ದಕ್ಷಿಣ ಆಫ್ರಿಕಾ (South Africa)ದಲ್ಲಿ ಮಾಜಿ ಅಧ್ಯಕ್ಷ ಜಾಕೋಬ್ ಜುಮಾ (jacob zuma) ರನ್ನು ಜೈಲಿಗೆ ಹಾಕಿದ ಬೆನ್ನಲ್ಲೇ ಬಹುದೊಡ್ಡ ಮಟ್ಟದಲ್ಲಿ ಹಿಂಸಾಚಾರ ಬುಗಿಲೆದ್ದಿದೆ. ಅದೆಷ್ಟೋ ಜನರ ಜೀವವೂ ಹೋಗಿದೆ. ಜುಮಾ ಬೆಂಬಲಿಗರು ಸಿಕ್ಕಸಿಕ್ಕ ಮಾಲ್ಗಳು, ಅಂಗಡಿಗಳಿಗೆ ನುಗ್ಗಿ ದಾಂಧಲೆ ನಡೆಸುತ್ತಿದ್ದಾರೆ. ಜೊಹಾನ್ಸ್ಬರ್ಗ್ ಸೇರಿ ಹಲವು ನಗರಗಳು ಹೊತ್ತಿ ಉರಿಯುತ್ತಿವೆ. ಈ ಬೆನ್ನಲ್ಲೇ ದಕ್ಷಿಣ ಆಫ್ರಿಕಾದಲ್ಲಿರುವ ಭಾರತೀಯರ ಸುರಕ್ಷತೆ ಮತ್ತು ಭದ್ರತೆ ಬಗ್ಗೆ ನಮ್ಮ ಕೇಂದ್ರ ಸರ್ಕಾರ ಆತಂಕ ವ್ಯಕ್ತಪಡಿಸಿದೆ. ಈ ಕುರಿತಾಗಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್. ಜೈಶಂಕರ್ ಅವರು ದಕ್ಷಿಣ ಆಫ್ರಿಕಾದ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ನಲೇಡಿ ಪಾಂಡೋರ್ ಜತೆ ಮಾತುಕತೆ ನಡೆಸಿದ್ದಾರೆ.
ಇದೀಗ ದಕ್ಷಿಣ ಆಫ್ರಿಕಾದಲ್ಲಿ ಎದ್ದಿರುವ ಹಿಂಸಾಚಾರವನ್ನು ಶೀಘ್ರದಲ್ಲೇ ನಿಯಂತ್ರಿಸಿ ಶಾಂತಿ ಮರುಸ್ಥಾಪನೆ ಮಾಡಲಾಗುವುದು. ಕಾನೂನು ಮತ್ತು ಸುವ್ಯವಸ್ಥೆ ಜಾರಿಗೊಳಿಸಲು ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ ಎಂದು ದಕ್ಷಿಣ ಆಫ್ರಿಕಾ ವಿದೇಶಾಂಗ ಸಚಿವರು ಭರವಸೆ ನೀಡಿದ್ದಾರೆಂದು ಸಚಿವ ಜೈಶಂಕರ್ ಟ್ವೀಟ್ ಮಾಡಿ ತಿಳಿಸಿದ್ದಾರೆ. ಈ ಮಧ್ಯೆ ವಿದೇಶಾಂಗ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಸಂಜಯ್ ಭಟ್ಟಾಚಾರ್ಯ, ಭಾರತದಲ್ಲಿರುವ ದಕ್ಷಿಣ ಆಫ್ರಿಕಾದ ಹೈಕಮೀಷನರ್ ಜೋಯೆಲ್ ಜೋಯಲ್ ಸಿಬುಸಿಸೊ ಎನ್ಡೆಬೆಲೆಯವರನ್ನು ಭೇಟಿಯಾಗಿ, ಅವರ ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದ ಕುರಿತು ಚರ್ಚಿಸಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ದಾಂಧಲೆಯಲ್ಲಿ ಸಿಲುಕಿ ಕಷ್ಟಪಡುತ್ತಿರುವ ಭಾರತೀಯ ಮೂಲದವರು ಸಹಾಯಕ್ಕಾಗಿ ಮನವಿ ಮಾಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದ್ದು, ಅವರ ಸಹಾಯಕ್ಕೆ ಭಾರತದ ವಿದೇಶಾಂಗ ವ್ಯವಹಾರಗಳ ಇಲಾಖೆ ಮುಂದಾಗಿದೆ. ಜಾಕೋಬ್ ಜುಮಾ (79) ಅಧ್ಯಕ್ಷರಾಗಿದ್ದಾಗ ನಡೆದಿದ್ದ ಭ್ರಷ್ಟಾಚಾರದ ಬಗ್ಗೆ ಸಾಕ್ಷಿ ಒದಗಿಸಲು ಕೋರ್ಟ್ ಆದೇಶ ನೀಡಿತ್ತು. ಅದನ್ನು ಉಲ್ಲಂಘಿಸಿದ ಜುಮಾರಿಗೆ 15 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅತ್ತ ಅವರನ್ನು ಜೈಲಿಗೆ ಹಾಕುತ್ತಿದ್ದಂತೆ ಶುರುವಾದ ಪ್ರತಿಭಟನೆ ಈಗಂತೂ ಹಿಂಸಾತ್ಮಕ ರೂಪ ತಳೆದು ತೀವ್ರ ಆತಂಕ ಸೃಷ್ಟಿಸಿದೆ.
ಗಲಭೆ ನಡೆಯುತ್ತಿರುವ ಪ್ರದೇಶಗಳಾದ ಡರ್ಬನ್, ಪೀಟರ್ಮರಿಟ್ಜ್ಬರ್ಗ್, ಜೊಹಾನ್ಸ್ಬರ್ಗ್ಗಳಲ್ಲಿ ಭಾರತೀಯರೇ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಭಾರತೀಯರು ಜಾಸ್ತಿ ಇರುವ ಈ ಪ್ರದೇಶಗಳನ್ನೇ ಗಲಭೆಕೋರರು ಟಾರ್ಗೆಟ್ ಮಾಡುತ್ತಿದ್ದಾರೆ. ಭಾರತೀಯ ವಲಸಿಗರು, ಭಾರತೀಯ ಒಡೆತನದ ವ್ಯವಹಾರಗಳು, ಭಾರತೀಯ ಮೂಲದ ದಕ್ಷಿಣ ಆಫ್ರಿಕನ್ನರನ್ನೇ ಗುರಿಯಾಗಿಸಿಕೊಂಡು ಬೆಂಬಲಿಗರು ದಾಳಿ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಈ ಹಿಂಸಾಚಾರದಲ್ಲಿ ಸದ್ಯ 70 ಮಂದಿ ಮೃತಪಟ್ಟಿದ್ದು, ಸಣ್ಣಪುಟ್ಟ ಅಂಗಡಿಗಳು, ರೇಡಿಯೋ ಕೇಂದ್ರಗಳು, ಮಾಲ್ಗಳೆಲ್ಲ ಧ್ವಂಸಗೊಂಡಿವೆ. ಸದ್ಯ ದಕ್ಷಿಣ ಆಫ್ರಿಕಾದಲ್ಲಿ ಪರಿಸ್ಥಿತಿ ತೀರ ಹದಗೆಟ್ಟಿದ್ದು, ಶಾಂತಿ ಮರುಸ್ಥಾಪನೆಗೆ ಸರ್ಕಾರ ಪ್ರಯತ್ನ ಮಾಡುತ್ತಿದೆ.
1994ರಲ್ಲಿ ಬಿಳಿಯ ಅಲ್ಪಸಂಖ್ಯಾತರ ಆಡಳಿತ ಕೊನೆಗೊಂಡಾಗಿನಿಂದಲೂ ದಕ್ಷಿಣ ಆಫ್ರಿಕಾದಲ್ಲಿ ಬಿಕ್ಕಟ್ಟು ತಪ್ಪುತ್ತಿಲ್ಲ. ಈ ಬಾರಿಯಂತೂ ಅತಿದೊಡ್ಡ ಪ್ರಮಾಣದಲ್ಲಿ ಹಿಂಸಾಚಾರ ನಡೆಯುತ್ತಿದ್ದು, ಈಗಾಗಲೇ ಸುಮಾರು 200 ಮಾಲ್ಗಳನ್ನು ಲೂಟಿ ಮಾಡಲಾಗಿದೆ. 600ಕ್ಕೂ ಹೆಚ್ಚು ಚಿಕ್ಕಪುಟ್ಟ ಅಂಗಡಿಗಳನ್ನೆಲ್ಲ ಸುಡಲಾಗಿದೆ. 200ಕ್ಕೂ ಹೆಚ್ಚು ಲಿಕ್ಕರ್ ಶಾಪ್ಗಳ ಸರ್ವನಾಶಗೊಂಡಿವೆ.
ರೇಡಿಯೋ ಕೇಂದ್ರ ಧ್ವಂಸ, ಕಳುವು
ಗೌಟಂಗ್ ಪ್ರಾಂತ್ಯದ ಅಲೆಕ್ಸಾಂಡ್ರಾ ಪಟ್ಟಣದಲ್ಲಿ ಕಳೆದ 27ವರ್ಷಗಳಿಂದಲೂ ಕಾರ್ಯನಿರ್ವಹಿಸುತ್ತಿದ್ದ ಸ್ಥಳೀಯ ರೇಡಿಯೋ ಕೇಂದ್ರವನ್ನೂ ಲೂಟಿ ಮಾಡಿರುವ ದರೋಡೆಕೋರರು, ಅದರಲ್ಲಿದ್ದ ಅಪಾರ ಮೌಲ್ಯದ ಉಪಕರಣಗಳನ್ನೆಲ್ಲ ಕದ್ದೊಯ್ದಿದ್ದಾರೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ರಕ್ಷಣಾ ಪಡೆಗಳು ಕಾರ್ಯನಿರತವಾಗಿದ್ದು, ಸುಮಾರು 25 ಸಾವಿರ ಸೈನಿಕರು ಕಾರ್ಯಾಚರಣೆಗೆ ಇಳಿದಿದ್ದಾರೆ.
ಇದನ್ನೂ ಓದಿ: ದಕ್ಷಿಣ ಆಫ್ರಿಕಾ ಮಾಜಿ ಅಧ್ಯಕ್ಷನನ್ನು ಜೈಲಿಗೆ ಹಾಕಿದ ಬೆನ್ನಲ್ಲೇ ಭುಗಿಲೆದ್ದ ಹಿಂಸಾಚಾರ; 10 ಮಂದಿ ಸಾವು, 490 ಜನರ ಬಂಧನ
Attacks on Indians in South Africa Dr S Jaishankar spoke to his South African counterpart Dr Naledi Pandor