Breaking News: ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗುವತ್ತ ದಾಪುಗಾಲು: ಅಂತಿಮ ಸುತ್ತಿನಲ್ಲಿ ನಿರಾಯಾಸದ ಗೆಲುವು; ಇನ್ನು, ಲಿಜ್ ಟ್ರಸ್ ಜೊತೆ ಅಂತಿಮ ಹಣಾಹಣಿ!
ಬ್ರಿಟನ್ ಪ್ರಧಾನಿ ಪಟ್ಟಕ್ಕೆ ಈಗ ಇಬ್ಬರೇ ಸ್ಪರ್ಧಿಗಳು ರಿಷಿ ಸುನಕ್ ಮತ್ತು ಲಿಜ್ ಟ್ರಸ್
ಲಂಡನ್: ಬ್ರಿಟನ್ ಶೀಘ್ರದಲ್ಲೇ ಹೊಸ ಪ್ರಧಾನಿಯನ್ನು ಪಡೆಯಲಿದೆ. ಈ ನಿಟ್ಟಿನಲ್ಲಿ ಭಾರತೀಯ ಮೂಲದ ರಿಷಿ ಸುನಕ್ ಅವರು (Rishi Sunak) ತಮ್ಮ ಹಕ್ಕು ಮಂಡಿಸುವುದು ಬಹುತೇಕ ಖಚಿತವಾಗಿದೆ ಎಂದು ಪರಿಗಣಿಸಲಾಗಿದೆ. ಬುಧವಾರ ನಡೆದ ಐದನೇ ಹಾಗೂ ಅಂತಿಮ ಹಂತದ ಮತದಾನದಲ್ಲಿ ಗರಿಷ್ಠ ಮತಗಳಿಂದ ಗೆಲುವು ಸಾಧಿಸುವ ಮೂಲಕ ಅಂತಿಮ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಇಂದು ಬುಧವಾರ ನಡೆದ ಅಂತಿಮ ಸುತ್ತಿನಲ್ಲಿ ಕನ್ಸರ್ವೇಟಿವ್ ಪಕ್ಷದ (Conservative Party) ಸಹ ಸಂಸದರು 137 ಮತಗಳಿಂದ ರಿಷಿ ಸುನಕ್ ಅವರ ಪರವಾಗಿ ಅಗಾಧ ಮತಗಳನ್ನು ಚಲಾಯಿಸಿದ್ದಾರೆ.
ಭಾರತೀಯ ಮೂಲದ ರಿಷಿ ಸುನಕ್ ಅವರು ಈ ಹಿಂದೆ ಬ್ರಿಟನ್ ಹಣಕಾಸು ಸಚಿವರಾಗಿದ್ದರು. ರಿಷಿ ಸುನಕ್ ಐದನೇ ಮತ್ತು ಅಂತಿಮ ಚರಣದ ಮತದಾನದಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಇದರೊಂದಿಗೆ ಬ್ರಿಟನ್ ಪ್ರಧಾನಿಯಾಗುವ ರೇಸ್ ನಲ್ಲಿ ಅಂತಿಮ ಸುತ್ತಿಗೆ ತಲುಪಿದ್ದಾರೆ. ಅಲ್ಲಿ ಈಗ ಅವರು ಲಿಜ್ ಟ್ರಸ್ ಅವರಿಂದ ಪೈಪೋಟಿ ಎದುರಿಸಲಿದ್ದಾರೆ. ಬೋರಿಸ್ ಜಾನ್ಸನ್ ಅವರ ಅಧಿಕಾರಾವಧಿಯಲ್ಲಿ ಟ್ರಸ್ ವಿದೇಶಾಂಗ ಕಾರ್ಯದರ್ಶಿಯಾಗಿದ್ದರು ಎಂಬುದು ಗಮನಾರ್ಹ. ಬುಧವಾರ ನಡೆದ ಐದನೇ ಹಂತದ ಮತದಾನದಲ್ಲಿ ಟ್ರಸ್ ಎರಡನೇ ಸ್ಥಾನ ಗಳಿಸಿದ್ದಾರೆ. ಸುನಕ್ ಪಡೆದಿರುವ ಮತಗಳು ಹೆಚ್ಚು.
ಹೀಗಿತ್ತು ಅಂತಿಮ ಸುತ್ತು ಬೋರಿಸ್ ಜಾನ್ಸನ್ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲು ಕನ್ಸರ್ವೇಟಿವ್ ಪಕ್ಷದ ಸಂಭಾವ್ಯ ಪ್ರಧಾನಿ ಅಭ್ಯರ್ಥಿಗಳ ನಡುವೆ ಐದನೇ ಮತ್ತು ಅಂತಿಮ ಸುತ್ತಿನ ಮತ ಎಣಿಕೆ ಬುಧವಾರ ನಡೆಯಿತು. ಇದರಲ್ಲಿ ಮಾಜಿ ಹಣಕಾಸು ಸಚಿವ ರಿಷಿ ಸುನಕ್, ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಮತ್ತು ಹಣಕಾಸು ಸಚಿವ ಪೆನ್ನಿ ಮೊರ್ಡಾಂಟ್ ನಡುವೆ ಪೈಪೋಟಿ ಇತ್ತು. ಈ ಚುನಾವಣೆಯಲ್ಲಿ ರಿಷಿ ಸುನಕ್ ಗರಿಷ್ಠ 137 ಮತಗಳನ್ನು ಪಡೆದರು. ಎರಡನೇ ಸ್ಥಾನದಲ್ಲಿರುವ ಟ್ರಸ್ 113 ಸಂಸದರ ಬೆಂಬಲ ಗಳಿಸಿದರು. ಏತನ್ಮಧ್ಯೆ, ಹಣಕಾಸು ಸಚಿವ ಪೆನ್ನಿ ಮೊರ್ಡಾಂಟ್ 105 ಮತಗಳೊಂದಿಗೆ ಮೂರನೇ ಸ್ಥಾನ ಪಡೆದ ನಂತರ ರೇಸ್‌ನಿಂದ ಹೊರಬಿದ್ದರು.
42 ವರ್ಷದ ರಿಷಿ ಸುನಕ್ ಎಲ್ಲ ಸುತ್ತಿನಲ್ಲೂ ಅಗ್ರಸ್ಥಾನ! 42 ವರ್ಷದ ಬ್ರಿಟಿಷ್ ಇಂಡಿಯನ್ ಮಾಜಿ ಚಾನ್ಸೆಲರ್ ರಿಷಿ ಸುನಕ್ ಇಲ್ಲಿಯವರೆಗೆ ಪ್ರತಿ ಸಮೀಕ್ಷೆಯಲ್ಲಿಯೂ ಅಗ್ರಸ್ಥಾನದಲ್ಲಿದ್ದಾರೆ. ಮಂಗಳವಾರ ನಡೆದ ಮತದಾನದಲ್ಲಿ ಅವರು 118 ಸಂಸದರ ಮತಗಳನ್ನು ಪಡೆದರು. ಹಾಗಾಗಿ ಬುಧವಾರ ನಡೆದ ಚುನಾವಣೆಯಲ್ಲಿ ಹೆಚ್ಚುವರಿಯಾಗಿ 19 ಸಂಸದರ ಮತಗಳನ್ನು ತಮ್ಮ ಪರವಾಗಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಅವರು 137 ಸಂಸದರ ಮತಗಳನ್ನು ಪಡೆದರು.
ಸುನಕ್ ಮತ್ತು ಟ್ರಸ್ ಸೋಮವಾರ ಬಿಬಿಸಿ ಟಿವಿಯಲ್ಲಿ ನೇರ ಚರ್ಚೆ
ಅಂತಿಮ ಕದನಕ್ಕೂ ಮುನ್ನ ಕೊನೆಯ ಈ ಇಬ್ಬರು ಅಭ್ಯರ್ಥಿಗಳ ನಡುವೆ ಬಿಬಿಸಿ ಟಿವಿಯಲ್ಲಿ ಸೋಮವಾರ ನೇರ ಚರ್ಚೆ ನಡೆಯಲಿದೆ. ಲೈವ್ ಟೆಲಿವಿಷನ್ ಡಿಬೇಟ್‌ನಲ್ಲಿ ಇಬ್ಬರೂ ತಮ್ಮ ಒನ್-ಆನ್-ಒನ್ ಚರ್ಚೆಯನ್ನು ಪ್ರಸ್ತುತ ಪಡಿಸಲಿದ್ದಾರೆ. ಇದಾದ ಬಳಿಕ ಅಂತಿಮ ಹಂತದ ಮತದಾನ ಪ್ರಕ್ರಿಯೆ ನಡೆಸಲಾಗುವುದು. ಸೆಪ್ಟೆಂಬರ್ ವೇಳೆಗೆ ಫಲಿತಾಂಶವನ್ನು ನಿರೀಕ್ಷಿಸಲಾಗಿದೆ.
ಸುನಕ್ ವಿರುದ್ಧವಾಗಿವೆ ಸಮೀಕ್ಷೆಗಳು !
ಸುನಕ್ ಅವರು ಕನ್ಸರ್ವೇಟಿವ್ ಸಂಸದೀಯ ಪಕ್ಷದ ಚುನಾವಣೆಯಲ್ಲಿ ಮುಂಚೂಣಿಯಲ್ಲಿದ್ದರೂ ಸಹ, ಪಕ್ಷದ ವಿಶಾಲ ಸದಸ್ಯತ್ವದ ನೆಲೆಯಿಂದ ನೋಡುವುದಾದರೆ ಸುನಕ್ ಅವರ ಜನಪ್ರಿಯತೆಯು ಹೊಂದಿಕೆಯಾಗುವುದಿಲ್ಲ. ಸೋಮವಾರ ಮತ್ತು ಮಂಗಳವಾರ 725 ಕನ್ಸರ್ವೇಟಿವ್ ಪಕ್ಷದ ಸದಸ್ಯರ ಅಭಿಪ್ರಾಯಗಳನ್ನಾಧರಿಸಿ ನಡೆದ ಇತ್ತೀಚಿನ YouGov ಸಮೀಕ್ಷೆಯ ಪ್ರಕಾರ ಟ್ರಸ್ ತನ್ನ ಪ್ರತಿಸ್ಪರ್ಧಿ ಸುನಕ್ ಅವರಿಂದ ಶೇ. 54 ರಿಂದ 35 ರಷ್ಟು ಮುಂದಿದ್ದಾರೆ. ಅದೇ ಸಮಯದಲ್ಲಿ, ಬೋರಿಸ್ ಜಾನ್ಸನ್ ಅವರಿಗೆ ವಿರುದ್ಧವಾಗಿ ನಿಂತಿರುವುದು ಸುನಕ್ ಅವರಿಗೆ ಪ್ರತಿಕೂಲವಾಗಲಿದೆ ಎಂದು ಪರಿಗಣಿಸಲಾಗಿದೆ.
Published On - 9:27 pm, Wed, 20 July 22