ಕಾಕ್​ಪಿಟ್ ಜಗಳ, ಪೈಲಟ್‌ಗೆ ಚಾಕು ಇರಿತ; ಫ್ಲೈದುಬೈ ವಿಮಾನದ ಹೈಜಾಕ್ ಕುರಿತು ಹೊಸ ಸಂಗತಿ ಬಯಲು

ದುಬೈನಿಂದ ಟೆಲ್ ಅವೀವ್‌ಗೆ ಹೊರಟಿದ್ದ ಫ್ಲೈದುಬೈ ವಿಮಾನದಲ್ಲಿ ಇಂದು ಕ್ಯಾಪ್ಟನ್ ಹಾಗೂ ಕೋ-ಪೈಲಟ್ ನಡುವೆ ನಡೆದ ಜಗಳ ಮತ್ತು ಚಾಕು ಇರಿತದ ಘಟನೆಯು ಹೈಜಾಕ್ ಆತಂಕವನ್ನು ಸೃಷ್ಟಿಸಿತು. ವರದಿಗಳ ಪ್ರಕಾರ, ಪೈಲಟ್‌ಗಳಲ್ಲಿ ಒಬ್ಬರು ವಿಮಾನವನ್ನು ಪತನಗೊಳಿಸಲು ಯತ್ನಿಸಿದ್ದು, ಮತ್ತೊಬ್ಬ ಪೈಲಟ್ ಹಾಗೂ ಪ್ರಯಾಣಿಕರು ಆತನನ್ನು ತಡೆದಿದ್ದಾರೆ ಎಂದು ತಿಳಿದುಬಂದಿದೆ. ವಿಮಾನವನ್ನು ಹೈಜಾಕ್ ಮಾಡಲಾಗಿತ್ತು ಎಂಬ ಸುದ್ದಿಯ ನಡುವೆ ಈ ಘಟನೆಯ ಮತ್ತೊಂದು ಆಯಾಮ ತೆರೆದುಕೊಂಡಿದೆ. ವಿಮಾನ ಲ್ಯಾಂಡ್ ಆಗುವ ಮುನ್ನ ನಿಜಕ್ಕೂ ನಡೆದಿದ್ದೇನು? ಎಂಬ ಮಾಹಿತಿ ಇಲ್ಲಿದೆ.

ಕಾಕ್​ಪಿಟ್ ಜಗಳ, ಪೈಲಟ್‌ಗೆ ಚಾಕು ಇರಿತ; ಫ್ಲೈದುಬೈ ವಿಮಾನದ ಹೈಜಾಕ್ ಕುರಿತು ಹೊಸ ಸಂಗತಿ ಬಯಲು
ಪೈಲಟ್‌ಗೆ ಇರಿತ
Image Credit source: TV9

Updated on: Sep 30, 2026 | 5:16 PM

ಮುಖ್ಯಾಂಶಗಳು

  • ದುಬೈನಿಂದ ಹೊರಟ 2 ಗಂಟೆ ನಂತರ ಕಾಕ್‌ಪಿಟ್‌ನಲ್ಲಿ ಕೋ-ಪೈಲಟ್‌ನಿಂದ ವಿಮಾನ ಪತನಗೊಳಿಸುವ ಯತ್ನ
  • ವಿಮಾನವು ದಿಢೀರ್ ಎತ್ತರ ಕಳೆದುಕೊಂಡು ಜಾರಿದ ಬೆನ್ನಲ್ಲೇ ಹೈಜಾಕ್ ರೇಡಿಯೋ ಸಂಕೇತ
  • ಕಾಕ್‌ಪಿಟ್ ಬಾಗಿಲು ಮುರಿದು ಪ್ರಯಾಣಿಕರಲ್ಲಿದ್ದ ಪೈಲಟ್‌ಗಳಿಂದ ವಿಮಾನದ ನಿಯಂತ್ರಣ

ಟೆಲ್-ಅವೀವ್, ಸೆಪ್ಟೆಂಬರ್ 30: ಇಸ್ರೇಲ್ ವಿಮಾನ ಅಪಹರಣದ ಯತ್ನ ಪ್ರಕರಣದಲ್ಲಿ ಪ್ರಮುಖ ಸಂಗತಿಯೊಂದು ಬಹಿರಂಗಗೊಂಡಿದೆ. ಕಾಕ್‌ಪಿಟ್‌ನಲ್ಲಿದ್ದ ಒಬ್ಬ ಪೈಲಟ್ ವಿಮಾನವನ್ನು ಪತನಗೊಳಿಸಲು ಬಯಸಿದ್ದರು, ಆದರೆ ಇನ್ನೊಬ್ಬ ಪೈಲಟ್ ಅದನ್ನು ತಡೆದರು. ಇಬ್ಬರ ನಡುವೆ ಜಗಳ ನಡೆಯಿತು. ಗಲಾಟೆಯ ಸಮಯದಲ್ಲಿ, ವಿಮಾನ ಅಪಹರಣವನ್ನು ಸೂಚಿಸುವ ಸಂಕೇತವನ್ನು ಎಟಿಸಿಗೆ ಕಳುಹಿಸಲಾಯಿತು ಎನ್ನಲಾಗಿದೆ. ಸಂಶಯಾಸ್ಪದ ‘ಹೈಜಾಕ್’ ಸಂದರ್ಭಗಳಲ್ಲಿ ನೀಡಲಾಗುವ ರೇಡಿಯೋ ತುರ್ತು ಸಂದೇಶ ರವಾನೆಯಾದ ಬೆನ್ನಲ್ಲೇ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನ ದುಬೈನಿಂದ ಇಸ್ರೇಲ್‌ಗೆ ಪ್ರಯಾಣಿಸುತ್ತಿದ್ದ ಪ್ರವಾಸಿ ವಿಮಾನವೊಂದು ಸೌದಿ ಅರೇಬಿಯಾದಲ್ಲಿ ತುರ್ತು ಲ್ಯಾಂಡಿಂಗ್ ನಡೆಸಿದ ಘಟನೆ ಸಂಭವಿಸಿದೆ.

ಫ್ಲೈದುಬೈ ಸಂಸ್ಥೆಗೆ ಸೇರಿದ ವಿಮಾನವು ಟೇಕ್-ಆಫ್ ಆದ 2 ಗಂಟೆಯಲ್ಲೇ ಎಮರ್ಜೆನ್ಸಿ ಸಂದೇಶ ಕಳುಹಿಸಿದ್ದರಿಂದ ಎಚ್ಚೆತ್ತುಕೊಂಡ ಇಸ್ರೇಲ್, ತಕ್ಷಣವೇ ತನ್ನ ಯುದ್ಧ ವಿಮಾನಗಳನ್ನು ಗಾಳಿಯಲ್ಲಿ ಹಾರಿಸಿತು. ಆದರೆ, ಭದ್ರತಾ ಅಧಿಕಾರಿಗಳನ್ನು ಉಲ್ಲೇಖಿಸಿ ಇಸ್ರೇಲ್ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ, ಈ ಇಡೀ ದುರಂತವು ವಿಮಾನದ ಇಬ್ಬರು ಪೈಲಟ್‌ಗಳ ನಡುವಿನ ಪರಸ್ಪರ ಜಗಳದಿಂದ ಸಂಭವಿಸಿದ್ದು, ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ವಿಮಾನವನ್ನು ಸೌದಿ ಅರೇಬಿಯಾದ ತಬುಕ್ ಮಿಲಿಟರಿ ಮತ್ತು ನಾಗರಿಕ ವಿಮಾನ ನಿಲುವಾಣದಲ್ಲಿ ಲ್ಯಾಂಡ್ ಮಾಡಲಾಯಿತು.

ಸುಮಾರು 180 ಪ್ರಯಾಣಿಕರಿದ್ದ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನವು ಅಂತಿಮವಾಗಿ ಉತ್ತರ ಸೌದಿ ಅರೇಬಿಯಾದ ತಬುಕ್ ವಿಮಾನ ನಿಲುವಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಯಿತು. ವಿಮಾನದಲ್ಲೇ ಪ್ರಯಾಣಿಸುತ್ತಿದ್ದ ಸಿವಿಲ್ ಉಡುಪಿನಲ್ಲಿದ್ದ ಇನ್ನೊಂದು ಪೈಲಟ್ ತಂಡವು ಈ ಅಪಾಯಕಾರಿ ಸನ್ನಿವೇಶದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದೆ. ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಇಬ್ಬರೂ ಪೈಲಟ್‌ಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಸ್ರೇಲ್‌ನ ಗೂಢಚಾರ ಸಂಸ್ಥೆ ಮೊಸಾದ್ ಈ ಘಟನೆಯ ಹಿಂದೆ ಭಯೋತ್ಪಾದನಾ ಆಯಾಮವಿದೆಯೇ ಎಂಬ ಬಗ್ಗೆ ತನಿಖೆ ಆರಂಭಿಸಿದೆ.

ಇದನ್ನೂ ಓದಿ: ದುಬೈ-ಟೆಲ್ ಅವೀವ್ ವಿಮಾನ ಅಪಹರಣ ಆತಂಕ: ಹೈಜಾಕ್ ಸಿಗ್ನಲ್ ರವಾನೆ ಬೆನ್ನಲ್ಲೇ ಗಡಿಗಿಳಿದ ಇಸ್ರೇಲ್ ಫೈಟರ್ ಜೆಟ್‌ಗಳು

ವಿಮಾನದಲ್ಲಿ ಏನೇನಾಯ್ತು?:

  1. ದುಬೈ-ಟೆಲ್ ಅವೀವ್ ವಿಮಾನ (FZ1073) ಮೊದಲು ಸಾಮಾನ್ಯ ತುರ್ತು ಪರಿಸ್ಥಿತಿಯ ‘7700’ ಕೋಡ್ ರವಾನಿಸಿತು. ಕೆಲವೇ ಸೆಕೆಂಡುಗಳಲ್ಲಿ ‘7500’ ಕೋಡ್ ರವಾನಿಸಿತು (ಇದು ವಿಮಾನ ಅಪಹರಣ ಅಥವಾ ಅಕ್ರಮ ತಡೆಯನ್ನು ಸೂಚಿಸುವ ಸಂಕೇತ).
  2. ತುರ್ತು ಸಂಕೇತ ರವಾನೆಯಾಗುವ ಮುನ್ನ ಕೇವಲ ಎರಡೇ ನಿಮಿಷಗಳಲ್ಲಿ ವಿಮಾನವು 34,000 ಅಡಿಯಿಂದ 16,600 ಅಡಿಗೆ ಅಂದರೆ 17,400 ಅಡಿ ಕೆಳಕ್ಕೆ ಜಾರಿತು.
  3. ಪೈಲಟ್ ಹಾಗೂ ಕೋ-ಪೈಲಟ್ ನಡುವೆ ಕಾಕ್‌ಪಿಟ್‌ನಲ್ಲಿ ನಡೆದ ಭೀಕರ ಜಗಳವೇ ತುರ್ತು ಸಂಕೇತ ಪ್ರಸಾರವಾಗಲು ಪ್ರಮುಖ ಕಾರಣ.
  4. ಇಸ್ರೇಲ್ ವಿಶ್ಲೇಷಕ ಅಮಿತ್ ಸೆಗಲ್ ವರದಿ ಪ್ರಕಾರ, ಕೋ-ಪೈಲಟ್ ಕ್ಯಾಪ್ಟನ್‌ಗೆ ಪದೇಪದೆ ಚಾಕು ಇರಿದಿದ್ದಾರೆ. ಕಾಕ್‌ಪಿಟ್‌ನಿಂದ ಕಿರುಚಾಟ ಕೇಳಿಬಂದ ತಕ್ಷಣ ಪ್ರಯಾಣಿಕರು ಬಾಗಿಲು ಮುರಿದು ಒಳಗೆ ಹೋಗಿ  ಕೋ-ಪೈಲಟ್‌ನನ್ನು ಹಿಡಿದುಕೊಂಡರು.
  5. ಚಾಕು ಇರಿದ ಪೈಲಟ್ ಗಲ್ಫ್ ರಾಷ್ಟ್ರವೊಂದಕ್ಕೆ ಸೇರಿದವನೆಂದು ಶಂಕಿಸಲಾಗಿದೆ. ಗಾಯಗೊಂಡ ಕ್ಯಾಪ್ಟನ್ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದರು ಎಂದು ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ.
  6. ಓರ್ವ ಪೈಲಟ್ ವಿಮಾನವನ್ನು ಉದ್ದೇಶಪೂರ್ವಕವಾಗಿ ಪತನಗೊಳಿಸಲು ಯತ್ನಿಸಿದಾಗ ಗಲಾಟೆ ಶುರುವಾಯಿತು. ಬಳಿಕ ಪ್ರಯಾಣಿಕರಲ್ಲಿದ್ದ ಪೈಲಟ್​​ ಒಬ್ಬರ ನೆರವಿನಿಂದ ವಿಮಾನವನ್ನು ಲ್ಯಾಂಡ್ ಮಾಡಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
  7. ವಿಮಾನ ಪ್ರಯಾಣ ಆರಂಭವಾಗಿ 2 ಗಂಟೆಗಳ ನಂತರ ಈ ದುರಂತ ಸಂಭವಿಸಿದ್ದು, ಕಾಕ್‌ಪಿಟ್ ಬಾಗಿಲು ತೆರೆದಾಗ ಮಡಚುವ ಚಾಕುವಿನೊಂದಿಗೆ ಪೈಲಟ್ ಬಿದ್ದಿದ್ದರು. ಎಲ್ಲೆಂದರಲ್ಲಿ ರಕ್ತ ಚೆಲ್ಲಿತ್ತು ಎಂದು ರಾಯಿಟರ್ಸ್‌ಗೆ ಪ್ರಯಾಣಿಕರು ತಿಳಿಸಿದ್ದಾರೆ.
  8. ಆ ವಿಮಾನದಲ್ಲೇ ಪ್ರಯಾಣಿಸುತ್ತಿದ್ದ ಇನ್ನೊಂದು ಪೈಲಟ್ ತಂಡವಿಲ್ಲದಿದ್ದರೆ ಭಾರಿ ಅನಾಹುತ ಸಂಭವಿಸುತ್ತಿತ್ತು. ಆ ತಂಡವು ವಿಮಾನವನ್ನು ಸೌದಿ ಅರೇಬಿಯಾದಲ್ಲಿ ಯಶಸ್ವಿಯಾಗಿ ಲ್ಯಾಂಡ್ ಮಾಡಿತು.
  9. ಇಸ್ರೇಲ್‌ನೊಂದಿಗೆ ಯಾವುದೇ ರಾಜತಾಂತ್ರಿಕ ಸಂಬಂಧ ಹೊಂದಿರದ ಸೌದಿ ಅರೇಬಿಯಾದಲ್ಲಿ ಇಸ್ರೇಲಿ ಪ್ರಯಾಣಿಕರಿದ್ದ ವಿಮಾನ ಲ್ಯಾಂಡ್ ಆಗಿರುವುದು ತೀರಾ ಅಪರೂಪದ ಘಟನೆಯಾಗಿದೆ.
  10. ಸೌದಿ ಅರೇಬಿಯಾದಲ್ಲಿರುವ ತಮ್ಮ ದೇಶದ ಪ್ರಯಾಣಿಕರನ್ನು ಕರೆತರಲು ಇಸ್ರೇಲ್ ತನ್ನ ಎಲ್ ಅಲ್ ವಿಮಾನವನ್ನು ಕಳುಹಿಸುವ ಸಾಧ್ಯತೆಯಿದೆ. ತಬುಕ್ ವಿಮಾನ ನಿಲುವಾಣವು ಪರ್ಯಾಯ ವಿಮಾನಕ್ಕಾಗಿ ಫ್ಲೈದುಬೈ ಜೊತೆ ಮಾತುಕತೆ ನಡೆಸುತ್ತಿದೆ.

 

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 5:13 pm, Wed, 30 September 26

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Loading...
Unable to load recommendations.
Follow Us