮ್ಲಿನ್ ರವಾನಿಸಿದೆ ಎಂದು ಯುಎಸ್ ಗುಪ್ತಚರ ಸಂಸ್ಥೆ ಹೇಳಿದ್ದು 1,50,000 ಕ್ಕಿಂತ ಹೆಚ್ಚು ಸೈನಿಕರ ಪಡೆಯು ದಾಳಿ ಮಾಡಲು ಸಿದ್ಧವಾಗಿದೆ ಎಂದು ತಿಳಿಸಿದೆ.

ಉಕ್ರೇನಿನ ಪ್ರತ್ಯೇಕವಾದಿ ಸಂಘರ್ಷವನ್ನು ಕೊನೆಗಾಣಿಸಲು ಯಾವುದೇ ಶಾಂತಿ-ಸಂಧಾನ ಯಶಕಾಣದು: ವ್ಲಾದಿಮಿರ್ ಪುಟಿನ್
ಉಕ್ರೇನ್ ಗಡಿಭಾಗದಲ್ಲಿ ರಷ್ಯನ್ ಸೈನಿಕರ ಶಸ್ತ್ರಾಭ್ಯಾಸ
Follow us
| Updated By: shivaprasad.hs

Updated on: Feb 22, 2022 | 7:22 AM

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರು ಫ್ರಾನ್ಸ್, ಜರ್ಮನಿ ಮತ್ತು ಕೀವ್ ಜೊತೆಗಿನ 2015 ರ ಪ್ರಮುಖ ಯೋಜನೆಯು ಉಕ್ರೇನ್‌ನ ಪ್ರತ್ಯೇಕತಾವಾದಿ ಸಂಘರ್ಷವನ್ನು (Ukraine’s Separatist Conflict) ಪರಿಹರಿಸಲು ಸಾಧ್ಯವಾಗುತ್ತದೆ ಎಂದು ತನಗನಿಸುವುದಿಲ್ಲ ಎಂದು ಸೋಮವಾರ ಹೇಳಿದ್ದಾರೆ. ‘ಉಕ್ರೇನಿನ ಸೇನೆ ಮತ್ತು ದೇಶದ ಪೂರ್ವದಲ್ಲಿ ಮಾಸ್ಕೋ-ಪರ ಬಂಡುಕೋರರ ನಡುವಿನ ಹೋರಾಟವನ್ನು ಕೊನೆಗೊಳಿಸಲು ಬೆಲಾರಸ್ ರಾಜಧಾನಿಯಲ್ಲಿ ಅಂಗೀಕರಿಸಲಾಗಿದ್ದ 2015 ರ ಮಿನ್ಸ್ಕ್ ಶಾಂತಿ ಒಪ್ಪಂದ (Minsk Peace Accord) ಅನುಷ್ಠಾನಕ್ಕೆ ಬರುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ ಎಂಬ ಸಂಗತಿಯನ್ನು ನಾವು ಅರ್ಥಮಾಡಿಕೊಂಡಿದ್ದೇವೆ,’ ಎಂದು ಪುಟಿನ್ ತಮ್ಮ ಭದ್ರತಾ ಮಂಡಳಿಗೆ ತಿಳಿಸಿದ್ದಾರೆ. ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾದ ಸ್ವಂತ ಭದ್ರತೆಗೆ ಬೆದರಿಕೆ ಒಡ್ಡಲು ಉಕ್ರೇನ್‌ನೊಂದಿಗೆ ಮಾಸ್ಕೋಗಿರುವ ಕಲಹವನ್ನು ಬಳಸುತ್ತಿವೆ ಎಂದು ಪುಟಿನ್ ಎಚ್ಚರಿಸಿದರಲ್ಲದೆ ಎರಡು ಭಾಗವಾಗವಾಗಿರುವ ರಷ್ಯಾ-ಬೆಂಬಲಿತ ಪ್ರದೇಶಗಳ ಸ್ವಾತಂತ್ರ್ಯವನ್ನು ಮಾನ್ಯ ಮಾಡುವ ಸಂಗತಿಯನ್ನು ತಾವು ಪರಿಗಣಿಸುತ್ತಿರುವುದಾಗಿ ಹೇಳಿದರು.

ಪೂರ್ವ ಉಕ್ರೇನ್‌ನ ಡೊನೆಟ್ಸ್ಕ್ ಮತ್ತು ಲುಗಾನ್ಸ್ಕ್‌ನ ಪ್ರತ್ಯೇಕತಾವಾದಿ ಪ್ರದೇಶಗಳನ್ನು ಬಹಿರಂಗವಾಗಿ ಬೆಂಬಲಿಸುವುದು ಈಗಾಗಲೇ ಅಲುಗಾಡುತ್ತಿರುವ ಶಾಂತಿ ಯೋಜನೆಯನ್ನು ಪರಿಣಾಮಕಾರಿಯಾಗಿ ಕೊನೆಗೊಳಿಸುತ್ತದೆ ಮತ್ತು ರಷ್ಯಾದ ಆಕ್ರಮಣದ ಸಾಧ್ಯತೆಯನ್ನು ನಾಟಕೀಯವಾಗಿ ಹೆಚ್ಚಿಸುತ್ತದೆ ಎಂಬ ಆತಂಕ ಪ್ರತಿದಿನ ಹೆಚ್ಚುತ್ತಿದೆ.

ರಷ್ಯಾದ ಭೂಪ್ರದೇಶಕ್ಕೆ ನುಸುಳಿದ ಐದು ಉಕ್ರೇನಿಯನ್ ವಿಧ್ವಂಸಕರನ್ನು ತನ್ನ ಪಡೆಗಳು ತಡೆಹಿಡಿದು ಕೊಂದಿದ್ದು ಮತ್ತು ಉಕ್ರೇನ್ ಸೇನೆ ರಷ್ಯಾ ಗಡಿಯೊಳಗಿರುವ ಪೋಸ್ಟ್‌ ಮೇಲೆ ಶೆಲ್ ದಾಳಿ ಮಾಡಿರುವುದನ್ನು ಕೀವ್ ನಿರಾಕರಿಸಿರುವುದು- ಮಾಸ್ಕೋ ಅಂಥ ಕಾರ್ಯಾಚರಣೆಗೆ ಈಗಾಗಲೇ ಅಡಿಪಾಯ ಹಾಕುತ್ತಿರುವಂತೆ ಭಾಸವಾಗುತ್ತಿದೆ.

ಉಕ್ರೇನ್‌ನ ಗಡಿಗೆ ಒಂದು ದೊಡ್ಡ ಪಡೆಯನ್ನು ಕ್ರೆಮ್ಲಿನ್ ರವಾನಿಸಿದೆ ಎಂದು ಯುಎಸ್ ಗುಪ್ತಚರ ಸಂಸ್ಥೆ ಹೇಳಿದ್ದು 1,50,000 ಕ್ಕಿಂತ ಹೆಚ್ಚು ಸೈನಿಕರ ಪಡೆಯು ದಾಳಿ ಮಾಡಲು ಸಿದ್ಧವಾಗಿದೆ ಎಂದು ತಿಳಿಸಿದೆ.

ಎನ್ ಬಿ ಸಿಗೆ ನೀಡಿರುವ ಸಂದರ್ಶನವೊಂದರಲ್ಲಿ ಯುಎಸ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲಿವಾನ್ ಅವರು, ರಷ್ಯಾ ತನ್ನ ನೆರೆರಾಷ್ಟ್ರದ ಮೇಲೆ ಅತಿಕ್ರಮಣ ನಡೆಸಿ ಅಲ್ಲಿ ಬೀಡು ಬಿಟ್ಟರೆ, ಅದೊಂದು ಘೋರ ಹಿಂಸಾತ್ಮಕ ಕಾರ್ಯಾಚರಣೆ ಅನಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ.

ಉಕ್ರೇನಿನ ಜನರನ್ನು ಹತ್ತಿಕ್ಕಿಲು, ಅವರನ್ನು ದಮನ ಮಾಡಲು ಮತ್ತು ಅವರಿಗೆ ಘಾಸಿಯನ್ನಂಟು ಮಾಡಲು ರಷ್ಯಾ ನಡೆಸಿದ ದಾಳಿ ಎಂದು ಆ ಅತಿಕ್ರಮಣ ಕರೆಸಿಕೊಳ್ಳಲಿದೆ ಎಂದು ಸುಲಿವಾನ್ ಹೇಳಿದ್ದಾರೆ.

ಉಕ್ರೇನ್ ಮೇಲೆ ದಾಳಿ ನಡೆಸುವ ಇಲ್ಲವೇ ಆದರ ಭೂಭಾಗವನ್ನು ಅತಿಕ್ರಮಣ ನಡೆಸುವ ದುಸ್ಸಾಹಸಕ್ಕಿಳಿದರೆ, ಆರ್ಥಿಕ ದಿಗ್ಭಂಧನಗಳನ್ನು ಎದುರಿಸಬೇಕಾಗುತ್ತದೆ ಎಂದು ಪಾಶ್ಚಾತ್ಯ ರಾಷ್ಟ್ರಗಳು ರಷ್ಯಾವನ್ನು ಎಚ್ಚರಿಸಿವೆ.

ಉಕ್ರೇನಿನ ಕ್ರಿಮಿಯಾ ಪ್ರಾಂತ್ಯವನ್ನು ರಷ್ಯಾ 2014 ರಲ್ಲಿ ಅತಿಕ್ರಮಿಸಿಕೊಂಡಿದೆ ಮತ್ತು ಅದರಿಂದ ಬೆಂಬಲಿತ ಪ್ರತ್ಯೇಕತಾವಾದಿ ಗುಂಪುಗಳು ಡೊನೆಟ್ಸ್ಕ್ ಮತ್ತು ಲುಗಾನ್ಸ್ಕ್‌ ಪ್ರಾಂತ್ಯಗಳಲ್ಲಿ ಬೀಡುಬಿಟ್ಟಿವೆ.

ಇದನ್ನೂ ಓದಿ:   ಉಕ್ರೇನ್​​ನೊಂದಿಗೆ ತಲೆದೋರಿರುವ ಪ್ರಕ್ಷುಬ್ಧ ಸ್ಥಿತಿಯನ್ನು ಶಮನಗೊಳಿಸಲು ಪಾಶ್ಚಾತ್ಯ ದೇಶಗಳೊಂದಿಗೆ ಚರ್ಚೆಗೆ ಸಿದ್ಧ: ರಷ್ಯಾ ಅಧ್ಯಕ್ಷ ಪುಟಿನ್