ಅಮೆರಿಕ, ಕೆನಡಾದಲ್ಲಿ ಬಿಸಿಗಾಳಿ ಹಾವಳಿಗೆ 200 ಸಾವು: 49.5 ಡಿಗ್ರಿ ಸೆಂಟಿಗ್ರೇಡ್ಗೆ ಏರಿದ ಉಷ್ಣಾಂಶ
ಕೆನಡಾದಲ್ಲಿ ಬಿಸಿಗಾಳಿಯಿಂದ ಕಾರಣದಿಂದ ಮೃತಪಟ್ಟವರ ಸಂಖ್ಯೆ 200 ಸಮೀಪಿಸಿದೆ. ಅಮೆರಿಕದ ಆಗ್ನೇಯ ಭಾಗದ ಶಾಂತಸಾಗರದ ಆಸುಪಾಸಿನಲ್ಲಿಯೂ ಉಷ್ಣಾಂಶ ತೀವ್ರಗತಿಯಲ್ಲಿ ಹೆಚ್ಚಾಗಿದೆ.
ವಾಷಿಂಗ್ಟನ್: ಕೆನಡಾ ಮತ್ತು ಅಮೆರಿದಲ್ಲಿ ಉಷ್ಣಾಂಶ ಏರಿಕೆಯಾಗಿದ್ದು, 49.5 ಡಿಗ್ರಿ ಸೆಂಟಿಗ್ರೇಡ್ ಮುಟ್ಟಿದೆ. ಉಷ್ಣಾಂಶ ಏಕಾಏಕಿ ಏರಿಕೆಯಾಗಿರುವುದು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ. ಕಳೆದ 4 ದಿನಗಳಲ್ಲಿ ವ್ಯಾನ್ಕೊವರ್ ಪ್ರದೇಶದಲ್ಲಿ ಬಿಸಿಗಾಳಿಯಿಂದ ನಾಲ್ವರು ಮೃತಪಟ್ಟಿದ್ದಾರೆ. ಈವರೆಗೆ ಇದೇ ಕಾರಣದಿಂದ ಮೃತಪಟ್ಟವರ ಸಂಖ್ಯೆ 200 ಸಮೀಪಿಸಿದೆ. ಅಮೆರಿಕದ ಆಗ್ನೇಯ ಭಾಗದ ಶಾಂತಸಾಗರದ ಆಸುಪಾಸಿನಲ್ಲಿಯೂ ಉಷ್ಣಾಂಶ ತೀವ್ರಗತಿಯಲ್ಲಿ ಹೆಚ್ಚಾಗಿದೆ.
ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಪಶ್ಚಿಮ ತೀರದಲ್ಲಿ 233 ಮಂದಿ ಸಾವನ್ನಪ್ಪಿದ್ದಾರೆ. ಶುಕ್ರವಾರದಿಂದ ಸೋಮವಾರದ ನಡುವಣ ಅವಧಿಯಲ್ಲಿ, ಅಂದರೆ ಕೇವಲ ನಾಲ್ಕು ದಿನಗಳಲ್ಲಿ ಸತ್ತವರ ಸಂಖ್ಯೆ 100ಕ್ಕೂ ಹೆಚ್ಚು. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಬಹುದು ಎಂದು ವರದಿಗಳು ಹೇಳಿವೆ.
ಕೆನಡಾದ ಬ್ರಿಟಿಷ್ ಕೊಲಂಬಿಯಾ, ಅಲ್ಬರ್ಟಾ, ಸಕ್ಚೆವಾನ್, ಮನಿಟೊಬ, ಯುಕೊನ್ ಮತ್ತು ಆಗ್ನೇಯ ಪ್ರಾಂತ್ಯಗಳಲ್ಲಿ ಬಿಸಿಗಾಳಿ ಬೀಸಬಹುದು ಎಂದು ಕೆನಡಾ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ‘ಸುದೀರ್ಘ ಅವಧಿ, ಅಪಾಯಕಾರಿ ಮತ್ತು ಐತಿಹಾಸಿಕ ಮಟ್ಟದಲ್ಲಿ ಬಿಸಿಗಾಳಿಯು ಈ ವಾರವಿಡೀ ಬೀಸಲಿದೆ’ ಎಂದು ಹವಾಮಾನ ಇಲಾಖೆ ಹೇಳಿದೆ.
ಹಿಂದೆಂದೂ ಇಂಥ ಬಿಸಿಗಾಳಿ ಬೀಸಿರಲಿಲ್ಲ ಇತಿಹಾಸದಲ್ಲಿ ಹಿಂದೆಂದೂ ಕಂಡುಕೇಳರಿಯದಷ್ಟು ಪ್ರಮಾಣದಲ್ಲಿ ಕೆನಡಾದಲ್ಲಿ ಉಷ್ಣಾಂಶ ಹೆಚ್ಚಾಗಿದೆ. ಬ್ರಿಟಿಷ್ ಕೊಲಂಬಿಯಾದ ಲಿಟ್ಟಾನ್ ನಗರದಲ್ಲಿ ಮಂಗಳವಾರ ಸತತ ಮೂರನೇ ದಿನ ಉಷ್ಣಾಂಶವು 49.5 ಡಿಗ್ರಿ ಸೆಲ್ಷಿಯಸ್ ದಾಖಲಾಗಿತ್ತು. ವ್ಯಾನ್ಕೊವೆರ್ ಪ್ರದೇಶದಲ್ಲಿ ಬಿಸಿಗಾಳಿಯಿಂದಾಗಿ ಶಾಲೆಗಳನ್ನು ಮತ್ತು ಲಸಿಕಾ ಕೇಂದ್ರಗಳನ್ನು ಮುಚ್ಚಬೇಕಾಗಿದೆ.
ವ್ಯಾನ್ಕೊವೆರ್ನಲ್ಲಿ ಹಿಂದೆಂದೂ ಇಷ್ಟು ಉಷ್ಣಾಂಶ ದಾಖಲಾಗಿರಲಿಲ್ಲ. ಹತ್ತಾರು ಜನರು ಬಿಸಿಗಾಳಿಯಿಂದ ಸಾಯುತ್ತಿರುವುದು ವಿಷಾದದ ಸಂಗತಿ ಎಂದು ಪೊಲೀಸ್ ಅಧಿಕಾರಿಯೊಬ್ಬರು ಎಎಫ್ಪಿ ಸುದ್ದಿಸಂಸ್ಥೆಗೆ ಪ್ರತಿಕ್ರಿಸಿದ್ದಾರೆ. ವೃದ್ಧರು, ಚಿಕ್ಕಮಕ್ಕಳು ಮತ್ತು ಇತರ ಕಾಯಿಲೆಗಳಿಂದ ಬಳಲುತ್ತಿರುವವರಲ್ಲಿ ಬಿಸಿಗಾಳಿಯು ಹಲವು ಅಡ್ಡಪರಿಣಾಮಗಳನ್ನು ಉಂಟು ಮಾಡಿ, ಜೀವಕ್ಕೆ ಎರವಾಗಬಲ್ಲದು ಎಂದು ಅಲ್ಲಿನ ವೈದ್ಯರು ಎಚ್ಚರಿಸಿದ್ದಾರೆ.
ದುಬೈಗಿಂತ ಅಮೆರಿಕದಲ್ಲಿ ಉಷ್ಣಾಂಶ ಹೆಚ್ಚು ಅಮೆರಿಕದ ಪೊರ್ಟ್ಲೆಂಡ್, ಒರಿಗಾನ್, ಸೀಟಲ್ ಮತ್ತು ವಾಷಿಂಗ್ಟನ್ ನಗರಗಳಲ್ಲಿ 1940ನೇ ಇಸವಿಯಿಂದ ಉಷ್ಣಾಂಶ ದಾಖಲಿಸಲಾಗುತ್ತಿದೆ. ಪೊರ್ಟ್ಲೆಂಡ್ನಲ್ಲಿ 46.1, ಸೀಟಲ್ನಲ್ಲಿ 42.2 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ಸೋಮವಾರ ದಾಖಲಾಗಿತ್ತು.
ಜನರು ಹವಾನಿಯಂತ್ರಿಕ ಕಟ್ಟಡಗಳಲ್ಲಿಯೇ ಇರಬೇಕು. ಬಿಸಿಲು ಹೆಚ್ಚಿದ್ದಾಗ ಮನೆಯಿಂದ ಹೊರಗೆ ಹೋಗಬಾರದು. ಹೆಚ್ಚು ನೀರು ಕುಡಿಯಬೇಕು, ಕುಟುಂಬ ಸದಸ್ಯರು ಮತ್ತು ನೆರೆಹೊರೆಯವರಲ್ಲಿ ಆರೋಗ್ಯ ಸಮಸ್ಯೆಗಳಿದ್ದರೆ ನೆರವಾಗಬೇಕು ಎಂದು ಅಮೆರಿಕದ ರಾಷ್ಟ್ರೀಯ ಹವಾಮಾನ ಸೇವೆ ವಿಭಾಗ ಮನವಿ ಮಾಡಿದೆ. ದೀರ್ಘಕಾಲದ ಒಣಹವೆ ಮತ್ತು ಇದೀಗ ಬಿಸಿಗಾಳಿ ಬೀಸುತ್ತಿರುವುದು ಕಾಳ್ಗಿಚ್ಚಿಗೆ ಪೂರಕವಾದ ವಾತಾವರಣ ನಿರ್ಮಿಸಿದೆ. ಕ್ಯಾಪಿಫೋರ್ನಿಯಾ-ಒರಿಗಾನ್ ಗಡಿಯಲ್ಲಿ ಸೋಮವಾರ ಮುಂಜಾನೆ ಕಾಣಿಸಿಕೊಂಡ ಕಾಳ್ಗಿಚ್ಚು 1,500 ಎಕರೆಯಷ್ಟು ಪ್ರದೇಶವನ್ನು ಸುಟ್ಟುಬೂದಿ ಮಾಡಿತು.
ಅಮೆರಿಕಕ್ಕೆ ಹೋಲಿಸಿದರೆ ದುಬೈ ತುಸು ತಣ್ಣಗಿರಬಹುದು ಎಂದು ಕೆನಡಾ ಹವಾಮಾನ ಇಲಾಖೆಯ ಹವಾಮಾನ ತಜ್ಞ ಡೇವಿಡ್ ಫಿಲಿಪ್ಸ್ ಹೇಳುತ್ತಾರೆ.
ಕೆನಡಾದಲ್ಲಿ ಉಷ್ಣಾಂಶ ಹೆಚ್ಚಾಗಲು ಏನು ಕಾರಣ? ತೀವ್ರ ಚಳಿ ಮತ್ತು ಹಿಮಪಾತಕ್ಕೆ ಕೆನಡಾ ಕುಖ್ಯಾತವಾಗಿದೆ. 1937ರಲ್ಲಿ ಕೆನಡಾದ ಸಸ್ಕಚೆವಾನ್ನಲ್ಲಿ 45 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ದಾಖಲಾಗಿತ್ತು ಎಂದು ಕೆನಡಾದ ಪರಿಸರ ಮತ್ತು ಹವಾಮಾನ ಬದಲಾವಣೆ ಇಲಾಖೆ ಮಾಹಿತಿ ನೀಡುತ್ತದೆ. ಅಮೆರಿಕದ ಒರೊಗಾನ್ನಿಂದ ಕೆನಡಾದ ಆರ್ಕಿಟಿಕ್ ಪ್ರಾಂತ್ಯದವರೆಗೆ ಈ ಬಾರಿ ಹೆಚ್ಚು ಒತ್ತಡದ ಸುಳಿಗಾಳಿ ಬೀಸುತ್ತಿದೆ. ಕೆನಡಾ ಮಾತ್ರವಲ್ಲ ವಿಶ್ವದ ಹಲವು ದೇಶಗಳಿಗೂ 2019 ಅತ್ಯಂತ ಬಿಸಿಯ ವರ್ಷ ಎನಿಸಿತ್ತು. ಕಳೆದ 5 ವರ್ಷಗಳಲ್ಲಿ ವಿಶ್ವದ ಹಲವೆಡೆ ಇತಿಹಾಸದಲ್ಲಿಯೇ ಅತ್ಯಂತ ಹೆಚ್ಚಿನ ತಾಪಮಾನ ದಾಖಲಾಗಿದೆ.
(Heatwave in Canada America Over 200 dead temperatures soar to 49 Centigrade)
ಇದನ್ನೂ ಓದಿ: ಅಮೆರಿಕದಲ್ಲಿ ಸಂಚಾರಿ ವಿಜಯ್ಗೆ ಗೌರವ; ಪ್ರತಿಷ್ಠಿತ ಫ್ರಾಂಕ್ಲಿನ್ ಥಿಯೇಟರ್ನಿಂದ ನಮನ
ಇದನ್ನೂ ಓದಿ: ಲಸಿಕೆ ವಿತರಣೆಯಲ್ಲಿ ಅಮೆರಿಕವನ್ನು ಹಿಂದಿಕ್ಕಿದ ಭಾರತ, ಈವರೆಗೆ ವಿತರಣೆ ಮಾಡಿದ್ದು 32 ಕೋಟಿ ಡೋಸ್