ಬಾಂಗ್ಲಾದೇಶಿ ಹಿಂದೂಗಳನ್ನು ರಕ್ಷಿಸಲು ಸಿಎಎಗೆ ತಿದ್ದುಪಡಿ ಮಾಡಿ: ಕಾಂಗ್ರೆಸ್ ನಾಯಕ ಮಿಲಿಂದ್ ದೆವರಾ
Milind Deora ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿರುವ ಕೋಮುಗಲಭೆಗಳು ಅತ್ಯಂತ ಕಳವಳಕಾರಿ. ಧಾರ್ಮಿಕ ಕಿರುಕುಳದಿಂದ ತಪ್ಪಿಸಿಕೊಳ್ಳುತ್ತಿರುವ ಬಾಂಗ್ಲಾದೇಶಿ ಹಿಂದೂಗಳನ್ನು ರಕ್ಷಿಸಲು ಮತ್ತು ಪುನರ್ವಸತಿ ಮಾಡಲು ಸಿಎಎ ತಿದ್ದುಪಡಿ ಮಾಡಬೇಕು ಎಂದ ಮಿಲಿಂದ್ ದೆವರಾ.
ದೆಹಲಿ: ಧಾರ್ಮಿಕ ಕಿರುಕುಳದಿಂದ ಪಲಾಯನ ಮಾಡುವ ಬಾಂಗ್ಲಾದೇಶಿ ಹಿಂದೂಗಳನ್ನು ರಕ್ಷಿಸಲು ಪೌರತ್ವ (ತಿದ್ದುಪಡಿ) ಕಾಯ್ದೆ (CAA) ಅನ್ನು ತಿದ್ದುಪಡಿ ಮಾಡಬೇಕು ಎಂದು ಮಾಜಿ ಸಚಿವ ಮಿಲಿಂದ್ ದೆವರಾ (Milind Deora) ಮಂಗಳವಾರ ಹೇಳಿದರು. ಕಳೆದ ವಾರ ಬಾಂಗ್ಲಾದೇಶದಲ್ಲಿ ನಡೆದ ದುರ್ಗಾಪೂಜೆ ಆಚರಣೆ ವೇಳೆ ನಡೆದ ಕೋಮು ಹಿಂಸಾಚಾರ ಘಟನೆಯ ಬೆನ್ನಲ್ಲೇ ದಿಯೋರಾ ಈ ರೀತಿ ಹೇಳಿದ್ದಾರೆ. ಈ ಘಟನೆಯನ್ನು “ಆತಂಕಕಾರಿ” ಎಂದು ಕರೆದ ಕಾಂಗ್ರೆಸ್ ಹಿರಿಯ ನಾಯಕ, “ಭಾರತೀಯ ಮುಸ್ಲಿಮರನ್ನು ಬಾಂಗ್ಲಾದೇಶಿ ಇಸ್ಲಾಮಿಸ್ಟ್‌ಗಳೊಂದಿಗೆ ಸಮೀಕರಿಸುವ” ಪ್ರಯತ್ನಗಳ ವಿರುದ್ಧ ಎಚ್ಚರಿಕೆ ನೀಡಿದರು. ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿರುವ ಕೋಮುಗಲಭೆಗಳು ಅತ್ಯಂತ ಕಳವಳಕಾರಿ. ಧಾರ್ಮಿಕ ಕಿರುಕುಳದಿಂದ ತಪ್ಪಿಸಿಕೊಳ್ಳುತ್ತಿರುವ ಬಾಂಗ್ಲಾದೇಶಿ ಹಿಂದೂಗಳನ್ನು ರಕ್ಷಿಸಲು ಮತ್ತು ಪುನರ್ವಸತಿ ಮಾಡಲು ಸಿಎಎ ತಿದ್ದುಪಡಿ ಮಾಡಬೇಕು. ಭಾರತೀಯ ಮುಸ್ಲಿಮರನ್ನು ಬಾಂಗ್ಲಾದೇಶಿ ಇಸ್ಲಾಮಿಸ್ಟ್‌ಗಳೊಂದಿಗೆ ಸಮೀಕರಿಸುವ ಯಾವುದೇ ಕೋಮು ಪ್ರಯತ್ನವನ್ನು ಭಾರತ ತಿರಸ್ಕರಿಸಬೇಕು ಮತ್ತು ತಡೆಯಬೇಕು ಎಂದು ದೆವರಾ ಟ್ವೀಟ್ ಮಾಡಿದ್ದಾರೆ.
CAA was a political gimmick to win elections in India, not to safeguard religious minority rights in the subcontinent.
Why haven’t CAA rules been framed for 2 years? Has a single Afghan Sikh or Bangladeshi Hindu fleeing persecution been given citizenship so far?
Talk is cheap.
— Milind Deora | मिलिंद देवरा ☮️ (@milinddeora) October 19, 2021
ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರಿಶ್ಚಿಯನ್ ವಲಸಿಗರಿಗೆ ಭಾರತೀಯ ಪೌರತ್ವದ ಹಾದಿಯನ್ನು ಸುಲಭಗೊಳಿಸುವ ಗುರಿಯನ್ನು ಸಿಎಎ ಹೊಂದಿದೆ. ಕುಮಿಲಾ ಜಿಲ್ಲೆಯ ದುರ್ಗಾ ಪೂಜಾ ಪಂಡಲ್‌ನಲ್ಲಿ ನಡೆದ ಧರ್ಮ ನಿಂದನೆ ಮಾಡಲಾಗಿದೆ ಎಂಬ ಆರೋಪದ ಬೆನ್ನಲ್ಲೇ ದೇಶದ ಕೆಲವು ಭಾಗಗಳಲ್ಲಿ ಹಿಂಸಾಚಾರ ಭುಗಿಲೆದ್ದಿತು. ಈ ಹಿಂಸಾಚಾರದಲ್ಲಿ ಚಂದಪುರದ ಹಾಜಿಗಂಜ್, ಚಟ್ಟೋಗ್ರಾಮ್‌ನ ಬಂಶಖಾಲಿ, ಕಾಕ್ಸ್ ಬಜಾರ್‌ನ ಪೆಕುವಾದಲ್ಲಿನ ದೇವಾಲಯಗಳನ್ನು ಧ್ವಂಸಗೊಳಿಸಲಾಯಿತು. ನೋಖಾಲಿಯ ಇಸ್ಕಾನ್ ದೇವಾಲಯದ ಮೇಲೂ ದಾಳಿ ನಡೆಸಲಾಗಿತ್ತು.
ಈ ದಾಳಿ ನಂತರ ಭಾರತೀಯ ಹೈಕಮಿಷನರ್ ವಿಕ್ರಂ ದೊರೈಸ್ವಾಮಿ ಹಾಗೂ ಬಾಂಗ್ಲಾದೇಶದಲ್ಲಿರುವ ನಾಲ್ಕು ದೂತಾವಾಸಗಳು ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಾಂಗ್ಲಾದೇಶದ ಪ್ರಧಾನ ಮಂತ್ರಿ ಶೇಖ್ ಹಸೀನಾ ಭಾಷಣದಲ್ಲಿ ಹಿಂಸಾಚಾರದ ಹಿಂದಿರುವ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದು ,ಹಿಂದೂ ದೇವಾಲಯಗಳು ಮತ್ತು ದುರ್ಗಾ ಪೂಜಾ ಸ್ಥಳಗಳ ಮೇಲೆ ದಾಳಿ ನಡೆಸಿರುವ ಯಾರನ್ನೂ ರಕ್ಷಿಸಲಾಗುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಬಾಂಗ್ಲಾದೇಶದ 169 ದಶಲಕ್ಷ ಜನಸಂಖ್ಯೆಯ ಶೇ 10 ರಷ್ಟು ಹಿಂದೂಗಳಿದ್ದಾರೆ.
ಇದನ್ನೂ ಓದಿ: ದುರ್ಗಾ ಪೂಜೆ ವೇಳೆ ಹಿಂಸಾಚಾರ; ಬಾಂಗ್ಲಾದೇಶದಲ್ಲಿ 29 ಹಿಂದೂ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ: ವರದಿ