36 ಮಿಲಿಯನ್ ವರ್ಷಗಳಷ್ಟು ಹಳೆಯ ತಿಮಿಂಗಿಲದ ಪಳೆಯುಳಿಕೆ ಪತ್ತೆ; ಏನಿದರ ವಿಶೇಷ? ಸಚಿತ್ರ ಮಾಹಿತಿ ಇಲ್ಲಿದೆ
ಒಕುಕಾಜೆ ಮರುಭೂಮಿಯು ಪಳೆಯುಳಿಕೆಗಳಿಂದ ಸಮೃದ್ಧವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. ವಿಜ್ಞಾನಿಗಳಿಗೆ 42 ಮಿಲಿಯನ್ ವರ್ಷಗಳ ಜೀವಿಗಳ ವಿಕಸನದ ಬಗ್ಗೆ ಇದು ಪುರಾವೆಗಳನ್ನು ಒದಗಿಸಿದೆ. ಪ್ರಸ್ತುತ 36 ಮಿಲಿಯನ್ ವರ್ಷಗಳ ಹಿಂದೆ ಸಮುದ್ರಗಳಲ್ಲಿ ವಾಸಿಸುತ್ತಿದ್ದ ಪ್ರಾಚೀನ ತಿಮಿಂಗಿಲದ ಪಳೆಯುಳಿಕೆ ಅವಶೇಷಗಳನ್ನು ಸಂಶೋಧಕರು ಪ್ರದರ್ಶಿಸಿದ್ದಾರೆ.
36 ಮಿಲಿಯನ್ ವರ್ಷಗಳ ಹಿಂದೆ ಸಮುದ್ರಗಳಲ್ಲಿ ವಾಸಿಸುತ್ತಿದ್ದ ಪ್ರಾಚೀನ ತಿಮಿಂಗಿಲದ ಪಳೆಯುಳಿಕೆ ಅವಶೇಷಗಳು ಕಳೆದ ವರ್ಷ ಪೆರುವಿಯನ್ ಮರುಭೂಮಿಯಲ್ಲಿ (Peruvian Desert) ಕಂಡುಬಂದಿತ್ತು. ಇದೀಗ ಪ್ಯಾಲಿಯಂಟಾಲಜಿಸ್ಟ್‌ಗಳು (Paleontologists) ಅದನ್ನು ಗುರುವಾರದಂದು ಅನಾವರಣಗೊಳಿಸಿದ್ದಾರೆ. ‘‘ನಾವು ಹೊಸ ಪೆರುವಿಯನ್ ಬೆಸಿಲೋಸಾರಸ್ (Peruvian basilosaurus) ಅನ್ನು ಪ್ರಸ್ತುತಪಡಿಸುತ್ತಿದ್ದೇವೆ. ಇದು 36 ಮಿಲಿಯನ್ ವರ್ಷಗಳ ಹಿಂದೆ ವಾಸಿಸುತ್ತಿದ್ದ ಪುರಾತನ ತಿಮಿಂಗಿಲದ ಪೂರ್ಣ ತಲೆಬುರುಡೆಯಾಗಿದೆ’’ ಎಂದು ಅದನ್ನು ಕಂಡುಹಿಡಿದ ತಂಡದ ಮುಖ್ಯಸ್ಥ ಪ್ಯಾಲಿಯಂಟಾಲಜಿಸ್ಟ್ ಆಗಿರುವ ಮಾರಿಯೋ ಉರ್ಬಿನಾ ಎಎಫ್ಪಿಗೆ ತಿಳಿಸಿದ್ದಾರೆ. ಲಿಮಾದಿಂದ ದಕ್ಷಿಣಕ್ಕೆ ಸುಮಾರು 350 ಕಿಲೋಮೀಟರ್ (215 ಮೈಲುಗಳು) ದೂರದಲ್ಲಿರುವ ಒಕುಕಾಜೆ ಮರುಭೂಮಿಯ ಇಕಾ ಡಿಪಾರ್ಟ್ಮೆಂಟ್ನಲ್ಲಿ 2021ರ ಕೊನೆಯಲ್ಲಿ ಬೆಸಿಲೋಸಾರಸ್ ಕಂಡುಬಂದಿತ್ತು ಎಂದು ಉರ್ಬಿನಾ ಮಾಹಿತಿ ನೀಡಿದ್ದಾರೆ. ಈ ಪ್ರದೇಶವು ಲಕ್ಷಾಂತರ ವರ್ಷಗಳ ಹಿಂದೆ ಬಹಳಷ್ಟು ಆಳವಿಲ್ಲದ ಸಾಗರವಾಗಿತ್ತು ಎಂದಿರುವ ಅವರು, ಪ್ರಸ್ತುತ ಈ ಪ್ರದೇಶದಲ್ಲಿ ಪ್ರಾಚೀನ ಸಮುದ್ರ ಸಸ್ತನಿ ಅವಶೇಷಗಳು ಕಾಣಸಿಗುತ್ತಿವೆ ಎಂದಿದ್ದಾರೆ. ‘Ocucaje Predator’ ಎಂದು ಸಂಶೋಧಕರು ತಿಮಿಂಗಿಲವನ್ನು ಹೆಸರಿಸಿದ್ದು, ಅದು ಸುಮಾರು 17 ಮೀಟರ್ (55 ಅಡಿ) ಉದ್ದವಿತ್ತು. ಶಾರ್ಕ್ ಮೊದಲಾದ ಆಹಾರವನ್ನು ತಿನ್ನಲು ಅದರ ಬೃಹತ್, ಶಕ್ತಿಯುತ ಹಲ್ಲುಗಳನ್ನು ಬಳಸುತ್ತಿತ್ತು ಎಂದು ಸಂಶೋಧಕರು ಮಾಹಿತಿ ನೀಡಿದ್ದಾರೆ.
‘ಈ ಸಂಶೋಧನೆಯು ಬಹಳ ಮುಖ್ಯವಾಗಿದೆ. ಇದಕ್ಕೆ ಕಾರಣ, ಜಗತ್ತಿನಲ್ಲಿ ಇದುವರೆಗೆ ಇಂತಹ ಯಾವುದೇ ಮಾದರಿಗಳು ಪತ್ತೆಯಾಗಿಲ್ಲ’ ಎಂದು ಲಿಮಾದಲ್ಲಿರುವ ಸ್ಯಾನ್ ಮಾರ್ಕೋಸ್ ರಾಷ್ಟ್ರೀಯ ವಿಶ್ವವಿದ್ಯಾಲಯದ ಸಂಶೋಧಕ ಉರ್ಬಿನಾ ಹೇಳಿದ್ದಾರೆ.
ತಂಡದ ಸದಸ್ಯ ರೊಡಾಲ್ಫೊ ಸಲಾಸ್-ಗಿಸ್ಮೊಂಡಿ ಮಾಹಿತಿ ನೀಡುತ್ತಾ ‘ಬೆಸಿಲೋಸಾರಸ್’ ಹೇಗೆ ಉಳಿದವುಗಳಿಗಿಂತ ಭಿನ್ನ ಎಂದು ತಿಳಿಸಿದ್ದಾರೆ. ಪ್ರಾಚೀನ ತಿಮಿಂಗಿಲ ಪ್ರಭೇದಗಳಿಗಿಂತ ಇದರ ಗಾತ್ರ ಮತ್ತು ಅದರ ಹಲ್ಲುಗಳ ಬೆಳವಣಿಗೆಯಿಂದ ಭಿನ್ನವಾಗಿದೆ ಎಂದಿರುವ ಅವರು, ಇದು ಆಹಾರ ಸರಪಳಿಯ ಮೇಲ್ಭಾಗದಲ್ಲಿದೆ ಎಂದು ಈ ಅಂಶ ಸಾದರಪಡಿಸಿದೆ ಎಂದಿದ್ದಾರೆ.
ಲಿಮಾದಲ್ಲಿನ ನೈಸರ್ಗಿಕ ಇತಿಹಾಸ ವಸ್ತುಸಂಗ್ರಹಾಲಯದಲ್ಲಿ ಕಶೇರುಕಗಳ ಪ್ಯಾಲಿಯಂಟಾಲಜಿ ವಿಭಾಗದ ಮುಖ್ಯಸ್ಥರಾದ ಸಲಾಸ್-ಗಿಸ್ಮೊಂಡಿ ತಮ್ಮ ಮಾತನ್ನು ಮುಂದುವರೆಸುತ್ತಾ, ಈ ಕಂಡುಕೊಳ್ಳುವಿಕೆಯಿಂದ ಆದ ಪ್ರಯೋಜನಗಳನ್ನು ತಿಳಿಸಿದ್ದಾರೆ. ‘ಆ ಸಮಯದಲ್ಲಿ ಪೆರುವಿಯನ್ ಸಮುದ್ರವು ಬೆಚ್ಚಗಿತ್ತು. ಈ ಪಳೆಯುಳಿಕೆಗಳಿಂದ ಪೆರುವಿಯನ್ ಸಮುದ್ರದ ಇತಿಹಾಸವನ್ನು ನಾವು ಪುನರ್ನಿರ್ಮಿಸಬಹುದು’ ಎಂದು ಅವರು ಹೇಳಿದ್ದಾರೆ.
ಬೆಸಿಲೋಸಾರಸ್ ನಂತಹ ಮೊದಲ ಸೆಟಾಸಿಯನ್ಗಳು ಸುಮಾರು 55 ಮಿಲಿಯನ್ ವರ್ಷಗಳ ಹಿಂದೆ ಭೂ ಪ್ರಾಣಿಗಳಿಂದ ವಿಕಸನಗೊಂಡವುಗಳು. ಈಯಸೀನ್ ಅವಧಿಯ ಅಂತ್ಯದ ವೇಳೆಗೆ (56 ಮಿಲಿಯನ್ ಮತ್ತು 34 ಮಿಲಿಯನ್ ವರ್ಷಗಳ ಹಿಂದೆ) ಸೆಟಾಸಿಯನ್ಗಳು ಸಂಪೂರ್ಣವಾಗಿ ಸಮುದ್ರ ಜೀವನಕ್ಕೆ ಹೊಂದಿಕೊಂಡವು. ಆಗ ತಿಮಿಂಗಿಲಗಳು ಇನ್ನೂ ವಿಕಸನಗೊಂಡಿರಲಿಲ್ಲ.
ಒಕುಕಾಜೆ ಮರುಭೂಮಿಯು ಪಳೆಯುಳಿಕೆಗಳಿಂದ ಸಮೃದ್ಧವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. ವಿಜ್ಞಾನಿಗಳಿಗೆ 42 ಮಿಲಿಯನ್ ವರ್ಷಗಳ ಜೀವಿಗಳ ವಿಕಸನದ ಬಗ್ಗೆ ಇಲ್ಲಿ ಪುರಾವೆಗಳನ್ನು ಇದು ಒದಗಿಸಿದೆ.
ಇದನ್ನೂ ಓದಿ:
ಪ್ರಿನ್ಸೆಸ್ ಡಯಾನಾ ಸ್ಫೋಟಕ ಸಂದರ್ಶನ ಪಡೆಯಲು ಬಳಸಿದ ಕುತಂತ್ರಕ್ಕೆ ಕ್ಷಮೆ ಕೇಳಿ, ಪರಿಹಾರ ನೀಡಿದ ಬಿಬಿಸಿ
Published On - 2:50 pm, Fri, 18 March 22