ಶ್ರೀಲಂಕಾ ನೂತನ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಮುಂದಿರುವ ಸವಾಲುಗಳೇನು? ಆರ್ಥಿಕ ಬಿಕ್ಕಟ್ಟಿನಲ್ಲಿರುವ ಶ್ರೀಲಂಕಾದ ಮುಂದಿನ ರಾಜಕೀಯ ಹೇಗಿರುತ್ತೆ?
ಅರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿ ನರಳುತ್ತಿರುವ ಶ್ರೀಲಂಕಾದ ಹೊಸ ರಾಷ್ಟ್ರಾಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಮುಂದೆ ಈಗ ಸವಾಲುಗಳ ದೊಡ್ಡ ಬೆಟ್ಟವೇ ಇದೆ. ಶ್ರೀಲಂಕಾ ಪಾರ್ಲಿಮೆಂಟ್ 44 ವರ್ಷಗಳಲ್ಲಿ ಮೊದಲ ಬಾರಿಗೆ ನೇರವಾಗಿ ದೇಶದ ಅಧ್ಯಕ್ಷರನ್ನು ಆಯ್ಕೆ ಮಾಡಿದೆ.
ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ರಾನಿಲ್ ವಿಕ್ರಮಸಿಂಘೆ(Ranil Wickremesinghe) ಪಾರ್ಲಿಮೆಂಟ್ ನಲ್ಲಿ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿ ನರಳುತ್ತಿರುವ ಶ್ರೀಲಂಕಾದ ಹೊಸ ರಾಷ್ಟ್ರಾಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಮುಂದೆ ಈಗ ಸವಾಲುಗಳ ದೊಡ್ಡ ಬೆಟ್ಟವೇ ಇದೆ. ರಾಷ್ಟ್ರಪತಿ ಚುನಾವಣೆಗೆ ಮೂವರು ಅಭ್ಯರ್ಥಿಗಳು ಕಣದಲ್ಲಿದ್ದರು. ರಾನಿಲ್ ವಿಕ್ರಮಸಿಂಘೆ, ಡಲ್ಲಾಸ ಅಲಹಪೆರುಮ ಹಾಗೂ ಅನುರಾ ಕುಮಾರ ಡಿಸ್ನಿನಾಯಕೆ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿದ್ದರು.
ಸಂಸತ್‌ನಲ್ಲಿ 225 ಸಂಸದರಿಗೆ ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕು ಇತ್ತು. ಇವರ ಪೈಕಿ 134 ಮಂದಿ ರಾನಿಲ್ ವಿಕ್ರಮಸಿಂಘೆ ಪರ ಮತ ಚಲಾಯಿಸಿದ್ದಾರೆ. ಬಹುಮತಕ್ಕೆ 113 ಸಂಸದರ ಬೆಂಬಲದ ಅಗತ್ಯ ಇತ್ತು. ಭರ್ಜರಿ ಬಹುಮತದೊಂದಿಗೆ ರಾನಿಲ್ ವಿಕ್ರಮಸಿಂಘೆ ಶ್ರೀಲಂಕಾದ ಮುಂದಿನ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. 82 ಮತ ಪಡೆದು ಡಲ್ಲಾಸ ಅಲಹಪೆರುಮ ಎರಡನೇ ಸ್ಥಾನ ಪಡೆದಿದ್ದಾರೆ. ವಿರೋಧ ಪಕ್ಷದ ನಾಯಕ ಸುಜಿತ್ ಪ್ರೇಮದಾಸ್, ಡಲ್ಲಾಸ ಅಲಹಪೆರುಮಗೆ ಬೆಂಬಲ ವ್ಯಕ್ತಪಡಿಸಿದ್ದರು. ಮಾರ್ಕ್ಸ್ ವಾದಿ ನಾಯಕ ಅನುರಾ ಕುಮಾರ ಡಿಸ್ನಿನಾಯಕೆ ಬರೀ 3 ಮತಗಳನ್ನು ಪಡೆದಿದ್ದಾರೆ. ನಾಲ್ಕು ಮತಗಳು ಅಸಿಂಧುವಾದರೇ, ಇಬ್ಬರು ಸಂಸದರು ಮತ ಚಲಾವಣೆಗೆ ಗೈರಾಗಿದ್ದರು. 219ಮತಗಳು ಮಾತ್ರ ಸಿಂಧುವಾಗಿ ಚಲಾವಣೆಯಾಗಿದ್ದವು.
44 ವರ್ಷಗಳಲ್ಲಿ ಮೊದಲ ಬಾರಿಗೆ ನೇರ ಆಯ್ಕೆ
ಶ್ರೀಲಂಕಾ ಪಾರ್ಲಿಮೆಂಟ್ 44 ವರ್ಷಗಳಲ್ಲಿ ಮೊದಲ ಬಾರಿಗೆ ನೇರವಾಗಿ ದೇಶದ ಅಧ್ಯಕ್ಷರನ್ನು ಆಯ್ಕೆ ಮಾಡಿದೆ. ರಾನಿಲ್ ವಿಕ್ರಮಸಿಂಘೆ 2024ರ ನವಂಬರ್ ಅಂತ್ಯದವರೆಗೂ ಶ್ರೀಲಂಕಾದ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ. ರಾನಿಲ್ ವಿಕ್ರಮಸಿಂಘೆಗೆ ಜನಪ್ರಿಯತೆ ಇಲ್ಲ, ಪ್ರತಿಭಟನಾಕಾರರು ರಾನಿಲ್ ವಿಕ್ರಮ ಸಿಂಘೆ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾನಿಲ್ ವಿಕ್ರಮ ಸಿಂಘೆಯ ಖಾಸಗಿ ನಿವಾಸಕ್ಕೂ ಬೆಂಕಿ ಹಚ್ಚಿದ್ದಾರೆ. 2ಕೋಟಿ 15 ಲಕ್ಷ ಜನಸಂಖ್ಯೆ ಹೊಂದಿರುವ ಶ್ರೀಲಂಕಾ ದೇಶ ಈಗ ಚೀನಾದ ಸಾಲದ ಟ್ರ್ಯಾಪ್ ಗೆ ಸಿಲುಕಿದೆ.
ರಾನಿಲ್ ವಿಕ್ರಮ ಸಿಂಘೆ ಮುಂದಿರುವ ಸವಾಲುಗಳೇನು?
- ಆರ್ಥಿಕವಾಗಿ ದಿವಾಳಿಯಾಗಿರುವ ಶ್ರೀಲಂಕಾದ ಆರ್ಥಿಕತೆ ಮೇಲೇತ್ತಲು ಕ್ರಮ ಕೈಗೊಳ್ಳಬೇಕು
- ಪ್ರವಾಸೋದ್ಯಮ ಚೇತರಿಕೆ ಆಗುವಂತೆ ಮಾಡಬೇಕು
- ಚೀನಾದ ಸಾಲದ ಟ್ರ್ಯಾಪ್ ಅನ್ನೂ ನಿಭಾಯಿಸಬೇಕು.
- ಶ್ರೀಲಂಕಾದ ಜನರ ವಿಶ್ವಾಸ ಗಳಿಸಬೇಕು.
- ರಾಜಪಕ್ಸೆ ಕುಟುಂಬದಂತೆ ಭ್ರಷ್ಟಾಚಾರಕ್ಕೆ ಅವಕಾಶ ಕೊಡಬಾರದು
- ಜನರ ದಿನನಿತ್ಯದ ಅಗತ್ಯತೆಗಳನ್ನು ಪೂರೈಸಬೇಕು.
- ವಿದೇಶಿ ನೆರವು ತರಬೇಕು, ಐಎಂಎಫ್ ನೆರವು ಪಡೆಯಬೇಕು
- ಶ್ರೀಲಂಕಾದ ಕೃಷಿ ಕ್ಷೇತ್ರದಲ್ಲಿ ಮೊದಲಿನಂತೆ ಉತ್ತಮ ಉತ್ಪಾದನೆ ಆಗಲು ಕ್ರಮ ಕೈಗೊಳ್ಳಬೇಕು
- ಶ್ರೀಲಂಕಾಕ್ಕೆ ಆರ್ಥಿಕ ಸ್ಥಿರತೆ, ರಾಜಕೀಯ ಸ್ಥಿರತೆಯನ್ನು ತಂದುಕೊಡಬೇಕು.
ಒಬ್ಬರೇ ಸಂಸದ ಇರುವ ಪಕ್ಷಕ್ಕೆ ರಾಷ್ಟ್ರಾಧ್ಯಕ್ಷ ಹುದ್ದೆ
ಇಂದು ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಾನಿಲ್ ವಿಕ್ರಮಸಿಂಘೆ ಅವರು ಯುನೈಟೆಡ್ ನ್ಯಾಷನಲ್ ಪಾರ್ಟಿಯ ಮುಖ್ಯಸ್ಥ. ವಿಶೇಷ ಅಂದ್ರೆ, ಈ ಪಕ್ಷದಲ್ಲಿ ಇರೋದು ಒಬ್ಬರೇ ಸಂಸದ. ಒಬ್ಬ ಸಂಸದರ ಪಕ್ಷದ ನಾಯಕ ರಾನಿಲ್ ವಿಕ್ರಮಸಿಂಘೆ ಈಗ ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ವಿಶೇಷ, ಈ ಹಿಂದೆ 2 ಬಾರಿ ಶ್ರೀಲಂಕಾದ ಅಧ್ಯಕ್ಷರಾಗಲು ರಾನಿಲ್ ವಿಕ್ರಮಸಿಂಘೆ ಯತ್ನಿಸಿ ವಿಫಲವಾಗಿದ್ದರು. ಆದರೇ, ಈಗ ದೇಶದಲ್ಲಿರುವ ವಿಚಿತ್ರ ರಾಜಕೀಯ ಪರಿಸ್ಥಿತಿಯಿಂದಾಗಿ ಅನಾಯಾಸವಾಗಿ ರಾನಿಲ್ ವಿಕ್ರಮಸಿಂಘೆ ರಾಷ್ಟ್ರಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ರಾನಿಲ್ ವಿಕ್ರಮಸಿಂಘೆಗೆ ಗೊಟಬಯ ರಾಜಪಕ್ಸೆ ಅವರ ಎಸ್‌ಎಲ್‌ಪಿಪಿ ಪಕ್ಷದ ಸಂಸದರು ಬೆಂಬಲ ವ್ಯಕ್ತಪಡಿಸಿರುವುದು ವಿಶೇಷ.
ರಾನಿಲ್ ವಿಕ್ರಮಸಿಂಘೆಗೆ ಉಳಿದ ವಿರೋಧ ಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ. ಉಳಿದ ವಿರೋಧ ಪಕ್ಷಗಳ ಬೆಂಬಲದಿಂದಾಗಿಯೇ ರಾನಿಲ್ ವಿಕ್ರಮಸಿಂಘೆ ರಾಷ್ಟ್ರಾಧ್ಯಕ್ಷರಾಗಿ ಆಯ್ಕೆಯಾಗಲು ಸಾಧ್ಯವಾಗಿದೆ. ಸುಜಿತ್ ಪ್ರೇಮದಾಸ್ ಪಾರ್ಲಿಮೆಂಟ್ ನಲ್ಲಿ ತಮಗೆ ಬೆಂಬಲ ಸಿಗಲ್ಲ ಎಂಬ ಕಾರಣದಿಂದ ಸ್ಪರ್ಧೆ ಮಾಡದೇ, ಡಲ್ಲಾಸ್ ಅಲಹಪೆರುಮಗೆ ಬೆಂಬಲ ವ್ಯಕ್ತಪಡಿಸಿದ್ದರು. ಕಳೆದ ಕೆಲ ದಿನಗಳಿಂದ ನಾಪತ್ತೆಯಾಗಿದ್ದ ಮಾಜಿ ಪ್ರಧಾನಿ ಮಹೀಂದಾ ರಾಜಪಕ್ಸೆ, ಪುತ್ರ ನಮಲಾ ರಾಜಪಕ್ಸೆ ಇಂದು ಪಾರ್ಲಿಮೆಂಟ್ ಗೆ ಬಂದು ಅಧ್ಯಕ್ಷೀಯ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ.
ಶ್ರೀಲಂಕಾದಲ್ಲಿ ಈಗ ನಾಯಕತ್ವದ ಕೊರತೆ ಕಾಡುತ್ತಿದೆ. ಶ್ರೀಲಂಕಾವನ್ನು ಆರ್ಥಿಕ ಬಿಕ್ಕಟ್ಟಿನಿಂದ ಹೊರ ತರಲು ಪ್ರಬಲ, ಚಾಣಾಕ್ಷ ರಾಜಕಾರಣಿಗಳ ನಾಯಕತ್ವದ ಅಗತ್ಯ ಇತ್ತು. ಹೀಗಾಗಿಯೇ ಅನುಭವಿ ರಾಜಕಾರಣಿ ರಾನಿಲ್ ವಿಕ್ರಮಸಿಂಘೆಗೆ ಈ ಪರಿಸ್ಥಿತಿ ರಾಷ್ಟ್ರಾಧ್ಯಕ್ಷ ಹುದ್ದೆಗೇರಲು ಅನುಕೂಲಕರ ವಾತಾವರಣ ಸೃಷ್ಟಿ ಮಾಡಿಕೊಟ್ಟಿದೆ. ರಾನಿಲ್ ವಿಕ್ರಮಸಿಂಘೆ, ಶ್ರೀಲಂಕಾದಲ್ಲಿ ನುರಿತ ರಾಜಕಾರಣಿ, ಜೊತೆಗೆ ಸರ್ಕಾರದ ವಿವಿಧ ಹುದ್ದೆಗಳನ್ನು ನಿಭಾಯಿಸಿದ ಅನುಭವ ಇದೆ. ಶ್ರೀಲಂಕಾದ ಚಾಣಾಕ್ಷ ರಾಜಕಾರಣಿ ಕೂಡ ಹೌದು. ಹೀಗಾಗಿ ರಾನಿಲ್ ವಿಕ್ರಮ ಸಿಂಘೆ ರನ್ನು ನರಿ ಅಂತ ಕೂಡ ಕರೆಯುತ್ತಾರೆ.
ರಾನಿಲ್ ವಿಕ್ರಮಸಿಂಘೆ ವಾಸ್ತವವಾದಿ. ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಶುರುವಾಗಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಲು ಆರಂಭಿಸಿದ ಮೇಲೆ ಮೊದಲಿಗೆ ಪ್ರಧಾನಿಯಾಗಿದ್ದ ಮಹೀಂದಾ ರಾಜಪಕ್ಸ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆಗ ಗೊಟಬಯ ರಾಜಪಕ್ಸೆ ನೇರವಾಗಿ ರಾನಿಲ್ ವಿಕ್ರಮಸಿಂಘೆ ಜೊತೆಗೆ ಮಾತನಾಡಿ ಪಕ್ಷಾತೀತವಾಗಿ ಸರ್ಕಾರ ರಚನೆ ಮಾಡಬೇಕಾಗಿದೆ, ತಾವು ಪ್ರಧಾನಿ ಹುದ್ದೆ ವಹಿಸಿಕೊಳ್ಳಬೇಕೆಂದು ರಾನಿಲ್ ವಿಕ್ರಮ ಸಿಂಘೆಗೆ ಕೇಳಿಕೊಂಡಿದ್ದರು. ಆದರೇ, ಇದಕ್ಕೆ ರಾನಿಲ್ ವಿಕ್ರಮಸಿಂಘೆ ಒಪ್ಪಿಕೊಂಡಿರಲಿಲ್ಲ. ಸತತವಾಗಿ ಮನವೊಲಿಸಿದ ಬಳಿಕ ರಾನಿಲ್ ವಿಕ್ರಮಸಿಂಘೆ ಪ್ರಧಾನಿ ಹುದ್ದೆಯನ್ನು ಒಪ್ಪಿಕೊಂಡರು. ಹೀಗೆ ಪ್ರಧಾನಿ ಹುದ್ದೆಗೇರಿದ ರಾನಿಲ್ ವಿಕ್ರಮಸಿಂಘೆ, ಗೊಟಬಯ ರಾಜಪಕ್ಸ ಶ್ರೀಲಂಕಾ ಬಿಟ್ಟು ಮಾಲ್ಡೀವ್ಸ್, ಸಿಂಗಾಪೂರ್‌ಗೆ ಪ್ರಯಾಣ ಮಾಡಿದ ಬಳಿಕ ಹಂಗಾಮಿ ರಾಷ್ಟ್ರಾಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಈಗ ಶ್ರೀಲಂಕಾ ಪಾರ್ಲಿಮೆಂಟ್ ನಲ್ಲಿ ದೇಶದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ರಾಜಕೀಯ ಸ್ಥಿರತೆ ಇದ್ದರೇ, ಆರ್ಥಿಕ ಸ್ಥಿರತೆಗೆ ಯತ್ನ
ಶ್ರೀಲಂಕಾಗೆ ಈಗ ಮೊದಲು ರಾಜಕೀಯ ಸ್ಥಿರತೆ ಬೇಕು. ಶ್ರೀಲಂಕಾದಲ್ಲಿ ಸದ್ಯ ಅರಾಜಕ ಸ್ಥಿತಿ ಇದೆ. ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ, ದೇಶದಲ್ಲಿ ಶಾಂತಿ ಇಲ್ಲ. ದೇಶದ ಯುವಜನತೆ ಸೇರಿದಂತೆ ಎಲ್ಲರೂ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ. ಗೊಟಬಯ ರಾಜಪಕ್ಸೆ ಕುಟುಂಬದ ಭ್ರಷ್ಟಾಚಾರ, ಸ್ವಜನಪಕ್ಷಪಾತ, ತಪ್ಪು ಧೋರಣೆ, ನೀತಿಗಳು, ಭಯೋತ್ಪಾದನೆ, ಕೊರೊನಾ ವೈರಸ್, ಚೀನಾದ ಸಾಲದ ಸುಳಿ ಶ್ರೀಲಂಕಾವನ್ನು ಆರ್ಥಿಕವಾಗಿ ದಿವಾಳಿಯನ್ನಾಗಿ ಮಾಡಿವೆ. ಶ್ರೀಲಂಕಾಗೆ ಮೊದಲಿನಂತೆ ಆರ್ಥಿಕತೆಯಲ್ಲಿ ಸ್ಥಿರತೆಯನ್ನು ತರಬೇಕಾಗಿದೆ. ಆರ್ಥಿಕ ಸ್ಥಿರತೆ ತರಲು ರಾಜಕೀಯ ಸ್ಥಿರತೆ ಬೇಕು. ರಾಜಕೀಯ ಸ್ಥಿರತೆಗೆ ರಾನಿಲ್ ವಿಕ್ರಮಸಿಂಘೆ ದೇಶದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಹಾಯಕವಾಗಬಹುದು. ಈಗ ದೇಶಕ್ಕೆ ಹೊಸ ಪ್ರಧಾನಿಯನ್ನು ನೇಮಿಸಬೇಕು. ಬಳಿಕ ದೇಶಕ್ಕೆ ಆರ್ಥಿಕ ಸ್ಥಿರತೆಯನ್ನು ತಂದುಕೊಡಲು ಹೊಸ ಅಧ್ಯಕ್ಷ, ಪ್ರಧಾನಿ ಒಟ್ಟಾಗಿ ಕೆಲಸ ಮಾಡಬೇಕಾಗಿದೆ.
ಶ್ರೀಲಂಕಾದಲ್ಲಿ ಕಠಿಣ ಪರಿಸ್ಥಿತಿ ಇದೆ ಎಂದ ರಾನಿಲ್
ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಬಳಿಕ ಮಾತನಾಡಿದ ಸೋತ ಅಭ್ಯರ್ಥಿ ಡಲ್ಲಾಸ್ ಅಲಪಪೆರುಮ, ಪಾರ್ಲಿಮೆಂಟ್ ತೀರ್ಮಾನವನ್ನು ಒಪ್ಪಿಕೊಳ್ಳುವೆ ಎಂದಿದ್ದಾರೆ. ಇನ್ನೂ ಗೆದ್ದಿರುವ ರಾನಿಲ್ ವಿಕ್ರಮಸಿಂಘೆ, ಶ್ರೀಲಂಕಾದಲ್ಲಿ ಈಗ ಕಠಿಣ ಪರಿಸ್ಥಿತಿ ಇದೆ. ನಮ್ಮ ಮುಂದಿರುವ ಸವಾಲುಗಳನ್ನು ಎದುರಿಸಬೇಕಾಗಿದೆ ಎಂದಿದ್ದಾರೆ. ಜೊತೆಗೆ ವಿರೋಧ ಪಕ್ಷದ ನಾಯಕ ಸುಜಿತ್ ಪ್ರೇಮದಾಸ್, ಮಾಜಿ ಅಧ್ಯಕ್ಷ ಮಹೀಂದಾ ರಾಜಪಕ್ಸ, ಮೈತ್ರಿಪಾಲ ಸಿರಿಸೇನಾ ಸೇರಿದಂತೆ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು. ನಾವು ಕಳೆದ 48 ಗಂಟೆಗಳಲ್ಲಿ ಇಬ್ಬಾಗ ಆಗಿದ್ದೇವು. ಈಗ ಆ ಅವಧಿ ಮುಗಿದಿದೆ. ಇನ್ನೂ ಒಗ್ಗೂಡಿ ಕೆಲಸ ಮಾಡಬೇಕು ಎಂದು ರಾನಿಲ್ ವಿಕ್ರಮ ಸಿಂಘೆ ಹೇಳಿದ್ದಾರೆ. ಈ ಮೊದಲೇ ತಮ್ಮ ಆದ್ಯತೆಯು ದೇಶದ ಆರ್ಥಿಕತೆಯನ್ನು ಬಲಪಡಿಸುವುದು ಎಂದು ರಾನಿಲ್ ವಿಕ್ರಮಸಿಂಘೆ ಹೇಳಿದ್ದಾರೆ.
ಯಾರು ಈ ರಾನಿಲ್ ವಿಕ್ರಮಸಿಂಘೆ?
ರಾನಿಲ್ ವಿಕ್ರಮಸಿಂಘೆ ಮೂಲತಃ ವೃತ್ತಿಯಲ್ಲಿ ವಕೀಲರು. ಬಳಿಕ ರಾಜಕೀಯ ರಂಗ ಪ್ರವೇಶಿಸಿ 6 ಬಾರಿ ಶ್ರೀಲಂಕಾದ ಪ್ರಧಾನಿ ಹುದ್ದೆಗೇರಿದವರು. 2 ಬಾರಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಸೋಲು ಉಂಡಿದ್ದರು. ಈಗ ದೇಶದ ಅಧ್ಯಕ್ಷರಾಗಿ ಭರ್ಜರಿ ಬಹುಮತದೊಂದಿಗೆ ಆಯ್ಕೆಯಾಗಿದ್ದಾರೆ. ಹೊಸ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಮುಂದೆ ಬೆಟ್ಟದಷ್ಟು ಕಠಿಣ ಸವಾಲುಗಳಿರುವುದಂತೂ ನಿಜ. ಅವುಗಳನ್ನೆಲ್ಲಾ ಹೇಗೆ ಎದುರಿಸಿ ದೇಶದ ಆರ್ಥಿಕತೆಯನ್ನು ಸರಿದಾರಿಗೆ ತರುತ್ತಾರೆ ಎನ್ನುವುದನ್ನು ಶ್ರೀಲಂಕಾದ ಜನರು ಕಾದು ನೋಡಬೇಕಾಗಿದೆ.
ವರದಿ: ಚಂದ್ರಮೋಹನ್, ನ್ಯಾಷನಲ್ ಬ್ಯೂರೋ, ಟಿವಿ9
Published On - 8:15 pm, Wed, 20 July 22