ಸಿಲಿಗುರಿ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ನಡೆಯುತ್ತಿರುವ ಹಿಂಸಾಚಾರಗಳ ಬಗ್ಗೆ ಬಾಂಗ್ಲಾದಲ್ಲಿರುವ ಭಾರತದ ರಾಯಭಾರಿ ಅಲ್ಲಿನ ಸರ್ಕಾರದೊಂದಿಗೆ ಮಾತನಾಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆಯ ರಾಜ್ಯ ಸಚಿವ ನಿಶಿತ್ ಪ್ರಾಮಾಣಿಕ್ ತಿಳಿಸಿದ್ದಾರೆ. ‘ಬಾಂಗ್ಲಾದೇಶದ ಬೆಳವಣಿಗೆಗಳ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ಸಂಗ್ರಹಿಸುತ್ತಿದೆ. ಬಾಂಗ್ಲಾ ಸರ್ಕಾರವು ಹಿಂಸಾಚಾರಗಳ ಬಗ್ಗೆ ತನಿಖೆ ನಡೆಸುತ್ತಿದೆ. ಹಿಂಸಾಚಾರದ ಬಗ್ಗೆ ಭಾರತದ ರಾಯಭಾರ ಕಚೇರಿಯು ಅಲ್ಲಿನ ಸರ್ಕಾರದೊಂದಿಗೆ ಶೀಘ್ರವೇ ಮಾತುಕತೆ ನಡೆಸಲಿದೆ’ ಎಂದು ಅವರು ಹೇಳಿದ್ದಾರೆ.
ಬಾಂಗ್ಲಾದೇಶದ ವಿವಿಧೆಡೆ ಅಕ್ಟೋಬರ್ 13ರಂದು ಹಿಂಸಾಚಾರ ನಡೆದಿತ್ತು. ನನೌರ್ ದಿಘಿ ದಂಡೆಯ ಮೇಲೆ ಪವಿತ್ರ ಕುರಾನ್ ಗ್ರಂಥಕ್ಕೆ ಬೆಂಕಿ ಹಚ್ಚಲಾಗಿದೆ ಎಂಬ ವದಂತಿಯು ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿದ ನಂತರ ಹಿಂಸಾಚಾರ ವ್ಯಾಪಿಸಿತ್ತು.
ಚಂದಾಪುರ, ಚಿತ್ತಗಾಂಗ್, ಗಾಜಿಪುರ, ಬಂದರ್ಬನ್, ಚಪೈನವಗ್ಗಂಜ್ ಮತ್ತು ಮೌಲ್ವಿಬಜಾರ್ ಸೇರಿದಂತೆ ಹಲವೆಡೆ ದೇವಿ ಪೂಜೆಯ ಪೆಂಡಾಲ್ಗಳಿಗೆ ಬೆಂಕಿ ಹಚ್ಚಲಾಗಿತ್ತು. ಹಿಂಸಾಚಾರದಿಂದ ಹತ್ತಾರು ಮಂದಿ ಜೀವ ಕಳೆದುಕೊಂಡಿದ್ದರು. ಮುನ್ಷಿಗಂಜ್ನ ದಾನಿಯಾಪುರ್ ಮಹಾ ಶೋಶನ್ ಕಾಳಿ ಮಂದಿರದಲ್ಲಿ 16 ವಿಗ್ರಹಗಳನ್ನು ಹಾಳುಗೆಡವಲಾಗಿತ್ತು.
ಇದನ್ನೂ ಓದಿ: ಬಾಂಗ್ಲಾದೇಶಿ ಹಿಂದೂಗಳನ್ನು ರಕ್ಷಿಸಲು ಸಿಎಎಗೆ ತಿದ್ದುಪಡಿ ಮಾಡಿ: ಕಾಂಗ್ರೆಸ್ ನಾಯಕ ಮಿಲಿಂದ್ ದೆವರಾ
ಇದನ್ನೂ ಓದಿ: ದುರ್ಗಾ ಪೂಜೆ ವೇಳೆ ಹಿಂಸಾಚಾರ; ಬಾಂಗ್ಲಾದೇಶದಲ್ಲಿ 29 ಹಿಂದೂ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ: ವರದಿ
Published On - 11:13 pm, Tue, 19 October 21