ಪಾಕಿಸ್ತಾನದ ಮಸೀದಿಯಲ್ಲಿ ಭಾರೀ ಸ್ಫೋಟ; ಇಸ್ಲಾಮಿಕ್ ನಾಯಕ ಸೇರಿದಂತೆ ಮೂವರಿಗೆ ಗಾಯ
ದಕ್ಷಿಣ ವಜೀರಿಸ್ತಾನದ ಮಸೀದಿಯಲ್ಲಿ ಪ್ರಬಲ ಸ್ಫೋಟ ಸಂಭವಿಸಿದ್ದು, ಜೆಯುಐ-ಎಫ್ ನಾಯಕ ಅಬ್ದುಲ್ಲಾ ನದೀಮ್ ಮತ್ತು ಮಕ್ಕಳು ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. ಖೈಬರ್ ಪಖ್ತುನ್ಖ್ವಾದಲ್ಲಿ ಉಗ್ರಗಾಮಿ ಚಟುವಟಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ದಾಳಿಯ ತನಿಖೆ ನಡೆಸುತ್ತಿದ್ದಾರೆ. ಉಗ್ರಗಾಮಿ ಚಟುವಟಿಕೆಯ ಇತಿಹಾಸಕ್ಕೆ ಹೆಸರುವಾಸಿಯಾದ ಪ್ರದೇಶವಾದ ದಕ್ಷಿಣ ವಜೀರಿಸ್ತಾನದ ಮಸೀದಿಯೊಳಗೆ ಈ ಸ್ಫೋಟ ಸಂಭವಿಸಿದೆ. ಜಿಲ್ಲಾ ಪೊಲೀಸ್ ಮುಖ್ಯಸ್ಥ ಆಸಿಫ್ ಬಹದ್ದರ್ ಅವರ ಪ್ರಕಾರ, ಈ ದಾಳಿಯು ಜಮಿಯತ್ ಉಲೇಮಾ ಇಸ್ಲಾಂ-ಫಜಲ್ (ಜೆಯುಐ-ಎಫ್) ರಾಜಕೀಯ ಪಕ್ಷದ ಸ್ಥಳೀಯ ನಾಯಕ ಅಬ್ದುಲ್ಲಾ ನದೀಮ್ ಅವರನ್ನು ಗುರಿಯಾಗಿಸಿಕೊಂಡಿದೆ ಎನ್ನಲಾಗಿದೆ.

ಇಸ್ಲಮಾಬಾದ್, (ಮಾರ್ಚ್ 14): ಪಾಕಿಸ್ತಾನದ ವಜೀರಿಸ್ತಾನ್ ಪ್ರದೇಶದ ಮಸೀದಿಯಲ್ಲಿ ಇಂದು ಸಂಭವಿಸಿದ ಸ್ಫೋಟದಲ್ಲಿ ಸ್ಥಳೀಯ ಜೆಯುಐ-ಎಫ್ ನಾಯಕ ಅಬ್ದುಲ್ಲಾ ನದೀಮ್ ಮತ್ತು ಇಬ್ಬರು ಮಕ್ಕಳು ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. ಪಾಕಿಸ್ತಾನದ ವಜಿರಿಸ್ತಾನ್ ಪ್ರದೇಶದ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಸ್ಥಳೀಯ ಇಸ್ಲಾಮಿಕ್ ನಾಯಕ ಮತ್ತು ಮಕ್ಕಳು ಸೇರಿದಂತೆ ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ಪಾಕ್ ದೇಶದ ವಾಯುವ್ಯ ಭಾಗದಲ್ಲಿರುವ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಜಮಿಯತ್ ಉಲೇಮಾ ಇಸ್ಲಾಂ-ಫಜಲ್ (ಜೆಯುಐ-ಎಫ್) ರಾಜಕೀಯ ಪಕ್ಷದ ಸ್ಥಳೀಯ ನಾಯಕ ಅಬ್ದುಲ್ಲಾ ನದೀಮ್ ಅವರನ್ನು ಗುರಿಯಾಗಿಸಿಕೊಂಡು ಈ ಸ್ಫೋಟ ನಡೆದಿದೆ ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ನದೀಮ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಅವರ ಸ್ಥಿತಿ ಗಂಭೀರವಾಗಿದೆ. ಮೌಲಾನಾ ಅಬ್ದುಲ್ ಅಜೀಜ್ ಮಸೀದಿಯಲ್ಲಿ ನಡೆದ ಸ್ಫೋಟದಲ್ಲಿ ಗಾಯಗೊಂಡವರಲ್ಲಿ ಇಬ್ಬರು ಮಕ್ಕಳೂ ಸೇರಿದ್ದಾರೆ ಎಂದು ದಕ್ಷಿಣ ವಜಿರಿಸ್ತಾನ್ ಜಿಲ್ಲಾ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ರೈಲು ಹೈಜಾಕ್ ಮಾಡಿದ 27 ಉಗ್ರರ ಹತ್ಯೆ, 155 ಒತ್ತೆಯಾಳುಗಳ ರಕ್ಷಣೆ
ಪಾಕಿಸ್ತಾನದ ಅಫ್ಘಾನಿಸ್ತಾನದ ಗಡಿ ಪ್ರದೇಶದಲ್ಲಿ ಸಂಭವಿಸಿದ ಸ್ಫೋಟಕ್ಕೆ ಯಾರು ಕಾರಣರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪಾಕಿಸ್ತಾನದ ನೌಶೇರಾ ಜಿಲ್ಲೆಯ ದಾರುಲ್ ಉಲೂಮ್ ಹಕ್ಕಾನಿಯಾ ಸೆಮಿನರಿಯನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬರ್ ನಡೆಸಿದ ಬಾಂಬ್ ದಾಳಿಯಲ್ಲಿ ಜೆಯುಐ-ಎಸ್ ನಾಯಕ ಮೌಲಾನಾ ಹಮೀದುಲ್ ಹಕ್ ಹಕ್ಕಾನಿ ಮತ್ತು ಇತರ ಐವರು ಸಾವನ್ನಪ್ಪಿ, 15 ಜನರು ಗಾಯಗೊಂಡ ಒಂದು ತಿಂಗಳ ನಂತರ ಈ ದಾಳಿ ನಡೆದಿದೆ. ಇದು ಅಫ್ಘಾನ್ ತಾಲಿಬಾನ್‌ನ ಐತಿಹಾಸಿಕ ತರಬೇತಿ ತಾಣವಾಗಿದೆ.
ಬಲೂಚಿಸ್ತಾನ್ ಪ್ರತ್ಯೇಕತಾವಾದಿ ಉಗ್ರರು ರೈಲನ್ನು ಅಪಹರಿಸಿ, ಭದ್ರತಾ ಪಡೆಗಳೊಂದಿಗೆ ದಿನವಿಡೀ ನಡೆದ ರಕ್ತಸಿಕ್ತ ಘರ್ಷಣೆಯಲ್ಲಿ ಪ್ರಯಾಣಿಕರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡ ಕೆಲವೇ ದಿನಗಳ ನಂತರ ಈ ಸ್ಫೋಟ ಸಂಭವಿಸಿದೆ. ಬಲೂಚಿಸ್ತಾನ್ ಸಹ ಅಫ್ಘಾನಿಸ್ತಾನದ ಗಡಿಯನ್ನು ಹೊಂದಿದೆ ಮತ್ತು ಪಾಕಿಸ್ತಾನ ಸರ್ಕಾರವು ಈ ದಾಳಿಯಲ್ಲಿ ಕಾಬೂಲ್‌ನ ಕೈವಾಡವಿದೆ ಎಂದು ಆರೋಪಿಸಿದೆ.
ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಕೇವಲ 59 ಪಾಕಿಸ್ತಾನಿ ಉಗ್ರರು, 17 ಸ್ಥಳೀಯ ಭಯೋತ್ಪಾದಕರು ಸಕ್ರಿಯ; ಸರ್ಕಾರಿ ಮಾಹಿತಿ
ಹೆಚ್ಚುತ್ತಿರುವ ಉಗ್ರರ ಅಟ್ಟಹಾಸದ ವಿರುದ್ಧ ಪಾಕಿಸ್ತಾನ ತನ್ನ ಕಠಿಣ ಕ್ರಮವನ್ನು ತೀವ್ರಗೊಳಿಸುವುದಾಗಿ ಪ್ರತಿಜ್ಞೆ ಮಾಡಿದೆ. ಅಫ್ಘಾನಿಸ್ತಾನ ಉಗ್ರರಿಗೆ ಆಶ್ರಯ ನೀಡುತ್ತಿದೆ ಎಂದು ಆರೋಪಿಸಿದೆ. ಆಡಳಿತಾರೂಢ ಅಫ್ಘಾನ್ ತಾಲಿಬಾನ್ ಇದನ್ನು ನಿರಾಕರಿಸಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ