ಪ್ರಿನ್ಸೆಸ್ ಡಯಾನಾ ಸ್ಫೋಟಕ ಸಂದರ್ಶನ ಪಡೆಯಲು ಬಳಸಿದ ಕುತಂತ್ರಕ್ಕೆ ಕ್ಷಮೆ ಕೇಳಿ, ಪರಿಹಾರ ನೀಡಿದ ಬಿಬಿಸಿ
Princes Diana Interview: ಬ್ರಿಟನ್ ರಾಜಮನೆತನದ ಸ್ಫೋಟಕ ದೂರದರ್ಶನ ಸಂದರ್ಶನವನ್ನು ಪಡೆಯಲು ಬಳಸಿದ ಕುತಂತ್ರದ ಬಗ್ಗೆ ಪ್ರಿನ್ಸೆಸ್ ಡಯಾನಾ ಅವರ ಖಾಸಗಿ ಕಾರ್ಯದರ್ಶಿಗೆ ಬಿಬಿಸಿ ಕ್ಷಮೆಯಾಚಿಸಿದೆ. ಜತೆಗೆ ದೊಡ್ಡ ಮೊತ್ತವನ್ನು ಪರಿಹಾರ ರೂಪದಲ್ಲಿ ಪಾವತಿಸಿದೆ.
ಬ್ರಿಟನ್ ರಾಜಮನೆತನದ ಸ್ಫೋಟಕ ದೂರದರ್ಶನ ಸಂದರ್ಶನವನ್ನು ಪಡೆಯಲು ಬಳಸಿದ ಕುತಂತ್ರದ ಬಗ್ಗೆ ಪ್ರಿನ್ಸೆಸ್ ಡಯಾನಾ (Princes Diana) ಅವರ ಖಾಸಗಿ ಕಾರ್ಯದರ್ಶಿಗೆ ಬಿಬಿಸಿ (BBC) ಕ್ಷಮೆಯಾಚಿಸಿದೆ. ಜತೆಗೆ ದೊಡ್ಡ ಮೊತ್ತವನ್ನು ಪರಿಹಾರದ ರೂಪದಲ್ಲಿ ಪಾವತಿಸಿದೆ. ಈ ಕುರಿತು ಸುದ್ದಿಸಂಸ್ಥೆ ಗುರುವಾರ ಮಾಹಿತಿ ನೀಡಿದೆ. 1995 ರಲ್ಲಿ ಬಿಬಿಸಿ ಪತ್ರಕರ್ತ ಮಾರ್ಟಿನ್ ಬಶೀರ್ ಅವರು ನಡೆಸಿದ ಸಂದರ್ಶನದಲ್ಲಿ ಪ್ರಿನ್ಸೆಸ್ ಡಯಾನಾ ಕಾರ್ಯದರ್ಶಿಯಾಗಿದ್ದ ಪ್ಯಾಟ್ರಿಕ್ ಜೆಫ್ಸನ್ ಅವರಿಗೆ ಗಂಭೀರ ಹಾನಿ ಉಂಟಾಗಿದೆ ಎಂದು ಬಿಬಿಸಿ ಪ್ರಸಾರಕರು ಒಪ್ಪಿಕೊಂಡಿದ್ದಾರೆ. ಕಮಾಂಡರ್ ಜೆಫ್ಸನ್ ಅವರಿಗೆ ಉಂಟಾದ ಹಾನಿಗಾಗಿ ಬಿಬಿಸಿ ಕ್ಷಮೆಯಾಚಿಸಿ, ಅವರ ಕಾನೂನು ವೆಚ್ಚವನ್ನು ಪಾವತಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. 1995 ರ ಸಂದರ್ಶನದಲ್ಲಿ ಡಯಾನಾ ಅವರು ಪ್ರಿನ್ಸ್ ಚಾರ್ಲ್ಸ್ ಅವರೊಂದಿಗಿನ ಸಂಬಂಧ ಹಾಳಾಗುತ್ತಿರುವ ಬಗ್ಗೆ ಚರ್ಚಿಸಿದ್ದರು. ಈ ಸಂದರ್ಶನವನ್ನು ಬ್ರಿಟನ್‌ನಲ್ಲಿ 23 ಮಿಲಿಯನ್ ಜನರು ವೀಕ್ಷಿಸಿದ್ದರು. ಇದು ದೊಡ್ಡ ಸಂಚಲನ ಸೃಷ್ಟಿಸಿತ್ತು.
ಕಳೆದ ವರ್ಷ ನಿವೃತ್ತ ಹಿರಿಯ ನ್ಯಾಯಾಧೀಶರು ನೀಡಿದ ವರದಿಯ ಪ್ರಕಾರ ಬಶೀರ್ ಈ ಸಂದರ್ಶನವನ್ನು ಪಡೆಯಲು ಮೋಸದ ತಂತ್ರಗಾರಿಕೆ ಬಳಸಿದ್ದಾರೆ. 25 ವರ್ಷಗಳ ಕಾಲ ಬಶೀರ್ ಅವರ ದುಷ್ಕೃತ್ಯವನ್ನು ಬಿಬಿಸಿ ಮರೆಮಾಚಿದೆ ಎಂದು ನ್ಯಾಯಾಧೀಶ ಜಾನ್ ಡೈಸನ್ ಹೇಳಿದ್ದಾರೆ.
25 ವರ್ಷಗಳ ನಂತರ ಈ ಪ್ರಕರಣದ ಸತ್ಯ ಹೊರಬಂದಿರುವುದು ಸಂತಸ ತಂದಿದೆ ಎಂದು ಜೆಫ್ಸನ್ ಹೇಳಿದ್ದಾರೆ. ಪಾವತಿಯಾದ ಪರಿಹಾರದ ಹಣವನ್ನು ನೋಂದಾಯಿತ ಬ್ರಿಟಿಷ್ ದತ್ತಿ ಸಂಸ್ಥೆಗಳಿಗೆ ದೇಣಿಗೆ ನೀಡಲು ಜೆಫ್ಸನ್ ಉದ್ದೇಶಿಸಿದ್ದಾರೆ.
ಏನಿದು ಡಯಾನಾ ಸ್ಫೋಟಕ ಸಂದರ್ಶನ?
ಬಿಬಿಸಿ ಸಂದರ್ಶನದಲ್ಲಿ ಡಯಾನಾ ಹಲವು ಸ್ಫೋಟಕ ವಿಚಾರಗಳನ್ನು ಬಹಿರಂಗಪಡಿಸಿದ್ದರು. ಪ್ರಿನ್ಸ್ ಚಾರ್ಲ್ಸ್ ಡಚ್ನ ಕ್ಯಾಮಿಲ್ಲಾರೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂದು ಡಯಾನಾ ಹೇಳಿದ್ದರು. ( ಪ್ರಸ್ತುತ ಕ್ಯಾಮಿಲ್ಲಾರನ್ನು ಚಾರ್ಲ್ಸ್ ವಿವಾಹವಾಗಿದ್ದಾರೆ). ಹಲವು ಸ್ಫೋಟಕ ವಿಚಾರ ಹೊಂದಿದ್ದ ಸಂದರ್ಶನವು ದೊಡ್ಡ ಸಂಚಲನ ಸೃಷ್ಟಿಸಿತ್ತು. ಇದರ ನಂತರ ಬ್ರಿಟನ್ ರಾಣಿಯು ಚಾರ್ಲ್ಸ್ ಹಾಗೂ ಡಯಾನಾಗೆ ವಿಚ್ಛೇದನ ಪಡೆಯುವಂತೆ ಸೂಚಿಸಿದ್ದರು.
ಡಯಾನಾ 1996ರಲ್ಲಿ ಚಾರ್ಲ್ಸ್‌ಗೆ ವಿಚ್ಛೇದನ ನೀಡಿದ್ದರು ಮತ್ತು 1997 ರಲ್ಲಿ ಪ್ಯಾರಿಸ್ ಕಾರು ಅಪಘಾತದಲ್ಲಿ ಮರಣಹೊಂದಿದರು. ಸಿಂಹಾಸನದ ಉತ್ತರಾಧಿಕಾರಿಯಾದ ಚಾರ್ಲ್ಸ್ 2005 ರಲ್ಲಿ ಡಚ್ನ ಕ್ಯಾಮಿಲ್ಲಾರನ್ನು ವಿವಾಹವಾದರು.
ಇದನ್ನೂ ಓದಿ:
ಪಟ್ಟನಂತಿಟ್ಟ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ; ಆರ್ಥೊಡಾಕ್ಸ್ ಚರ್ಚ್‌ನ ಪಾದ್ರಿ ಬಂಧನ