ಗಡಿ ಮತ್ತು ಸಂಬಂಧದ ವಿಚಾರದಲ್ಲಿ ನರೇಂದ್ರ ಮೋದಿ ಅಭಿಪ್ರಾಯ ಸ್ವಾಗತಿಸಿದ ಚೀನಾ

|

Updated on: Apr 11, 2024 | 6:36 PM

China Welcomes Narendra Modi Opinion: ಭಾರತ ಮತ್ತು ಚೀನಾ ನಡುವಿನ ಗಡಿ ವಿಚಾರದ ಮತ್ತು ದ್ವಿಪಕ್ಷೀಯ ಸಂಬಂಧದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಚೀನಾ ಸಹಮತ ವ್ಯಕ್ತಪಡಿಸಿದೆ. ಭಾರತ ಮತ್ತು ಚೀನಾ ಮಧ್ಯೆ ಉತ್ತಮ ಸಂಬಂಧ ಇರುವುದು ಎರಡೂ ದೇಶಗಳ ಹಿತಾಸಕ್ತಿಗೆ ಪೂರಕವಾಗಿರುತ್ತದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾವೊ ನಿಂಗ್ ಹೇಳಿದ್ದಾರೆ.

ಗಡಿ ಮತ್ತು ಸಂಬಂಧದ ವಿಚಾರದಲ್ಲಿ ನರೇಂದ್ರ ಮೋದಿ ಅಭಿಪ್ರಾಯ ಸ್ವಾಗತಿಸಿದ ಚೀನಾ
ಭಾರತೀಯ ಸೇನೆ
Follow us on

ಬೀಜಿಂಗ್, ಏಪ್ರಿಲ್ 11: ಚೀನಾ ಜೊತೆಗಿನ ಸಂಬಂಧ ಮುಖ್ಯವಾಗಿದ್ದು, ಗಡಿ ಸಮಸ್ಯೆಗಳಿಂದ ಆದಷ್ಟೂ ಬೇಗ ದೂರ ಮಾಡಬೇಕು ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ನೀಡಿದ್ದ ಹೇಳಿಕೆಗೆ ಚೀನಾ ಸಹಮತ ವ್ಯಕ್ತಪಡಿಸಿದೆ. ಭಾರತ ಮತ್ತು ಚೀನಾ ಮಧ್ಯೆ ಆರೋಗ್ಯಯುತ ಮತ್ತು ಸ್ಥಿರ ಸಂಬಂಧ ಇದ್ದರೆ ಎರಡೂ ದೇಶಗಳ ಹಿತಾಸಕ್ತಿಗೆ ಅನುಕೂಲವಾಗುತ್ತದೆ ಎಂದು ಚೀನಾದ ವಿದೇಶಾಂಗ ಇಲಾಖೆಯ ವಕ್ತಾರೆ ಮಾವೋ ನಿಂಗ್ ಹೇಳಿದ್ದಾರೆ.

ಪ್ರಧಾನಿಗಳು ನೀಡಿದ ಹೇಳಿಕೆಯನ್ನು ಚೀನಾ ಗಮನಿಸಿದೆ. ಭಾರತ ಮತ್ತು ಚೀನಾ ನಡುವೆ ಗಟ್ಟಿ ಸಂಬಂಧ ಇದ್ದರೆ ಎರಡೂ ದೇಶಗಳಿಗೆ ಸಹಾಯವಾಗುತ್ತದೆ. ಈ ಪ್ರದೇಶ ಹಾಗೂ ಅದರಾಚೆ ಶಾಂತಿ ಮತ್ತು ಅಭಿವೃದ್ಧಿ ಸಾಧ್ಯ ಮಾಡಿಕೊಡುತ್ತದೆ,’ ಎಂದು ಚೀನಾದ ಈ ವಕ್ತಾರೆ ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕದ ನ್ಯೂಸ್​ವೀಕ್ ಮ್ಯಾಗಝಿನ್​ಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಚೀನಾ ಸಂಬಂಧದ ಮಹತ್ವದ ಬಗ್ಗೆ ಮಾತನಾಡಿದ್ದರು. ಚೀನಾದೊಂದಿಗೆ ಉತ್ತಮ ಸಂಬಂಧ ಹೊಂದಿರುವುದು ಭಾರತಕ್ಕೆ ಬಹಳ ಮುಖ್ಯ. ಈ ಹಿನ್ನೆಲೆಯಲ್ಲಿ ನಮ್ಮ ಗಡಿಭಾಗದಲ್ಲಿ ದೀರ್ಘಕಾಲದಿಂದ ಇರುವ ಸಮಸ್ಯೆಗಳನ್ನು ಆದಷ್ಟೂ ಬೇಗ ನಿವಾರಿಸುವ ಅವಶ್ಯಕತೆ ಇದೆ ಎನ್ನುವುದು ನನ್ನ ಭಾವನೆ. ಇದರಿಂದ ನಮ್ಮೆರಡು ದೇಶಗಳ ದ್ವಿಪಕ್ಷೀಯ ವ್ಯವಹಾರದಲ್ಲಿನ ಅಸ್ವಾಭಾವಿಕತೆಯನ್ನು ನೀಗಿಸಬಹುದು.ಭಾರತ ಮತ್ತು ಚೀನಾ ಮಧ್ಯೆ ಸ್ಥಿರ ಮತ್ತು ಶಾಂತಿಯು ಸಂಬಂಧವು ಕೇವಲ ನಮ್ಮೆರಡು ದೇಶಗಳಿಗೆ ಮಾತ್ರವಲ್ಲ, ಇಡೀ ಪ್ರದೇಶ ಮತ್ತು ವಿಶ್ವಕ್ಕೂ ಮುಖ್ಯವಾಗಿದೆ,’ ಎಂದು ನರೇಂದ್ರ ಮೋದಿ ಆ ಸಂದರ್ಶನದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಹಿಂದೂಗಳು ಮತ್ತು ಸಿಖ್ಖರ ಭೂಮಿಯನ್ನು ಹಿಂದಿರುಗಿಸಲಿದೆ ತಾಲಿಬಾನ್

ಗಡಿವಿಚಾರವು ಭಾರತ ಮತ್ತು ಚೀನಾದ ಇಡೀ ಸಂಬಂಧವನ್ನು ಪ್ರತಿನಿಧಿಸುವುದಿಲ್ಲ. ದ್ವಿಪಕ್ಷೀಯ ಸಂಬಂಧದಲ್ಲಿ ಸೂಕ್ತ ಜಾಗದಲ್ಲಿ ಈ ಗಡಿ ವಿಚಾರವನ್ನು ಇರಿಸಬೇಕು. ಅದನ್ನು ಸರಿಯಾಗಿ ನಿರ್ವಹಿಸಬೇಕು. ಚೀನಾದ ದಾರಿಯಲ್ಲೇ ಭಾರತವೂ ಸಾಗಿ ಬರುತ್ತದೆ ಎಂದು ಆಶಿಸುತ್ತೇನೆ. ದೀರ್ಘಕಾಲೀನ ದೃಷ್ಟಿಕೋನ, ಪರಸ್ಪರ ನಂಬಿಕೆ, ಮಾತುಕತೆ ಮತ್ತು ಸಹಕಾರ, ವೈಭಿನ್ಯತೆಯ ನಿರವಹಣೆ, ಸರಿಯಾದ ಮಾರ್ಗದಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಮುಂದಕ್ಕೆ ಕೊಂಡೊಯ್ಯುವುದು, ಇದು ಸರಿಯಾಗಿ ನಡೆಯಲಿ ಎಂಬುದು ನಮ್ಮ ನಿರೀಕ್ಷೆ, ಎಂದು ಮಾವೋ ನಿಂಗ್ ತಿಳಿಸಿದ್ದಾರೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ