ಸಿಸ್ಕಾಚುವನ್ (ಕೆನಡ): ಸಾಮಾನ್ಯವಾಗಿ ಕೆನಡಾದಲ್ಲಿ (Canada) ಸಾಮೂಹಿಕ ಹಿಂಸಾಚಾರದ ಘಟನೆಗಳು ವಿರಳವೇ. ಅದರೆ ಭಾನುವಾರ ಸಿಸ್ಕಾಚುವನ್ ನಲ್ಲಿ (Saskatchewan) 10 ಜನರನ್ನು ಇರಿದು ಕೊಲೆ ಮಾಡಿದ ಇಬ್ಬರು ಶಂಕಿತರ (suspects) ಪೈಕಿ ಬದುಕುಳಿದಿರುವವನನ್ನು ಘಟನೆ ನಡೆದು ಮೂರು ದಿನಗಳಾದರೂ ಪೊಲೀಸರಿಗೆ ಪತ್ತೆ ಮಾಡುವುದು ಸಾಧ್ಯವಾಗಿಲ್ಲ. ಸದರಿ ಘಟನೆಯಿಂದ ಕೆನಡಾ ತೀವ್ರ ಆಘಾತಕ್ಕೊಳಗಾಗಿದೆ.
ನಾಪತ್ತೆಯಾಗಿರುವ ಶಂಕಿತನನ್ನು ಮೈಲ್ಸ್ ಸ್ಯಾಂಡರ್ಸನ್ ಎಂದು ಗುರುತಿಸಲಾಗಿದ್ದು ಪ್ರಾಯಶಃ ಅವನು ಗಾಯಗೊಂಡಿರಬಹುದೆಂದು ಹೇಳಲಾಗುತ್ತಿದೆ. ಸ್ಯಾಂಡರ್ಸನ್ ಒಂದಿಗೆ ಇರಿದು ಕೊಂದ ಪ್ರಕರಣದಲ್ಲಿ ಭಾಗಿಯಾಗಿದ್ದ ಅವನ ಸಹೋದರ 31-ವರ್ಷದ ಡೇಮಿಯನ್ ಸ್ಯಾಂಡರ್ಸನ್ ಮೃತದೇಹ ಸಿಸ್ಕಾಚುವನ್ ಜೇಮ್ಸ್ ಸ್ಮಿತ್ ಕ್ರೀ ನೇಶನ್ ಎಂಬಲ್ಲಿನ ಹುಲ್ಲುಗಾವಲಿನ ಪ್ರದೇಶದಲ್ಲಿ ಸೋಮವಾರ ಪತ್ತೆಯಾಗಿತ್ತು.
ಸ್ಯಾಂಡರ್ಸನ್ ಸಹೋದರರು ರವಿವಾರದಂದು 10 ಜನರನ್ನು ತಿವಿದು ಕೊಲ್ಲುವುದರ ಜೊತೆಗೆ 18 ಜನರನ್ನು ಗಾಯಗೊಳಿಸಿದರೆಂದು ಶಂಕಿಸಲಾಗಿದೆ. ಅವರಿಂದ ಹಲ್ಲೆಗೊಳಗಾದವರು ಅದೇ ದೇಶದ ನಿವಾಸಿಗಳಾಗಿದ್ದು ಕೆನಡಾದ ಆಧುನಿಕ ಇತಿಹಾಸದಲ್ಲಿ ಇಷ್ಟು ಭೀಕರವಾದ ಹತ್ಯಾಕಾಂಡ ಯಾವತ್ತೂ ನಡೆದಿಲ್ಲ ಎಂದು ಹೇಳಲಾಗಿದೆ.
ಹಲ್ಲೆಗೊಳಗಾಗಿ ಸತ್ತವರಲ್ಲಿ ಹಂತಕರಿಂದ ಟಾರ್ಗೆಟ್ ಮಾಡಿಕೊಂಡವರು ಕೆಲವರಾಗಿದ್ದರೆ ಉಳಿದವರನ್ನು ಹಾಗೆಯೇ ಉದ್ದೇಶರಹಿತವಾಗಿ ಇರಿದು ಕೊಲ್ಲಲಾಗಿದೆ.
ಸಿಸ್ಕಾಚುವನ್ ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ ವಿಭಾಗ ಅಸಿಸ್ಟೆಂಟ್ ಕಮೀಶನರ್ ರೊಂಡಾ ಬ್ಲ್ಯಾಕ್ ಮೋರ್ ಅವರು ನೀಡಿರುವ ಹೇಳಿಕೆ ಪ್ರಕಾರ ಮೈಲ್ಸ್ ಸ್ಯಾಂಡರ್ಸನ್ ನನ್ನು ನೂರಾರು ಪೊಲೀಸ್ ಅಧಿಕಾರಿಗಳು ಹುಡುಕುತ್ತಿದ್ದಾರೆ. ಅವನು ಶಸ್ತ್ರಧಾರಿಯಾಗಿದ್ದು ಬಹಳ ಅಪಾಯಕಾರಿ ವ್ಯಕ್ತಿಯಾಗಿರುವನೆಂದು ಅವರು ಹೇಳಿದ್ದಾರೆ.
ಸ್ಯಾಂಡರ್ಸನ್ ಇದೇ ಮೊದಲ ಬಾರಿಗೆ ಅಪರಾಧ ಕೃತ್ಯಗಳ ನಡಿಸದವನೇನೂ ಅಲ್ಲ. ಈಗ ಹಿಂದೆ ಹಲ್ಲೆ, ದರೋಡೆ, ದುರ್ನಡತೆ ಮತ್ತು ಜನರನ್ನು ಹೆದರಿಸಿದ ಪ್ರಕರಣದಲ್ಲಿ ಅವನು ಜೈಲುವಾಸ ಅನುಭವಿಸಿದ್ದ ಮತ್ತು ಶಿಕ್ಷೆ ಅನುಭವಿಸುತ್ತಿದ್ದ ಅವಧಿಯಲ್ಲಿ ಪರೋಲ್ ಸಿಕ್ಕಾಗ ತಾನು ನಿಯಮಿತವಾಗಿ ಭೇಟಿಯಾಗಬೇಕಿದ್ದ ಪೊಲೀಸ್ ಆಧಿಕಾರಿಯೊಂದಿಗೆ ಜಗಳ ಮಾಡಿಕೊಂಡಿದ್ದ. ಅವನು ತನ್ನನ್ನು ಭೇಟಿ ಮಾಡಲು ಮತ್ತು ಹಾಜರಿ ಹಾಕಲು ಬರುತ್ತಿರಲಿಲ್ಲ ಎಂದು ಅಧಿಕಾರಿ ಹೇಳಿದ್ದರು ಅಂತ ಸಿಬಿಸಿ ವರದಿ ಮಾಡಿದೆ.
ಸ್ಯಾಂಡರ್ಸನ್ ತನ್ನ ಸಹೋದರನನ್ನೂ ಕೊಂದಿರಬಹುದೆಂದು ಪೊಲೀಸರು ಅನುಮಾನಿಸುತ್ತಿದ್ದಾರೆ. ಅವನೊಂದಿಗೆ ಕಾದಾಡುವಾಗ ಗಾಯಗೊಂಡಿರುವ ಸಾಧ್ಯತೆ ಇರುವುದರಿಂದ ವೈದ್ಯಕೀಯ ನೆರವು ಅವನಿಗೆ ಬೇಕಾಗಿರುತ್ತದೆ ಅಂತ ಪೊಲೀಸರು ಭಾವಿಸಿದ್ದಾರೆ.
ಹತರಾದವರ ವಿವರಗಳನ್ನು ಪೊಲೀಸರು ಇದುವರೆಗೆ ಬಹಿರಂಗಪಡಿಸಿಲ್ಲ. ಬಲಿಯಾದವರಲ್ಲಿ ಮಹಿಳೆ ಮತ್ತು ಪುರುಷರು ಸೇರಿದ್ದಾರೆ ಮತ್ತು ಭಿನ್ನ ಭಿನ್ನ ವಯಸ್ಸಿನವರಾಗಿದ್ದಾರೆ ಎಂಬ ವಿವರ ಮಾತ್ರ ಪೊಲೀಸರು ಶೇರ್ ಮಾಡಿದ್ದಾರೆ.
ಒಬ್ಬ ಎರಡು ಮಕ್ಕಳ ತಾಯಿ, ಒಬ್ಬ 77-ವರ್ಷದ ವಿಧವೆ ಹಾಗೂ ಆ ಸಹೋದರರನ್ನು ತಡೆಯಲೆತ್ನಿಸಿದ ಒಬ್ಬ ವ್ಯಕ್ತಿ ಇರಿತಕ್ಕೊಳಗಾಗಿ ಬಲಿಯಾದವರಲ್ಲಿ ಸೇರಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.
ಸಾಮೂಹಿಕ ಹತ್ಯೆಯನ್ನು ಮಾದಕ ವಸ್ತುಗಳಿಗೆ ಥಳುಕು ಹಾಕುವ ಪ್ರಯತ್ನವನ್ನು ಕೆನಡಾದ ಕೆಲ ರಾಜಕೀಯ ನಾಯಕರು ಮಾಡುತ್ತಿರುವರಾದರೂ ಪೊಲೀಸರು ಪ್ರಕರಣದಲ್ಲಿ ಡ್ರಗ್ಸ್ ಮತ್ತು ಮದ್ಯದ ಪಾತ್ರವನ್ನು ಇದುವರೆಗೆ ಪತ್ತೆ ಮಾಡಿಲ್ಲ.
ಪೊಲೀಸರು ನೀಡಿರುವ ಮತ್ತೊಂದು ಅಹಿತಕರ ಸಂಗತಿ ಸಿಸ್ಕಾಚುವನ್ ಪ್ರಾಂತ್ಯದ ಜನರನ್ನು ಆತಂಕಕ್ಕೆ ದೂಡಿದೆ. ವಿಚೆಕಾನ್ ಲೇಕ್ ಫರ್ಸ್ಟ್ ನೇಶನ್ ಪ್ರದೇಶದಲ್ಲಿ ನಡೆದ ಶೂಟಿಂಗ್ ಪ್ರಕರಣವೊಂದನ್ನು ತನಿಖೆ ಮಾಡುತ್ತಿರುವುದಾಗಿ ಹೇಳಿರುವ ಪೊಲೀಸರು ಹಲವಾರು ಸಶಸ್ತ್ರಧಾರಿ ಶಂಕಿತರು ಓಡಾಡಿಕೊಂಡಿದ್ದಾರೆ ಎಂದಿದ್ದಾರೆ.