ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ ಭಾರತ ಮೂಲದ ಅರೋರಾ ಆಕಾಂಕ್ಷಾ

Arora Akanksha: 34ರ ಹರೆಯದ ಆಕಾಂಕ್ಷಾ ಟ್ವಿಟರ್, ಟಿಕ್ ಟಾಕ್ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ #AroraforSG ಎಂಬ ಹ್ಯಾಷ್ ಟ್ಯಾಗ್ ಬಳಸಿ UNOW ಎಂಬ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದಾರೆ.

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ ಭಾರತ ಮೂಲದ ಅರೋರಾ ಆಕಾಂಕ್ಷಾ
ಅರೋರಾ ಆಕಾಂಕ್ಷಾ
Follow us
ರಶ್ಮಿ ಕಲ್ಲಕಟ್ಟ
|

Updated on:Feb 27, 2021 | 6:47 PM

ದೆಹಲಿ: ವಿಶ್ವಸಂಸ್ಥೆಯ ಅಭಿವೃದ್ಧಿ ಯೋಜನೆ (ಯುಎನ್​ಡಿಪಿ) ಲೆಕ್ಕಪರಿಶೋಧಕ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಮೂಲದ ಅರೋರಾ ಆಕಾಂಕ್ಷಾ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಆ್ಯಂಟೋನಿಯೋ ಗುಟೆರಸ್ ಅವರ ಅವಧಿ ಡಿಸೆಂಬರ್ 2021ಕ್ಕೆ ಅಂತ್ಯಗೊಳ್ಳಲಿದ್ದು ಮುಂದಿನ ಅವಧಿಗೂ ಗುಟೆರಸ್ ಸ್ಪರ್ಧಿಸಲಿದ್ದಾರೆ. 34ರ ಹರೆಯದ ಆಕಾಂಕ್ಷಾ ಟ್ವಿಟರ್, ಟಿಕ್ ಟಾಕ್ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ #AroraforSG ಎಂಬ ಹ್ಯಾಷ್ ಟ್ಯಾಗ್ ಬಳಸಿ UNOW ಎಂಬ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದಾರೆ.

ಫೆಬ್ರವರಿ 9ರಂದು ಸಾಮಾಜಿಕ ಮಾಧ್ಯಮಗಳಲ್ಲಿ ಆಕಾಂಕ್ಷಾ ಪ್ರಚಾರ ಆರಂಭಿಸಿದ್ದು, ಪ್ರತಿಸ್ಪರ್ಧಿ ಗುಟೆರಸ್ ಯಾವುದೇ ಭರವಸೆ ಪೂರೈಸಿಲ್ಲ. ವಿಶ್ವಸಂಸ್ಥೆ ಉತ್ತಮ ನಾಯಕತ್ವವನ್ನು ಬಯಸುತ್ತದೆ ಎಂದು ಹೇಳಿದ್ದಾರೆ. ಶನಿವಾರ ‘ದಿ ಪ್ರಿಂಟ್’ ಜತೆ ಮಾತನಾಡಿದ ಆಕಾಂಕ್ಷಾ, ಮುಂದಿನ ವಾರ ನಾನು ವಿಶೇಷ ರಜೆಗೆ ಅರ್ಜಿ ಹಾಕಲಿದ್ದೇನೆ. ಈ ಹಿಂದೆ ಪ್ರಧಾನ ಕಾರ್ಯದರ್ಶಿ ಎರಡನೇ ಅವಧಿಗಾಗಿ ಪ್ರಚಾರ ಮಾಡುವಾಗ ಅವರು ಆ ಸ್ಥಾನದಿಂದ ಕೆಳಗಿಳಿಯುವುದಿಲ್ಲ. ಇದು ಅಲ್ಲಿನ ಸಿಬ್ಬಂದಿಗಳಿಗೂ ಅನ್ವಯವಾಗುತ್ತದೆ ಎಂದಿದ್ದಾರೆ.

ಆಕಾಂಕ್ಷಾ ಅವರು ಗುಟೆರಸ್ ಅವರ ಆರ್ಥಿಕ ಅಭಿವೃದ್ಧಿ ಯೋಜನೆ ತಂಡದಲ್ಲಿದ್ದರು. ತನ್ನ ಕತೆ  ‘ಡೇವಿಡ್ ಮತ್ತು ಗೋಲಿಯತ್’ ನಂತಿದೆ. ನನ್ನ ಸ್ಥಾನದಲ್ಲಿರುವವರು ಅದಕ್ಕಿಂತ ಮೇಲಿನ ಹುದ್ದೆಗೆ ಸ್ಪರ್ಧಿಸುವಂತಿಲ್ಲ. ನಮ್ಮ ಸರದಿಗಾಗಿ ಕಾಯಬೇಕು, ಕೆಲಸಕ್ಕೆ ಹೋಗಬೇಕು, ತಲೆ ತಗ್ಗಿಸಿ ಎಲ್ಲವನ್ನೂ ಒಪ್ಪಿಕೊಳ್ಳಬೇಕು ಎಂದು ತಮ್ಮ ಪ್ರಚಾರ ವಿಡಿಯೊದಲ್ಲಿ ಹೇಳಿದ್ದಾರೆ.

ಪ್ರಧಾನ ಕಾರ್ಯದರ್ಶಿಯು ವಿಶ್ವಸಂಸ್ಥೆಯ ಮುಖ್ಯ ಆಡಳಿತ ಅಧಿಕಾರಿಯಾಗಿರುತ್ತಾರೆ. 75 ವರ್ಷಗಳ ಇತಿಹಾಸದಲ್ಲಿ ಯಾವುದೇ ಮಹಿಳೆ ಈ ಸ್ಥಾನವನ್ನು ಅಲಂಕರಿಸಿಲ್ಲ.ವಿಶ್ವಸಂಸ್ಥೆಯ 9ನೇ ಪ್ರಧಾನ ಕಾರ್ಯದರ್ಶಿಯಾಗಿರುವ ಗುಟೆರಸ್ ಅವರ ಅಧಿಕಾರವಧಿ ಡಿಸೆಂಬರ್ 31ರಂದು ಮುಗಿಯಲಿದ್ದು, ಮುಂದಿನ ಅವಧಿಗೆ ಸ್ಪರ್ಧಿಸಲಿದ್ದೇನೆ ಎಂದು ಕಳೆದ ತಿಂಗಳಲ್ಲಿ ಅವರು ಹೇಳಿದ್ದರು.

ಯಾರು ಈ ಅರೋರಾ ಆಕಾಂಕ್ಷಾ?

ಅರೋರಾ ಆಕಾಂಕ್ಷಾ -ತಮ್ಮ ಸರ್​ನೇಮ್ ಅರೋರಾವನ್ನು ಹೆಸರಿನ ಮುಂದೆ ಇಟ್ಟಿರುವ ಈ ಯುವತಿ ಭಾರತದ ಸಾಗರೋತ್ತರ ಪೌರತ್ವ ಹೊಂದಿದ್ದಾರೆ. ವಿಶ್ವಸಂಸ್ಥೆಯಲ್ಲಿ ಬೆಳವಣಿಗೆಗಳ ಬಗ್ಗೆ ಸುದ್ದಿ ಮಾಡುವ ಪಾಸ್ ಬ್ಲೂ ವೆಬ್ ಸೈಟ್ ಪ್ರಕಾರ ಆಕಾಂಕ್ಷಾ ಕೆನಡಾ ಪಾಸ್ ಪೋರ್ಟ್ ಹೊಂದಿದ್ದಾರೆ.

ಈಕೆ ಹುಟ್ಟಿದ್ದು ಭಾರತದಲ್ಲಿ. ದೇಶ ವಿಭಜನೆಯ ನಂತರ ಈಕೆಯ ಕುಟುಂಬ ಪಾಕಿಸ್ತಾನದಿಂದ ಬಂದು ಭಾರತದಲ್ಲಿ ನೆಲೆಸಿತ್ತು. ಪೋಷಕರು ವೈದ್ಯರಾಗಿದ್ದಾರೆ. ಕೆನಡಾದಲ್ಲಿ ನೆಲೆಸುವ ಮುನ್ನ, ಈಕೆಗೆ 6 ವರ್ಷವಿರುವಾಗ ಇವರ ಕುಟುಂಬ ಸೌದಿ ಅರೇಬಿಯಾಗೆ ಹೋಗಿ ನೆಲೆಸಿದ್ದರು. ಈಕೆಯ ಲಿಂಕ್​ಡ್ ಇನ್ ಪ್ರೊಫೈಲ್ ಮಾಹಿತಿ ಪ್ರಕಾರ 2009ರಲ್ಲಿ ಯಾರ್ಕ್ ವಿಶ್ವವಿದ್ಯಾಲಯದಿಂದ ಈಕೆ ಅಡ್ಮಿನಿಸ್ಟ್ರೇಟಿವ್ ಸ್ಟಡೀಸ್ ನಲ್ಲಿ ಪದವಿ ಪಡೆದಿದ್ದಾರೆ. Ernst & Young ಕಂಪನಿಯಲ್ಲಿ ಸಹಾಯಕಿಯಾಗಿ ದುಡಿದ ನಂತರ ಟೊರಂಟೊ ವಿಶ್ವವಿದ್ಯಾಯದಲ್ಲಿ ಪದವಿ ತತ್ಸಮಾನದ ಅಡ್ವಾನ್ಸ್ ಆಡಿಟಿಂಗ್ ಕೋರ್ಸ್ ಮಾಡಿದ್ದಾರೆ.

PricewaterhouseCoopers (PwC) ಎಂಬ ಸಂಸ್ಥೆಯಲ್ಲಿ ನಾಲ್ಕು ವರ್ಷ ಕೆಲಸ ಮಾಡಿದ ಆಕಾಂಕ್ಷಾ ಚಾರ್ಟೆಡ್ ಪ್ರೊಫೆಷನಲ್ ಅಕೌಂಟೆಂಟ್ಸ್ ಆಫ್ ಕೆನಡಾ (ಸಿಪಿಎ ಕೆನಡಾ)ದಲ್ಲಿ ಕೆಲಸ ಮಾಡಿದ್ದಾರೆ. 2016 ಡಿಸೆಂಬರ್​ನಲ್ಲಿ ಇವರು ವಿಶ್ವಸಂಸ್ಥೆಗೆ ಸೇರಿದ್ದಾರೆ. 2018- 19ರಲ್ಲಿ ಕೊಲಂಬಿಯಾ ಯುನಿವರ್ಸಿಟಿಯಿಂದ ಪಬ್ಲಿಕ್ ಅಡ್ಮಿನಿಸ್ಟ್ರೇಷನ್​ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ನ್ಯೂಯಾರ್ಕ್​ನಲ್ಲಿ ನೆಲೆಸಿರುವ ಇವರು ಆಫ್ರಿಕಾಗಿರುವ ವಿಶ್ವಸಂಸ್ಥೆಯ ಯೋಜನೆಯಲ್ಲಿ ಕೆಲಸ ಮಾಡಿದ್ದಾರೆ. ಯುಎನ್‌ಡಿಪಿಯ ಲೆಕ್ಕಪರಿಶೋಧಕ ಸಂಯೋಜಕರಾಗಿ, ವಿಶ್ವಸಂಸ್ಥೆಯ ಹಣಕಾಸು ನಿಯಮಗಳು ಮತ್ತು ನಿಯಮಗಳನ್ನು ನವೀಕರಿಸುವುದು, ಹಣಕಾಸು ನೀತಿಗಳು ಮತ್ತು ಕಾರ್ಯವಿಧಾನಗಳನ್ನು ಪರಿಷ್ಕರಿಸುವಲ್ಲಿ ಆಕಾಂಕ್ಷಾ ತೊಡಗಿಸಿಕೊಂಡಿದ್ದಾರೆ.

Published On - 6:43 pm, Sat, 27 February 21