ದರ್ಶನ್ ಚಿತ್ರರಂಗದ ಆಸ್ತಿ ಮತ್ತು ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆ ಬಹಳ ದೊಡ್ಡದು: ಹಂಸಲೇಖ
ದರ್ಶನ್ ಹಂಸಲೇಖರ ಮುಂದೆ ಬೆಳೆದ ಹುಡುಗ, ಹಾಗಾಗೇ ಅವರನ್ನು ನಾದಬ್ರಹ್ಮ ‘ಮಗು’ ಅಂತ ಉಲ್ಲೇಖಿಸುತ್ತಾರೆ. ಅವರಿಗೆ ದರ್ಶನ್ ಮೇಲೆ ಎಷ್ಟೆಲ್ಲ ಪ್ರೀತಿ, ವಾತ್ಸಲ್ಯ ಮತ್ತು ಅಭಿಮಾನವಿದೆ ಅಂದರೆ ನಟನ ತಪ್ಪು ಸಹ ಒಪ್ಪು ಅನಿಸಿಬಿಡುತ್ತಂತೆ! ದರ್ಶನ್ ಬಗ್ಗೆ ಮಾತಾಡಿದವರೆಲ್ಲ ನಕಾರಾತ್ಮಕ ಧೋರಣೆಯಲ್ಲಿ ಮಾತಾಡಿದ್ದರೆ ಹಂಸಲೇಖ ಭಿನ್ನವಾಗಿ ಮಾತಾಡಿದ್ದಾರೆ.
ಬೆಂಗಳೂರು: ಹಂಸಲೇಖ ಕನ್ನಡ ಚಿತ್ರರಂಗದಲ್ಲಿ ಬಹಳ ದೊಡ್ಡ ಹೆಸರು, ಭಾರೀ ಪ್ರತಿಭಾವಂತ, ಸಹೃದಯಿ ಮತ್ತು ಮಗುವಿನಂಥ ಮನಸ್ಸು. ಇವತ್ತು ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿದ ಅವರು ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿರುವ ದರ್ಶನ್ ಅವರನ್ನು ಚಿತ್ರರಂಗದ ಆಸ್ತಿ ಮತ್ತು ಅವರು ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಅನನ್ಯವಾದದ್ದು ಎಂದರು. ನಡೆದಿರುವ ಅಚಾತುರ್ಯ ನಮ್ಮ ಕೈ ಮೀರಿದ್ದು ಎಂದ ಹಂಸಲೇಖ, ಕಲಾವಿದರು ಸಿಟ್ಟನ್ನು ಸ್ಕ್ರಿಪ್ಟ್ ಮಾಡಿಕೊಳ್ಳಬೇಕು ಮತ್ತು ದ್ವೇಷವನ್ನು ಕ್ಯಾರೆಕ್ಟರ್; ಅವೆರಡನ್ನು ಸಿನಿಮಾದಲ್ಲಿ ತೋರಿಸಬೇಕೇ ಹೊರತು ನಿಜಜೀವನದಲ್ಲಿ ಯಾವತ್ತೂ ಪ್ರದರ್ಶಿಸಬಾರದು ಎಂದರು. ಸಿನಿಮಾ ಹಿರೋಗಳು ಹೆಣ್ಣುಮಕ್ಕಳ ಹೃದಯದಲ್ಲಿ ಸ್ಥಾನ ಪಡೆದಿರುತ್ತಾರೆ ಮತ್ತು ಅವರನ್ನು ತಮ್ಮ ಆರಾಧ್ಯ ದೈವ ಅಂತ ಮಹಿಳೆಯರು ಪರಿಗಣಿಸುತ್ತಾರೆ. ಇಂಥ ಘಟನೆಗಳು ನಡೆದಾಗ ಅವುಗಳಿಗೆ ಪ್ರಾಮುಖ್ಯತೆ ಜಾಸ್ತಿ ಬರುತ್ತದೆ ಎಂದು ಹೇಳಿದ ಹಂಸಲೇಖ ನಮ್ಮ ಸಂಸದರಲ್ಲಿ ಅನೇಕರು ಕ್ರಿಮಿನಲ್ ಗಳು ಆದರೆ ಅವರ ಅಪರಾಧೀ ಹಿನ್ನೆಲೆ ಬಹಿರಂಗಗೊಳ್ಳುವುದಿಲ್ಲ, ಅದೇ ನಮ್ಮ ಸಮಾಜದ ವಿಪರ್ಯಾಸ ಎನ್ನುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹಲವು ಆಫರ್ ಬದಿಗಿಟ್ಟು ‘ಕಲ್ಜಿಗ’ ಸಿನಿಮಾ ಒಪ್ಪಿಕೊಂಡ ಸಂಗೀತ ನಿರ್ದೇಶಕ ಹಂಸಲೇಖ