ಜರ್ಮನಿಯಲ್ಲಿ ಹಠಾತ್ ತಲೆದೋರಿದ ಪ್ರವಾಹಕ್ಕೆ ಕನಿಷ್ಟ 42 ಬಲಿ, ಅನೇಕರು ಕಾಣೆ, ರಕ್ಷಣಾ ಕಾರ್ಯಾಚರಣೆ ಶ್ಲಾಘಿಸಿದ ಮರ್ಕೆಲ್
ಜರ್ಮನಿ ಪಶ್ಚಿಮ ಭಾಗದ ಯುಕರ್ಚಿನ್ನಲ್ಲಿ 8 ಜನ ಸತ್ತಿದ್ದಾರೆ ಮತ್ತು ರಕ್ಷಣಾ ಕಾರ್ಯ ಜಾರಿಯಲ್ಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಫೋನ್ ಮತ್ತು ಇಂಟರ್ನೆಟ್ ಸಂಪರ್ಕಗಳು ಕಡಿದು ಹೋಗಿರುವುದರಿಂದ ರಕ್ಷಣಾ ಕಾರ್ಯಾಚರಣೆ ವೇಗ ಪಡೆದುಕೊಳ್ಳುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಜರ್ಮನಿಯ ಕೆಲ ಭಾಗಗಳಲ್ಲಿ ಸುರಿದ ಭಾರೀ ಮಳೆಯಿಂದ ಹಠಾತ್ ಪ್ರವಾಹಗಳು ಉಂಟಾಗಿ ಕನಿಷ್ಟ 42 ಜನನ ಮೃತಪಟ್ಟಿದ್ದು ಹಲವಾರು ಜನ ಕಾಣೆಯಾಗಿದ್ದಾರೆಂದು ಅಲ್ಲಿನ ಪ್ರಾದೇಶಿಕ ಅಧಿಕಾರಿಗಳು ಹೇಳಿದ್ದಾರೆ. ಧಾರಾಕಾರ ಮಳೆ ಅನೇಕ ಮನೆಗಳನ್ನು ಧ್ವಂಸಗೊಳಿಸಿದೆ ಮತ್ತು ಸಾರಿಗೆ ವ್ಯವಸ್ಥೆಗೆ ತೀವ್ರ ಅಡಚಣೆ ಉಂಟು ಮಾಡಿದೆ.
ರೈನ್ಲ್ಯಾಂಡ್-ಪ್ಯಾಲಾಟಿನೇಟ್ ರಾಜ್ಯದ ಅವೀಲರ್ ಎಂಬ ಪ್ರದೇಶದಲ್ಲಿ 18 ಜನ ಸತ್ತಿದ್ದಾರೆ ಮತ್ತು ಹತ್ತಾರು ಜನ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಪ್ರದೇಶದಲ್ಲಿ ಹರಿಯುವ ಅಹ್ ನದಿಯು ತುಂಬಿ ಹರಿದಿದ್ದರಿಂದ ನದಿ ತೀರದಲ್ಲಿದ್ದ ಮನೆಗಳಿಗೆ ನೀರು ನುಗ್ಗಿ ಸುಮಾರು 6 ಮನೆಗಳು ಧ್ವಂಸಗೊಂಡಿವೆ. ಅಧಿಕಾರಿಗಳ ಪ್ರಕಾರ ಬಾನ್ ನಗರದ ದಕ್ಷಿಣ ಬಾಗಕ್ಕಿರುವ ಯುಕರ್ಚಿನ್ ಪ್ರಾಂತ್ಯದಲ್ಲಿ 15 ಜನ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಈ ಭಾಗದಲ್ಲಿ ವಾಸವಾಗಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತಿಳಿಸಲಾಗಿದೆ.
‘ಜನ ಸತ್ತಿದ್ದಾರೆ ಮತ್ತು ಕೆಲವರು ಕಾಣೆಯಾಗಿದ್ದಾರೆ, ಇನ್ನೂ ಅನೇಕ ಜನ ಅಪಾಯದಲ್ಲಿದ್ದಾರೆ,’ ಎಂದು ರೈನ್ಲ್ಯಾಂಡ್-ಪ್ಯಾಲಾಟಿನೇಟ್ ರಾಜ್ಯದ ಗವರ್ನರ್ ಮಲು ಡ್ರೇಯರ್ ಹೇಳಿದ್ದಾರೆ. ‘ಇಂಥ ವಿಕೋಪವನ್ನು ನಾವು ಯಾವತ್ತೂ ನೋಡಿರಲಿಲ್ಲ, ಇದು ನಿಜಕ್ಕೂ ವಿಧ್ವಂಸಕಾರಿ’ ಎಂದು ಅವರು ಹೇಳಿದ್ದಾರೆ.
ಈ ಭಾಗದಲ್ಲಿ ಆಗಿರುವ ಹಾನಿಯ ಪ್ರಮಾಣ ಇನ್ನೂ ಅಂದಾಜಿಗೆ ಸಿಕ್ಕಿಲ್ಲ, ಹಲವಾರು ಗ್ರಾಮಗಳು ಪ್ರವಾಹದಿಂದ ಸಂಪರ್ಕ ಕಳೆದುಕೊಂಡಿವೆ ಮತ್ತು ಕೆಲ ಭಾಗಗಳಲ್ಲಿ ಭೂಕುಸಿತಗಳು ಸಂಭವಿಸುತ್ತಿವೆ. ರಸ್ತೆಗಳು ಸಂಚರಿಸಲಾಗದಷ್ಟು ಹಾಳಾಗಿವೆ.
ಜರ್ಮನಿ ಪಶ್ಚಿಮ ಭಾಗದ ಯುಕರ್ಚಿನ್ನಲ್ಲಿ 8 ಜನ ಸತ್ತಿದ್ದಾರೆ ಮತ್ತು ರಕ್ಷಣಾ ಕಾರ್ಯ ಜಾರಿಯಲ್ಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಫೋನ್ ಮತ್ತು ಇಂಟರ್ನೆಟ್ ಸಂಪರ್ಕಗಳು ಕಡಿದು ಹೋಗಿರುವುದರಿಂದ ರಕ್ಷಣಾ ಕಾರ್ಯಾಚರಣೆ ವೇಗ ಪಡೆದುಕೊಳ್ಳುತ್ತಿಲ್ಲ ಎಂದು ಅವರು ಹೇಳಿದ್ದಾರೆ.
‘ಬಾಂಬ್ ದಾಳಿ ನಡೆದಾಗ ಉಂಟಾಗುವ ಸ್ಥಿತಿಗಿಂತ ಈಗಿನ ಸ್ಥಿತಿ ಕಟ್ಟದ್ದಾಗಿದೆ,’ ಎಂದು ಬ್ಯಾಡ್ ಮ್ಯುನೆಸ್ಟಿರಿಫೆಲ್ ಎಂಬ ಪ್ರದೇಶದ ನಿವಾಸಿ ರೋಸಾ ಲಹಗ್ನರ್ ಎಎಫ್ಪಿ ನ್ಯೂಸ್ ಏಜನ್ಸಿಗೆ ಹೇಳಿದ್ದಾರೆ. ಐತಿಹಾಸಿಕ ಸ್ಪಾ ಟೌನ್ ಎಂದು ಕರೆಸಿಕೊಳ್ಳುವ ಈ ಪ್ರದೇಶದಲ್ಲಿ ಮೊದಲಿನ ಹಾಗೆ ವ್ಯಾಪಾರ ವಹಿವಾಟು ನಡೆಯಲು ವರ್ಷಗಳೇ ಹಿಡಿಯಲಿವೆ ಎಂದು ಆಕೆ ಹೇಳಿದ್ದಾರೆ.
ಇದೇ ಪ್ರದೇಶದಲ್ಲಿ ವಾಸವಾಗಿರುವ ಸೀಜ್ಪ್ರೈಡ್ ಬರ್ಗ್ ಹೆಸರಿನ ವ್ಯಕ್ತಿ ‘ಎರಡನೇ ಮಹಾಯುದ್ಧದಂಥ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ,’ ಎಂದು ಹೇಳಿದರು.
ಅಧಿಕಾರಿಗಳು ದೋಣಿ ಮತ್ತು ಹೆಲಿಕ್ಯಾಪ್ಟರ್ಗಳ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಸೇನೆಯ ಸುಮಾರು 200 ಯೋಧರನ್ನು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಲಾಗಿದೆ. ಜರ್ಮಿನಿಯ ಚಾನ್ಸ್ಲರ್ ಏಂಜೆಲಾ ಮರ್ಕೆಲ್ ಅವರು ಸ್ಥಿತಿಯ ಬಗ್ಗೆ ದಿಗ್ಭ್ರಮೆ ಮತ್ತು ಆಘಾತ ವ್ಯಕ್ತಪಡಿಸಿದ್ದಾರೆ.
‘ಈ ವಿನಾಶವನ್ನು ಅಷ್ಟೊಂದು ಜನ ಅನುಭವಿಸಬೇಕಾಗಿದೆಯಲ್ಲ ಅಂತ ನನ್ನಲ್ಲಿ ಆಘಾತ ಉಂಟಾಗಿದೆ,’ ಎಂದು ಅವರ ಬಾತ್ಮೀದಾರ ಪೋಸ್ಟ್ ಮಾಡಿದ ಟ್ವೀಟ್ನಲ್ಲಿ ಮರ್ಕೆಲ್ ಹೇಳಿದ್ದಾರೆ. ‘ಪ್ರವಾಹದಲ್ಲಿ ಕೊಟ್ಚಿಕೊಂಡು ಹೋಗಿ ಮರಣಿಸಿದವರಿಗೆ ಮತ್ತು ಕಾಣೆಯಾಗಿರುವವರಿಗೆ ಸಂತಾಪಗಳನ್ನು ಸೂಚಿಸುತ್ತೇನೆ. ರಕ್ಷಣಾ ಕಾರ್ಯದಲ್ಲಿ ತೊಡಗಿರುವವರಿಗೆಲ್ಲ ನನ್ನ ಹೃದಯಾಂತರಾಳದ ಕೃತಜ್ಞತೆಗಳು,’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Himachal Pradesh Flood: ಹಿಮಾಚಲಪ್ರದೇಶದಲ್ಲಿ ಭಾರೀ ಮಳೆ; ಭೂಕುಸಿತವಾಗಿ 10 ಜನ ನಾಪತ್ತೆ