Bill Gates divorce: ಬಿಲ್- ಮೆಲಿಂಡಾ ಗೇಟ್ಸ್ ಡೈವೋರ್ಸ್ ಕೇಸ್​ನಲ್ಲಿ ದುಡ್ಡಿನ ವ್ಯವಹಾರ ಏನು, ಎತ್ತ?

Bill Gates divorce: ಬಿಲ್- ಮೆಲಿಂಡಾ ಗೇಟ್ಸ್ ಡೈವೋರ್ಸ್ ಕೇಸ್​ನಲ್ಲಿ ದುಡ್ಡಿನ ವ್ಯವಹಾರ ಏನು, ಎತ್ತ?
ಬಿಲ್​ ಗೇಟ್ಸ್ ಮತ್ತು ಮೆಲಿಂಡಾ ಗೇಟ್ಸ್ (ಸಂಗ್ರಹ ಚಿತ್ರ)

ಬಿಲ್ ಗೇಟ್ಸ್ ವಿಶ್ವದ ಟಾಪ್ 5 ಶ್ರೀಮಂತರಲ್ಲಿ ಒಬ್ಬರು. ಆಸ್ತಿ ಮೌಲ್ಯ 10.50 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು. ತಮ್ಮ 65ನೇ ವಯಸ್ಸಿನಲ್ಲಿ ಡೈವೋರ್ಸ್ ಪಡೆದಿದ್ದಾರೆ. ಈಗ ಹಲವರ ಪ್ರಶ್ನೆ ಇರುವುದು ಮೆಲಿಂಡಾ ಗೇಟ್​ಗೆ ಎಷ್ಟು ಆಸ್ತಿ ಹೋಗುತ್ತೆ?

Srinivas Mata

|

May 06, 2021 | 2:16 PM


ಭಾರತದಲ್ಲಿ ವಿವಾಹ ವಿಚ್ಛೇದನ ಪಡೆದ ಗಂಡ- ಹೆಂಡತಿ ಇದ್ದರೆ, ತುಂಬ ಸಾಮಾನ್ಯವಾಗಿ ಸುತ್ತಮುತ್ತಲಿನವರ ಪ್ರಶ್ನೆ ಏನಾಗಿರುತ್ತದೆ ಅಂದರೆ, ಎಷ್ಟು ಜೀವನಾಂಶ ಕೊಡಬೇಕು? ಇನ್ನು ಮುಂದೆ ಮಕ್ಕಳು ಯಾರ ಜತೆಗೆ ಇರ್ತಾರೆ? ಆಸ್ತಿಯೆಲ್ಲ ಯಾರ ಹೆಸರಲ್ಲಿದೆ? ಈಗ ಅವರಿಬ್ಬರಿಗೆ ವಯಸ್ಸೆಷ್ಟು? ಮತ್ತೆ ಮದುವೆ ಆಗ್ತಾರಾ? ಇವೇ ರೀತಿಯ ಪ್ರಶ್ನೆಗಳು ಇರುತ್ತವೆ ಅಲ್ಲವಾ? ಆದರೆ ಈಗ ಈ ಲೇಖನದಲ್ಲಿ ಹೇಳಹೊರಟಿರುವುದು ವಿಶ್ವದ ಟಾಪ್ ಟೆನ್ ಶ್ರೀಮಂತರಲ್ಲಿ, ಅದೂ ಅಲ್ಲ, ಟಾಪ್ ಐವರು ಶ್ರೀಮಂತರಲ್ಲಿ ಒಬ್ಬರಾದ ಬಿಲ್ ಗೇಟ್ಸ್ ಮತ್ತು ಮೆಲಿಂಡಾ ಗೇಟ್ಸ್ ಡೈವೋರ್ಸ್ ಬಗ್ಗೆ. ಅದೇನು ಹೀಗಾಗಿ ಹೋಯ್ತು ಅಂದುಕೊಳ್ಳುವವರಿಗೂ ಆಸ್ತಿ- ಪಾಸ್ತಿ ವಿಚಾರದಲ್ಲಿ ಆಸಕ್ತಿ ಇದ್ದೇ ಇರುತ್ತದೆ. ಇವತ್ತಿನ ಲೆಕ್ಕಕ್ಕೆ ಬಿಲ್ ಗೇಟ್ಸ್ ಆಸ್ತಿ ಮೌಲ್ಯ 14,400 ಕೋಟಿ ಅಮೆರಿಕನ್ ಡಾಲರ್​ಗಳು. ಅದನ್ನೇ ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳಬೇಕೆಂದರೆ, 10.50 ಲಕ್ಷ ಕೋಟಿಗೂ ಹೆಚ್ಚು. ಕರ್ನಾಟಕ ರಾಜ್ಯದಿಂದ ಒಂದು ಒಂದು ರೂಪಾಯಿ ತೆರಿಗೆ ವಸೂಲು ಮಾಡಿಕೊಳ್ಳದೆ ನಾಲ್ಕೂವರೆ ವರ್ಷಗಳ ಕಾಲ ಆಡಳಿತ ನಡೆಸಿಬಿಡಬಹುದಾದ ಸಂಪತ್ತು ಈ ವ್ಯಕ್ತಿ ಬಳಿ ಇದೆ.

ಈಗ ಮತ್ತೆ ಬಿಲ್ ಗೇಟ್ಸ್- ಮೆಲಿಂಡಾ ಡೈವೋರ್ಸ್ ಪ್ರಕರಣಕ್ಕೆ ಬರೋಣ. ಬಿಲ್ ಗೇಟ್ಸ್ ಸೃಷ್ಟಿಸಿದಂಥ ಹೋಲ್ಡಿಂಗ್ ಕಂಪೆನಿ ಕ್ಯಾಸ್ಲೇಡ್ ಇನ್ವೆಸ್ಟ್​ಮೆಂಟ್​ನಿಂದ ಮೆಕ್ಸಿಕೋದ ಅತಿ ದೊಡ್ಡ ಕಂಪೆನಿಗಳ ಸ್ಟಾಕ್​ ಅನ್ನು ಮೆಲಿಂಡಾ ಫ್ರೆಂಚ್ ಗೇಟ್ಸ್​ಗೆ ವರ್ಗಾವಣೆ ಮಾಡಲಾಗಿದೆ. ಕಳೆದ ಕೆಲವು ದಿನಗಳಲ್ಲೇ ಮೆಲಿಂಡಾ 200 ಕೋಟಿ ಅಮೆರಿಕನ್ ಡಾಲರ್​ಗೂ ಹೆಚ್ಚು ಪಡೆದಿದ್ದಾರೆ. ಕ್ಯಾಸ್ಕೇಡ್​ನಿಂದ ಕೋಕಾ-ಕೋಲಾ FEMSA ಮತ್ತು ಗ್ರೂಪೋ ಟೆಲಿವಿಸಾ ಸ್ಟಾಕ್​ಗಳ ಹತೋಟಿಯನ್ನು ಮೆಲಿಂಡಾಗೆ ನೀಡಲಾಗಿದೆ. ಮೇ 3ನೇ ತಾರೀಕಿನ ರೆಗ್ಯುಲೇಟರಿ ಫೈಲಿಂಗ್​ನಲ್ಲಿ ತಿಳಿಸಲಾಗಿದೆ. ಅದೇ ದಿನದಂದು 27 ವರ್ಷದ ದಾಂಪತ್ಯಕ್ಕೆ ವಿಚ್ಛೇದನ ನೀಡಿದ್ದಾರೆ.

ಕೆನಡಿಯನ್ ನ್ಯಾಷನಲ್ ರೈಲ್ವೆ ಕಂಪೆನಿ ಮತ್ತು ಆಟೋನೇಷನ್ ಇಂಕ್​ನ 180 ಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಷೇರುಗಳನ್ನು ಈ ವಾರ ಫ್ರೆಂಚ್ ಗೇಟ್ಸ್ ವರ್ಗಾವಣೆ ಮಾಡಿದೆ ಎಂದು ಬ್ಲೂಮ್​ಬರ್ಗ್ ಮಂಗಳವಾರ ವರದಿ ಮಾಡಿದೆ. ಹೇಗೆ ಇತರ ವಿಚ್ಛೇದನ ಪ್ರಕರಣಗಳಲ್ಲಿ ಹಣಕಾಸು ವ್ಯವಹಾರ ಕೂಡ ಒಳಗೊಂಡಿರುತ್ತದೋ ಅದೇ ರೀತಿ ಈಗಲೂ ಆಗುತ್ತದೆ. ಕೆಲವು ಮಾಹಿತಿಗಳು ಹೊರಬಂದಿವೆ. ಇನ್ನು ಈ ದಂಪತಿ ನಡೆಸುತ್ತಿದ್ದ ದಾನ ದತ್ತಿ ಸಂಸ್ಥೆಗೂ ಭಾರೀ ಹೊಡೆತವನ್ನು ನೀಡಿದಂತಾಗುತ್ತದೆ. ಹೆಲ್ತ್​ಕೇರ್, ಶಿಕ್ಷಣ, ಲಿಂಗಾ ಸಮಾನತೆ ಹಾಗೂ ಹವಾಮಾನ ಬದಲಾವಣೆ ಎದುರಿಸಲು ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಷನ್ 5000 ಕೋಟಿ ಅಮೆರಿಕನ್ ಡಾಲರ್​ಗೂ ಹೆಚ್ಚು ಹಣವನ್ನು ನೀಡಿದೆ.

ಆಸ್ತಿ ಮೌಲ್ಯ 14,400 ಕೋಟಿ ಅಮೆರಿಕನ್ ಡಾಲರ್
65 ವರ್ಷದ ಬಿಲ್ ಗೇಟ್ಸ್ ಮೈಕ್ರೋಸಾಫ್ಟ್​ ಕಂಪೆನಿಯ ಸಹ ಸಂಸ್ಥಾಪಕ. ಅವರ ಆಸ್ತಿ ಮೌಲ್ಯ 14,400 ಕೋಟಿ ಅಮೆರಿಕನ್ ಡಾಲರ್. ಇನ್ನು 56 ವರ್ಷದ ಮೆಲಿಂಡಾ ಮೊದಲಿಗೆ ಮೈಕ್ರೋಸಾಫ್ಟ್​ ಕಂಪೆನಿಯಲ್ಲಿ ಮ್ಯಾನೇಜರ್​ ಆಗಿದ್ದವರು. ಕಂಪೆನಿ ನಡೆಸುವ ಫೌಂಡೇಷನ್​ನಲ್ಲಿ ತಮ್ಮ ಛಾಪು ಮೂಡಿಸುವ ಮೂಲಕ ಮೆಲಿಂಡಾ ಕೂಡ ತುಂಬ ದೊಡ್ಡ ಹೆಸರು ಪಡೆದಿದ್ದಾರೆ. ಅಂದಹಾಗೆ ಬಿಲ್​ಗೇಟ್ಸ್ ಪಾಲಿನ ಅತಿ ದೊಡ್ಡ ಆಸ್ತಿ ಅಂದರೆ ಅದು ಕ್ಯಾಸ್ಕೇಡ್ ಇನ್ವೆಸ್ಟ್​ಮೆಂಟ್. ಮೈಕ್ರೋಸಾಫ್ಟ್​ ಸ್ಟಾಕ್ ಮಾರಾಟ ಮತ್ತು ಡಿವಿಡೆಂಡ್​ನಿಂದ ಅದನ್ನು ಗೇಟ್ಸ್ ಸೃಷ್ಟಿಸಿದ್ದಾರೆ. ರಿಯಲ್​ ಎಸ್ಟೇಟ್, ಎನರ್ಜಿ, ಆತಿಥ್ಯ ಸೇರಿದಂತೆ ವಿವಿಧ ವಲಯಗಳಲ್ಲಿ, ಹತ್ತಾರು ಸಾರ್ವಜನಿಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿದ್ದಾರೆ.

ಕೃಷಿ ಯಂತ್ರೋಪಕರಣಗಳ ತಯಾರಕ Deere & Co. ಇದರಲ್ಲಿ ಶೇ 10ಕ್ಕಿಂತ ಹೆಚ್ಚು 1200 ಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಷೇರನ್ನು ಕ್ಯಾಸ್ಕೇಡ್ ಹೊಂದಿದೆ. ಆ ನಂತರ ತ್ಯಾಜ್ಯ ಸಂಗ್ರಹ ಕಂಪೆನಿ ರಿಪಬ್ಲಿಕ್ ಸರ್ವೀಸಸ್ ಇಂಕ್​ನಲ್ಲಿ 1180 ಕೋಟಿ ಅಮೆರಿಕನ್ ಡಾಲರ್​ನಷ್ಟು ಪಾಲಿದೆ. ಅದಾದ ಮೇಲೆ ಕೆನಡಿಯನ್ ನ್ಯಾಷನಲ್ ಮತ್ತು ಎಕೋಲ್ಯಾಬ್ ಇಂಕ್​ಗಳಲ್ಲಿ ಇದೆ. ಬಹುತೇಕ ಪೋರ್ಟ್​ಫೋಲಿಯೋವನ್ನು ಹಣಕಾಸು ನಿರ್ವಾಹಕರಾದ ಮೈಕೇಲ್ ಲಾರ್ಸನ್ ನೋಡಿಕೊಳ್ಳುತ್ತಾರೆ. ಇದರಲ್ಲಿ ಉತ್ತರ ಅಮೆರಿಕನ್ ಕಂಪೆನಿಗಳು, ವಿಶ್ವದ ಅತಿ ದೊಡ್ಡ ಡಿಸ್ಟಿಲ್ಲರ್ ಡಿಯಾಜಿಯೋ ಮತ್ತು ಲಂಡನ್ ಮೂಲದ ಖಾಸಗಿ ಜೆಟ್ ಸೇವಾ ಸಂಸ್ಥೆ ಸಿಗ್ನೇಚರ್ ಏವಿಯೇಷನ್ Plc ಕೂಡ ಇದೆ.

66,000 ಚದರಡಿ ಮ್ಯಾನ್ಷನ್
ನಿಮಗೆ ಗೊತ್ತಿರಲಿ ಈ ಗೇಟ್ಸ್ ದಂಪತಿ ಅಮೆರಿಕದಲ್ಲಿ ಅತಿ ದೊಡ್ಡ ಪ್ರಮಾಣದ ಭೂಮಿ ಹೊಂದಿದ್ದಾರೆ. ಇನ್ನು ವಾಷಿಂಗ್ಟನ್​ನ ಮೆಡಿನಾದಲ್ಲಿ 66,000 ಚದರಡಿ (ಒಂದೂವರೆ ಎಕರೆಯಷ್ಟು) ಮ್ಯಾನ್ಷನ್ ಸೇರಿ, ಮನೆಗಳನ್ನು ಹೊಂದಿದ್ದಾರೆ. ಅಂದಹಾಗೆ ಗಂಡು- ಹೆಣ್ಣು ಇಬ್ಬರೂ ಒಟ್ಟಿಗೆ ಬಾಳಲು ಸಾಧ್ಯವಿಲ್ಲ ಎಂದು ನಿರ್ಧರಿಸುವ ಹಂತಕ್ಕೆ ಮುಟ್ಟುವುದು ಬಹಳ ಖೇದದ ಸಂಗತಿ. ಆದರೆ ಹೇಗೋ ಹೊಂದಿಕೊಂಡು ಹೋಗೋದು ಎಷ್ಟು ಸಾಧ್ಯ? ಡೈವೋರ್ಸ್ ವಿಚಾರದಲ್ಲಿ ಅಮೆರಿಕನ್ನರ ಜತೆಗೆ ಭಾರತೀಯರನ್ನು ಹೋಲಿಸಲು ಸಾಧ್ಯವಿಲ್ಲ. ಆದರೆ ಕೋರ್ಟ್- ಕಚೇರಿ ವ್ಯವಹಾರಗಳಲ್ಲಿ ಹಣಕಾಸು, ಜೀವನಾಂಶ, ಮಕ್ಕಳ ಜವಾಬ್ದಾರಿ ಇವೆಲ್ಲ ಇದ್ದೇ ಇರುತ್ತವೆ. ಅಂದಹಾಗೆ ಈ ದಂಪತಿಗೆ ಜೆನ್ನಿಫರ್, ರೋರಿ ಮತ್ತು ಫೊಬೆ ಎಂಬ ಮೂವರು ಮಕ್ಕಳಿದ್ದಾರೆ.

ಎರಡು ವಾರಗಳ ಹಿಂದಷ್ಟೇ ಕೋಬಿಡ್- 19 ಕಾರ್ಯಕ್ರಮದಲ್ಲಿ ಬಿಲ್- ಮೆಲಿಂಡಾ ಒಟ್ಟಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಆದರೆ ಈಗ ವಿಚ್ಛೇದನ ಘೋಷಣೆ ಮಾಡಿರುವುದು ಸಹಜವಾಗಿ ಅಚ್ಚರಿಗೆ ದೂಡಿದೆ. ಕೆಲಸ ಮತ್ತು ಕುಟುಂಬದ ಸಮತೋಲನ ಮಾಡುವುದು ಬಿಲ್​ ಗೇಟ್ಸ್​ನಿಂದ ಸಾಧ್ಯವಾಗುತ್ತಿರಲಿಲ್ಲ ಅಂತ ಹೇಳಲಾಗುತ್ತಿದೆ. ಆದರೆ ಅದನ್ನು ನಂಬುವುದು ಕಷ್ಟ. ಹಾಗೂ ತೀರಾ ತೆಗೆದುಹಾಕುವಂತೆಯೂ ಇಲ್ಲ. ಇನ್ನೂ ಕೆಲವರು ಈ ವಿವಾಹ ವಿಚ್ಛೇದನದ ಹಿಂದೆ ವ್ಯಾಪಾರ- ಉದ್ಯಮದ ಲೆಕ್ಕಾಚಾರವನ್ನು ಹುಡುಕುತ್ತಿದ್ದಾರೆ.

ಇದನ್ನೂ ಓದಿ: ಬಿಲ್​ ಗೇಟ್ಸ್​ – ಮಿಲಿಂದಾ ಗೇಟ್ಸ್​ ಅವರ 27 ವರ್ಷದ ದಾಂಪತ್ಯ ಅಂತ್ಯ

(Bill Gates and Melinda announced about their divorce. Now the question about wealth of Bill Gates and future operations of Bill and Melinda Gates foundation)

Follow us on

Related Stories

Most Read Stories

Click on your DTH Provider to Add TV9 Kannada