ಢಾಕಾ: ಬಾಂಗ್ಲಾದೇಶ (Bangladesh) ಕೋಮಿಲ್ಲಾ ನಗರದಲ್ಲಿ ನಡೆದ “ಧರ್ಮ ನಿಂದನೆ ಘಟನೆ”ಯಿಂದಾಗಿ ರಾಷ್ಟ್ರವ್ಯಾಪಿ ಕೋಮು ಹಿಂಸಾಚಾರ ನಡೆದಿದ್ದು ಇದಕ್ಕೆ ಕಾರಣವಾದ ವ್ಯಕ್ತಿಯನ್ನು ಪೊಲೀಸರು ಬುಧವಾರ ಗುರುತಿಸಿದ್ದಾರೆ. ಬಾಂಗ್ಲಾದೇಶದಲ್ಲಿ ಕಳೆದ ವಾರ ದುರ್ಗಾಪೂಜೆ ಆಚರಣೆ ವೇಳೆ ನಡೆದ ಹಿಂಸಾಚಾರದಲ್ಲಿ 66 ಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿವೆ ಮತ್ತು ಹಿಂದೂಗಳ 20 ಮನೆಗಳು ಸುಟ್ಟುಹೋಗಿವೆ ಎಂದು ಅಧಿಕಾರಿಗಳು ಅಕ್ಟೋಬರ್ 18 ರಂದು ತಿಳಿಸಿದ್ದಾರೆ. ನೂರು ಜನರ ಗುಂಪು ಹಳ್ಳಿಯ ಮೇಲೆ ದಾಳಿ ಮಾಡಿತು. ಸ್ಥಳೀಯ ಯುವಕ ಫೇಸ್ ಬುಕ್ ಪೋಸ್ಟ್ ನಿಂದ ಪ್ರಚೋದಿಸಲ್ಪಟ್ಟಿದ್ದಾನೆ ಎಂದು ವರದಿಯಾಗಿದೆ. ಈ ವ್ಯಕ್ತಿಯನ್ನು ಕೋಮಿಲ್ಲಾ ನಿವಾಸಿ ಇಕ್ಬಾಲ್ ಹೊಸೈನ್ (35) ಎಂದು ಗುರುತಿಸಲಾಗಿದೆ.
ಢಾಕಾ ಟ್ರಿಬ್ಯೂನ್ ವರದಿ ಪ್ರಕಾರ ಸಿಸಿಟಿವಿ ದೃಶ್ಯಗಳಲ್ಲಿ ಹೊಸೈನ್ ಸ್ಥಳೀಯ ಮಸೀದಿಯಿಂದ ಕುರಾನ್ ತೆಗೆದುಕೊಂಡು ದುರ್ಗಾ ಪೂಜೆಯ ಸ್ಥಳಕ್ಕೆ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ನಂತರ ಆತ ಹನುಮಾನ್ ಕ್ಲಬ್‌ನ ಬಳಿ ಹೋಗುತ್ತಿರುವುದು ಕಾಣಿಸಿದೆ. ಕಳೆದ ಕೆಲವು ದಿನಗಳಿಂದ ಅಧಿಕಾರಿಗಳು ಆತನ ಗುರುತು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದರು ಮತ್ತು ಅದನ್ನು ಸಿಸಿಟಿವಿ ಸಾಕ್ಷ್ಯದೊಂದಿಗೆ ದೃಢಪಡಿಸಿದರು.
“ಕೋಮಿಲ್ಲಾ ಘಟನೆಯ ಪ್ರಮುಖ ಆರೋಪಿಯನ್ನು ಶೀಘ್ರವೇ ಬಂಧಿಸಲಾಗುವುದು ಎಂದು ನಾನು ಭಾವಿಸುತ್ತೇನೆ. ಸಿಕ್ಕಿಬೀಳುವುದನ್ನು ತಪ್ಪಿಸಲು ಆತ ಆಗಾಗ್ಗೆ ಸ್ಥಳಗಳನ್ನು ಬದಲಾಯಿಸುತ್ತಿದ್ದಾನೆ. ಆತನನ್ನು ಬಂಧಿಸಿದ ನಂತರ ನಾವು ಕೋಮಿಲ್ಲಾ ಘಟನೆಯನ್ನು ಬಯಲು ಮಾಡಲು ಸಾಧ್ಯವಾಗುತ್ತದೆ “ಎಂದು ಗೃಹ ಸಚಿವ ಅಸಾದುಜಮಾನ್ ಖಾನ್ ಕಮಲ್ ಹೇಳಿರುವುದಾಗಿ ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.
ಕೋಮಿಲ್ಲಾ, ಚಾಂದಪುರ, ಚಟ್ಟೋಗ್ರಾಮ್, ಕಾಕ್ಸ್ ಬಜಾರ್, ಬಂದರ್ಬನ್, ಮೌಲ್ವಿಬಜಾರ್, ಗಾಜಿಪುರ, ಚಪೈನವಾಬ್ಗಂಜ್, ಫೆನಿ ಮತ್ತು ಇತರ ಜಿಲ್ಲೆಗಳಲ್ಲಿನ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆದಿದ್ದು ಕೋಮುಗಲಭೆ ಉಂಟಾಗಿತ್ತು.
ಇಲ್ಲಿಯವರೆಗೆ 450 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಕೋಮುಗಲಭೆ ಕುರಿತು 72 ಪ್ರಕರಣಗಳನ್ನು ದಾಖಲಿಸಲಾಗಿದೆ. ಇಲ್ಲಿಯವರೆಗೆ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ. ಗುರುವಾರ ಪ್ರಧಾನಮಂತ್ರಿ ಶೇಖ್ ಹಸೀನಾ ಅವರು ಹಿಂದೂ ದೇವಾಲಯಗಳು ಮತ್ತು ದುರ್ಗಾ ಪೂಜಾ ಸ್ಥಳಗಳ ಮೇಲೆ ದಾಳಿ ನಡೆಸಿದ ಎಲ್ಲರನ್ನು ಶಿಕ್ಷಿಸುವುದಾಗಿ ಭರವಸೆ ನೀಡಿದರು.
ಏತನ್ಮಧ್ಯೆ ದಾಳಿಯನ್ನು ಖಂಡಿಸಿ ಯುಎಸ್ ಕಮಿಷನ್ ಆನ್ ಇಂಟರ್ನ್ಯಾಷನಲ್ ರಿಲಿಜಿಯಸ್ ಫ್ರೀಡಂ (ಯುಎಸ್‌ಸಿಐಆರ್‌ಎಫ್) ಅಧ್ಯಕ್ಷೆ ನಾಡಿನ್ ಮೆನ್ಜಾ “ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಹಿಂದೂಗಳ ಮೇಲಿನ ಇತ್ತೀಚಿನ ಹಿಂಸಾಚಾರದ ಬಗ್ಗೆ ಯುಎಸ್‌ಸಿಐಆರ್‌ಎಫ್ ತೀವ್ರವಾಗಿ ಚಿಂತಿತವಾಗಿದೆ” ಎಂದು ಹೇಳಿದ್ದಾರೆ.
“ಹಿಂಸಾಚಾರವನ್ನು ನಿಯಂತ್ರಿಸಲು ಅರೆಸೇನಾ ಪಡೆಗಳನ್ನು ಕಳುಹಿಸುವ ಪ್ರಧಾನಿ ಶೇಖ್ ಹಸೀನಾ ಅವರ ಪ್ರತಿಕ್ರಿಯೆಯನ್ನು ನಾವು ಶ್ಲಾಘಿಸುತ್ತೇವೆ. ಆದಾಗ್ಯೂ, ದೇಶದಲ್ಲಿ ಹಿಂದೂ ವಿರೋಧಿ ಭಾವನೆಗಳನ್ನು ಮೆರೆಯುವ ಉಗ್ರವಾದದ ಅಂಶಗಳನ್ನು ಹತ್ತಿಕ್ಕಲು ನಾವು ಬಾಂಗ್ಲಾದೇಶ ಸರ್ಕಾರವನ್ನು ಒತ್ತಾಯಿಸುತ್ತಲೇ ಇದ್ದೇವೆ” ಎಂದು ಅವರು ಹೇಳಿದರು.
ಇದನ್ನೂ ಓದಿ: ಕೋಮು ಗಲಭೆಗಳ ಬಗ್ಗೆ ಬಾಂಗ್ಲಾದೇಶದೊಂದಿಗೆ ಚರ್ಚೆ ನಡೆಸಲಿದೆ ಭಾರತ