ವುಹಾನ್ನಿಂದ ಕೊರೊನಾ ಸ್ಥಿತಿಗತಿ ವರದಿ ಮಾಡಿದ್ದ ಚೀನಾ ಪತ್ರಕರ್ತೆಗೆ 4 ವರ್ಷ ಜೈಲು ಶಿಕ್ಷೆ
ಒಂದೊಮ್ಮೆ ನನಗೇನಾದರೂ ಜಾಸ್ತಿ ಪ್ರಮಾಣದಲ್ಲಿ ಜೈಲು ಶಿಕ್ಷೆ ವಿಧಿಸಿದರೆ ಮತ್ತೆ ಆಹಾರ ನಿರಾಕರಿಸುತ್ತೇನೆ.. ಉಪವಾಸವಿದ್ದು ಜೈಲಿನಲ್ಲಿಯೇ ಸಾಯುತ್ತೇನೆ ಎಂದು ಪತ್ರಕರ್ತೆ ಝಾಂಗ್ ಹೇಳಿದ್ದಾಳೆ ಎಂದು ವಕೀಲ ಕ್ವಾನಿಯು ಹೇಳಿದ್ದಾರೆ.
ಶಾಂಘೈ: ಕೊರೊನಾ ವೈರಸ್ ಮೊದಲು ಹುಟ್ಟಿದ್ದು ಚೀನಾದ ವುಹಾನ್ನಲ್ಲಿ. ಇಲ್ಲಿನ ವೆಟ್ ಮಾರ್ಕೆಟ್ನಲ್ಲಿ (Wet Market) ಸೋಂಕು ಹರಡುತ್ತಿರುವ ಸಂದರ್ಭದಲ್ಲಿ ಅಲ್ಲಿಂದ ನೇರ ವರದಿ ಮಾಡಿದ್ದ ಚೀನಾದ ಪತ್ರಕರ್ತೆಗೆ ಇದೀಗ 4 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. ವೈರಸ್ ಹುಟ್ಟಿ ಒಂದು ವರ್ಷದ ಮೇಲಾಯಿತು. ಈಗ ಪತ್ರಕರ್ತೆಗೆ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ನೀಡಿದೆ. ಈ ಮಧ್ಯೆ.. ಆಕೆಯ ಆರೋಗ್ಯ ಸರಿಯಿಲ್ಲ. ಈ ಬಗ್ಗೆ ಯಾರೂ ಯೋಚಿಸುತ್ತಿಲ್ಲ ಎಂದು ವರದಿಗಾರ್ತಿ ಪರ ನ್ಯಾಯಾಲಯದಲ್ಲಿ ವಾದ ಮಾಡಿದ್ದ ವಕೀಲರು ಆತಂಕ ವ್ಯಕ್ತಪಡಿಸಿದ್ದಾರೆ.
ಝಾಂಗ್ ಜಾನ್ (37) ಜೈಲು ಪಾಲಾದ ಪತ್ರಕರ್ತೆ. ಇವರು ವುಹಾನ್ನಿಂದ ಕೊರೊನಾ ಸ್ಥಿತಿಗತಿ, ಪರಿಸ್ಥಿತಿಯ ಬಗ್ಗೆ ನೇರವಾಗಿ ವರದಿ ಮಾಡಿದ್ದರು. ಅವರ ವರದಿ, ಪ್ರಬಂಧಗಳು ಫೆಬ್ರವರಿ ತಿಂಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಹಾಗೇ ಇವರೊಂದಿಗೆ ವರದಿ ಮಾಡಿದ್ದ ಇನ್ನೂ ಮೂವರು ಪತ್ರಕರ್ತರು ಸೇರಿ ನಾಲ್ವರನ್ನು ನಂತರ ಬಂಧಿಸಲಾಗಿತ್ತು.
ಅದರಲ್ಲಿ ಝಾಂಗ್ ಜಾನ್ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಶಾಂಘೈ ಪುಡಾಂಗ್ ನ್ಯೂ ಡಿಸ್ಟ್ರಿಕ್ಟ್ಸ್ ಪೀಪಲ್ಸ್ ಕೋರ್ಟ್ ಇಂದು ಪತ್ರಕರ್ತೆಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಕೊರೊನಾ ಆರಂಭಿಕ ಹಂತದಲ್ಲಿ ವರದಿ ಮಾಡುವ ಸಂದರ್ಭದಲ್ಲಿ ಹಲವು ಗಲಾಟೆಗೆ ಪ್ರಚೋದನೆ ನೀಡಿದ್ದಾರೆ. ಈ ಮೂಲಕ ಸಮಸ್ಯೆ ಸೃಷ್ಟಿಸಿದ್ದಾರೆ ಎಂದು ಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಿದೆ.
ಇನ್ನು ಝಾಂಗ್ ಅವರು ಜೂನ್ನಿಂದ ಉಪವಾಸ ಸತ್ಯಾಗ್ರಹದಲ್ಲಿ ತೊಡಗಿದ್ದರು. ಹೀಗಾಗಿ ಆರೋಗ್ಯ ತುಂಬ ಹದಗೆಟ್ಟಿತ್ತು. ನಂತರ ನಳಿಕೆಯ ಮೂಲಕ ಬಲವಂತವಾಗಿ ಆಹಾರ ನೀಡಲಾಯಿತು. ಈಗ ನ್ಯಾಯಾಲಯ ಆಕೆಯ ಅನಾರೋಗ್ಯವನ್ನೂ ಗಮನದಲ್ಲಿ ಇಟ್ಟುಕೊಳ್ಳದೆ ತೀರ್ಪು ನೀಡಿದೆ ಎಂದು ವಕೀಲ ರೆನ್ ಕ್ವಾನಿಯು ತಿಳಿಸಿದ್ದಾರೆ.
ಕಳೆದ ವಾರ ನಾನು ಆಕೆಯನ್ನು ಭೇಟಿಯಾಗಿದ್ದೆ.. ಆಗ ಹೇಳುತ್ತಿದ್ದಳು, ಒಂದೊಮ್ಮೆ ನನಗೇನಾದರೂ ಜಾಸ್ತಿ ಪ್ರಮಾಣದಲ್ಲಿ ಜೈಲು ಶಿಕ್ಷೆ ವಿಧಿಸಿದರೆ ಮತ್ತೆ ಆಹಾರ ನಿರಾಕರಿಸುತ್ತೇನೆ.. ಉಪವಾಸವಿದ್ದು ಜೈಲಿನಲ್ಲಿಯೇ ಸಾಯುತ್ತೇನೆ ಎಂದು ಝಾಂಗ್ ಹೇಳಿದ್ದಾಳೆ ಎಂದು ಕ್ವಾನಿಯು ಹೇಳಿದ್ದಾರೆ.
ಕೊರೊನಾದಿಂದ ಕಂಗೆಟ್ಟಿದ್ದವನಿಗೆ ಹೊಡೆಯಿತು ಲಾಟರಿ! ದುಬೈನಲ್ಲಿ ಭಾರತೀಯನಿಗೆ ಒಲಿಯಿತು ₹ 7 ಕೋಟಿ ಜಾಕ್ಪಾಟ್