ಹಲವು ಆಫರ್ ಬದಿಗಿಟ್ಟು ‘ಕಲ್ಜಿಗ’ ಸಿನಿಮಾ ಒಪ್ಪಿಕೊಂಡ ಸಂಗೀತ ನಿರ್ದೇಶಕ ಹಂಸಲೇಖ
‘ಕಲ್ಜಿಗ’ ಸಿನಿಮಾದ ಶೀರ್ಷಿಕೆಯಿಂದ ಕೌತುಕ ಮೂಡಿದೆ. ಈ ಸಿನಿಮಾದ ಟೈಟಲ್ ಪೋಸ್ಟರ್ ಅನಾವರಣ ಮಾಡಲಾಗಿದೆ. ಸುಮನ್ ಸುವರ್ಣ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಅರ್ಜುನ್ ಕಾಪಿಕಾಡ್, ಸುಶ್ಮಿತಾ ಭಟ್ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಶರತ್ ಕುಮಾರ್ ಎ.ಕೆ. ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಸಂಗೀತ ನಿರ್ದೇಶಕ ಹಂಸಲೇಖ (Hamsalekha) ಅವರು ಇತ್ತೀಚಿನ ವರ್ಷಗಳಲ್ಲಿ ಸಖತ್ ಚ್ಯೂಸಿ ಆಗಿದ್ದಾರೆ. ಹಲವಾರು ಆಫರ್ ಬರುತ್ತಿದ್ದರೂ ಕೂಡ ಅವರು ಅದನ್ನು ಒಪ್ಪಿಕೊಳ್ಳುತ್ತಿಲ್ಲ. ಹೀಗಿರುವಾಗ ಅವರು ಹೊಸದೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಅದರ ಹೆಸರು ‘ಕಲ್ಜಿಗ’. ಇತ್ತೀಚೆಗಷ್ಟೇ ಈ ಸಿನಿಮಾದ ಶೀರ್ಷಿಕೆ ಅನಾವರಣ ಮಾಡಲಾಯಿತು. ಆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸ್ವತಃ ಹಂಸಲೇಖ ಅವರು ಹಾಜರಿದ್ದರು. ಕರಾವಳಿ ಭಾಗದಿಂದ ಬಂದ ಅನೇಕರು ಕನ್ನಡ ಚಿತ್ರರಂಗಕ್ಕೆ ಈಗಾಗಲೇ ಕೊಡುಗೆ ನೀಡಿದ್ದಾರೆ. ಈಗ ‘ಕಲ್ಜಿಗ’ (Kaljiga) ಚಿತ್ರತಂಡದವರು ಕೂಡ ಕರಾವಳಿ ಪ್ರತಿಭೆಗಳು. ಈ ತಂಡದ ಬಗ್ಗೆ ಇಲ್ಲಿದೆ ಮಾಹಿತಿ..
‘ಕಲ್ಜಿಗ’ ಶೀರ್ಷಿಕೆಯೇ ಕೌತುಕ ಮೂಡಿಸುತ್ತಿದೆ. ಈ ಚಿತ್ರದ ಟೈಟಲ್ ಪೋಸ್ಟರ್ ಅನಾವರಣ ಆಗಿದೆ. ‘ಹಿಮಾನಿ ಫಿಲ್ಮ್ಸ್’ ಬ್ಯಾನರ್ ಮೂಲಕ ನಿರ್ಮಾಣ ಆಗುತ್ತಿರುವ ಈ ಸಿನಿಮಾಗೆ ಸುಮನ್ ಸುವರ್ಣ ಆ್ಯಕ್ಷನ್-ಕಟ್ ಹೇಳಿದ್ದಾರೆ. ಮೊದಲೇ ಹೇಳಿದಂತೆ ಬಹುಕಾಲದ ಬಳಿಕ ಹಂಸಲೇಖ ಅವರು ಈ ಸಿನಿಮಾ ಮೂಲಕ ಸಂಗೀತ ನಿರ್ದೇಶನ ಮಾಡಲು ಒಪ್ಪಿಕೊಂಡಿದ್ದಾರೆ. ಗೀತರಚನೆಯನ್ನೂ ಮಾಡುತ್ತಿದ್ದಾರೆ. 40ಕ್ಕೂ ಅಧಿಕ ಸಿನಿಮಾಗಳ ಆಫರ್ ಬದಿಗಿಟ್ಟು ‘ಕಲ್ಜಿಗ’ ಸಿನಿಮಾ ಒಪ್ಪಿಕೊಂಡಿದ್ದಾಗಿ ಅವರು ತಿಳಿಸಿದರು. ಆ ಮೂಲಕ ಈ ಕಥೆ ತುಂಬ ವಿಶೇಷವಾಗಿದೆ ಎಂಬುದನ್ನು ಅವರು ಹೇಳಿದ್ದಾರೆ.
‘ಗಿರ್ ಗಿಟ್’, ‘ಸರ್ಕಸ್’, ‘ಗಮ್ಜಾಲ್’ ಇತ್ಯಾದಿ ಸಿನಿಮಾಗಳ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿ ಅನುಭವ ಪಡೆದಿದ್ದ ಸುಮನ್ ಸುವರ್ಣ ‘ಕಲ್ಜಿಗ’ ಸಿನಿಮಾದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಹೊಂದಿದ್ದಾರೆ. ತುಳು ಸಿನಿಮಾರಂಗದಲ್ಲಿ ‘ಕಿಂಗ್ ಆಫ್ ಆ್ಯಕ್ಷನ್’ ಎಂದು ಫೇಮಸ್ ಆಗಿರುವ ಅರ್ಜುನ್ ಕಾಪಿಕಾಡ್ ಅವರು ಈ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಅವರಿಗೆ ಜೋಡಿಯಾಗಿ ಸುಶ್ಮಿತಾ ಭಟ್ ಅಭಿನಯಿದ್ದಾರೆ. ‘ಎಸ್.ಕೆ. ಗ್ರೂಪ್’ ಸಂಸ್ಥೆಯ ಮಾಲೀಕ ಶರತ್ ಕುಮಾರ್ ಎ.ಕೆ. ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.
ಇದನ್ನೂ ಓದಿ: ಕನ್ನಡಕ್ಕೆ ಒಂದು ರೀತಿಯಲ್ಲಿ ಅಪಾಯ ಬಂದಿದೆ: ಸಂಗೀತ ನಿರ್ದೇಶಕ ಹಂಸಲೇಖ
‘ಕಲ್ಜಿಗ’ ಸಿನಿಮಾದ ಕಥೆ ಏನು ಎಂಬುದನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ‘ಧರ್ಮದ ದಾರಿಯಲ್ಲಿ ಅಧರ್ಮದ ನೆರಳು ಬಿದ್ದ ಬಳಿಕ ನಡೆಯುವ ರೋಚಕ ಕಥನ ಈ ಸಿನಿಮಾದಲ್ಲಿದೆ’ ಎಂಬುದಷ್ಟೇ ಸದ್ಯಕ್ಕೆ ಮಾಹಿತಿ. ಉಡುಪಿ, ಮಂಗಳೂರು ಮುಂತಾದ ಕಡೆಗಳಲ್ಲಿ ಈಗಾಗಲೇ ಶೂಟಿಂಗ್ ಮುಗಿಸಲಾಗಿದೆ. ಅಲ್ಲದೇ, ಶೇ.75ರಷ್ಟು ಪೋಸ್ಟ್ ಪ್ರೊಡಕ್ಷನ್ ಕೆಲಸವೂ ಆಗಿದೆ. ಮಂಗಳೂರು ಶೈಲಿಯ ಕನ್ನಡದಲ್ಲಿ ತಯಾರಾಗುತ್ತಿರುವ ಈ ಸಿನಿಮಾವನ್ನು ತುಳು ಭಾಷೆಗೆ ಡಬ್ ಮಾಡಲಾಗುತ್ತಿದೆ. ಸಚಿನ್ ಶೆಟ್ಟಿ ಅವರು ಈ ಸಿನಿಮಾಗೆ ಛಾಯಾಗ್ರಹಣ ಮಾಡಿದ್ದಾರೆ. ಪ್ರಸಾದ್ ಕೆ. ಶೆಟ್ಟಿ ಅವರು ಹಿನ್ನೆಲೆ ಸಂಗೀತ ನೀಡುತ್ತಿದ್ದಾರೆ. ಯಶ್ವಿನ್ ಕೆ. ಶೆಟ್ಟಿಗಾರ್ ಅವರು ಸಂಕಲನ ಮಾಡುತ್ತಿದ್ದಾರೆ. ಸೆಪ್ಟೆಂಬರ್ನಲ್ಲಿ ‘ಕಲ್ಜಿಗ’ ಬಿಡುಗಡೆ ಆಗುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.