ಹದಿನೇಳು ವರ್ಷಗಳ ಹಿಂದೆ ಗರ್ಲ್​ಫ್ರೆಂಡ್​ಳನ್ನು ಕೊಂದ ಆರೋಪದಲ್ಲಿ ಆಸ್ಟ್ರೇಲಿಯನ್ ವ್ಯಕ್ತಿಯ ಬಂಧನ

ಆಗ 25 ವರ್ಷದವಳಾಗಿದ್ದ ಸ್ಟ್ರೊಬೆಲ್ ಆಸ್ಟ್ರೇಲಿಯಾದ ಪೂರ್ವ ಕರಾವಳಿ ಭಾಗಕ್ಕಿರುವ ಲಿಸ್ಮೋರ್ ಪಟ್ಟಣದದ ಪಾರ್ಕೊಂದರಲ್ಲಿ ಸಾಮೂಹಿಕ ಪಾರ್ಟಿಯಲ್ಲಿ ಭಾಗಿಯಾದವಳು ತನ್ನ ಬಾಯ್ ಫ್ರೆಂಡ್ ನೊಂದಿಗೆ ರಾತ್ರಿ ಕಳೆದ ಬಳಿಕ ಕಾಣೆಯಾಗಿದ್ದಳು.

ಹದಿನೇಳು ವರ್ಷಗಳ ಹಿಂದೆ ಗರ್ಲ್​ಫ್ರೆಂಡ್​ಳನ್ನು ಕೊಂದ ಆರೋಪದಲ್ಲಿ ಆಸ್ಟ್ರೇಲಿಯನ್ ವ್ಯಕ್ತಿಯ ಬಂಧನ
17 ವರ್ಷಗಳ ಹಿಂದೆ ಕೊಲೆಯಾದ ಸಿಮೋನ್ ಸ್ಟ್ರೊಬೆಲ್
Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 28, 2022 | 8:03 AM

ಜರ್ಮನಿಯ (Germany) ಟೂರಿಸ್ಟ್ ಮತ್ತು ತನ್ನ ಗರ್ಲ್ಫ್ರೆಂಡ್ ಆಗಿದ್ದ ಮಹಿಳೆಯೊಬ್ಬಳನ್ನು ಕೊಂದ ಅರೋಪದಲ್ಲಿ ವ್ಯಕ್ತಿಯೊಬ್ಬನನ್ನು ಪಶ್ಚಿಮ ಆಸ್ಟ್ರೇಲಿಯದಲ್ಲಿ (Western Australia) ಬಂಧಿಸಲಾಗಿದೆ. ಆ ಮಹಿಳೆ ಬದುಕಿದ್ದರೆ ಇಂದು 42-ವರ್ಷ ವಯಸ್ಸಿನವಳಾಗಿರುತ್ತಿದ್ದಳು.

ಅವಳನ್ನು ಕೊಂದಿರುವನೆಂದು ಪೊಲೀಸರು ಹೇಳುತ್ತಿರುವ ವ್ಯಕ್ತಿಯನ್ನು ಪಶ್ಚಿಮ ಆಸ್ಟ್ರೇಲಿಯದಲ್ಲಿರುವ ಅವನ ಮನೆಯಲ್ಲಿ ಬಂಧಿಸಲಾಯಿತು. 2005 ರಲ್ಲಿ ಕೊಲೆಯಾದ ಸಿಮೋನ ಸ್ಟ್ರೊಬೆಲ್ ಸಾವಿಗೆ ಸಂಬಂಧಿಸಿದಂತೆ ಯಾವುದೇ ಸುಳಿವು ನೀಡಿದರೆ ಒಂದು ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ಗಳ (ಸುಮಾರು 5.5 ಕೋಟಿ ರೂ.) ಬಹುಮಾನವನ್ನು ಪೊಲೀಸ್ ಘೋಷಣೆ ಮಾಡಿದ 2 ವರ್ಷಗಳ ನಂತರ ಶಂಕಿತ ಹಂತಕನ ಬಂಧನವಾಗಿದೆ.

ಸ್ಟ್ರೊಬೆಲ್ ದೇಹ ಸಿಕ್ಕ ಸ್ಥಳದಲ್ಲಿ ತಾತ್ಕಾಲಿಕ ಸಮಾಧಿ ನಿರ್ಮಿಸಿ ಶ್ರದ್ಧಾಂಜಲಿ ಸಲ್ಲಿಸುತ್ತಿರುವ ಕುಟುಂಬದ ಸದಸ್ಯರು

ಆಸ್ಟ್ರೇಲಿಯಾದ ಮಾಧ್ಯಮ ಶಂಕಿತ ಆರೋಪಿಯನ್ನು ತೊಬಿಯಾಸ್ ಫ್ರೈಡ್ರಿಕ್ ಮೊರಾನ್ ಎಂದು ಗುರುತಿಸಿದೆ. ಇವನಿಗೆ ತೊಬಿಯಾಸ್ ಸಕ್ಫ್ಯೂಯೆಲ್ ಎಂಬ ಇನ್ನೊಂದು ಹೆಸರು ಕೂಡ ಇದೆ. ಮೊರಾನ್ ಸ್ಟ್ರೊಬೆಲ್ಳ ಮಾಜಿ ಬಾಯ್ ಫ್ರೆಂಡ್ ಆಗಿದ್ದ. ಮಂಗಳವಾರದಂದು ಮೊರಾನನ್ನು ಪರ್ತ್ ಮ್ಯಾಜಿಸ್ಟ್ರೇಟ್ಸ್ ಕೋರ್ಟ್ನಲ್ಲಿ ಅಲ್ಪಾವಧಿಗೆ ಹಾಜರುಪಡಿಸಲಾಗಿತ್ತು ಎಂದು ಎಬಿಸಿ ನಾರ್ಥ್ ಕೋಸ್ಟ್ ಪತ್ರಿಕೆ ವರದಿ ಮಾಡಿದೆ.

ಆಗ 25 ವರ್ಷದವಳಾಗಿದ್ದ ಸ್ಟ್ರೊಬೆಲ್ ಆಸ್ಟ್ರೇಲಿಯಾದ ಪೂರ್ವ ಕರಾವಳಿ ಭಾಗಕ್ಕಿರುವ ಲಿಸ್ಮೋರ್ ಪಟ್ಟಣದದ ಪಾರ್ಕೊಂದರಲ್ಲಿ ಸಾಮೂಹಿಕ ಪಾರ್ಟಿಯಲ್ಲಿ ಭಾಗಿಯಾದವಳು ತನ್ನ ಬಾಯ್ ಫ್ರೆಂಡ್ ನೊಂದಿಗೆ ರಾತ್ರಿ ಕಳೆದ ಬಳಿಕ ಕಾಣೆಯಾಗಿದ್ದಳು.

ಆರು ದಿನಗಳ ನಂತರ ಆಟದ ಮೈದಾನವೊಂದಕ್ಕೆ ಹತ್ತಿರದಲ್ಲಿರುವ ತಾಳೆಮರಗಳ ತೋಪಿನಲ್ಲಿ ಅವಳ ದೇಹ ಪತ್ತೆಯಾಗಿತ್ತು.

2007 ರಲ್ಲಿ ಸಾರ್ವಜನಿಕರಿಂದ ಕಲೆಹಾಕಿದ ಮಾಹಿತಿ ಮತ್ತು ಸ್ಥಳೀಯ ಹಾಗೂ ಜರ್ಮನಿಯ ಪೊಲೀಸ್ ನಡೆಸಿದ ತೀವ್ರ ಸ್ವರೂಪದ ತನಿಖೆ ಹೊರತಾಗಿಯೂ ಸ್ಟ್ರೊಬೆಲ್ ಹತ್ಯೆಗೆ ಸಂಬಂಧಿಸಿದಂತೆ ಯಾರೊಬ್ಬರ ವಿರುದ್ಧವೂ ದೋಷಾರೋಪ ಪಟ್ಟಿ ಸಲ್ಲಿಸುವುದು ಸಾಧ್ಯವಾಗಿರಲಿಲ್ಲ.

ಪೊಲೀಸರು ಈಗ ಶಂಕಿತ ಆರೋಪಿಯನ್ನು ಆಸ್ಟ್ರೇಲಿಯಾದ ಪೂರ್ವ ರಾಜ್ಯ ನ್ಯೂ ಸೌತ್ ವೇಲ್ಸ್ ಗೆ ಕಳಿಸಲಿದ್ದಾರೆ.

ತನಿಖೆ ಇನ್ನೂ ಪೂರ್ತಿಗೊಂಡಿಲ್ಲ, ತನಿಖಾಧಿಕಾರಿಗಳು ತಮ್ಮ ಅಂತರರಾಷ್ಟ್ರೀಯ ಸಹೋದ್ಯೋಗಿಗಳಿಂದ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ,’ ಎಂದು ಪೊಲೀಸ್ ಹೇಳಿಕೆಯೊಂದರಲ್ಲಿ ತಿಳಿಸಿದೆ.