ಮಾಧ್ಯಮ ಸಂಸ್ಥೆಗಳು ಮತ್ತು ಡಿಜಿಟಲ್​ ವೇದಿಕೆಗಳು ಪ್ರಕಟಿಸುವ ಸುದ್ದಿಗೆ ಗೂಗಲ್​ ಹಾಗೂ ಫೇಸ್​ಬುಕ್​ ಹಣ ಪಾವತಿಸಬೇಕು!

|

Updated on: Feb 25, 2021 | 12:17 PM

Australia Passes Law on Google and Facebook: ಈ ನಿಯಮದ ಮೂಲಕ ಮಾಧ್ಯಮಗಳು ನೀಡುವ ಸುದ್ದಿಗೆ ಫೇಸ್​ಬುಕ್​ ಮತ್ತು ಗೂಗಲ್​ನಿಂದ ಸೂಕ್ತ ಮೊತ್ತದ ಗೌರವ ಧನ ಸಂದಾಯವಾಗಲಿದೆ. ಇದರಿಂದಾಗಿ ಮಾಧ್ಯಮಗಳಿಗೆ ಜನಪರ ಪತ್ರಿಕೋದ್ಯಮ ನಡೆಸಲು, ಜನರ ಹಿತಾಸಕ್ತಿಯನ್ನು ಕಾಪಾಡಲು ಬಲ ಸಿಗಲಿದೆ.

ಮಾಧ್ಯಮ ಸಂಸ್ಥೆಗಳು ಮತ್ತು ಡಿಜಿಟಲ್​ ವೇದಿಕೆಗಳು ಪ್ರಕಟಿಸುವ ಸುದ್ದಿಗೆ ಗೂಗಲ್​ ಹಾಗೂ ಫೇಸ್​ಬುಕ್​ ಹಣ ಪಾವತಿಸಬೇಕು!
ಸಂಗ್ರಹ ಚಿತ್ರ
Follow us on

ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳೊಂದಿಗೆ ಜಿದ್ದಾಜಿದ್ದಿಗೆ ಬಿದ್ದಿರುವ ಆಸ್ಟ್ರೇಲಿಯಾ ಸರ್ಕಾರ ಇಂದು ಹೊಸ ನಿಯಮಕ್ಕೆ ಅಧಿಕೃತವಾಗಿ ಅನುಮೋದನೆ ನೀಡಿದೆ. ಈ ನಿಯಮಾವಳಿಯ ಪ್ರಕಾರ ಗೂಗಲ್​ (Alphabet Inc’s Google) ಮತ್ತು ಫೇಸ್​ಬುಕ್​ (Facebook Inc) ಸಂಸ್ಥೆಗಳು ತಮ್ಮ ಮೂಲಕ ಜನರಿಗೆ ಸುದ್ದಿ ತಲುಪಿಸುವ ಮಾಧ್ಯಮ ಸಂಸ್ಥೆಗಳು ಮತ್ತು ಡಿಜಿಟಲ್​ ವೇದಿಕೆಗಳಿಗೆ ನಿರ್ದಿಷ್ಟ ಮೊತ್ತದ ಹಣ ಪಾವತಿಸಬೇಕಾಗಿದೆ. ಈ ನಿಯಮವನ್ನು ಜಾರಿಗೊಳಿಸಿದ ಒಂದು ವರ್ಷದಲ್ಲಿ ಮರುಪರಿಶೀಲನೆಗೆ ಒಳಪಡಿಸಲಾಗುವುದು ಎಂದು ಆಸ್ಟ್ರೇಲಿಯಾದ ಹಣಕಾಸು ಸಚಿವ ಜೋಶ್ ಫ್ರೈಡನ್​ಬರ್ಗ್​ ಮತ್ತು ಸಂವಹನ ಸಚಿವ ಪಾಲ್​ ಫ್ಲೆಚ್ಚರ್​ ಜಂಟಿ ಹೇಳಿಕೆ ನೀಡಿದ್ದಾರೆ.

ಈ ನಿಯಮದ ಮೂಲಕ ಮಾಧ್ಯಮಗಳು ನೀಡುವ ಸುದ್ದಿಗೆ ಸೂಕ್ತ ಮೊತ್ತದ ಗೌರವ ಧನ ಸಂದಾಯವಾಗಲಿದೆ. ಇದರಿಂದಾಗಿ ಮಾಧ್ಯಮಗಳಿಗೆ ಜನಪರ ಪತ್ರಿಕೋದ್ಯಮ ನಡೆಸಲು, ಜನರ ಹಿತಾಸಕ್ತಿಯನ್ನು ಕಾಪಾಡಲು ಬಲ ಸಿಗಲಿದೆ ಎಂದು ತಿಳಿಸಿದ್ದಾರೆ. ಈ ನಿಯಮಾವಳಿಯನ್ನು ರೂಪಿಸಲು ಆಸ್ಟ್ರೇಲಿಯಾ ಸರ್ಕಾರದ Anti Trust Regulator ಕಳೆದ ಮೂರು ವರ್ಷಗಳಿಂದ ಸುದೀರ್ಘ ಚಿಂತನೆ ನಡೆಸಿತ್ತಲ್ಲದೇ ಸಾರ್ವಜನಿಕರ ಅಭಿಪ್ರಾಯವನ್ನೂ ಸಂಗ್ರಹಿಸುತ್ತಾ ಬಂದಿತ್ತು. ಪರಿಣಾಮವಾಗಿ ಈಗ ನಿಯಮಾವಳಿ ರೂಪುಗೊಂಡಿದ್ದು, ಇದು ಬ್ರಿಟನ್​ ಮತ್ತು ಕೆನಡಾ ದೇಶಗಳಿಗೆ ಇದೇ ತೆರನಾದ ಕಾನೂನು ರೂಪಿಸಲು ಪ್ರೋತ್ಸಾಹ ನೀಡಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಕೆಲ ದೇಶಗಳು ರೂಪಿಸಿರುವ ಕಾನೂನು ಮಾಧ್ಯಮ ಸಂಸ್ಥೆಗಳಿಗೆ ಹೆಚ್ಚಿನ ಜನರು ಬರಲು ನೆರವಾಗುವಂತಹ ಲಿಂಕ್​ ಪ್ರಕಟಿಸಲು ಪಡೆಯುವ ಪರವಾನಗಿ ಶುಲ್ಕ, ಜಾಹೀರಾತು ಮೊತ್ತ ಹಾಗೂ ಮತ್ತಿತರ ರೀತಿಯ ಆದಾಯ ಸಂಗ್ರಹಣೆಗೆ ಸಹಾಯವಾಗುವ ವಿಚಾರದಲ್ಲಿ ಗೂಗಲ್​, ಫೇಸ್​ಬುಕ್​ನಂತಹ ಸಂಸ್ಥೆಗಳೇ ಮಾಧ್ಯಮಗಳೊಂದಿಗೆ ಮಾತುಕತೆಗೆ ಇಳಿಯಲು ಪ್ರೇರೇಪಿಸುತ್ತಿವೆ. ಸದ್ಯ ತಂತ್ರಜ್ಞಾನ ಸಂಸ್ಥೆಗಳು ಮಾಧ್ಯಮಗಳೊಂದಿಗಿನ ಮಾತುಕತೆಯಲ್ಲಿ ವಿಫಲವಾದರೆ ಅನಿವಾರ್ಯವಾಗಿ ಹಣ ಪಾವತಿಸಲೇಬೇಕಾದ ರೀತಿಯ ಕಾನೂನು ಜಾರಿಗೊಳಿಸಿರುವ ವಿಚಾರದಲ್ಲಿ ಆಸ್ಟ್ರೇಲಿಯಾ ದೇಶವೇ ಮೊದಲಾಗಿದೆ.

ಈ ಬಗ್ಗೆ ಮಾತನಾಡಿರುವ ಆಸ್ಟ್ರೇಲಿಯಾದ ಹಣಕಾಸು ಸಚಿವ ಜೋಶ್ ಫ್ರೈಡನ್​ಬರ್ಗ್​ ಮತ್ತು ಸಂವಹನ ಸಚಿವ ಪಾಲ್​ ಫ್ಲೆಚ್ಚರ್ ಪ್ರಸ್ತುತ ಬೆಳವಣಿಗೆಯಲ್ಲಿ ಗೂಗಲ್​ ಹಾಗೂ ಫೇಸ್​ಬುಕ್​ ಮಾಧ್ಯಮ ಸಂಸ್ಥೆಗಳೊಂದಿಗೆ ಮಾತುಕತೆಗೆ ಈಗಾಗಲೇ ಇಳಿದಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಬಣ್ಣಿಸಿದ್ದಾರೆ. ಕಳೆದ ವಾರ ಆಸ್ಟ್ರೇಲಿಯಾ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದ ಫೇಸ್​ಬುಕ್​ ಸರ್ಕಾರದ ಅಕೌಂಟ್​ಗಳಿಗೇ ತಡೆ ನೀಡಿದ್ದ ಬೆನ್ನಲ್ಲೇ ಈ ಬೆಳವಣಿಗೆಗಳು ನಡೆದಿವೆ.

ಇದನ್ನೂ ಓದಿ: ಭಾರತಕ್ಕೂ ಕಾಲಿಡಲಿದೆಯಾ ಆಸ್ಟ್ರೇಲಿಯಾದಲ್ಲಿ ಶುರುವಾದ ಸರ್ಕಾರ-ಫೇಸ್​ಬುಕ್​ ಆದಾಯ ಹಂಚಿಕೆ ವಿವಾದ?