ಭಾರತದಿಂದ ಲಸಿಕೆ ಖರೀದಿ ಒಪ್ಪಂದ ರದ್ದುಗೊಳಿಸಿದ ಬ್ರೆಜಿಲ್​​; ಹಗರಣದ ಆರೋಪ ಕೇಳಿಬಂದ ಬೆನ್ನಲ್ಲೇ ಕೊವ್ಯಾಕ್ಸಿನ್​ ಖರೀದಿಗೆ ಹಿಂದೇಟು

| Updated By: Skanda

Updated on: Jun 30, 2021 | 7:48 AM

ಮ್ಯಾಡಿಸನ್‌ ಬಯೋಟೆಕ್ ಎಂಬ ನಕಲಿ ಕಂಪನಿಯಿಂದ ಬ್ರೆಜಿಲ್‌ನ ಆರೋಗ್ಯ ಇಲಾಖೆಯ ಮೆಡಿಸಿನ್ ಆಮದು ವಿಭಾಗದ ರಿಕಾರ್ಡೊ ಮಿರಾಂಡಾಗೆ ಒತ್ತಡ ಹೇರಲಾಗುತ್ತಿದೆ ಎಂಬ ಆಪಾದನೆಗಳು ಕೇಳಿಬಂದ ನಂತರ ಇದೀಗ ಒಪ್ಪಂದವನ್ನೇ ಕೈ ಬಿಡಲಾಗುತ್ತಿದೆ ಎಂದು ಬ್ರೆಜಿಲ್ ಆರೋಗ್ಯ ಸಚಿವ ಮಾರ್ಸೆಲೊ ಕ್ವಿರೊಗಾ ಘೋಷಣೆ ಮಾಡಿದ್ದಾರೆ.

ಭಾರತದಿಂದ ಲಸಿಕೆ ಖರೀದಿ ಒಪ್ಪಂದ ರದ್ದುಗೊಳಿಸಿದ ಬ್ರೆಜಿಲ್​​; ಹಗರಣದ ಆರೋಪ ಕೇಳಿಬಂದ ಬೆನ್ನಲ್ಲೇ ಕೊವ್ಯಾಕ್ಸಿನ್​ ಖರೀದಿಗೆ ಹಿಂದೇಟು
ಜೈರ್ ಬಲ್ಸೋನಾರ್‌
Follow us on

ದೆಹಲಿ: ಭಾರತ್​ ಬಯೋಟೆಕ್​ ಸಂಸ್ಥೆಯ ಕೊವ್ಯಾಕ್ಸಿನ್​ ಕೊರೊನಾ ಲಸಿಕೆ ಖರೀದಿಗೆ ಸಂಬಂಧಿಸಿದಂತೆ ಬ್ರೆಜಿಲ್​ನಲ್ಲಿ ದೊಡ್ಡ ಹಗರಣ ನಡೆದಿದೆ ಎಂಬ ಆರೋಪಗಳು ಕೇಳಿ ಬಂದ ಬೆನ್ನಲ್ಲೇ ಸುಮಾರು 32.4 ಕೋಟಿ ರೂಪಾಯಿಯ ಒಪ್ಪಂದವನ್ನು ರದ್ದುಗೊಳಿಸಲಾಗಿದೆ. ಭಾರತೀಯ ಮೂಲದ ಭಾರತ್ ಬಯೋಟೆಕ್​ ಸಂಸ್ಥೆ ಅಭಿವೃದ್ಧಿಪಡಿಸಿದ ಕೊವ್ಯಾಕ್ಸಿನ್​ ಲಸಿಕೆ ಹೆಸರಲ್ಲಿ ಬ್ರೆಜಿಲ್​ ದೇಶದ ಆರೋಗ್ಯ ಇಲಾಖೆ ಭಾರೀ ಹಗರಣ ನಡೆಸಿದೆ, ಭಾರತದಿಂದ ಇನ್ನೂ ಪೂರೈಕೆಯೇ ಆಗದ ಕೊವ್ಯಾಕ್ಸಿನ್​ ಲಸಿಕೆ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ, ಲಸಿಕೆ ಪೂರೈಕೆಯಾಗಿದೆ ಎನ್ನುವ ಮೂಲಕ 45 ಮಿಲಿಯನ್ ಡಾಲರ್ ಹಣ ಬಿಡುಗಡೆ ಮಾಡಲು ಒತ್ತಡ ತರಲಾಗಿದೆ ಎಂದು ಆರೋಪಿಸಲಾಗಿತ್ತು.

ಈ ಹಗರಣವು ಬ್ರೆಜಿಲ್​ ಅಧ್ಯಕ್ಷ ಜೈರ್ ಬಲ್ಸೋನಾರ್‌ ಅವರಿಗೂ ಭಾರೀ ಒತ್ತಡ ತಂದಿದ್ದು, ಕೆಲವು ವರದಿಗಳ ಪ್ರಕಾರ ಅವರ ಖುರ್ಚಿಯನ್ನೇ ಅಲುಗಾಡಿಸುವ ಮಟ್ಟಿಗೆ ಇದು ಸದ್ದು ಮಾಡಿದೆ. ಮ್ಯಾಡಿಸನ್‌ ಬಯೋಟೆಕ್ ಎಂಬ ನಕಲಿ ಕಂಪನಿಯಿಂದ ಬ್ರೆಜಿಲ್‌ನ ಆರೋಗ್ಯ ಇಲಾಖೆಯ ಮೆಡಿಸಿನ್ ಆಮದು ವಿಭಾಗದ ರಿಕಾರ್ಡೊ ಮಿರಾಂಡಾಗೆ ಒತ್ತಡ ಹೇರಲಾಗುತ್ತಿದೆ ಎಂಬ ಆಪಾದನೆಗಳು ಕೇಳಿಬಂದ ನಂತರ ಇದೀಗ ಒಪ್ಪಂದವನ್ನೇ ಕೈ ಬಿಡಲಾಗುತ್ತಿದೆ ಎಂದು ಬ್ರೆಜಿಲ್ ಆರೋಗ್ಯ ಸಚಿವ ಮಾರ್ಸೆಲೊ ಕ್ವಿರೊಗಾ ಘೋಷಣೆ ಮಾಡಿದ್ದಾರೆ.

ಒಟ್ಟು 20 ಮಿಲಿಯನ್ ಡೋಸ್ ಕೊವ್ಯಾಕ್ಸಿನ್ ಲಸಿಕೆ ಖರೀದಿಗೆ ಭಾರತ್​ ಬಯೋಟೆಕ್​ ಸಂಸ್ಥೆಯ ಜತೆ ಬ್ರೆಜಿಲ್​ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಭಾರತ್ ಬಯೋಟೆಕ್ ಸಂಸ್ಥೆ ಭಾರತದಿಂದ ಕೊವ್ಯಾಕ್ಸಿನ್ ಲಸಿಕೆ ಪೂರೈಸುವ ಮುನ್ನವೇ ದಾಖಲೆಯಲ್ಲಿ ಕೊವ್ಯಾಕ್ಸಿನ್ ಲಸಿಕೆ ಪೂರೈಸಿದೆ ಎಂದು ನಕಲಿ ಕಂಪೆನಿ ದಾಖಲೆ ಸೃಷ್ಟಿಸಿ ಹಣ ಪಡೆಯಲು ಯತ್ನಿಸುತ್ತಿದೆ ಎಂಬ ಆರೋಪ ಬಲವಾಗಿ ಕೇಳಿಬಂದಿತ್ತು.

ಅಲ್ಲದೇ, ಈ ಹಗರಣದಲ್ಲಿ ರಿಕಾರ್ಡೋ ಬರೋಸ್ ಭಾಗಿಯಾಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದ ಕಾರಣ ಇದು ಬ್ರೆಜಿಲ್​ನಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಬ್ರೆಜಿಲ್ ಅಧ್ಯಕ್ಷ ಜೈರ್ ಬಲಸೋನಾರ್‌ಗೆ ಸಂಸತ್​ ಸದಸ್ಯರು ಎಚ್ಚರಿಕೆಯನ್ನೂ ನೀಡಿದ್ದರು. ಬ್ರೆಜಿಲ್‌ನಲ್ಲಿ ಭಾರತದ ಕೊವ್ಯಾಕ್ಸಿನ್ ಲಸಿಕೆ ಹೆಸರಿನಲ್ಲಿ ಹಗರಣ ನಡೆದಿರುವುದು ಸ್ಪಷ್ಟ. 1 ಡೋಸ್‌ಗೆ 1.34 ಡಾಲರ್ ದರ ವಿಧಿಸುವುದಾಗಿ ತಯಾರಿಕಾ ಸಂಸ್ಥೆ ಹೇಳಿತ್ತು. ಆದರೆ ಬ್ರೆಜಿಲ್ ಪ್ರತಿ ಡೋಸ್‌ಗೆ 15 ಡಾಲರ್ ನೀಡಲು ತಯಾರಾಗಿದೆ. ಇದು ಕೊವ್ಯಾಕ್ಸಿನ್ ಲಸಿಕೆ ಖರೀದಿ ಹೆಸರಲ್ಲಿ ನಡೆಯುತ್ತಿರುವ ಹಗರಣವಲ್ಲದೇ ಇನ್ನೇನು ಎಂದು ಅಧ್ಯಕ್ಷ ಗೆ ಸಂಸತ್ ಸದಸ್ಯರು ಎಚ್ಚರಿಕೆ ನೀಡಿದ್ದರು. ಹೀಗಾಗಿ ಸದರಿ ವಿಚಾರವು ಬ್ರೆಜಿಲ್ ಅಧ್ಯಕ್ಷರ ಕುರ್ಚಿಗೆ ಕುತ್ತು ತರುವ ಸಾಧ್ಯತೆ ಇದೆ ಎಂಬ ಮಾತುಗಳು ಅಲ್ಲಿ ಶುರುವಾಗುತ್ತಿದ್ದಂತೆಯೇ ಒಪ್ಪಂದವನ್ನೇ ರದ್ದು ಮಾಡಿರುವುದಾಗಿ ಬ್ರೆಜಿಲ್​ ಹೇಳಿದೆ.

ಇದನ್ನೂ ಓದಿ:
ಭಾರತದ ಕೊವ್ಯಾಕ್ಸಿನ್​ ಲಸಿಕೆ ಹೆಸರಲ್ಲಿ ಅತಿದೊಡ್ಡ ಹಗರಣ ನಡೆಸಿದ ಆರೋಪ; ಬ್ರೆಜಿಲ್​ ಅಧ್ಯಕ್ಷರ ಕುರ್ಚಿಯನ್ನೇ ಅಲುಗಾಡಿಸುತ್ತಿದೆ ಕೊರೊನಾ ಲಸಿಕೆ 

ಬ್ರೆಜಿಲ್​ನ ಸೆರಾನಾ ನಗರದಲ್ಲಿ ಲಸಿಕೆ ಪಡೆದದ್ದು ಶೇ 75 ಮಂದಿ, ಶೇ 95ರಷ್ಟು ಇಳಿಕೆ ಆಯ್ತು ಕೊವಿಡ್ ಸಾವು ಪ್ರಕರಣ