ಕಾಂಗೋ ಗಣರಾಜ್ಯದ ಬೇನಿ ನಗರದ ಬಾರ್ನಲ್ಲಿ ಆತ್ಮಾಹುತಿ ಬಾಂಬ್ ದಾಳಿ; ಐವರು ಸಾವು, ಹಲವರಿಗೆ ಗಂಭೀರ ಗಾಯ
ಬಾರ್ ಬಳಿ ಇದ್ದ ಭದ್ರತಾ ಸಿಬ್ಬಂದಿ ಆತ್ಮಾಹುತಿ ಬಾಂಬರ್ನನ್ನು ತಡೆಯಲು ಪ್ರಯತ್ನಿಸಿದರು. ಬಾರ್ ಆ್ಯಂಡ್ ರೆಸ್ಟೋರೆಂಟ್ನಲ್ಲಿ ಈ ವೇಳೆ ಅನೇಕ ಗ್ರಾಹಕರಿದ್ದರು.
ಕಾಂಗೋ ಪ್ರಜಾಸತ್ತಾತ್ಮಕ ರಾಜ್ಯದ ಪೂರ್ವ ಭಾಗದ ನಗರ ಬೇನಿ(Beni City)ಯಲ್ಲಿ ಆತ್ಮಾಹುತಿ ಬಾಂಬ್ ದಾಳಿ(Suicide Bomb Attack)ಯಾಗಿದ್ದು, ಈ ದುರ್ಘಟನೆಯಲ್ಲಿ ಐವರು ಸಾವನ್ನಪ್ಪಿದ್ದಾರೆ. ಬೇನಿಯ ಬಾರ್ ಆ್ಯಂಡ್ ರೆಸ್ಟೋರೆಂಟ್ವೊಂದರಲ್ಲಿ ನಡೆದ ದಾಳಿಯಲ್ಲಿ ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಈ ಪ್ರದೇಶದಲ್ಲಿರುವ ಅತ್ಯಂತ ಕ್ರೂರ ಸೇನಾಪಡೆಯಾದ ಅಲೈಡ್ ಡೆಮಾಕ್ರಟಿಕ್ ಫೋರ್ಸಸ್ (ADF) ಸಂಘಟನೆಯೇ ಈ ದಾಳಿ ನಡೆಸಿದ್ದಾಗಿ ಕಾಂಗೋ ರಿಪಬ್ಲಿಕ್ನ ಆಡಳಿತ ದೂಷಿಸಿದೆ. ಅಂದಹಾಗೆ, ಈ ಎಡಿಎಫ್ ಸಂಘಟನೆಯನ್ನು ಇಸ್ಲಾಮಿಕ್ ಸ್ಟೇಟ್ ಉಗ್ರಸಂಘಟನೆ ತನ್ನ ಕೇಂದ್ರ ಆಫ್ರಿಕಾದ ಬಲ ಎಂದೇ ಹೇಳಿಕೊಳ್ಳುತ್ತದೆ.
ಬಾರ್ ಬಳಿ ಇದ್ದ ಭದ್ರತಾ ಸಿಬ್ಬಂದಿ ಆತ್ಮಾಹುತಿ ಬಾಂಬರ್ನನ್ನು ತಡೆಯಲು ಪ್ರಯತ್ನಿಸಿದರು. ಬಾರ್ ಆ್ಯಂಡ್ ರೆಸ್ಟೋರೆಂಟ್ನಲ್ಲಿ ಈ ವೇಳೆ ಅನೇಕ ಗ್ರಾಹಕರಿದ್ದರು. ಆದರೆ ಪ್ರವೇಶದ್ವಾರದಲ್ಲಿ ತಡೆಯಲ್ಪಟ್ಟ ಬಾಂಬರ್ ಅಲ್ಲಿಯೇ ಬಾಂಬ್ನ್ನು ಸ್ಫೋಟಿಸಿದ್ದಾನೆ ಎಂದು ಉತ್ತರ ಕಿವು ಪ್ರಾಂತ್ಯದಲ್ಲಿರುವ ಮಿಲಿಟರಿ ಅಧಿಕಾರಿಗಳು ಹೇಳಿದ್ದಾಗಿ ವರದಿಯಾಗಿದೆ. 14ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ದಾಳಿ ನಡೆದ ಬಾರ್ನ ಕುರ್ಚಿಗಳು, ಟೇಬಲ್ಗಳೆಲ್ಲ ಛಿದ್ರವಾಗಿ ಚೆಲ್ಲಾಪಿಲ್ಲಿಯಾಗಿವೆ. ಸ್ಥಳದಲ್ಲೇ ಸತ್ತವರ ದೇಹಗಳು ಅಲ್ಲೇ ಬಿದ್ದಿದ್ದವು ಎಂದೂ ಸ್ಥಳೀಯ ಮಾಧ್ಯಮಗಳ ವರದಿಗಾರರು ವರದಿ ಮಾಡಿದ್ದಾರೆ. ಸ್ಫೋಟವಾಗುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಪೊಲೀಸರು, ಅಲ್ಲೆಲ್ಲ ಪರಿಶೀಲನೆ ನಡೆಸಿದ್ದಾರೆ. ಗಾಯಗೊಂಡವರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಬೇನಿ ನಗರದಲ್ಲಿ ಪದೇಪದೆ ಬಾಂಬ್ ದಾಳಿಯಾಗುತ್ತಿದೆ. ಜೂನ್ 27ರಂದು ಕ್ಯಾಥೋಲಿಕ್ ಚರ್ಚ್ನಲ್ಲಿ ಸುಧಾರಿತ ಬಾಂಬ್ವೊಂದು ಸ್ಫೋಟಗೊಂಡು ಇಬ್ಬರು ಮಹಿಳೆಯರು ಗಾಯಗೊಂಡಿದ್ದರು. ಅದೇ ದಿನ ಬಾಂಬ್ವೊಂದನ್ನು ಕೊಂಡೊಯ್ಯುತ್ತಿದ್ದಾಗ ಸ್ಫೋಟಗೊಂಡು ವ್ಯಕ್ತಿಯೊಬ್ಬ ಮೃತಪಟ್ಟಿದ್ದ. ಅದರ ಮುನ್ನಾದಿನ ಸರ್ವೀಸ್ ಸ್ಟೇಶನ್ ಬಳಿ ಸ್ಫೋಟಕವೊಂದು ಸ್ಫೋಟಗೊಂಡಿತ್ತು. ಆದರೆ ಯಾವುದೇ ಹಾನಿಯಾಗಿರಲಿಲ್ಲ. ಉಗಾಂಡಾದ ಗಡಿ ಭಾಗದಲ್ಲಿ ಇರುವ ಕಿವು ಪ್ರಾಂತ್ಯದ ಬೇನಿ ನಗರದಲ್ಲಿ ಸ್ಥಳೀಯ ಸೇನಾ ಪಡೆ ಮತ್ತು ಎಡಿಎಫ್ ಪಡೆಗಳ ನಡುವೆ ಘರ್ಷಣೆ ನಡೆಯುತ್ತಲೇ ಇರುತ್ತದೆ. ಇದೂ ಕೂಡ ಎಡಿಎಫ್ದೇ ಕೆಲಸ ಎಂದು ಹೇಳಲಾಗಿದ್ದರೂ, ಆ ಸಂಘಟನೆಯೇನೂ ಸದ್ಯ ಯಾವುದೇ ಹೊಣೆ ಹೊತ್ತುಕೊಂಡಿಲ್ಲ.
ಇದನ್ನೂ ಓದಿ: ಜಗತ್ತು ನೈಸರ್ಗಿಕ ವಿಕೋಪ, ಹೊಸ ಮಾರಕ ವೈರಸ್ಗೆ ತುತ್ತಾಗಲಿದೆ: 2022ರ ಬಗ್ಗೆ ಬಾಬಾ ವಂಗಾ ಭವಿಷ್ಯ
Published On - 9:53 am, Sun, 26 December 21