Explained: ಮಕ್ಕಳನ್ನು ಪಡೆಯುವ ದಂಪತಿಗಳಿಗೆ ‘ಬೇಬಿ ಲೋನ್’ ನೀಡಲು ಮುಂದಾದ ಚೀನಾದ ಪ್ರಾಂತ್ಯ; ಈ ನಿರ್ಧಾರಕ್ಕೇನು ಕಾರಣ?

Explained: ಮಕ್ಕಳನ್ನು ಪಡೆಯುವ ದಂಪತಿಗಳಿಗೆ ‘ಬೇಬಿ ಲೋನ್’ ನೀಡಲು ಮುಂದಾದ ಚೀನಾದ ಪ್ರಾಂತ್ಯ; ಈ ನಿರ್ಧಾರಕ್ಕೇನು ಕಾರಣ?
ಪ್ರಾತಿನಿಧಿಕ ಚಿತ್ರ

ಚೀನಾದ ಜಿಲಿನ್ ಪ್ರಾಂತ್ಯ ಮಕ್ಕಳನ್ನು ಹೊಂದುವ ದಂಪತಿಗಳಿಗೆ ಪ್ರೋತ್ಸಾಹ ನೀಡಲು ‘ಬೇಬಿ ಲೋನ್’ ನೀಡಲು ಯೋಜನೆ ರೂಪಿಸಿದೆ. ಸರ್ಕಾರದ ಈ ನಿರ್ಧಾರಕ್ಕೇನು ಕಾರಣ? ಇದರ ಪರಿಣಾಮಗಳೇನಾಗಬಹುದು? ಇಲ್ಲಿದೆ ವಿಸ್ತೃತ ವರದಿ.

TV9kannada Web Team

| Edited By: shivaprasad.hs

Dec 26, 2021 | 9:48 AM

ಇತ್ತೀಚೆಗೆಷ್ಟೇ ಚೀನಾದ ಪ್ರಾಂತ್ಯವೊಂದರ ನಿರ್ಧಾರ ಜಾಗತಿಕವಾಗಿ ಸಂಚಲನ ಸೃಷ್ಟಿಸಿತ್ತು. ಅದಕ್ಕೆ ಕಾರಣ ಆ ಪ್ರಾಂತ್ಯ ಘೋಷಿಸಿದ್ದ ಹೊಸ ಯೋಜನೆ. ಅದೇನೆಂದರೆ ವಿವಾಹಿತ ದಂಪತಿಗಳಿಗೆ ಮಕ್ಕಳನ್ನು ಹೊಂದಲು ಸಾಲ ನೀಡುವ ಯೋಜನೆ. ಹೌದು. ಈಶಾನ್ಯ ಚೀನಾದ ಜಿಲಿನ್ ಪ್ರಾಂತ್ಯವು ವಿವಾಹಿತ ದಂಪತಿಗಳಿಗೆ ಮಕ್ಕಳು ಪಡೆಯುವುದನ್ನು ಪ್ರೋತ್ಸಾಹಿಸಲು $ 31,000 ವರೆಗೆ ಸಾಲವನ್ನು ನೀಡಲು ಸಿದ್ಧವಾಗಿದೆ. ಚೀನಾದ ಜನನ ದರವು ತೀವ್ರ ಪ್ರಮಾಣದಲ್ಲಿ ಕುಸಿಯುತ್ತಿರುವುದನ್ನು ಗಮನಿಸಿದ ಆ ಪ್ರಾಂತ್ಯವು ಈ ನಿರ್ಧಾರವನ್ನು ತಳೆಯಿತು. ಪ್ರಸ್ತುತ ಚೀನಾದ ಜನಸಂಖ್ಯಾ ಬೆಳವಣಿಗೆ ಎಷ್ಟಿದೆ? ಮಕ್ಕಳನ್ನು ಹೊಂದಲು ಸಾಲ ನೀಡುವ ನಿರ್ಧಾರಕ್ಕೆ ಪ್ರಾಂತ್ಯ ಮುಂದಾಗಿದ್ದೇಕೆ? ಈ ಕುರಿತ ವಿಸ್ತೃತ ಮಾಹಿತಿ ಇಲ್ಲಿದೆ.

1950ರ ನಂತರ ಇದೇ ಮೊದಲ ಬಾರಿಗೆ ಚೀನಾದ ಜನಸಂಖ್ಯಾ ಬೆಳವಣಿಗೆ ದರ ಅದರ ಪಾತಾಳಕ್ಕೆ ಕುಸಿದಿದೆ ಎಂದು ಸರ್ಕಾರದ ದತ್ತಾಂಶಗಳು ತೋರಿಸಿವೆ. ಇದರ ಪರಿಣಾಮ ಸರ್ಕಾರದ ನಿರ್ಧಾರಗಳಲ್ಲಿ ಬದಲಾವಣೆಯಾಯಿತು. ಆಗಸ್ಟ್​ನಲ್ಲಿ ಚೀನಾ ಮೊದಲಿದ್ದ ಎರಡು ಮಕ್ಕಳ ನಿಯಮವನ್ನು ಸಡಿಲಿಸಿತು. ಅಲ್ಲದೇ ಮೂರು ಮಕ್ಕಳ ನೀತಿಯನ್ನು ಅನುಮೋದಿಸಿತು. ರಾಯಿಟರ್ಸ್ ವರದಿಯ ಪ್ರಕಾರ, ಚೀನಾದ ಮೂರು ಈಶಾನ್ಯ ಪ್ರಾಂತ್ಯಗಳಾದ ಜಿಲಿನ್, ಲಿಯಾನಿಂಗ್ ಮತ್ತು ಹೈಲಾಂಗ್‌ ಜಿಯಾಂಗ್‌ಗಳಲ್ಲಿ ಜನಸಂಖ್ಯಾ ಸಮಸ್ಯೆಗಳು ಹೆಚ್ಚಾಗಿವೆ. ಕಾರಣ, ಯುವ ಸಮುದಾಯ ಮತ್ತು ವಿವಾಹಿತರು ಕುಟುಂಬವನ್ನು ಹೊಂದಲು ಯೋಜಿಸುತ್ತಿರುವ ಸಮಯದಲ್ಲಿಯೇ ಬೇರೆ ಬೇರೆ ಪ್ರಾಂತ್ಯಗಳಿಗೆ ತೆರಳಿದ್ದಾರೆ. ಆದ್ದರಿಂದ ಅಲ್ಲಿ ಜನನ ಪ್ರಮಾಣ ಕುಸಿದಿದೆ. ಈ ಪ್ರದೇಶಗಳಲ್ಲಿ 2010ಕ್ಕೆ ಹೋಲಿಸಿದರೆ 2020ರಲ್ಲಿ ಜನಸಂಖ್ಯೆಯು ಶೇ.10.3ರಷ್ಟು ಕುಸಿದಿದೆ. ಜಿಲಿನ್​ನಲ್ಲಿ 12.7 ಶೇ ಕುಸಿತವಾಗಿದೆ.

ಚೀನಾದಂತಹ ಬೃಹತ್ ಆರ್ಥಿಕತೆಗೆ ಜನನ ದರ ಬಹಳ ಮಹತ್ವದ್ದು.. ಕಾರಣವೇನು? ಮೇ ತಿಂಗಳಲ್ಲಿ ಬಿಬಿಸಿಗಾಗಿ ರಾಬಿನ್ ಬ್ರಾಂಟ್ ಒಂದು ವಿಶ್ಲೇಷಣೆ ನಡೆಸಿದ್ದರು. ಅದರಲ್ಲಿ ಅವರು ತಿಳಿಸಿರುವಂತೆ ಚೀನಾದಲ್ಲಿ ಜನನ ಪ್ರಮಾಣ ಕುಸಿತವಾಗಿರುವುದು ಮತ್ತು ಜನ ಸಂಖ್ಯೆ ಕಡಿಮೆಯಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಕಾರಣ, ಚೀನಾ ವಿಶ್ವದಲ್ಲೇ ಹೆಚ್ಚು ಜನಸಂಖ್ಯೆ ಹೊಂದಿದ್ದು, ದೊಡ್ಡ ಆರ್ಥಿಕತೆಯಾಗಿದೆ. ಅಲ್ಲದೇ ದೇಶೀಯ ಬಳಕೆಯ ಮೇಲೆ ಅದರ ಆರ್ಥಿಕತೆ ನಿಂತಿದೆ. “ಆ ಬೇಡಿಕೆಗಳು ಮತ್ತು ವೆಚ್ಚಗಳನ್ನು ನಿಭಾಯಿಸಲು ನಿವೃತ್ತಿ ವಯಸ್ಸು ಹೆಚ್ಚಾಗಬೇಕು ಎಂದು ಚೀನಾದ ಕಮ್ಯುನಿಸ್ಟ್ ನಾಯಕರು ಈಗಾಗಲೇ ಹೇಳಿದ್ದಾರೆ. ಇದರರ್ಥ ದೇಶದ ಕಾರ್ಮಿಕರಿಗೆ ಹೆಚ್ಚಿನ ಉದ್ಯೋಗ ಲಭಿಸಲಿದೆ” ಎಂದುವ ಬ್ರಾಂಟ್ ತಿಳಿಸಿದ್ದರು.

ಚೀನಾದ ಒಂದು ಮಗುವಿನ ನೀತಿ ಹೇಗೆ ಕೆಲಸ ಮಾಡಿದೆ? 1980 ರಲ್ಲಿ ಮಾಜಿ ನಾಯಕ ಡೆಂಗ್ ಕ್ಸಿಯೋಪಿಂಗ್ ಜಾರಿಗೊಳಿಸಿದ ಚೀನಾದ ಒಂದು ಮಗುವಿನ ನೀತಿಯು 2016 ರವರೆಗೆ ಜಾರಿಯಲ್ಲಿತ್ತು. ವಯಸ್ಸಾದ ಜನಸಂಖ್ಯೆಯು ಆರ್ಥಿಕ ಬೆಳವಣಿಗೆಯನ್ನು ದುರ್ಬಲಗೊಳಿಸುತ್ತದೆ ಎಂಬ ಭಯದಿಂದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷವನ್ನು ವಿವಾಹಿತ ದಂಪತಿಗೆ ಎರಡು ಮಕ್ಕಳನ್ನು ಹೊಂದುವ ನೀತಿ ಜಾರಿಗೆ ತರುವಂತೆ ಒತ್ತಾಯಿಸಲಾಯಿತು. ಈ ಸಡಿಲಿಕೆಯು ದೇಶದಲ್ಲಿನ ಯುವಜನರ ಅನುಪಾತದಲ್ಲಿ ಸ್ವಲ್ಪ ಸುಧಾರಣೆಗೆ ಕಾರಣವಾದರೂ, ಮುಂಬರುವ ಜನಸಂಖ್ಯಾ ಬಿಕ್ಕಟ್ಟನ್ನು ತಪ್ಪಿಸಲು ಇದು ಸಾಕಾಗುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ.

ಮೂರು ಮಕ್ಕಳ ನೀತಿಯನ್ನು ಈಗ ಘೋಷಿಸಲಾಗಿದೆಯಾದರೂ ಅದಕ್ಕೆ ಹಲವಾರು ಅಂಶಗಳು ತಡೆಯೊಡ್ಡಲಿವೆ. ಅವುಗಳೆಂದರೆ ಹೆಚ್ಚಿನ ಜೀವನ ವೆಚ್ಚ ಮತ್ತು ದೀರ್ಘಾವಧಿಯ ಕೆಲಸದ ಸಮಯದಂತಹ ವಿಚಾರಗಳು ದಂಪತಿಗಳು ಹೆಚ್ಚು ಮಕ್ಕಳನ್ನು ಹೊಂದಲು ಯೋಚಿಸುವಂತೆ ಮಾಡಿವೆ. ಆದ್ದರಿಂದ ಈ ಸವಾಲುಗಳನ್ನು ಸರ್ಕಾರ ಹೇಗೆ ಎದುರಿಸಲಿದೆ ಎಂದು ಅಲ್ಲಿನ ತಜ್ಞರು ಆಶ್ಚರ್ಯ ವ್ಯಕ್ತಪಡಿಸಿದ್ದರು.

1980ರಲ್ಲಿ ಚೀನಾದಲ್ಲಿ ಜಾರಿಯಾದ ಒಂದು ಮಗುವಿನ ನೀತಿ ದೇಶ ಶತ ಕೋಟಿ ಜನಸಂಖ್ಯೆಯನ್ನು ತೀವ್ರ ವೇಗದಲ್ಲಿ ತಲುಪಲಿದೆ ಎಂಬ ಎಚ್ಚರಿಕೆಯ ಕಾರಣದಿಂದ ರೂಪಿಸಲಾಗಿತ್ತು. ನಗರ ಪ್ರದೇಶಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೊಳಿಸಲಾದ ಈ ನೀತಿಯನ್ನು ಹಲವಾರು ವಿಧಾನಗಳ ಮೂಲಕ ಜಾರಿಗೊಳಿಸಲಾಯಿತು. ಕುಟುಂಬಗಳು ಒಂದು ಮಗುವನ್ನು ಹೊಂದಲು ಆರ್ಥಿಕವಾಗಿ ಪ್ರೋತ್ಸಾಹಿಸುವುದು, ಗರ್ಭನಿರೋಧಕಗಳನ್ನು ವ್ಯಾಪಕವಾಗಿ ಲಭ್ಯವಾಗುವಂತೆ ಮಾಡುವುದು ಮತ್ತು ನೀತಿಯನ್ನು ಉಲ್ಲಂಘಿಸಿದವರ ವಿರುದ್ಧ ನಿರ್ಬಂಧಗಳನ್ನು ವಿಧಿಸುವುದು.. ಮೊದಲಾದ ನಿಯಮಗಳ ಮೂಲಕ ಒಂದು ಮಗುವಿನ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಯಿತು.

ಚೀನಾದ ಅಧಿಕಾರಿಗಳು ಈ ನೀತಿಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಈ ನೀತಿಯಿಂದ 40 ಕೋಟಿ ಜನರು ಜನಿಸುವುದನ್ನು ತಡೆಯಲಾಯಿತು. ಅಲ್ಲದೇ ದೇಶವು ತೀವ್ರ ಆಹಾರ ಮತ್ತು ನೀರಿನ ಕೊರತೆಯಿಂದ ಪಾರಾಗಲು ಈ ನೀತಿ ಸಹಕಾರಿಯಾಯಿತು ಎಂದು ಹೇಳಿಕೊಂಡಿದ್ದರು.

ಆದಾಗ್ಯೂ, ಬಲವಂತದ ಗರ್ಭಪಾತಗಳು ಮತ್ತು ಕ್ರಿಮಿನಾಶಕಗಳಂತಹ ಕ್ರೂರ ತಂತ್ರಗಳನ್ನು ಸರ್ಕಾರ ಬಳಸಿದ್ದರಿಂದ ಒಂದು ಮಗುವಿನ ಮಿತಿಯು ಅಸಮಾಧಾನದ ಮೂಲವಾಗಿತ್ತು. ಈ ನಿರ್ಧಾರಕ್ಕೆ ಪ್ರಜೆಗಳಿಂದ ಟೀಕೆಯೂ ವ್ಯಕ್ತವಾಗಿತ್ತು ಮತ್ತು ಮಾನವ ಹಕ್ಕುಗಳನ್ನು ಉಲ್ಲಂಘಿಸಿದ್ದಕ್ಕಾಗಿ ವಿವಾದಾತ್ಮಕವಾಗಿತ್ತು. ಬಡ ಚೀನಿಯರಿಗೆ ಇದರಿಂದ ಅನ್ಯಾಯವಾಗಿತ್ತು. ಕಾರಣ, ಶ್ರೀಮಂತರು ನೀತಿಯನ್ನು ಉಲ್ಲಂಘಿಸಿದರೆ ಅವರು ಆರ್ಥಿಕ ದಂಡನೆಯನ್ನು ಭರಿಸಲು ಶಕ್ತರಾಗಿದ್ದರು.

China childrens

ಪ್ರಾತಿನಿಧಿಕ ಚಿತ್ರ

ಮೂರು ಮಕ್ಕಳ ನೀತಿ ಚರ್ಚೆಯಾಗಲು ಕಾರಣವೇನು? ವಾಸ್ತವವಾಗಿ ಚೀನಾದಲ್ಲಿ ಮೂರು ಮಕ್ಕಳ ನೀತಿಗೆ ಜನರು ಆಸಕ್ತಿ ತೋರಿಸುತ್ತಿಲ್ಲ. ಹೆಚ್ಚುತ್ತಿರುವ ಜೀವನ ವೆಚ್ಚ, ಶಿಕ್ಷಣ ಮತ್ತು ವಯಸ್ಸಾದ ಪೋಷಕರನ್ನು ಬೆಂಬಲಿಸುವುದು, ಕೆಲಸದ ಅವಧಿ ದೀರ್ಘವಾಗಿರುವುದು.. ಈ ಕಾರಣಗಳು ಜನರ ವೈಯಕ್ತಿಕ ಸಮಯವನ್ನು ಕಸಿದುಕೊಂಡಿವೆ. ಅಲ್ಲದೇ ಇದು ಚೀನಾದ ಸಂಸ್ಕೃತಿಯನ್ನೂ ಹದಗೆಡಿಸಿದೆ ಎನ್ನುತ್ತಾರೆ ತಜ್ಞರು. ಒಂದು ಮಗುವಿನ ನೀತಿ ಜಾರಿಯಲ್ಲಿದ್ದ ದಶಕಗಳಲ್ಲಿ ಸಾಂಸ್ಕೃತಿಕ ಪಲ್ಲಟವೂ ನಡೆದಿದೆ. ಈಗ ಅನೇಕ ದಂಪತಿಗಳು ಒಂದೇ ಮಗು ಸಾಕು ಎಂದು ಹೇಳುತ್ತಾರೆ. ಮತ್ತೆ ಹಲವರು ಮಕ್ಕಳನ್ನು ಹೊಂದಲು ಆಸಕ್ತಿಯನ್ನೇ ವ್ಯಕ್ತಪಡಿಸುವುದಿಲ್ಲ.

ಈ ಎಲ್ಲಾ ಕಾರಣದಿಂದ ಕುಟುಂಬಗಳನ್ನು ಪ್ರೋತ್ಸಾಹಿಸಲು ಮತ್ತು ಮಕ್ಕಳನ್ನು ಪಡೆಯಲು ಉತ್ತೇಜಿಸಲು ಜಿಲಿನ್ ಸರ್ಕಾರ ‘ಬೇಬಿ ಲೋನ್’ ನೀಡಲು ಮುಂದೆ ಬಂದಿದೆ. ಹೊಸ ಜನಸಂಖ್ಯಾ ನೀತಿ ಸುಧಾರಿಸಲು, ವಯಸ್ಸಾದ ಜನಸಂಖ್ಯೆಯನ್ನು ನಿಭಾಯಿಸಲು ಮತ್ತು ಮಾನವ ಸಂಪನ್ಮೂಲಗಳನ್ನು ಕಾಪಾಡಿಕೊಳ್ಳಲು ಅಗತ್ಯ ಕ್ರಮಗಳನ್ನು ಚೀನಾ ಸರ್ಕಾರ ಮುಂದಾಗಲಿದೆ ಎಂದು ಹೇಳಿದ್ದನ್ನು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಈ ನಿಟ್ಟಿನಲ್ಲಿ ಜಿಲಿನ್ ಸರ್ಕಾರದ ನಿರ್ಧಾರ ಪ್ರಾಮುಖ್ಯತೆ ಪಡೆದಿದೆ.

ಇದನ್ನೂ ಓದಿ:

EPF explainer: ಇಪಿಎಫ್​ ಕೊಡುಗೆ 2.5 ಲಕ್ಷ ರೂಪಾಯಿಗಿಂತ ಹೆಚ್ಚಾದಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?

Gardening Tips: ಅನಿವಾರ್ಯವಾಗಿ ಮನೆ ಬಿಟ್ಟು ತೆರಳಬೇಕಾದಾಗ ಗಿಡಗಳಿಗೆ ನೀರುಣಿಸುವುದು ಹೇಗೆ?; ಸುಲಭದ ವಿಧಾನಗಳು ಇಲ್ಲಿವೆ

Follow us on

Related Stories

Most Read Stories

Click on your DTH Provider to Add TV9 Kannada