ಹಕ್ಕಿಜ್ವರ(Bird Flu)ದಿಂದ ವಿಶ್ವದಲ್ಲೇ ಮೊದಲ ಸಾವು ಸಂಭವಿಸಿದೆ, ಮೆಕ್ಸಿಕೋದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಕೊರೊನಾಗಿಂತ ಹೆಚ್ಚು ಅಪಾಯಕಾರಿ ಎಂದು ಹೇಳುತ್ತಿರುವ ಹಕ್ಕಿಜ್ವರ(Bird Flu) ಅನೇಕ ದೇಶಗಳಲ್ಲಿ ವೇಗವಾಗಿ ಹರಡುತ್ತಿದೆ. ಇತ್ತೀಚಿನ ವರದಿಗಳಲ್ಲಿ ಹಸುಗಳು ಮತ್ತು ಹಾಲಿನ ಮೂಲಕ ಮನುಷ್ಯರಿಗೆ ಹರಡುವ ಪ್ರಕರಣಗಳು ಅಮೆರಿಕದ ಅನೇಕ ನಗರಗಳಲ್ಲಿ ವರದಿಯಾಗಿದೆ. ಈ ತಿಂಗಳ ಆರಂಭದಲ್ಲಿ ಎಚ್5ಎನ್1 ವೈರಸ್ ಪ್ರಕರಣಗಳ ಹೆಚ್ಚಳದ ಬಗ್ಗೆ ಭಾರತವೂ ಎಚ್ಚರಿಕೆ ನೀಡಿತ್ತು.
H5N1 ವೈರಸ್ ಅನ್ನು ಪಕ್ಷಿ ಜ್ವರ ಎಂದೂ ಕರೆಯುತ್ತಾರೆ. ಈ ತಿಂಗಳ ಆರಂಭದಲ್ಲಿ , ಆಂಧ್ರಪ್ರದೇಶ (ನೆಲ್ಲೂರು ಜಿಲ್ಲೆ), ಮಹಾರಾಷ್ಟ್ರ (ನಾಗ್ಪುರ ಜಿಲ್ಲೆ), ಜಾರ್ಖಂಡ್ (ರಾಂಚಿ ಜಿಲ್ಲೆ) ಮತ್ತು ಕೇರಳ (ಆಲಪ್ಪುಳ, ಕೊಟ್ಟಾಯಂ ಮತ್ತು ಪತ್ತನಂತಿಟ್ಟ ಜಿಲ್ಲೆಗಳು) ನಾಲ್ಕು ರಾಜ್ಯಗಳಿಗೆ ಎಚ್ಚರಿಕೆ ನೀಡಲಾಗಿದೆ.
ಬುಧವಾರ (ಜೂನ್ 5) ಮೆಕ್ಸಿಕೋದಲ್ಲಿ 59 ವರ್ಷದ ವ್ಯಕ್ತಿಯೊಬ್ಬರು ಹಕ್ಕಿ ಜ್ವರದಿಂದ ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಆದಾಗ್ಯೂ, ವ್ಯಕ್ತಿಗೆ ಹೇಗೆ ಸೋಂಕು ತಗುಲಿತು ಎಂಬುದನ್ನು ಯುಎನ್ ಏಜೆನ್ಸಿ ಹೇಳಿಲ್ಲ. ಜ್ವರ, ಉಸಿರಾಟದ ತೊಂದರೆ ಮತ್ತು ಅತಿಸಾರದಂತಹ ರೋಗಲಕ್ಷಣಗಳಿಂದ ರೋಗಿಯನ್ನು ಏಪ್ರಿಲ್ 17 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮತ್ತಷ್ಟು ಓದಿ: Bird Flu : ಹಕ್ಕಿ ಜ್ವರ ಸೋಂಕಿತ ಹಸುವಿನ ಹಸಿ ಹಾಲು ಕುಡಿದ್ರೆ ಆರೋಗ್ಯಕ್ಕೆ ಅಪಾಯ ಖಂಡಿತ, ಅಧ್ಯಯನದಿಂದ ಬಹಿರಂಗ
ಅವರು ದೀರ್ಘಕಾಲದ ಮೂತ್ರಪಿಂಡ ವೈಫಲ್ಯ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಮೊದಲೇ ಅಸ್ತಿತ್ವದಲ್ಲಿರುವ ಕಾಯಿಲೆಗಳನ್ನು ಹೊಂದಿದ್ದರು. ಈ ನಿರ್ದಿಷ್ಟ ಸೋಂಕಿನ ಮೂಲವು ಅಸ್ಪಷ್ಟವಾಗಿದ್ದರೂ, ಮೆಕ್ಸಿಕೋದಲ್ಲಿನ ಕೋಳಿಗಳಲ್ಲಿ A(H5N2) ವೈರಸ್‌ಗಳು ಪತ್ತೆಯಾಗಿವೆ ಎಂದು ಎಂಬುದನ್ನು ವಿಶ್ವ ಆರೋಗ್ಯ ಸಂಸ್ಥೆ ಗಮನಿಸಿದೆ.
ಮೆಕ್ಸಿಕೋದ ಆರೋಗ್ಯ ಸಚಿವಾಲಯವು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದೆ.
ಹಕ್ಕಿ ಜ್ವರ ಎಂದರೇನು?
ಏವಿಯನ್ ಇನ್ಫ್ಲುಯೆನ್ಸ ಎಂದೂ ಕರೆಯಲ್ಪಡುವ ಬರ್ಡ್ ಫ್ಲೂ ವೈರಸ್ ಸೋಂಕು ಆಗಿದ್ದು ಅದು ಪಕ್ಷಿಗಳಿಗೆ ಮಾತ್ರವಲ್ಲ, ಮನುಷ್ಯರು ಮತ್ತು ಇತರ ಪ್ರಾಣಿಗಳಿಗೂ ಸೋಂಕು ತರುತ್ತದೆ.
ಹಕ್ಕಿ ಜ್ವರ ಮೊದಲು ಕಾಣಿಸಿಕೊಂಡಿದ್ದೆಲ್ಲಿ?
ಈ ವೈರಸ್ ಮೊದಲಿಗೆ 1996ರಲ್ಲಿ ಚೀನಾದಲ್ಲಿ ಪತ್ತೆಯಾಗಿದ್ದು, ನಂತರ ಜಗತ್ತಿನಾದ್ಯಂತ ಹರಡಿತು. ಇತ್ತೀಚಿನ ವರ್ಷಗಳಲ್ಲಿ ಪಕ್ಷಿಗಳು ಮತ್ತು ಸಸ್ತನಿಗಳಲ್ಲಿ ಈ ರೋಗದಲ್ಲಿ ಭಾರಿ ಹೆಚ್ಚಳ ಕಂಡುಬಂದಿದೆ. ಹಕ್ಕಿ ಜ್ವರವು ಸೋಂಕಿತ ಪಕ್ಷಿಗಳು ಅಥವಾ ಅವುಗಳ ಹಿಕ್ಕೆಗಳ ನೇರ ಸಂಪರ್ಕದ ಮೂಲಕ ಹರಡುತ್ತದೆ. ಇಲ್ಲಿಯವರೆಗೆ ಮನುಷ್ಯನಿಂದ ಮನುಷ್ಯನಿಗೆ ಹರಡಿರುವ ಯಾವುದೇ ಪುರಾವೆಗಳಿಲ್ಲ.
ಮೊಟ್ಟೆ ಮತ್ತು ಹಾಲಿನಿಂದ ಸೋಂಕು ಹರಡುವುದೇ?
ಉತ್ಪಾದನೆ ಮತ್ತು ಪ್ಯಾಕೇಜಿಂಗ್ ಸಮಯದಲ್ಲಿ ಮೊಟ್ಟೆಗಳು ಕಟ್ಟುನಿಟ್ಟಾದ ನಿಯಮಗಳು ಮತ್ತು ನೈರ್ಮಲ್ಯ ಪ್ರೋಟೊಕಾಲ್‌ಗಳನ್ನು ಅನುಸರಿಸಲಾಗುತ್ತದೆ. ಇದು ಮಾಲಿನ್ಯದ ಸಾಧ್ಯತೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ನೀವು ಮನೆಯಲ್ಲಿ ಅವುಗಳನ್ನು ಹೇಗೆ ನಿರ್ವಹಿಸುತ್ತೀರಿ ಎಂಬುದೇ ಬಹಳ ಮುಖ್ಯವಾಗಿದೆ. ಅದನ್ನು ಚೆನ್ನಾಗಿ ಬೇಯಿಸಿ ತಿನ್ನಬೇಕು. ಅದರ ಹಳದಿ ಅಂಶ ಕೂಡ ಹಸಿಯಾಗಿರಬಾರದು.
ಅಲ್ಲದೆ, ಯಾವಾಗಲೂ ನಿಮ್ಮ ಕೈಗಳನ್ನು ತೊಳೆಯುತ್ತಿರಿ. ಹಾಲಿನ ಸುರಕ್ಷತೆಯು ಪಾಶ್ಚರೀಕರಣದ ಮೇಲೆ ಅವಲಂಬಿತವಾಗಿರುತ್ತದೆ. ಇದು ಪಕ್ಷಿ ಜ್ವರ ಸೇರಿದಂತೆ ವೈರಸ್‌ಗಳನ್ನು ನಾಶಪಡಿಸುತ್ತದೆ. ವಾಸ್ತವವಾಗಿ ವಾಣಿಜ್ಯಿಕವಾಗಿ ಲಭ್ಯವಿರುವ ಎಲ್ಲಾ ಹಾಲು ಕೂಡ ಈ ಪ್ರಕ್ರಿಯೆಗೆ ಒಳಗಾಗುತ್ತದೆ. ಹೀಗಾಗಿ ಪಾಶ್ಚರೀಕರಿಸಿದ (ಶುದ್ಧೀಕರಿಸಿದ) ಹಾಲು ಬಳಕೆಗೆ ಸುರಕ್ಷಿತವಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ