Bali: ಪ್ರವಾಸಿಗರಿಗೆ ಗುಡ್​ ನ್ಯೂಸ್​; ಬಾಲಿಗೆ ತೆರಳಲು ಇಂದಿನಿಂದ ಎಲ್ಲ ವಿದೇಶಿ ಪ್ರಯಾಣಿಕರಿಗೂ ಅವಕಾಶ

ಇಂಡೋನೇಷ್ಯಾವು ಎಲ್ಲಾ ದೇಶಗಳ ವಿದೇಶಿ ಪ್ರಯಾಣಿಕರಿಗೆ ಬಾಲಿಯ ರೆಸಾರ್ಟ್ ದ್ವೀಪವನ್ನು ತೆರೆಯುವ ಮೂಲಕ ಬಾಲಿಗೆ ಅಂತಾರಾಷ್ಟ್ರೀಯ ವಿಮಾನಗಳು ಎರಡು ವರ್ಷಗಳ ಬಳಿಕ ಮೊದಲ ಬಾರಿಗೆ ಪುನರಾರಂಭಗೊಂಡಿವೆ.

Bali: ಪ್ರವಾಸಿಗರಿಗೆ ಗುಡ್​ ನ್ಯೂಸ್​; ಬಾಲಿಗೆ ತೆರಳಲು ಇಂದಿನಿಂದ ಎಲ್ಲ ವಿದೇಶಿ ಪ್ರಯಾಣಿಕರಿಗೂ ಅವಕಾಶ
ಬಾಲಿ
Edited By:

Updated on: Feb 04, 2022 | 5:19 PM

ಡೆನ್‌ಪಾಸರ್: ಕೊವಿಡ್ (Covid-19) ನಡುವೆಯೇ ಅನೇಕರು ಹೊರ ದೇಶಗಳಿಗೆ ಪ್ರವಾಸ ಮಾಡುತ್ತಿದ್ದಾರೆ. ಆದರೆ, ಕೆಲವು ರಾಷ್ಟ್ರಗಳಲ್ಲಿ ಕೊರೊನಾದಿಂದಾಗಿ ವಿದೇಶಿ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ ನೀಡಿರಲಿಲ್ಲ. ವಿಶ್ವದ ಅತ್ಯಂತ ಕಡಿಮೆ ದರದ ಸುಂದರವಾದ ಪ್ರವಾಸಿತಾಣಗಳಲ್ಲಿ ಒಂದಾಗಿರುವ ಇಂಡೋನೇಷ್ಯಾದ ಬಾಲಿಗೆ (Bali) ಆಗಮಿಸಲು ಅನುಮತಿ ನೀಡಿದೆ. ಇಂಡೋನೇಷ್ಯಾವು ಎಲ್ಲಾ ದೇಶಗಳ ವಿದೇಶಿ ಪ್ರಯಾಣಿಕರಿಗೆ ಬಾಲಿಯ ರೆಸಾರ್ಟ್ ದ್ವೀಪವನ್ನು ತೆರೆಯುವ ಮೂಲಕ ಬಾಲಿಗೆ ಅಂತಾರಾಷ್ಟ್ರೀಯ ವಿಮಾನಗಳು ಎರಡು ವರ್ಷಗಳ ಬಳಿಕ ಮೊದಲ ಬಾರಿಗೆ ಪುನರಾರಂಭಗೊಂಡಿವೆ.

ಕೊವಿಡ್-19 ಪ್ರಕರಣಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವಂತಹ ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳನ್ನು ಅನುಸರಿಸುವ 19 ದೇಶಗಳಿಂದ ವಿದೇಶಿಗರನ್ನು ಬಾಲಿ ಸ್ವಾಗತಿಸುತ್ತದೆ ಎಂದು ಅಧಿಕಾರಿಗಳು ಅಕ್ಟೋಬರ್‌ನಲ್ಲಿ ಹೇಳಿದ್ದರು. ಆದರೆ ಟೋಕಿಯೊದಿಂದ ಎರಡು ವರ್ಷಗಳ ಬಳಿಕ ಗುರುವಾರ ಗರುಡಾ ಇಂಡೋನೇಷ್ಯಾ ವಿಮಾನ ಹಾರಾಟ ನಡೆಸಿದ್ದು, ಈ ಮೂಲಕ ಬಾಲಿಗೆ ನೇರ ಅಂತಾರಾಷ್ಟ್ರೀಯ ವಿಮಾನ ಸಂಚಾರ ಶುರುವಾಗಿದೆ.

ಸಿಂಗಾಪುರ್ ಏರ್‌ಲೈನ್ಸ್ ಫೆ. 16ರಿಂದ ಬಾಲಿಯ ಡೆನ್‌ಪಾಸರ್‌ಗೆ ಮತ್ತು ಅಲ್ಲಿಂದ ನಿಯಮಿತ ನೇರ ಮಾರ್ಗವನ್ನು ಆರಂಭಿಸಲಿದೆ ಎಂದು ಬಾಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಾರ್ವಜನಿಕ ಸಂಪರ್ಕ ವ್ಯವಸ್ಥಾಪಕ ತೌಫಾನ್ ಯುಧಿಸ್ತಿರಾ ಹೇಳಿದ್ದಾರೆ.

ಎರಡು ಡೋಸ್ ಕೊರೊನಾ ಲಸಿಕೆ ಹಾಕಿಸಿಕೊಂಡ ಪ್ರಯಾಣಿಕರು ಹೋಟೆಲ್‌ನಲ್ಲಿ ಅಥವಾ ಪ್ರವಾಸೋದ್ಯಮ ಆರ್ಥಿಕತೆಯ ಸಚಿವಾಲಯದಿಂದ ಪ್ರಮಾಣೀಕರಿಸಿದ ಲೈವ್‌ಬೋರ್ಡ್ ಬೋಟ್‌ನಲ್ಲಿ 5 ದಿನಗಳ ಕಾಲ ಕ್ವಾರಂಟೈನ್ ಮಾಡಬೇಕಾಗುತ್ತದೆ. ಒಂದು ಡೋಸ್ COVID-19 ಲಸಿಕೆಯನ್ನು ಪಡೆದ ಪ್ರಯಾಣಿಕರು 7 ದಿನಗಳವರೆಗೆ ಕ್ವಾರಂಟೈನ್ ಆಗಬೇಕು. ಇಂಡೋನೇಷ್ಯಾದಲ್ಲಿ ಗುರುವಾರ 27,197 ಹೊಸ ಕೊರೊನಾವೈರಸ್ ಕೇಸುಗಳು ಮತ್ತು 38 ಸಾವುಗಳು ವರದಿಯಾಗಿವೆ.

ಸಾಂಕ್ರಾಮಿಕ ರೋಗದ ಮೊದಲು ಬಾಲಿಯ ವಿಮಾನ ನಿಲ್ದಾಣವು 2019ರಲ್ಲಿ ದಿನಕ್ಕೆ ಕನಿಷ್ಠ ಒಂದು ಮಿಲಿಯನ್ ಪ್ರಯಾಣಿಕರೊಂದಿಗೆ 200ಕ್ಕೂ ಹೆಚ್ಚು ಅಂತರಾಷ್ಟ್ರೀಯ ವಿಮಾನಗಳಿಗೆ ಅವಕಾಶ ಕಲ್ಪಿಸಿತ್ತು. 2020ರಿಂದ ಅಂತಾರಾಷ್ಟ್ರೀಯ ವಿಮಾನ ಸಂಚಾರವನ್ನು ನಿಷೇಧಿಸಲಾಗಿತ್ತು. ಬಾಲಿಯಲ್ಲಿ ಪ್ರವಾಸೋದ್ಯಮವು ಆದಾಯದ ಮುಖ್ಯ ಮೂಲವಾಗಿದೆ.

ಇದನ್ನೂ ಓದಿ: ಪ್ರವಾಸಿಗನನ್ನು ಪ್ರೀತಿಯಿಂದ ಅಪ್ಪಿಕೊಂಡ ಕೋತಿ; ಮೆಕ್ಸಿಕೋದಲ್ಲೊಂದು ಹೃದಯಸ್ಪರ್ಶಿ ಘಟನೆ : ವಿಡಿಯೋ ವೈರಲ್​

ಕೊವಿಡ್ ವೈರಸ್ ಅಂತ್ಯ ಯಾವಾಗ? ಒಮಿಕ್ರಾನ್ ಕೊನೆಯ ರೂಪಾಂತರಿಯಾ?; ತಜ್ಞರ ಅಭಿಪ್ರಾಯ ಇಲ್ಲಿದೆ