ಚಿಕಾಗೊ: ಅಮೆರಿಕದಲ್ಲಿ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರ ಮೇಲೆ ಅಡ್ಡಾದಿಡ್ಡಿ ಗುಂಡು ಹಾರಿಸುವ ಪ್ರವೃತ್ತಿ ಹೆಚ್ಚಾಗಿದೆ. ಚಿಕಾಗೊ ಹೊರವಲಯದಲ್ಲಿ ಸೋಮವಾರ (ಜುಲೈ 4) ನಡೆದಿರುವ ಗುಂಡಿನ ದಾಳಿಯಲ್ಲಿ ಆರು ಮಂದಿ ಮೃತಪಟ್ಟಿದ್ದು, 24 ಜನರು ಗಾಯಗೊಂಡಿದ್ದಾರೆ. ‘ಫೋರ್ತ್ ಆಫ್ ಜುಲೈ’ (ಅಮೆರಿಕದ ಸ್ವಾತಂತ್ರ್ಯ ದಿನಾಚರಣೆ) ಪಾರಂಪರಿಕ ಉತ್ಸವದ ಸಂಭ್ರಮದಲ್ಲಿದ್ದವರ ಮೇಲೆ ಆಗಂತುಕನೊಬ್ಬ ಅಡ್ಡಾದಿಡ್ಡಿ ಗುಂಡು ಹಾರಿಸಿದ್ದಾನೆ. ಸಮೀಪದ ಚಿಲ್ಲರೆ ಅಂಗಡಿಯೊಂದರ ಮೇಲೆ ನಿಂತಿದ್ದ ವ್ಯಕ್ತಿ ಉತ್ಸವ ಆರಂಭವಾಗುವ ಕೆಲವೇ ನಿಮಿಷಗಳ ಮೊದಲು ಗುಂಡು ಹಾರಿಸಲು ಆರಂಭಿಸಿದ.
ಗುಂಡಿನ ದಾಳಿಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಗುಂಡಿನ ದಾಳಿಗೆ ಬೆದರಿದ ಜನರು ಎತ್ತೆಂದರತ್ತ ಓಡಿದ್ದಾರೆ. ಚಿಕಾಗೊ ನಗರದ ಹೈಲೆಂಡ್ ಪಾರ್ಕ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಫುಟ್ಪಾತ್ ಮೇಲೆ ಕುಳಿತು ಪೆರೇಡ್ ನೋಡುತ್ತಿದ್ದ ಜನರು ಗುಂಡಿನ ಧ್ವನಿ ಕೇಳಿದ ತಕ್ಷಣ ನೆಲಕ್ಕೆ ಮಲಗಿ, ಸುತ್ತಮುತ್ತ ಓಡುವುದು ವೈರಲ್ ವಿಡಿಯೊದಲ್ಲಿ ದಾಖಲಾಗಿದೆ. ‘ಗನ್ಶಾಟ್ಸ್’ ಎನ್ನುವ ಗಾಬರಿಯ ಕೂಗು ಹಿನ್ನೆಲೆಯಲ್ಲಿ ಕೇಳಿ ಬಂದಿದೆ.
ತೀವ್ರವಾಗಿ ಗಾಯಗೊಂಡಿರುವ ಸುಮಾರು 24 ಮಂದಿಯನ್ನು ಹೈಲೆಂಡ್ ಪಾರ್ಕ್ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಪೈಕಿ ಆರು ಮಂದಿ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ಘೋಷಿಸಿದರು ಎಂದು ಚಿಕಾಗೊ ಪೊಲೀಸ್ ಅಧಿಕಾರಿ ಕ್ರಿಸ್ ಒ ನೀಲ್ ಹೇಳಿದ್ದಾರೆ. ಸುಮಾರು 18ರಿಂದ 20 ವರ್ಷ ವಯೋಮಾನದ, ಉದ್ದ ಕೂದಲಿರುವ ಶ್ವೇತವರ್ಣೀಯ ಈ ದುಷ್ಕೃತ್ಯದ ಆರೋಪಿ ಎಂದು ಪ್ರತ್ಯಕ್ಷದರ್ಶಿಗಳ ಹೇಳಿಕೆ ಆಧರಿಸಿ ಊಹಿಸಲಾಗಿದೆ.
ದುರ್ಘಟನೆಯ ಕಾರಣದಿಂದಾಗಿ ಹೈಲೆಂಡ್ ಪಾರ್ಕ್ನಲ್ಲಿ ಆಯೋಜಿಸಲಾಗಿದ್ದ ಜುಲೈ 4ರ ವಿಶೇಷ ಉತ್ಸವಗಳನ್ನು ರದ್ದುಪಡಿಸಲಾಗಿದೆ. ಜನರು ಈ ಸ್ಥಳಕ್ಕೆ ಅನಗತ್ಯವಾಗಿ ಭೇಟಿ ನೀಡಬಾರದು ಎಂದು ಪೊಲೀಸರು ಮನವಿ ಮಾಡಿದ್ದಾರೆ.
ಆರೋಪಿ ಬಂಧನ
ಚಿಕಾಗೊ ಉಪನಗರದಲ್ಲಿ ಅಡ್ಡಾದಿಡ್ಡಿ ಗುಂಡು ಹಾರಿಸಿ ಆರು ಮಂದಿಯ ಸಾವಿಗೆ ಕಾರಣನಾದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ರಾಬರ್ಟ್ ಕ್ರಿಮೊ ಎಂದು ಗುರುತಿಸಲಾಗಿದೆ. 22 ವರ್ಷದ ಈತ ಸಮೀಪದ ಕಟ್ಟಡವೊಂದರ ಮೇಲೇರಿ ನಿಂತು ಅಡ್ಡಾದಿಡ್ಡಿ ಗುಂಡು ಹಾರಿಸಲು ಏನು ಕಾರಣ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ.
ಅಮೆರಿಕದಲ್ಲಿ ಸಾರ್ವಜನಿಕರ ಮೇಲೆ ಗುಂಡು ಹಾರಿಸುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ ಸುಮಾರು 40,000 ಮಂದಿ ಗುಂಡು ಹಾರಾಟದಿಂದ ಸಾವನ್ನಪ್ಪಿದ್ದಾರೆ. ಈ ಪೈಕಿ ನಿನ್ನೆಯ (ಜುಲೈ 4) ಘಟನೆ ವಿಶೇಷ ಎನಿಸಿದೆ. ಮೃತಪಟ್ಟ ಬಹುತೇಕರು ಅಮೆರಿಕದ ಬಾವುಟಗಳನ್ನು ಕೈಲಿ ಹಿಡಿದು ದೇಶಪ್ರೇಮದ ಘೋಷಣೆ ಕೂಗುತ್ತಿದ್ದರು.